ಬೀದರ್: ಕೊಲ್ಲಿಯಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಕಲ್ಲಂಗಡಿ ಬೆಲೆ ಪಾತಾಳಕ್ಕೆ ಕುಸಿದಿದ್ದು, ರೈತ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಿಲ್ಲೆಯಾದ್ಯಂತ ನವೆಂಬರ್, ಡಿಸೆಂಬರ್‌ನಲ್ಲಿ ನಾಟಿ ಮಾಡಿದ ಸಸಿಗಳಲ್ಲಿ ಈಗ ಕಲ್ಲಂಗಡಿ ಬೆಳೆದಿದ್ದು, ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ.
ನೆರೆಯ ತೆಲಂಗಾಣದ ಹೈದರಾಬಾದ್, ಮಹಾರಾಷ್ಟ್ರದ ಸೋಲಾಪುರ, ಲಾತೂರ್, ನಾಂದೇಡ್ ಸೇರಿದಂತೆ ಇತರೆ ಕಡೆಗಳಿಗೂ ರಫ್ತು ಮಾಡಲಾಗುತ್ತದೆ. ಅಲ್ಲಿನ ವ್ಯಾಪಾರಿಗಳೇ ಖುದ್ದು ರೈತರ ತೋಟಗಳಿಗೆ ಬಂದು, ಖರೀದಿಸಿ ಕೊಂಡೊಯ್ಯುತ್ತಾರೆ.
ಆದರೆ, ಕೊಲ್ಲಿಯಲ್ಲಿ ಯುದ್ಧ ಮುಂದುವರಿದಿರುವ ಕಾರಣ ಬಹುತೇಕ ಸರಕುಗಳ ರಫ್ತು ಸ್ಥಗಿತಗೊಂಡಿದೆ. ಇದರಲ್ಲಿ ಕಲ್ಲಂಗಡಿ ಕೂಡ ಸೇರಿದೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ಬೆಳೆದ ಕಲ್ಲಂಗಡಿ ವಿದೇಶಕ್ಕೆ ರಫ್ತು ಆಗದೇ ಇಲ್ಲೇ ಉಳಿದುಕೊಂಡಿದೆ. ಆದಕಾರಣ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿದು, ಕೇಳುವವರು ಇಲ್ಲದಂತಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಪ್ರತಿ ವರ್ಷ ಸಾಮಾನ್ಯವಾಗಿ ₹8ರಿಂದ ₹12ರ ವರೆಗೆ ಪ್ರತಿ ಕೆಜಿ ಕಲ್ಲಂಗಡಿ ರೈತರಿಂದ ಖರೀದಿಸಲಾಗುತ್ತದೆ. ಈ ಸಲ ಇದು ₹2ರಿಂದ ₹4ಕ್ಕೆ ಕುಸಿದಿದೆ. ಬಂಡವಾಳ ಕೂಡ ವಾಪಸ್ ಬರುವ ನಿರೀಕ್ಷೆ ರೈತರಿಗೆ ಉಳಿದಿಲ್ಲ.
ಬೀದರ್ ಜಿಲ್ಲೆಯಾದ್ಯಂತ 852 ಹೆಕ್ಟೇರ್ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಸಲಾಗಿದೆ. ಕಳೆದ ಒಂದು ತಿಂಗಳಿಂದ ಫಸಲು ಮಾರುಕಟ್ಟೆಗೆ ಬರುತ್ತಿದೆ. ಆರಂಭದಲ್ಲಿ ಉತ್ತಮ ಬೆಲೆ ಕೂಡ ಸಿಕ್ಕಿತ್ತು. ಯುದ್ಧ ಆರಂಭಗೊಂಡ ನಂತರ ಸತತವಾಗಿ ಬೆಲೆ ಕುಸಿಯುತ್ತ ಹೋಗುತ್ತಿದೆ ಎಂದು ರೈತರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಪ್ರಮುಖವಾಗಿ ದಿಲ್‌ಕಷ್, ನಲೊಡಿ ಹಾಗೂ ಕಿರಣ್ ತಳಿಯ ಕಲ್ಲಂಗಡಿ ಬೆಳೆಸಲಾಗುತ್ತದೆ.
'ಕಲ್ಲಂಗಡಿ ಬೆಲೆ ಬಹಳ ಕುಸಿದಿದೆ. ಯಾರೂ ಕೂಡ ಖರೀದಿಗೆ ಮುಂದೆ ಬರುತ್ತಿಲ್ಲ. ಹೊಲದಲ್ಲಿಯೇ ಬೆಳೆ ಹಾಳಾಗುತ್ತಿದೆ. ಎರಡೂ ವರೆ ಎಕರೆಯಲ್ಲಿ ಬೆಳೆಸಿದ್ದೆ. ಏನು ಮಾಡಬೇಕು ದಿಕ್ಕು ತೋಚುತ್ತಿಲ್ಲ' ಎಂದು ಬೀದರ್ ತಾಲ್ಲೂಕಿನ ಸಿರ್ಸಿ ಗ್ರಾಮದ ರೈತ ವೈಜಿನಾಥ ಅಳಲು ತೋಡಿಕೊಂಡರು.
ಅಕಾಲಿಕ ಮಳೆಯಿಂದಲೂ ಸ್ವಲ್ಪ ಬೆಳೆಗೆ ಸಮಸ್ಯೆ ಆಗಿತ್ತು. ಈಗ ಬೆಲೆ ಕುಸಿತದಿಂದ ಇನ್ನಷ್ಟು ತೊಂದರೆಯಾಗಿದೆ. ಮುಂಗಾರು ಹಂಗಾಮಿನಲ್ಲೂ ಹೆಚ್ಚಿನ ಮಳೆಗೆ ಬೆಳೆ ಹಾಳಾಗಿತ್ತು ಎಂದು ಸಮಸ್ಯೆ ಬಿಚ್ಚಿಟ್ಟರು.

