Dailyhunt Logo
  • Light mode
    Follow system
    Dark mode
    • Play Story
    • App Story
ಕೊರಗ ಸಮುದಾಯದ ಸಮೀಕ್ಷೆ ನಡೆಸಿ ಎಂದು ಶಾಸಕ ಯಶ್‌ಪಾಲ್‌ ಸುವರ್ಣ ಆಗ್ರಹ

ಕೊರಗ ಸಮುದಾಯದ ಸಮೀಕ್ಷೆ ನಡೆಸಿ ಎಂದು ಶಾಸಕ ಯಶ್‌ಪಾಲ್‌ ಸುವರ್ಣ ಆಗ್ರಹ

ಡುಪಿ: ಕೊರಗ ಸಮುದಾಯದವರಿಗೆ ಖಾಸಗಿ ಸಹಭಾಗಿತ್ವದಲ್ಲಿ ಆರೋಗ್ಯ ಕಾರ್ಡ್‌ನ ವ್ಯವಸ್ಥೆ ಮಾಡಲು ಅವರ ಶಿಕ್ಷಣ, ಆರೋಗ್ಯದ ಬಗ್ಗೆ ಸಮೀಕ್ಷೆ ಮಾಡುವಂತೆ ಈ ಹಿಂದೆ ಅಧಿಕಾರಿಗಳಿಗೆ ಸೂಚಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಕೂಡಲೇ ಸಮೀಕ್ಷೆ ನಡೆಸಿ ಎಂದು ಶಾಸಕ ಯಶ್‌ಪಾಲ್‌ ಸುವರ್ಣ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೊರಗ ಸಮುದಾಯದ ಕುಂದು ಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಧಿಕಾರಿಗಳು ಸಭೆಗೆ ಬರುವುದಕ್ಕೂ ಮುನ್ನ ಕೊರಗ ಸಮುದಾಯದ ಮುಖಂಡರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಬರಬೇಕು. ಸಭೆಯಲ್ಲಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ಅಧಿಕಾರಿಗಳು ಕೊರಗ ಸಮುದಾಯದವರನ್ನು ನಿರ್ಲಕ್ಷ್ಯ ಮಾಡಬಾರದು ಎಂದರು.

ಕೊರಗ ಸಮುದಾಯದ ಮುಖಂಡ ಗಣೇಶ್‌ ಕುಂದಾಪುರ ಮಾತನಾಡಿ, ರಾಜೀವ್‌ ಗಾಂಧಿ ವಸತಿ ನಿಗಮವು ಕೊರಗ ಸಮುದಾಯದವರಿಗೆ ಮನೆ ನಿರ್ಮಾಣಕ್ಕೆ ₹ 4.5 ಲಕ್ಷ ನೀಡುತ್ತದೆ. ಆ ಹಣದ ಮೂರು ಮತ್ತು ನಾಲ್ಕನೇ ಕಂತು ಒಮ್ಮೆಲೆ ಬಿಡುಗಡೆಯಾಗುತ್ತದೆ ಆದರೆ ಮನೆ ನಿರ್ಮಾಣವಾಗುವುದಿಲ್ಲ. ಆದ್ದರಿಂದ ಈ ಅನುದಾನವನ್ನು ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಅಡಿಯಲ್ಲೇ ಬಿಡುಗಡೆ ಮಾಡಬೇಕು ಮತ್ತು ಮೊತ್ತವನ್ನು ₹10 ಲಕ್ಷಕ್ಕೆ ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು.

ನಗರದಲ್ಲಿರುವ ಕುದ್ಮುಲ್ ರಂಗರಾವ್ ಸಭಾಭವನದ ಸುತ್ತ ಕಾಡು ಬೆಳೆದಿದೆ. ಅದರ ಕಿಟಕಿ ಗಾಜುಗಳು ಒಡೆದು ಹೋಗಿವೆ. ಅಲ್ಲಿ ಕೊರಗ ಸಮುದಾಯದವರಿಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳು ಆಗಿಲ್ಲ ಎಂದು ಸಭೆಯ ಗಮನಕ್ಕೆ ತಂದರು.

