ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಭಾರತವೂ ಒಂದು. ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತ ಹೊರಹೊಮ್ಮಿದೆ. ಆದರೆ ಈಗಿನ ಜಾಗತಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಭಾರತದ ಬೆಳವಣಿಗೆಗೆ ಹಿನ್ನಡೆಯಾಗಿದೆ. ಉಕ್ರೇನ್-ರಷ್ಯಾ ಯುದ್ಧ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಸುಂಕದ ಅಭಿಯಾನ ಸಹಿತ ಇಡೀ ಜಗತ್ತಿನಲ್ಲಿ ಅನಿಶ್ಚಿತತೆ ಇದ್ದರೂ, ಭಾರತದ ಕಾರ್ಮಿಕ ಶಕ್ತಿ, ಹಣಕಾಸು ಶಿಸ್ತು ಮತ್ತು ಗಟ್ಟಿ ವಿದೇಶಿ ವಿನಿಮಯ ಮೀಸಲು ದೇಶವನ್ನು ಸುರಕ್ಷಿತ ಹೂಡಿಕೆಯ ತಾಣವನ್ನಾಗಿ ಮಾಡಿದ್ದವು.
ಈ ಪ್ರಗತಿಯಲ್ಲಿ ಪರ್ಷಿಯನ್ ಕೊಲ್ಲಿಯ ಅರಬ್ ರಾಷ್ಟ್ರಗಳೊಂದಿಗೆ ಭಾರತ ಹೊಂದಿದ್ದ ಗಾಢ ಸಂಬಂಧವು ಪ್ರಮುಖ ಪಾತ್ರ ವಹಿಸಿತ್ತು. ಆದರೆ, ಅಂದು ವರದಾನವಾಗಿದ್ದ ಇದೇ ಅಂಶ ಈಗ ಭಾರತಕ್ಕೆ ಹೊರೆಯಾಗಿ ಪರಿಣಮಿಸುತ್ತಿದೆ. ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಯು ಭಾರತದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ.
ಭಾರತವು ತನ್ನ ಒಟ್ಟು ತೈಲ ಆಮದಿನ ಶೇ 40ರಷ್ಟು ಮತ್ತು ಅನಿಲ ಆಮದಿನ ಶೇ 80ರಷ್ಟು ಪಾಲನ್ನು ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಮಾಡಿಕೊಳ್ಳುತ್ತದೆ. ಇಂಧನ ಬೆಲೆಗಳು ಏರಿಕೆಯಾಗುತ್ತಿದ್ದಂತೆ, ಅದರ ಪರಿಣಾಮವು ಆರ್ಥಿಕತೆಯ ಮೇಲೆ ಬೀಳುತ್ತಿದ್ದು, ಭಾರತದ ಸದೃಢ ಬೆಳವಣಿಗೆ ಮತ್ತು ಹಣದುಬ್ಬರದ ಸಮತೋಲನಕ್ಕೆ ಧಕ್ಕೆ ಉಂಟುಮಾಡುತ್ತಿದೆ.
ಭಾರತೀಯ ಸರಕುಗಳಿಗೆ ಕೊಲ್ಲಿ ರಾಷ್ಟ್ರಗಳು ನಿರ್ಣಾಯಕ ಮಾರುಕಟ್ಟೆಯಾಗಿವೆ. ಅನೇಕ ಭಾರತೀಯ ಉದ್ಯಮಗಳು ತಮ್ಮ ಸರಕುಗಳನ್ನು ಜಾಗತಿಕವಾಗಿ ವಿತರಿಸಲು ದುಬೈನಂತಹ ಕೇಂದ್ರಗಳನ್ನು ಅವಲಂಬಿಸಿವೆ. ಆದರೆ ಈಗ ವಿಮಾನಯಾನ, ಹಡಗು ಸಂಚಾರ ಮತ್ತು ವ್ಯಾಪಾರ ಕಾರ್ಯಾಚರಣೆಗಳಿಗೆ ಅಡಚಣೆ ಉಂಟಾಗಿದ್ದರಿಂದ ಈ ಮಾರುಕಟ್ಟೆ ಮೇಲೆ ಭಾರಿ ಪರಿಣಾಮ ಬೀರಿದೆ.
ವಿದೇಶಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಕಳುಹಿಸುವ ಹಣವನ್ನು ಪಡೆಯುವಲ್ಲಿ ಭಾರತವು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಇದರಲ್ಲಿ ಸುಮಾರು ಶೇ 40 ರಷ್ಟು ಹಣ ಮಧ್ಯಪ್ರಾಚ್ಯದಿಂದಲೇ ಬರುತ್ತದೆ. ಅನಿವಾಸಿ ಭಾರತೀಯ ಕಾರ್ಮಿಕರ ಆದಾಯಕ್ಕೆ ಹೊಡೆತ ಬಿದ್ದರೆ, ಅದು ಈಗಾಗಲೇ ಕುಸಿಯುತ್ತಿರುವ ರೂಪಾಯಿಯ ಮೌಲ್ಯವನ್ನು ಮತ್ತಷ್ಟು ದುರ್ಬಲಗೊಳಿಸಲಿದೆ.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಕೊಲ್ಲಿ ಸಮರದಿಂದ ಭಾರತ-ಅರಬ್ ಸಂಬಂಧಕ್ಕೆ ಅಡ್ಡಿ: ದೇಶದ ಆರ್ಥಿಕತೆಗೆ 'ಹೊಸ ಆಘಾತ'
ಒಂದು ಸಾಲಿನಲ್ಲಿಪರ್ಷಿಯನ್ ಕೊಲ್ಲಿಯ ಸಂಘರ್ಷವು ಭಾರತದ ಇಂಧನ ಆಮದು, ರಫ್ತು ಮತ್ತು ಅನಿವಾಸಿ ಕಾರ್ಮಿಕರ ಆದಾಯದ ಮೇಲೆ ಗಂಭೀರ ಪರಿಣಾಮ ಬೀರಿ ಆರ್ಥಿಕತೆಗೆ ಸವಾಲಾಗಿ ಪರಿಣಮಿಸಿದೆ.ಪ್ರಮುಖ ಅಂಶಗಳು• ಇಂಧನ ಆಮದು ಮೇಲೆ ಆಘಾತಭಾರತವು ತನ್ನ ಒಟ್ಟು ತೈಲ ಆಮದಿನ ಶೇ 40 ಮತ್ತು ಅನಿಲ ಆಮದಿನ ಶೇ 80ರಷ್ಟು ಪಾಲನ್ನು ಮಧ್ಯಪ್ರಾಚ್ಯದಿಂದ ಪಡೆಯುತ್ತಿದ್ದು, ಸಂಘರ್ಷದಿಂದ ಪೂರೈಕೆಗೆ ಧಕ್ಕೆ ಉಂಟಾಗಿದೆ.• ವ್ಯಾಪಾರ ಮತ್ತು ರಫ್ತಿಗೆ ಅಡಚಣೆಕೊಲ್ಲಿ ರಾಷ್ಟ್ರಗಳು ಭಾರತೀಯ ಸರಕುಗಳ ನಿರ್ಣಾಯಕ ಮಾರುಕಟ್ಟೆಯಾಗಿದ್ದು, ಸಮುದ್ರ ಮತ್ತು ವಾಯು ಮಾರ್ಗದ ಅಡಚಣೆಗಳಿಂದ ಭಾರತದ ರಫ್ತು ವಲಯ ತೀವ್ರ ಸಂಕಷ್ಟದಲ್ಲಿದೆ.• ಅನಿವಾಸಿಗಳ ಆದಾಯಕ್ಕೆ ಭೀತಿಭಾರತಕ್ಕೆ ವಿದೇಶದಿಂದ ಬರುವ ಹಣದ ಶೇ 40ರಷ್ಟು ಭಾಗ ಮಧ್ಯಪ್ರಾಚ್ಯದಿಂದ ಬರುತ್ತದೆ. ಯುದ್ಧದ ಪರಿಸ್ಥಿತಿಯು ಕಾರ್ಮಿಕರ ಆದಾಯ ಮತ್ತು ಮರುಪಾವತಿಯನ್ನು ಅನಿಶ್ಚಿತಗೊಳಿಸಿದೆ.