ಕೊಪ್ಪಳದಿಂದ ಕುಕನೂರು ತಾಲ್ಲೂಕಿನ ಕುದರಿಮೋತಿ ಗ್ರಾಮದ ಕಡೆ ಸಾಗುತ್ತಿದ್ದಂತೆ ರಸ್ತೆ ಬದಿಯ ದೃಶ್ಯಗಳು ನಿಧಾನವಾಗಿ ಬದಲಾಗತೊಡಗಿದವು. ಊರ ಹೊರವಲಯ ಸಮೀಪಿಸುತ್ತಿದ್ದಂತೆ ಮಳೆಗಾಲದಲ್ಲಿ ಒಂದೇ ರಾತ್ರಿ ಅಣಬೆಗಳು ಮೊಳಕೆಯೊಡೆಯುವಂತೆ ನೂರಾರು ಟೆಂಟ್‌ಗಳು ಕಣ್ಣಿಗೆ ಬಿದ್ದವು.
ದೂರದಿಂದ ನೋಡಿದರೆ ಅದು ತಾತ್ಕಾಲಿಕ ವಸತಿ. ಹತ್ತಿರ ಹೋದರೆ, ಸಾವಿರಾರು ಬದುಕುಗಳು ಕೆಲ ದಿನಗಳ ಮಟ್ಟಿಗೆ ಒಂದೇ ಜಾಗದಲ್ಲಿ ಉಸಿರಾಡುತ್ತಿರುವ ಲೋಕ.
ಪ್ರತಿಯೊಂದು ಟೆಂಟ್‌ನೊಳಗೂ ಒಂದೊಂದು ಕುಟುಂಬ.
ಮೂಲೆಯೊಂದರಲ್ಲಿ ಅಕ್ಕಿ, ಬೇಳೆ, ಎಣ್ಣೆಯ ಡಬ್ಬಿ. ಪಕ್ಕದಲ್ಲಿ ಅಡುಗೆ ಪಾತ್ರೆಗಳು. ಮೇಲೊಂದು ಹಗ್ಗದಲ್ಲಿ ಒಣಗಲು ಹಾಕಿದ ಬಟ್ಟೆಗಳು. ಮಕ್ಕಳು ಆಟವಾಡಲು ಉಳಿದಿದ್ದ ಜಾಗವೇ ರಾತ್ರಿ ಎಲ್ಲರಿಗೂ ಹಾಸಿಗೆಯಾಗುತ್ತದೆ. ಮಹಿಳೆಯರು ಅದೇ ಟೆಂಟ್‌ನ ಮೂಲೆಯನ್ನು ಅಡುಗೆ ಮನೆಯನ್ನಾಗಿ ಮಾಡಿಕೊಂಡಿದ್ದಾರೆ.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ದಾಖಲೆಗಳ ಪ್ರಕಾರ ಅವರಿಗೆ ಕಾಯಂ ವಿಳಾಸಗಳಿವೆ. ಆದರೆ ಬದುಕಿನ ನಿಜವಾದ ವಿಳಾಸ ರಸ್ತೆಗಳೇ. ಇಂದು ಇಲ್ಲಿ, ನಾಳೆ ಇನ್ನೊಂದು ಊರು. ಸಂತೆ, ಶಾಲೆಯ ಆವರಣ, ಊರ ಹೊರಗಿನ ಖಾಲಿ ಜಾಗ-ಜಾಗ ಸಿಕ್ಕರೆ ಅಲ್ಲಿ ಟೆಂಟ್ ಎದ್ದು ನಿಲ್ಲುತ್ತದೆ. ಸಂಜೆ ಹೊತ್ತಿಗೆ ಒಲೆ ಉರಿಯುತ್ತದೆ. ಬೆಳಿಗ್ಗೆ ಮತ್ತೆ ಪ್ರಯಾಣ ಆರಂಭವಾಗುತ್ತದೆ.
ಆ ದಿನ ಮಾತ್ರ ಅವರ ದಾರಿ ಕುದರಿಮೋತಿಯತ್ತ ಬಂದು ನಿಂತಿತ್ತು.
ಟೆಂಟ್‌ಗಳ ಮುಂದೆ ಮಹಿಳೆಯರು ಹರಟೆಯಲ್ಲಿ ತಲ್ಲೀನರಾಗಿದ್ದರು. ಪಕ್ಕದಲ್ಲೇ ಮಕ್ಕಳು ಓಡಾಡುತ್ತ ಆಟವಾಡುತ್ತಿದ್ದರು. ಆದರೆ ಪುರುಷರು ಯಾರೂ ಕಾಣಿಸುತ್ತಿರಲಿಲ್ಲ.
'ಮನೆಯ ಯಜಮಾನರು ಎಲ್ಲಿದ್ದಾರೆ?' ಎಂದು ಕೇಳಿದೆ.
ಮಹಿಳೆಯೊಬ್ಬರು ದೂರದ ಹೊಲದ ಕಡೆ ಕೈ ತೋರಿಸುತ್ತಾ ನಗುತ್ತಾ ಹೇಳಿದರು.
