ಅಸಾನ್ (ದಕ್ಷಿಣ ಕೊರಿಯಾ): ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಅಸ್ಮಿತಾ ಚಾಲಿಹಾ ಮತ್ತು ರಕ್ಷಿತಾಶ್ರೀ ರಾಮರಾಜ್ ಅವರು ಕೊರಿಯಾ ಮಾಸ್ಟರ್ಸ್ ಸೂಪರ್ 300 ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದರು. ಆದರೆ, ಉದಯೋನ್ಮುಖ ಆಟಗಾರ್ತಿ ತನ್ವಿ ಶರ್ಮಾ ಕ್ವಾರ್ಟರ್ ಫೈನಲ್‌ನಲ್ಲಿ ಹೊರಬಿದ್ದರು.
ವಿಶ್ವದ 50ನೇ ಕ್ರಮಾಂಕದ ಅಶ್ಮಿತಾ, ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ 20-22, 21-15, 21-19ರಿಂದ ಅಗ್ರ ಶ್ರೇಯಾಂಕದ ಹಿನಾ ಅಕೆಚಿ ಅವರಿಗೆ ಆಘಾತ ನೀಡಿದರು. 26 ವರ್ಷದ ಅಸ್ಮಿತಾಗೆ ಇದು ವೃತ್ತಿಜೀವನದ ದೊಡ್ಡ ಗೆಲುವಾಗಿದೆ. ಇದರೊಂದಿಗೆ ಕಳೆದ ವರ್ಷ ಮಲೇಷ್ಯಾ ಸೂಪರ್ 100 ಟೂರ್ನಿಯಲ್ಲಿ ಹಿನಾ ವಿರುದ್ಧ ಅನುಭವಿಸಿದ್ದ ಸೋಲಿಗೆ ಇಲ್ಲಿ ಸೇಡು ತೀರಿಸಿಕೊಂಡರು.
ಸುಮಾರು ₹2.38 ಕೋಟಿ ಬಹುಮಾನ ಮೊತ್ತವನ್ನು ಒಳಗೊಂಡಿರುವ ಟೂರ್ನಿಯಲ್ಲಿ ಅಸ್ಮಿತಾ ಅವರಿಗೆ ಮುಂದಿನ ಎದುರಾಳಿ ಸಹವರ್ತಿ ರಕ್ಷಿತಾ. ವಿಶ್ವ ಕ್ರಮಾಂಕದಲ್ಲಿ 46ನೇ ಸ್ಥಾನದಲ್ಲಿರುವ ರಕ್ಷಿತಾ, ರೋಚಕವಾಗಿ ಸಾಗಿದ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ತನ್ವಿ ಅವರನ್ನು ಹಿಮ್ಮೆಟ್ಟಿಸಿದರು.
ಈ ಸೋಲಿನೊಂದಿಗೆ 17 ವರ್ಷದ ತನ್ವಿ ಅವರ ಬಿಡಬ್ಲ್ಯುಎಫ್ ವಿಶ್ವ ಟೂರ್‌ನಲ್ಲಿ ಯಶಸ್ಸಿನ ಓಟಕ್ಕೆ ತಡೆಬಿತ್ತು. ಅವರು ಕಳೆದ ಭಾನುವಾರ ತೈಪೆ ಓಪನ್‌ನಲ್ಲಿ ತಮ್ಮ ಚೊಚ್ಚಲ ಬಿಡಬ್ಲ್ಯುಎಫ್ ಪ್ರಶಸ್ತಿ ಗೆದ್ದಿದ್ದರು. ತನ್ವಿ ವಿರುದ್ಧ ರಕ್ಷಿತಾಗೆ ಇದು ನಾಲ್ಕನೇ ಗೆಲುವಾಗಿದೆ.
ಪುರುಷರ ಡಬಲ್ಸ್‌ನಲ್ಲಿ ಭಾರತದ ಕೃಷ್ಣ ಪ್ರಸಾದ್ ಗರಗ ಮತ್ತು ಪೃಥ್ವಿ ಕೃಷ್ಣಮೂರ್ತಿ ರಾಯ್ ಜೋಡಿಯು 7-21, 8-21 ಅಂತರದಲ್ಲಿ ಮಲೇಷ್ಯಾದ ಮ್ಯಾನ್ ವೀ ಚೊಂಗ್ ಮತ್ತು ಸೊಹ್ ವೂಯ್ ಯಿಕ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿತ್ತು. ಇದರೊಂದಿಗೆ ಮಹಿಳಾ ಸಿಂಗಲ್ಸ್ ಹೊರತುಪಡಿಸಿ ಉಳಿದ ವಿಭಾಗಗಳಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ರಕ್ಷಿತಾಶ್ರೀ ರಾಮರಾಜ್
