ಇಸ್ಲಾಮಾಬಾದ್ : ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಬಿನ್ ಜಾಸಿಮ್ ಅಲ್ ಥಾನಿ ಅವರೊಂದಿಗೆ ಶನಿವಾರ ಮಾತುಕತೆ ನಡೆಸಿದ್ಡಾರೆ.
ದಾರ್ ಅವರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ ಕತಾರ್ ಪ್ರಧಾನಿ ಪಶ್ಚಿಮ ಏಷ್ಯಾದಲ್ಲಿ ಶಾಂತಿಯನ್ನು ಉತ್ತೇಜಿಸುವ ಪಾಕಿಸ್ತಾನದ ಪ್ರಯತ್ನಗಳನ್ನು ಶ್ಲಾಘಿಸಿದರು ಎಂದು ವಿದೇಶಾಂಗ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಧಾನ ಮತ್ತು ರಾಜತಾಂತ್ರಿಕತೆಯ ಮೂಲಕ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸಲು ಪಾಕಿಸ್ತಾನ ನಡೆಸುತ್ತಿರುವ ಪ್ರಯತ್ನಗಳನ್ನು ಕತಾರ್ ಶ್ಲಾಘಿಸಿದೆ. ಅಲ್ಲದೇ, ಉಭಯ ನಾಯಕರು ಪ್ರಚಲಿತ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು. ಜತೆಗೆ ಉದ್ವಿಗ್ನತೆ ಶಮನದ ಮಹತ್ವವನ್ನು ಒತ್ತಿಹೇಳಿದರು ಎಂದೂ ತಿಳಿಸಿದೆ.
ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಸೌದಿ ಅರೇಬಿಯಾ, ಈಜಿಪ್ಟ್ ಮತ್ತು ಟರ್ಕಿಯ ವಿದೇಶಾಂಗ ಸಚಿವರು ಇಸ್ಲಾಮಾಬಾದ್‌ನಲ್ಲಿ ಭಾನುವಾರ ಮತ್ತು ಸೋಮವಾರ ಸಭೆ ನಡೆಸಲಿದ್ದಾರೆ.
'ಮಾತುಕತೆ ಮತ್ತು ರಾಜತಾಂತ್ರಿಕತೆ ಮೂಲಕ ಮಾತ್ರ ಯುದ್ಧವನ್ನು ನಿಲ್ಲಿಸಬಹುದು' ಎಂದಿರುವ ಪಾಕಿಸ್ತಾನ, ಈ ನಿಟ್ಟಿನಲ್ಲಿ 'ವಿಶ್ವಾಸಾರ್ಹ ಮಧ್ಯಸ್ಥಿಕೆದಾರನ ಪಾತ್ರ' ವಹಿಸುವುದಾಗಿ ಹೇಳಿದೆ.
ವಿದೇಶಾಂಗ ಸಚಿವರಾದ ಪಾಕಿಸ್ತಾನದ ಇಶಾಕ್ ದಾರ್, ಸೌದಿಯ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್, ಟರ್ಕಿಯ ಹಕನ್ ಫಿದಾನ್, ಈಜಿಪ್ಟ್‌ನ ಬದ್ರ್ ಅಬ್ದಲತಿ ಅವರು ಇರಾನ್-ಅಮೆರಿಕ, ಇಸ್ರೇಲ್ ನಡುವಿನ ಯುದ್ಧ ಮತ್ತು ಇದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿರುವ ತೈಲ, ಅನಿಲ ಬಿಕ್ಕಟ್ಟಿನ ಕುರಿತು ಸಮಗ್ರ ಚರ್ಚೆ ನಡೆಸುವ ಸಾಧ್ಯತೆಗಳಿವೆ.