'ಅಲ್ಲೆ... ಪಂಚಾಯಿತಿ ನಡೆಯುತ್ತಿದೆ. ಎಲ್ಲರೂ ಅಲ್ಲಿಗೆ ಹೋಗಿದ್ದಾರೆ'.
ಹೊಲದ ಕಡೆ ನಡೆದಾಗ ಮುಂಗಾರು ಮಳೆಯ ಕೊರತೆಯಿಂದ ಬಿತ್ತನೆಯಾಗದೆ ಉಳಿದ ಹೊಲ ಕಾಣಿಸಿತು. ಬಿರುಬಿಸಿಲು. ಅದರ ಮಧ್ಯೆ ಒಂದು ದೊಡ್ಡ ಮರ. ಮರದ ನೆರಳಿನಲ್ಲಿ ನೂರಾರು ಜನ ವೃತ್ತಾಕಾರವಾಗಿ ಕುಳಿತಿದ್ದರು. ಬಿಸಿಲಿನ ತಾಪವನ್ನು ಮರೆಸುವಷ್ಟು ಗಂಭೀರವಾಗಿತ್ತು ಆ ಸಭೆ.
ಮೊದಲ ಸಾಲಿನಲ್ಲಿ ಬುಡ್ಗ ಜಂಗಮ, ಶಿಳ್ಳೇಕ್ಯಾತರು, ಸುಡುಗಾಡು ಸಿದ್ದರು ಸೇರಿದಂತೆ ವಿವಿಧ ಉಪಸಮುದಾಯಗಳ ಹಿರಿಯರು ಕುಳಿತಿದ್ದರು. ಕೊನೆಯ ಭಾಗದಲ್ಲಿ ತೀರ್ಮಾನಗಳನ್ನು ದಾಖಲಿಸಲು ಸಿದ್ಧರಾಗಿ ಕುಳಿತಿದ್ದ ಒಬ್ಬ ವಯೋವೃದ್ಧ. ಯಾವುದೇ ವೇದಿಕೆ ಇಲ್ಲ. ಮೈಕ್ ಇಲ್ಲ. ನ್ಯಾಯಾಲಯದ ಕಟ್ಟಡವೂ ಇಲ್ಲ. ಆದರೂ ಈ ಸಭೆಯ ತೀರ್ಮಾನಗಳಿಗೆ ಸಮುದಾಯದಲ್ಲಿ ನ್ಯಾಯಾಲಯದಷ್ಟೇ ಗೌರವ.
'ನಮ್ಮ ಕುಟುಂಬಕ್ಕೆ ಅನ್ಯಾಯವಾಗಿದೆ...'
ಮತ್ತೊಬ್ಬರು ಸಂಬಂಧಗಳ ಬಿರುಕು ಕುರಿತು ಮಾತನಾಡಿದರು.
ಕ್ಷಣಕ್ಷಣಕ್ಕೂ ಮಾತಿನ ತೀವ್ರತೆ ಹೆಚ್ಚುತ್ತಿತ್ತು. ಆದರೆ ಯಾರೂ ಗದ್ದಲ ಮಾಡುತ್ತಿರಲಿಲ್ಲ. ಹಿರಿಯರು ಪ್ರತಿಯೊಬ್ಬರ ಮಾತನ್ನೂ ತಾಳ್ಮೆಯಿಂದ ಆಲಿಸುತ್ತಿದ್ದರು. ಕೆಲವೊಮ್ಮೆ ಪ್ರಶ್ನೆ ಕೇಳುತ್ತಿದ್ದರು. ಮತ್ತೆ ಇಬ್ಬರನ್ನೂ ಸಮಾಧಾನಪಡಿಸುತ್ತಿದ್ದರು.
ಕೊನೆಗೆ ಹಿರಿಯರೊಬ್ಬರು ಎದ್ದು ತೀರ್ಮಾನ ಹೇಳಿದರು.
ಆ ಮೌನವನ್ನು ಮುರಿದದ್ದು ನೂರಾರು ಕೈಗಳ ಚಪ್ಪಾಳೆ.
ಅದು ಕೇವಲ ಕರತಾಡನವಲ್ಲ; ಸಮುದಾಯದ ನ್ಯಾಯಕ್ಕೆ ಸಲ್ಲಿಸಿದ ಒಪ್ಪಿಗೆಯ ಮುದ್ರೆ.
ಮರುದಿನ ಅದೇ ಮರದ ನೆರಳಿನಲ್ಲಿ ಮತ್ತೊಂದು ಸಭೆ ನಡೆಯಿತು. ಈ ಬಾರಿ ಮುಖಗಳಲ್ಲಿ ಉದ್ವಿಗ್ನತೆ ಇರಲಿಲ್ಲ. ಎರಡು ಕುಟುಂಬಗಳು ಮುಖಾಮುಖಿಯಾಗಿ ಕುಳಿತಿದ್ದವು. ಮಧ್ಯದಲ್ಲಿ ಹಿರಿಯರು.