• ರೂಪಾಯಿ ಮೌಲ್ಯದ ಕುಸಿತಇಂಧನ ಬೆಲೆ ಏರಿಕೆ ಮತ್ತು ರಫ್ತು ಆದಾಯದ ಕುಸಿತದಿಂದಾಗಿ ಭಾರತೀಯ ರೂಪಾಯಿ ಮೌಲ್ಯ ಮತ್ತಷ್ಟು ದುರ್ಬಲಗೊಳ್ಳುವ ಆತಂಕ ಉದ್ಭವಿಸಿದೆ.• ಆರ್ಥಿಕ ಬೆಳವಣಿಗೆಗೆ ಸವಾಲುಗೋಲ್ಡ್‌ಮನ್ ಸ್ಯಾಚ್ಸ್ ಪ್ರಕಾರ, ತೈಲ ಬೆಲೆ ಏರಿಕೆ ಮತ್ತು ಹಣದುಬ್ಬರದಿಂದಾಗಿ ಭಾರತದ ಆರ್ಥಿಕ ಪ್ರಗತಿಯ ವೇಗವು ಮುಂದಿನ ವರ್ಷದಲ್ಲಿ ಕಡಿಮೆಯಾಗುವ ಸಂಭವವಿದೆ.ಪ್ರಮುಖ ಅಂಕಿಅಂಶಗಳುಶೇ 40ಮಧ್ಯಪ್ರಾಚ್ಯದಿಂದ ಭಾರತದ ತೈಲ ಆಮದು ಪಾಲುಶೇ 80ಮಧ್ಯಪ್ರಾಚ್ಯದಿಂದ ಭಾರತದ ಅನಿಲ ಆಮದು ಪಾಲುಶೇ 40ಭಾರತಕ್ಕೆ ಬರುವ ಒಟ್ಟು ರವಾನೆ ಹಣದಲ್ಲಿ ಮಧ್ಯಪ್ರಾಚ್ಯದ ಪಾಲುಶೇ 10ಒಂದು ತಿಂಗಳಲ್ಲಿ ಭಾರತದ ಷೇರು ಮಾರುಕಟ್ಟೆ ಕುಸಿತ₹ 1,212.9 ಕೋಟಿಕಳೆದ ವರ್ಷ ಭಾರತಕ್ಕೆ ಬಂದ ಒಟ್ಟು ಮೊತ್ತ (ಸರಿಸುಮಾರು)ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಹೆಚ್ಚುತ್ತಿರುವ ಇಂಧನ ಬೆಲೆ, ಯುಎಇ ಮತ್ತು ನೆರೆಯ ರಾಷ್ಟ್ರಗಳಿಗೆ ರಫ್ತು ಕುಸಿತ ಹಾಗೂ ಅಲ್ಲಿಂದ ಬರುತ್ತಿರುವ ಹಣದ ಪ್ರಮಾಣ ಇಳಿಕೆಯಿಂದಾಗಿ ಮುಂದಿನ ವರ್ಷದಲ್ಲಿ ಭಾರತವು ನಿಧಾನಗತಿಯ ಬೆಳವಣಿಗೆ, ಹಣದುಬ್ಬರ ಏರಿಕೆ ಮತ್ತು ರೂಪಾಯಿ ಮೌಲ್ಯ ಕುಸಿತ ಮುಂತಾದ ಸವಾಲನ್ನು ಎದುರಿಸಲಿದೆ ಎಂದು ಹೂಡಿಕೆ ಬ್ಯಾಂಕ್ 'ಗೋಲ್ಡ್‌ಮನ್ ಸ್ಯಾಚ್ಸ್' ಕಳೆದ ವಾರ ಎಚ್ಚರಿಸಿದೆ. ಭಾರತದ ಧನಾತ್ಮಕ ಬೆಳವಣಿಗೆ ಈಗ ಹೊಸ ಆಘಾತವನ್ನು ಎದುರಿಸುತ್ತಿದೆ ಎಂದು ಅದು ಅಭಿಪ್ರಾಯಪಟ್ಟಿದೆ. ಕಳೆದ ಒಂದು ತಿಂಗಳಲ್ಲಿ ಭಾರತದ ಷೇರು ಮಾರುಕಟ್ಟೆಗಳು ಶೇ 10ರಷ್ಟು ಕುಸಿದಿರುವುದು ಇದರ ಮುನ್ಸೂಚನೆ.