ಅದಕ್ಕೆ ಪ್ರತಿಕ್ರಿಯಿಸಿದ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯ ಅಧಿಕಾರಿ ನಾರಾಯಣ ಸ್ವಾಮಿ, ಸಭಾ ಭವನದ ನಿರ್ವಹಣೆಗಾಗಿ ಟೆಂಡರ್‌ ಕರೆಯುವ ಚಿಂತನೆ ಇದೆ ಎಂದು ಹೇಳಿದರು.

ಕೊರಗ ಸಮುದಾಯದ ಎಷ್ಟು ಮಕ್ಕಳು ಅಂಗನವಾಡಿಗೆ ಹೋಗುತ್ತಾರೆ ಎಂಬುದರ ಬಗ್ಗೆ ಮಾಹಿತಿ ಪಡೆಯುವ ಕೆಲಸವಾಗಬೇಕು ಎಂದು ಗಣೇಶ ಕುಂದಾಪುರ ಆಗ್ರಹಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಅಧಿಕಾರಿಗಳು ಪ್ರತಿ 15 ದಿವಸಗಳಿಗೊಮ್ಮೆ ಅಂಗನವಾಡಿಗಳಿಗೆ ತೆರಳಿ ಅಲ್ಲಿಗೆ ಕೊರಗ ಸಮುದಾಯದ ಎಷ್ಟು ಮಂದಿ ಮಕ್ಕಳು ಬರುತ್ತಾರೆ ಎಂಬುದರ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಸೂಚಿಸಿದರು. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಲ್ಲಿ ಕೊರಗ ಸಮುದಾಯದವರಿಗೆ ಅನ್ವಯವಾಗುವ ಯೋಜನೆಗಳ ಬಗ್ಗೆ ಆ ಸಮುದಾಯದ ಮುಖಂಡರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಅಧಿಕಾರಿಗಳಿಗೆ ತರಾಟೆ: 2025 ಜನವರಿ 28 ರಂದು ನಡೆದಿದ್ದ ಕೊರಗ ಸಮುದಾಯದ ಕುಂದುಕೊರತೆ ಸಭೆಯ ನಡಾವಳಿ ಮತ್ತು ಅನುಪಾಲನಾ ವರದಿ ಮಂಡಿಸದ್ದಕ್ಕೆ ಕೊರಗ ಮುಖಂಡರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೊರಗ ಮುಖಂಡ ಬೊಗ್ರ ಮಾತನಾಡಿ, ಕುಂದುಕೊರತೆ ಸಭೆಯನ್ನು ಕಾಟಾಚಾರಕ್ಕೆ ನಡೆಸಲಾಗುತ್ತದೆ. ಹಿಂದಿನ ಸಭೆಯಲ್ಲಿ ಆದ ನಿರ್ಣಯಗಳು ಕಾರ್ಯಗತವಾಗುವುದಿಲ್ಲ ಎಂದರು.

ಶಾಸಕ ಯಶ್‌ಪಾಲ್‌ ಸುವರ್ಣ, ಪ್ರತಿ ಸಭೆಯ ನಡಾವಳಿ ಆಧರಿಸಿ ಅನುಪಾಲನಾ ವರದಿ ಸಿದ್ಧಪಡಿಸಬೇಕು. ಆ ಕುರಿತು ನಿರ್ಲಕ್ಷ್ಯ ತೋರುವುದು ಸರಿಯಲ್ಲ. ಅಧಿಕಾರಿಗಳು ಬದಲಾದರೂ ನಿರ್ಣಯ ಪುಸ್ತಕ ಇರಬೇಕು ಎಂದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಜಯ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-28-673128555

Dailyhunt
Disclaimer: This content has not been generated, created or edited by Dailyhunt. Publisher: Prajavani