ಚರ್ಚೆಯ ವಿಷಯ ವ್ಯಾಜ್ಯವಲ್ಲ; ಮದುವೆ.
ಎರಡು ಕುಟುಂಬಗಳ ಮಾತುಕತೆ ಮುಗಿದ ನಂತರ ಸಮುದಾಯದ ಯಜಮಾನ ಸಂಬಂಧ ಕುದುರಿದ ಘೋಷಣೆ ಮಾಡಿದರು. ಮತ್ತೆ ಚಪ್ಪಾಳೆ.
ಒಂದೇ ಜಾಗದಲ್ಲಿ ಒಂದು ದಿನ ನ್ಯಾಯ, ಮತ್ತೊಂದು ದಿನ ಹೊಸ ಸಂಬಂಧ.
ಕುದರಿಮೋತಿಯ ಈ ಪಂಚಾಯಿತಿ ಕಟ್ಟೆ ಕೇವಲ ವಿವಾದಗಳನ್ನು ಬಗೆಹರಿಸುವ ಸ್ಥಳವಲ್ಲ; ಸಂಬಂಧಗಳನ್ನು ಬೆಸೆಯುವ ಜಾಗವೂ ಹೌದು.
ಎರಡು ವರ್ಷಗಳಿಗೊಮ್ಮೆ ಮೊಹರಂ ಸಂದರ್ಭದಲ್ಲಿ ನಡೆಯುವ ಈ ಸಂಗಮಕ್ಕಾಗಿ ಕರ್ನಾಟಕ ಮಾತ್ರವಲ್ಲ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಮಧ್ಯಪ್ರದೇಶ ಹಾಗೂ ಗುಜರಾತ್‌ನ ವಿವಿಧ ಭಾಗಗಳಲ್ಲಿ ಬದುಕು ಕಟ್ಟಿಕೊಂಡಿರುವ ಅಲೆಮಾರಿ ಕುಟುಂಬಗಳು ಇಲ್ಲಿಗೆ ಮರಳುತ್ತವೆ.
ವರ್ಷಪೂರ್ತಿ ರಸ್ತೆಗಳ ಮೇಲೆ ಕಳೆಯುವ ಬದುಕಿಗೆ ಈ ಎಂಟು ದಿನಗಳೇ ವಿರಾಮ.
ವರ್ಷಾನುಗಟ್ಟಲೆ ತಮ್ಮ ಮಕ್ಕಳನ್ನು ಕಾಣದ ತಂದೆ ಇಲ್ಲಿಗೆ ಬರುತ್ತಾನೆ. ಬಂಧುಗಳನ್ನು ನೋಡದ ಸಹೋದರ ಇಲ್ಲಿ ಭೇಟಿಯಾಗುತ್ತಾನೆ. ಹೊಸದಾಗಿ ಹುಟ್ಟಿದ ಮಕ್ಕಳನ್ನು ಮೊದಲ ಬಾರಿಗೆ ಮಡಿಲಿಗೆ ಎತ್ತಿಕೊಳ್ಳುವ ಅಜ್ಜ-ಅಜ್ಜಿಯರೂ ಇಲ್ಲಿಯೇ.
ಹೀಗಾಗಿ ಮೊಹರಂ ಅವರಿಗೆ ಕೇವಲ ಧಾರ್ಮಿಕ ಆಚರಣೆಯಲ್ಲ. ಅದು ಸಂಬಂಧಗಳ ಹಬ್ಬ.ಅದು ನೆನಪುಗಳ ಹಬ್ಬ. ಅದು ಮತ್ತೆ ಬದುಕನ್ನು ಆರಂಭಿಸುವ ಶಕ್ತಿ ಕೊಡುವ ಮಹಾಸಂಗಮ.
ಆದ್ದರಿಂದಲೇ ಟೆಂಟ್‌ಗಳಿಂದ ತುಂಬಿರುವ ಆ ಬಯಲಿನಲ್ಲಿ ಯಾರ ಮುಖದಲ್ಲೂ ಆಯಾಸ ಕಾಣಿಸುವುದಿಲ್ಲ. ವರ್ಷಪೂರ್ತಿ ರಸ್ತೆಗಳ ಮೇಲೆ ಕಳೆದ ದಣಿವು ಇದ್ದರೂ, ಕುದರಿಮೋತಿಯಲ್ಲಿ ಕಳೆದ ಈ ಎಂಟು ದಿನಗಳು ಅದನ್ನೆಲ್ಲ ಮರೆಸಿಬಿಡುತ್ತವೆ. ಮುಂದಿನ ಎರಡು ವರ್ಷಗಳ ಅಲೆದಾಟಕ್ಕೆ ಬೇಕಾದ ನಗು, ಧೈರ್ಯ, ಆತ್ಮವಿಶ್ವಾಸ ಇಲ್ಲಿಯೇ ಸಂಗ್ರಹವಾಗುತ್ತದೆ.