1970ರ ದಶಕದ ಇಂಧನ ಬಿಕ್ಕಟ್ಟಿನ ನಂತರ, ತೈಲ ಆಮದಿಗೆ ಭಾರತವು ಇರಾನ್‌ನ ದಕ್ಷಿಣ ಕರಾವಳಿಯ ಉದ್ದಕ್ಕೂ ಇರುವ ಹೊರ್ಮುಜ್ ಜಲಸಂಧಿಯನ್ನು ಆಶ್ರಯಿಸಿದೆ. ವಿಶ್ವದಲ್ಲಿ ಪೂರೈಕೆಯಾಗುವ ಒಟ್ಟು ತೈಲದ ಐದನೇ ಒಂದು ಭಾಗ ಈ ಕಿರಿದಾದ ಮಾರ್ಗದ ಮೂಲಕವೇ ಸಾಗುತ್ತದೆ. ಹೊರ್ಮುಜ್‌ನಲ್ಲಿ ಉಂಟಾಗುವ ತೊಂದರೆ ಭಾರತದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಅಡುಗೆ ಅನಿಲದ ಕೊರತೆಯಿಂದ ಉಂಟಾದ ಪರಿಣಾಮ ಭಾರತದ ಜನಸಾಮಾನ್ಯದ ಜೇಬಿಗೆ ತಟ್ಟಿದೆ. ಇಂಧನ ಬೆಲೆಗಳನ್ನು ನಿಯಂತ್ರಿಸುವ ಅಧಿಕಾರ ಸರ್ಕಾರಕ್ಕಿದ್ದರೂ, ಸುಂಕ ಕಡಿತಗೊಳಿಸುವುದು ಅಥವಾ ಸಬ್ಸಿಡಿಗಳನ್ನು ವಿಸ್ತರಿಸುವುದು ವಿತ್ತೀಯ ಒತ್ತಡವನ್ನು ಹೆಚ್ಚಿಸಲಿದೆ.
ಏಪ್ರಿಲ್‌ನಲ್ಲಿ ಐದು ರಾಜ್ಯಗಳ ಚುನಾವಣೆ ನಡೆಯಲಿದ್ದು, ಅಲ್ಲಿಯವರೆಗೆ ಕೇಂದ್ರ ಸರ್ಕಾರ ತೈಲ ಬೆಲೆಗಳನ್ನು ನಿಯಂತ್ರಣದಲ್ಲಿಡಬಹುದು ಎಂದು ನಿರೀಕ್ಷಿಸಲಾಗಿದೆ. ಹಾಲಿ ಪರಿಸ್ಥಿತಿಯಿಂದಾಗಿ ಸಮುದ್ರ ಮಾರ್ಗದಲ್ಲಿರುವ ರಷ್ಯಾದ ಕಚ್ಚಾ ತೈಲವನ್ನು ಖರೀದಿಸಲು ಭಾರತಕ್ಕೆ ಅಮೆರಿಕ ಅನುಮತಿ ನೀಡಿದೆ. ಅಲ್ಲದೆ, ಇರಾನ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಜಲಸಂಧಿಯಲ್ಲಿ ಸಿಲುಕಿದ್ದ ಎರಡು ಅನಿಲ ಟ್ಯಾಂಕರ್‌ಗಳ ಸುರಕ್ಷಿತ ಸಂಚಾರಕ್ಕೆ ಭಾರತ ವ್ಯವಸ್ಥೆ ಮಾಡಿದೆ.