ಎಂಟು ದಿನಗಳ ನಂತರ ಮತ್ತೆ ಟೆಂಟ್‌ಗಳು ಮಡಚಿಕೊಳ್ಳುತ್ತವೆ. ಪಾತ್ರೆಗಳು, ಬಟ್ಟೆಗಳು, ಹಾಸಿಗೆಗಳು, ಅಡುಗೆ ಸಾಮಗ್ರಿಗಳು ಮತ್ತೆ ವಾಹನಗಳೊಳಗೆ ಜಾಗ ಮಾಡಿಕೊಳ್ಳುತ್ತವೆ. ನಂತರ ಆರಂಭವಾಗುವುದು ಸಾವಿರಾರು ಕಿಲೋಮೀಟರ್‌ಗಳ ಪ್ರಯಾಣ.
ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಗುಜರಾತ್ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಊರುಗಳು ಅವರ ಕಾಯಕದ ನೆಲೆಗಳಾಗುತ್ತವೆ. ಕೆಲವರಿಗೆ ಉತ್ತರ ಭಾರತವೇ ವರ್ಷಪೂರ್ತಿ ನೆಲೆಯಾದರೆ, ಕೆಲವರು ದಕ್ಷಿಣದ ರಾಜ್ಯಗಳಲ್ಲಿ ಊರೂರು ಸಂಚರಿಸುತ್ತಾರೆ. ಪ್ರತಿಯೊಂದು ಊರೂ ಹೊಸದು. ಅಲ್ಲಿನ ಜನ ಹೊಸಬರು. ಆದರೆ ಕಲೆಯ ಭಾಷೆ ಮಾತ್ರ ಎಲ್ಲೆಡೆ ಒಂದೇ.
ಅಲೆಮಾರಿಗಳ ಬದುಕಿಗೆ ಕಲೆಯೇ ಅನ್ನ ನೀಡಿದೆ. ತಲೆತಲಾಂತರಗಳಿಂದ ಬಂದ ರಾಮಾಯಣ, ಮಹಾಭಾರತ, ಪುರಾಣಗಳ ಪ್ರಸಂಗಗಳ ಪಾತ್ರಧಾರಿಗಳಾಗಿ ಅಭಿನಯಿಸುತ್ತಾ ಜನರ ಮುಂದೆ ನಿಲ್ಲುತ್ತಾರೆ. ರಾಮ, ಲಕ್ಷ್ಮಣ, ಹನುಮಂತ, ಶೂರ್ಪನಖಿ, ಭೀಮ-ಅವರ ಪಾತ್ರಗಳು ಊರಿನ ಬೀದಿಗಳಲ್ಲಿ ಜೀವಂತವಾಗುತ್ತವೆ. ಕೆಲವೆಡೆ ಸುಗಮ ಸಂಗೀತ, ಕೆಲವೆಡೆ ಜಾನಪದ, ಮತ್ತೆಲ್ಲೋ ದಾಸಸಾಹಿತ್ಯ, ತತ್ವಪದಗಳು ಮೊಳಗುತ್ತವೆ. ಜನರು ಹಾಡು ಕೇಳುತ್ತಾರೆ, ಅಭಿನಯ ನೋಡುತ್ತಾರೆ. ಮೆಚ್ಚಿದವರು ಹಣ ಕೊಡುತ್ತಾರೆ. ಕೆಲವರು ಧಾನ್ಯ ನೀಡುತ್ತಾರೆ. ಮತ್ತೆ ಕೆಲವರು ಬೆಳ್ಳಿಯ ಆಭರಣ ಉಡುಗೊರೆಯಾಗಿ ಕೊಡುತ್ತಾರೆ.
'ಉತ್ತರ ಭಾರತದ ರಾಜ್ಯಗಳಲ್ಲಿ ಜನರಿಗೆ ಕಲೆಯ ಮೇಲೆ ಅಪಾರ ಪ್ರೀತಿ. ನಾವು ಅಭಿನಯ ಮುಗಿಸಿದ ಬಳಿಕ ಕೈಬಿಡದೆ ಗೌರವಿಸುತ್ತಾರೆ. ಕೆಲವೊಮ್ಮೆ ವರ್ಷಕ್ಕೊಮ್ಮೆ ಮಾತ್ರ ಊರಿಗೆ ಬರಲು ಸಾಧ್ಯವಾಗುತ್ತದೆ' ಎಂದು ಕಾರಟಗಿ ತಾಲ್ಲೂಕಿನ ಸಿದ್ದಾಪುರದ ಲಿಂಗರಾಜ ಹೇಳುವಾಗ, ಆ ಮಾತಿನ ಹಿಂದೆ ವರ್ಷಗಳ ಅಲೆದಾಟದ ದಣಿವು ಕೇಳಿಸುತ್ತದೆ.