ಸಾವಿರಾರು ವರ್ಷಗಳವರೆಗೆ ದತ್ತಾಂಶ ಸಂಗ್ರಹ: ಗಾಜಿನಲ್ಲೇ ಮೈಕ್ರೊಸಾಫ್ಟ್ ಮ್ಯಾಜಿಕ್ಜಾಗತಿಕ ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ 100 ಡಾಲರ್ ದಾಟಿದಾಗ ಭಾರತದ ಆರ್ಥಿಕತೆಯ ಮೇಲೆ ತೀವ್ರ ಒತ್ತಡ ಬೀಳುತ್ತದೆ. ಭಾರತವು ತನ್ನ ಕಚ್ಚಾ ತೈಲದ ಶೇ 90 ರಷ್ಟು ಭಾಗವನ್ನು ಆಮದು ಮಾಡಿಕೊಳ್ಳುವುದೇ ಇದಕ್ಕೆ ಕಾರಣ. 'ಭಾರತದ ಆರ್ಥಿಕತೆಯು ಹೆಚ್ಚಿನ ಬೆಳವಣಿಗೆ ಮತ್ತು ಕಡಿಮೆ ಹಣದುಬ್ಬರದೊಂದಿಗೆ ಆರಂಭವಾಗಿದ್ದರೂ, ದೀರ್ಘಕಾಲದ ಇಂಧನ ಆಘಾತವನ್ನು ತಡೆದುಕೊಳ್ಳುವ ಅದರ ಸಾಮರ್ಥ್ಯವು ಈಗ ಪರೀಕ್ಷೆಗೊಳಗಾಗಲಿದೆ' ಎಂದು ಆಸ್ಟ್ರೇಲಿಯಾದ ಎಎನ್‌ಝೆಡ್ ಬ್ಯಾಂಕಿಂಗ್ ಸಮೂಹ ಕಳೆದ ವಾರ ಬಿಡುಗಡೆ ಮಾಡಿದ ಸಂಶೋಧನಾ ವರದಿ ಹೇಳಿದೆ. ತೈಲ ಕಂಪನಿಗಳು, ಸರ್ಕಾರ ಮತ್ತು ಭಾರತದ ಕುಟುಂಬಗಳು ದೀರ್ಘಕಾಲದ ತೈಲ ಬೆಲೆ ಏರಿಕೆಯನ್ನು ಎದುರಿಸಲು ಬಲವಾದ ಆರ್ಥಿಕ ಸಾಮರ್ಥ್ಯ ಹೊಂದಿಲ್ಲ ಎಂದು ವರದಿ ತಿಳಿಸಿದೆ.
'ಪಶ್ಚಿಮ ಏಷ್ಯಾ ಬಿಕ್ಕಟ್ಟನಿಂದಾಗಿ ಭಾರತವು ತನ್ನ ವಿದೇಶಿ ಪಾವತಿಗಳ ಸಮತೋಲನವನ್ನು ಅತ್ಯಂತ ಎಚ್ಚರಿಕೆಯಿಂದ ಗಮನಿಸುವಂತೆ ಮಾಡಿದೆ. ರಫ್ತುಗಳಿಗೆ ಅಡ್ಡಿಯಾದರೆ, ಆಮದುಗಳು ದುಬಾರಿಯಾಗಲಿವೆ. ಭಾರತದ ವಿದೇಶಿ ವಿನಿಮಯ ಮೀಸಲು ಸದ್ಯಕ್ಕೆ ಪ್ರಬಲವಾಗಿದ್ದರೂ, ಒಂದು ವರ್ಷದೊಳಗೆ ಅದು ಅರ್ಧಕ್ಕೆ ಇಳಿಯುವ ಸಾಧ್ಯತೆಯಿದೆ ಎಂದು ಹೈದರಾಬಾದ್‌ನ ಗೀತಂ ವಿಶ್ವವಿದ್ಯಾಲಯದ ಡೀನ್ ಮತ್ತು ಅರ್ಥಶಾಸ್ತ್ರಜ್ಞ ರಾಥಿನ್ ರಾಯ್ ಹೇಳಿದ್ದಾರೆ.