ಅವರು ಹೇಳುವುದು ಕೇವಲ ದೂರದ ಪ್ರಯಾಣದ ಕಥೆಯಲ್ಲ. ಮನೆಯಿಂದ ದೂರ ಇರುವ ಬದುಕಿನ ಕಥೆ. ಹೆತ್ತ ಮಕ್ಕಳ ಬೆಳವಣಿಗೆಯನ್ನು ಕಣ್ಣಾರೆ ನೋಡಲು ಸಾಧ್ಯವಾಗದ ತಂದೆಯ ಕಥೆ. ಅಜ್ಜ-ಅಜ್ಜಿಯರ ಮಡಿಲಲ್ಲಿ ಬೆಳೆಯಬೇಕಾದ ಮಕ್ಕಳು ವರ್ಷಕ್ಕೊಮ್ಮೆ ಮಾತ್ರ ಅವರನ್ನು ಕಾಣುವ ಬದುಕಿನ ಕಥೆ.
ಆದ್ದರಿಂದಲೇ ಕುದರಿಮೋತಿಗೆ ಬಂದಾಗ ಅವರ ಮುಖದಲ್ಲಿ ಕಾಣಿಸಿಕೊಳ್ಳುವ ನಗು ಕೇವಲ ಹಬ್ಬದ ಸಂಭ್ರಮವಲ್ಲ; ಅದು ಮರಳಿ ಸಿಕ್ಕ ಕುಟುಂಬದ ಸಂತೋಷ.
ಕಾಲ ಬದಲಾಗಿದೆ. ಅದರೊಂದಿಗೆ ಅಲೆಮಾರಿಗಳ ಬದುಕಿನ ರೂಪವೂ ಬದಲಾಗುತ್ತಿದೆ. ಒಂದು ಕಾಲದಲ್ಲಿ ಬಿದಿರಿನ ಬೊಂಬು, ಪಾತ್ರೆಗಳು, ಬಟ್ಟೆಗಳನ್ನು ಎತ್ತಿನ ಬಂಡಿಯಲ್ಲಿ ಹೊತ್ತು ಊರೂರು ಸಾಗುತ್ತಿದ್ದವರು ಇಂದು ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ. ಕೆಲವರಿಗೆ ಆ ವಾಹನವೇ ಮನೆ. ಹಗಲು ಅದೇ ಅಂಗಡಿ. ರಾತ್ರಿ ಅದೇ ಮಲಗುವ ಜಾಗ.ಆದರೆ ಬದಲಾದದ್ದು ವಾಹನ ಮಾತ್ರವಲ್ಲ. ಉದ್ಯೋಗವೂ ಬದಲಾಗಿದೆ.
ಸಮುದಾಯದ ಹಿರಿಯರು ಇನ್ನೂ ಕಲೆಯನ್ನೇ ನಂಬಿಕೊಂಡು ಬದುಕುತ್ತಿದ್ದರೆ, ಯುವಕರು ಹೊಸ ದಾರಿಗಳನ್ನು ಕಂಡುಕೊಂಡಿದ್ದಾರೆ. ದ್ವಿಚಕ್ರ ವಾಹನಗಳ ಸೀಟ್ ಕವರ್ ಮಾರಾಟ, ಫ್ಯಾನ್ಸಿ ವಸ್ತುಗಳ ವ್ಯಾಪಾರ, ಸಣ್ಣ ಉದ್ಯಮಗಳು ಅವರ ಹೊಸ ಜೀವನೋಪಾಯಗಳಾಗಿವೆ.
ಈ ವ್ಯಾಪಾರದ ಹಿಂದೆ ಕೂಡ ಸಮುದಾಯದ ಒಗ್ಗಟ್ಟು ಕೆಲಸ ಮಾಡುತ್ತದೆ. ಕೆಲವು ಯುವಕರು ಊರಿನಲ್ಲಿಯೇ ಉಳಿದು ಸೀಟ್ ಕವರ್ ತಯಾರಿಸುತ್ತಾರೆ. ಅವರ ಸಂಬಂಧಿಕರು ದೇಶದ ವಿವಿಧ ರಾಜ್ಯಗಳಿಗೆ ಅವುಗಳನ್ನು ಕೊಂಡೊಯ್ದು ಮಾರಾಟ ಮಾಡುತ್ತಾರೆ. ಒಬ್ಬನ ಉದ್ಯೋಗ ಮತ್ತೊಬ್ಬನ ಬದುಕಿಗೂ ಆಧಾರವಾಗುತ್ತದೆ.
ಅಲೆಮಾರಿ ಬದುಕು ಅವರಿಗೆ ಕೇವಲ ಸಂಚಾರವನ್ನು ಮಾತ್ರ ಕಲಿಸಿಲ್ಲ. ಬದಲಾದ ಕಾಲಕ್ಕೆ ಹೊಂದಿಕೊಳ್ಳುವುದನ್ನೂ ಕಲಿಸಿದೆ. ಒಮ್ಮೆ ಶಿಕ್ಷಣ ಅವರ ಬದುಕಿನ ಭಾಗವೇ ಆಗಿರಲಿಲ್ಲ. ಇಂದು ಪರಿಸ್ಥಿತಿ ಬದಲಾಗುತ್ತಿದೆ.