ಯುದ್ಧ ಪ್ರಾರಂಭವಾಗುವ ನಾಲ್ಕು ದಿನಗಳ ಮೊದಲಷ್ಟೇ ಜಿಸಿಸಿ ರಾಷ್ಟ್ರಗಳೊಂದಿಗೆ ಭಾರತ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿತ್ತು. ಕೊಲ್ಲಿಯ ಅರಬ್ ರಾಷ್ಟ್ರಗಳನ್ನು ದೇಶದ 'ಅತಿದೊಡ್ಡ ವ್ಯಾಪಾರ ಪಾಲುದಾರ ಒಕ್ಕೂಟ' ಎಂದು ಭಾರತ ಬಣ್ಣಿಸಿತ್ತು. ಭಾರತವು ಈ ರಾಷ್ಟ್ರಗಳಿಗೆ ಎಲೆಕ್ಟ್ರಾನಿಕ್ಸ್, ಜವಳಿ, ರತ್ನಗಳು, ಬಾಸ್ಮತಿ ಅಕ್ಕಿ ಮತ್ತು ಸಂಸ್ಕರಿಸಿದ ಇಂಧನ ಸೇರಿದಂತೆ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ರಫ್ತು ಮಾಡುತ್ತದೆ.
'ಸಂಯುಕ್ತ ಅರಬ್ ಎಮಿರೇಟ್ಸ್‌ಗೆ (ಯುಎಇ) ರಫ್ತಾಗುವ ವರ್ಷಕ್ಕೆ 50 ಬಿಲಿಯನ್ ಡಾಲರ್ ಮೌಲ್ಯದ ಭಾರತೀಯ ಸರಕುಗಳಲ್ಲಿ ಅರ್ಧದಷ್ಟು ಭಾಗ ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಆಫ್ರಿಕಾಕ್ಕೆ ರವಾನೆಯಾಗುತ್ತದೆ. ಪರ್ಷಿಯನ್ ಕೊಲ್ಲಿಯ ಆರು ರಾಷ್ಟ್ರಗಳಲ್ಲಿ ಸುಮಾರು 1 ಕೋಟಿ ಭಾರತೀಯರಿದ್ದಾರೆ. ಮಧ್ಯಪ್ರಾಚ್ಯ ಮತ್ತು ಭಾರತದ ಆರ್ಥಿಕತೆಗಳು ಎಷ್ಟು ಪರಸ್ಪರ ಬೆಸೆದುಕೊಂಡಿದೆಯೆಂದರೆ, ಕೊಲ್ಲಿಯ ಪ್ರತಿ ಯೋಜನೆಯಲ್ಲೂ ಭಾರತೀಯರ ಪಾತ್ರ ಇದೆ' ಎಂದು ಮೂರು ಕೊಲ್ಲಿ ರಾಷ್ಟ್ರಗಳಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿರುವ ನಿವೃತ್ತ ರಾಜತಾಂತ್ರಿಕ ತಲ್ಮೀಜ್ ಅಹ್ಮದ್ ಹೇಳಿದ್ದಾರೆ.
ಹೊರ್ಮುಜ್: ವಿಶ್ವವನ್ನೇ ತಲ್ಲಣಗೊಳಿಸಿದ 'ಕಷ್ಟ ಸಂಧಿ', ಇರಾನ್‌ಗೆ ವರದಾನವೇಕೆ?ಈ ಪ್ರದೇಶದೊಂದಿಗಿನ ಭಾರತದ ಸಂಬಂಧವು ಆರ್ಥಿಕತೆಯ ಎಲ್ಲಾ ವಿಭಾಗಗಳಲ್ಲೂ ಹರಡಿದೆ. ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರು 2022ರಲ್ಲಿ ದುಬೈನ ಪಾಮ್ ಜುಮೇರಾದಲ್ಲಿ 163 ಮಿಲಿಯನ್ ಡಾಲರ್ ಮೌಲ್ಯದ ವಿಲ್ಲಾ ಖರೀದಿಸಿದ್ದರು. ಯುದ್ಧದ ಮೊದಲ ದಿನವೇ ಈ ಐಷಾರಾಮಿ ಸಂಕೀರ್ಣದ ಮೇಲೆ ದಾಳಿ ನಡೆದಿತ್ತು. ಇದೊಂದು ಮುಖವಾದರೆ,
ಇನ್ನೊಂದೆಡೆ, ಉದ್ಯೋಗ ಅರಸಿ ವಲಸೆ ಹೋಗುವ ಅನೇಕ ಕಾರ್ಮಿಕರು ಗಲ್ಫ್‌ನ ಆರ್ಥಿಕತೆಯ ಕೆಳಸ್ತರದಲ್ಲಿ ದುಡಿಯುತ್ತಿದ್ದಾರೆ.
ಲಕ್ಷಾಂತರ ಭಾರತೀಯರು ಕಾರ್ಮಿಕರು ಕುಟುಂಬದಿಂದ ದೂರವಿದ್ದು, ತಮ್ಮ ಅಲ್ಪ ದುಡಿಮೆಯ ಶೇ 50 ರಿಂದ 70ರಷ್ಟು ಭಾಗವನ್ನು ಮನೆಗೆ ಕಳುಹಿಸುತ್ತಾರೆ. ಕಳೆದ ವರ್ಷ ಭಾರತಕ್ಕೆ ಬಂದ ಒಟ್ಟು ಹಣದ ಮೊತ್ತ ಸುಮಾರು ₹ 1,212.9 ಕೋಟಿ. ಇದು ಭಾರತ ತೈಲ ಆಮದಿಗೆ ವ್ಯಯಿಸುವ ಮೊತ್ತಕ್ಕೆ ಸಮ. ಇದರಲ್ಲಿ ಮೂರನೇ ಒಂದಕ್ಕಿಂತ ಹೆಚ್ಚು ಭಾಗ ಕೊಲ್ಲಿ ರಾಷ್ಟ್ರಗಳಿಂದಲೇ ಬಂದಿದೆ.
ಕತಾರ್‌ನ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಕಾರ್ಮಿಕರೊಬ್ಬರು, ಯುದ್ಧದಿಂದ ಹಾನಿಗೊಳಗಾದ ಕಾರ್ಮಿಕರ ಕ್ಯಾಂಪ್‌ಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಅವರಿಗೆ, ಊರಿನಲ್ಲಿರುವ ತನ್ನ ಕುಟುಂಬದ ಆರ್ಥಿಕ ಸ್ಥಿತಿಯ ಬಗ್ಗೆಯೇ ಕಳವಳ. ಯುದ್ಧ ಕೊನೆಗೊಂಡು ಕೆಲಸ ಪುನಾರಂಭಗೊಳ್ಳಲಿ ಎನ್ನುವುದು ಅವರ ಹೆಬ್ಬಯಕೆ. ಯುದ್ಧದ ಬಗ್ಗೆ ಭಯ ಹುಟ್ಟಿಸುವ ತಪ್ಪು ಮಾಹಿತಿ ಹರಡುವ ವಿದೇಶಿ ಕಾರ್ಮಿಕರನ್ನು ಅಲ್ಲಿನ ಅಧಿಕಾರಿಗಳು ಬಂಧಿಸುತ್ತಿರುವುದರಿಂದ, ಅವರು ತಮ್ಮ ಗುರುತನ್ನು ಬಹಿರಂಗಪಡಿಸಲು ನಿರಾಕರಿಸಿದರು. ಭಾರತಕ್ಕೆ ಮರಳುವ ಬಗ್ಗೆ ಯೋಚಿಸಿದ್ದರೂ, ಮರಳಿ ಬಂದಲ್ಲಿ ಉದ್ಯೋಗದಾತರು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬ ಭಯ ಅವರನ್ನು ಕಾಡುತ್ತಿದೆ.
ಆಧಾರ: ನ್ಯೂಯಾರ್ಕ್ ಟೈಮ್ಸ್
ಭಾರತದ ಮುಂದಿನ ತಲೆನೋವಾದೀತೇ ಇರಾನಿನ ಅಸ್ಥಿರತೆ?