ತಮ್ಮ ಮಕ್ಕಳು ತಮಗಿಂತ ಭಿನ್ನವಾದ ಬದುಕು ಕಟ್ಟಿಕೊಳ್ಳಬೇಕು ಎಂಬ ಕನಸು ಅವರಲ್ಲೂ ಮೂಡಿದೆ. ಅದಕ್ಕಾಗಿ ಮನೆಯ ಹಿರಿಯರನ್ನು ಒಂದೇ ಊರಲ್ಲಿ ನೆಲೆಗೊಳಿಸುತ್ತಾರೆ. ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಅವರಿಗೆ ವಹಿಸಿ, ತಾವೇ ಮತ್ತೆ ಪ್ರಯಾಣ ಬೆಳೆಸುತ್ತಾರೆ.
ಮಾತೃಭಾಷೆ ತೆಲುಗು. ಆದರೆ ಮಕ್ಕಳ ಓದು ಕನ್ನಡದಲ್ಲಿ. ಅದರ ಜೊತೆಗೆ ಕನ್ನಡ, ತೆಲುಗು, ಹಿಂದಿ, ಮರಾಠಿ, ಗುಜರಾತಿ-ಹೀಗೆ ಹಲವು ಭಾಷೆಗಳನ್ನು ಅವರು ಸುಲಭವಾಗಿ ಮಾತನಾಡುತ್ತಾರೆ. ಊರೂರು ಅಲೆದ ಬದುಕು ಅವರಿಗೆ ಭಾಷೆಯನ್ನು ಶಾಲೆಯಲ್ಲಿ ಅಲ್ಲ, ಜೀವನದಲ್ಲೇ ಕಲಿಸಿದೆ.
ರಸ್ತೆಯೇ ಅವರ ಗುರು. ಜನರೇ ಅವರ ಪಾಠಪುಸ್ತಕ.ಅನುಭವವೇ ಅವರ ವಿಶ್ವವಿದ್ಯಾಲಯ. ಕುದರಿಮೋತಿಯಲ್ಲಿ ನಡೆಯುವ ಈ ಸಂಗಮ ಕೇವಲ ಹಬ್ಬಕ್ಕೆ ಸೀಮಿತವಾಗುವುದಿಲ್ಲ. ಸಮುದಾಯದ ಮುಂದಿನ ಬದುಕಿನ ದಿಕ್ಕು ಕೂಡ ಇಲ್ಲಿಯೇ ನಿರ್ಧಾರವಾಗುತ್ತದೆ.
ಪಂಚಾಯಿತಿಯಲ್ಲಿ ಕುಟುಂಬಗಳ ನಡುವಿನ ಭಿನ್ನಾಭಿಪ್ರಾಯಗಳು ಬಗೆಹರಿದರೆ, ಅದೇ ಕಟ್ಟೆಯ ಮುಂದೆ ಹೊಸ ಸಂಬಂಧಗಳೂ ಮೊಳಕೆಯೊಡೆಯುತ್ತವೆ.
ಮದುವೆ ನಿಶ್ಚಯದ ದಿನ ಎರಡು ಕುಟುಂಬಗಳು ಹಿರಿಯರ ಎದುರು ಕುಳಿತುಕೊಳ್ಳುತ್ತವೆ. ಹುಡುಗನಿಗೆ ಎಷ್ಟು ಸಂಬಳ? ಎಷ್ಟು ಎಕರೆ ಜಮೀನು? ಎಷ್ಟು ಆಸ್ತಿ? ಎಂಬ ಪ್ರಶ್ನೆಗಳು ಅಲ್ಲಿ ಪ್ರಮುಖವಾಗುವುದಿಲ್ಲ. ಬದಲಾಗಿ, 'ಸಮುದಾಯದ ಸಂಪ್ರದಾಯಗಳನ್ನು ಗೌರವಿಸುತ್ತಾನೆಯೇ?', 'ಹಿರಿಯರ ಮಾತಿಗೆ ಬೆಲೆ ಕೊಡುತ್ತಾನೆಯೇ?', 'ಕುಟುಂಬವನ್ನು ಒಗ್ಗೂಡಿಸಿಕೊಂಡು ಹೋಗುವ ಗುಣ ಇದೆಯೇ?' ಎಂಬ ಪ್ರಶ್ನೆಗಳೇ ಹೆಚ್ಚು ಮಹತ್ವ ಪಡೆಯುತ್ತವೆ.
ವರದಕ್ಷಿಣೆಯ ಪದ್ಧತಿಯೂ ಇಲ್ಲ. ಹುಡುಗಿಯ ಮನೆಯವರು ಪ್ರೀತಿಯಿಂದ ಏನಾದರೂ ಕೊಟ್ಟರೆ ಸ್ವೀಕರಿಸುತ್ತಾರೆ. ಇಲ್ಲದಿದ್ದರೆ ಬೇಡಿಕೆಯೇ ಇರುವುದಿಲ್ಲ. ಸಮುದಾಯದಲ್ಲಿರುವ ಕಡುಬಡ ಕುಟುಂಬದಲ್ಲಿ ಮದುವೆ ನಡೆಯಬೇಕಾದರೆ ಹಣದ ಕೊರತೆಯಿಂದ ಸಂಬಂಧ ನಿಲ್ಲುವುದಿಲ್ಲ. ಅಲ್ಲಿದ್ದವರೇ ಪಟ್ಟಿ ಹಿಡಿದು ಹಣ ಸಂಗ್ರಹಿಸುತ್ತಾರೆ. ಯಾರೊಬ್ಬರ ಮದುವೆಯೂ ಇಡೀ ಸಮುದಾಯದ ಜವಾಬ್ದಾರಿಯಾಗುತ್ತದೆ. ಈ ಸಂಪ್ರದಾಯದ ಚೌಕಟ್ಟಿನೊಳಗೇ ಹೊಸ ತಲೆಮಾರೂ ಬದುಕಲು ಪ್ರಯತ್ನಿಸುತ್ತಿದೆ.
ಹಾವೇರಿ ಜಿಲ್ಲೆಯ ಅಂಜನ್ ಮಹಾಂತ ಇಂದು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಓದಿನಲ್ಲಿ ಸಾಧನೆ ಮಾಡಿ ಸರ್ಕಾರಿ ಉದ್ಯೋಗ ಪಡೆದರೂ, ಸಮುದಾಯದ ಬೇರುಗಳನ್ನು ಬಿಟ್ಟಿಲ್ಲ. 'ನನಗೆ ಸರ್ಕಾರಿ ನೌಕರಿಯಿದೆ. ನಮ್ಮ ಸಮುದಾಯದಲ್ಲಿ ಓದಿದ ಹುಡುಗಿಯರು ಕಡಿಮೆ. ಆದರೂ ಹಿರಿಯರು ತೀರ್ಮಾನಿಸುವ ಹುಡುಗಿಯನ್ನೇ ಮದುವೆಯಾಗುತ್ತೇನೆ. ಸಮುದಾಯದ ಚೌಕಟ್ಟು ಮೀರಲು ಮನಸ್ಸಿಲ್ಲ' ಎಂದು ಅವರು ಹೇಳುತ್ತಾರೆ.
ಹಗಲು ಪಂಚಾಯಿತಿ, ಸಂಬಂಧಗಳ ಮಾತುಕತೆ, ಮದುವೆ ನಿಶ್ಚಯಗಳಿಂದ ಗಿಜಿಗುಡುತ್ತಿದ್ದ ಕುದರಿಮೋತಿ, ಸಂಜೆ ಹೊತ್ತಿಗೆ ಮತ್ತೊಂದು ರೂಪ ತಾಳುತ್ತದೆ.
ಮೊಹರಂ ಮೆರವಣಿಗೆ ಆರಂಭವಾಗುತ್ತದೆ. ಡೊಳ್ಳಿನ ಸದ್ದಿಗೆ ಯುವಕರು ಕುಣಿಯುತ್ತಾರೆ. ಮಕ್ಕಳು ಸಂಭ್ರಮದಿಂದ ಓಡಾಡುತ್ತಾರೆ. ಮಹಿಳೆಯರು ಕುಟುಂಬದವರ ಜೊತೆಗೂಡಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಗ್ರಾಮಸ್ಥರೂ ಅವರೊಂದಿಗೆ ಬೆರೆತು ಸಂಭ್ರಮಿಸುತ್ತಾರೆ. ರಾತ್ರಿ ಕಳೆದು ಬೆಳಗು ಮೂಡುವವರೆಗೂ ಹಾಡು, ಕುಣಿತ, ಭಕ್ತಿ, ನಗು ಒಂದಾಗಿ ಬೆರೆಯುತ್ತವೆ.
ಉತ್ತರ ಕರ್ನಾಟಕದ ಹಲವಾರು ಗ್ರಾಮಗಳಂತೆ ಇಲ್ಲಿಯೂ ಮೊಹರಂ ಧರ್ಮದ ಗಡಿಯನ್ನು ಮೀರಿ ಮಾನವ ಸಂಬಂಧಗಳ ಹಬ್ಬವಾಗುತ್ತದೆ. ಹಿಂದೂ-ಮುಸ್ಲಿಂ ಭೇದಕ್ಕಿಂತ, ಒಂದಾಗಿ ಸಂಭ್ರಮಿಸುವ ಮನಸ್ಸೇ ದೊಡ್ಡದಾಗುತ್ತದೆ.
ಹೀಗೆ ಎಂಟು ದಿನಗಳು ಕಣ್ಣೆದುರೇ ಕರಗಿಹೋಗುತ್ತವೆ. ನಂತರ ಬರುತ್ತದೆ ಹೊರಡುವ ದಿನ.
ಬೆಳಗಿನ ಸೂರ್ಯ ಇನ್ನೂ ಪೂರ್ಣವಾಗಿ ಮೇಲೆದ್ದಿರುವುದಿಲ್ಲ. ಆದರೆ ಟೆಂಟ್‌ಗಳಲ್ಲಿ ಚಟುವಟಿಕೆ ಶುರುವಾಗಿರುತ್ತದೆ. ಹಗ್ಗಕ್ಕೆ ಹಾಕಿದ್ದ ಬಟ್ಟೆಗಳು ಮಡಚಿಕೊಳ್ಳುತ್ತವೆ. ಒಲೆಯ ಮೇಲಿದ್ದ ಪಾತ್ರೆಗಳು ತೊಳೆಯಲ್ಪಟ್ಟು ವಾಹನದೊಳಗೆ ಸೇರುತ್ತವೆ. ಹಾಸಿಗೆ, ಹೊದಿಕೆ, ಮಕ್ಕಳ ಆಟಿಕೆ, ಅಡುಗೆ ಸಾಮಗ್ರಿಗಳು ಒಂದೊಂದಾಗಿ ಮತ್ತೆ ತಮ್ಮ ಜಾಗ ಹುಡುಕಿಕೊಳ್ಳುತ್ತವೆ.
ಕೆಲವೇ ಗಂಟೆಗಳ ಹಿಂದೆ ಬದುಕಿನಿಂದ ತುಂಬಿದ್ದ ಆ ಟೆಂಟ್‌ಗಳು ನಿಧಾನವಾಗಿ ಮಾಯವಾಗುತ್ತವೆ. ಮಕ್ಕಳು ಹೊಸದಾಗಿ ಮಾಡಿಕೊಂಡ ಸ್ನೇಹಿತರನ್ನು ಬಿಟ್ಟು ಹೊರಡುವ ಮನಸ್ಸಿಲ್ಲದೆ ಮತ್ತೆ ಮತ್ತೆ ಹಿಂದಿರುಗಿ ನೋಡುತ್ತಾರೆ. ಹಿರಿಯರು ಬಂಧುಗಳನ್ನು ಅಪ್ಪಿಕೊಳ್ಳುತ್ತಾರೆ.
ಒಂದೊಂದಾಗಿ ವಾಹನಗಳು ಸ್ಟಾರ್ಟ್ ಆಗುತ್ತವೆ. ಯಾರೋ ಮಹಾರಾಷ್ಟ್ರದ ಕಡೆ ಹೊರಡುತ್ತಾರೆ. ಇನ್ನೊಬ್ಬರು ಗುಜರಾತ್‌ನತ್ತ. ಮತ್ತೊಬ್ಬರ ದಾರಿ ಮಧ್ಯಪ್ರದೇಶ. ಇನ್ನೊಂದು ಕುಟುಂಬ ತಮಿಳುನಾಡಿನತ್ತ ಪ್ರಯಾಣ ಆರಂಭಿಸುತ್ತದೆ.
ಕೆಲವೇ ನಿಮಿಷಗಳ ಹಿಂದೆ ನೂರಾರು ಟೆಂಟ್‌ಗಳಿಂದ ಕಂಗೊಳಿಸಿದ್ದ ಬಯಲು ಮತ್ತೆ ಖಾಲಿಯಾಗುತ್ತದೆ.
ಅಲೆಮಾರಿಗಳ ಬದುಕು ಇದೇ. ಅವರಿಗೆ ಶಾಶ್ವತ ಮನೆ ಇಲ್ಲದಿರಬಹುದು. ಒಂದೇ ಊರಿನಲ್ಲಿ ವರ್ಷಪೂರ್ತಿ ನೆಲೆಸುವ ಅವಕಾಶ ಇಲ್ಲದಿರಬಹುದು. ಆದರೆ ಅವರು ಕಾಪಾಡಿಕೊಂಡಿರುವ ಸಂಬಂಧಗಳಿಗೆ ಶಾಶ್ವತ ವಿಳಾಸವಿದೆ. ಅದು ಕುದರಿಮೋತಿ.
ಎರಡು ವರ್ಷಗಳಿಗೊಮ್ಮೆ ಅವರು ಮರಳಿ ಬರುವುದು ಕೇವಲ ಒಂದು ಹಬ್ಬಕ್ಕಾಗಿ ಅಲ್ಲ. ತಮ್ಮ ಬೇರುಗಳನ್ನು ಮತ್ತೊಮ್ಮೆ ಮುಟ್ಟಲು. ಹಿರಿಯರ ಆಶೀರ್ವಾದ ಪಡೆಯಲು. ಮುರಿದ ಸಂಬಂಧಗಳನ್ನು ಬೆಸೆಯಲು. ಹೊಸ ಸಂಬಂಧಗಳನ್ನು ಕಟ್ಟಲು. ಬದುಕಿನ ಆಯಾಸವನ್ನು ಕಳೆದುಕೊಳ್ಳಲು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260705-51-1657139385

