ಮಂಗಳೂರು: 'ಭಾರತದ ಶಿಕ್ಷಣ ನೀತಿಯು ಅಂತರಶಿಸ್ತೀಯ ಕಲಿಕೆ, ಕೌಶಲ ಆಧರಿತ ಶಿಕ್ಷಣವನ್ನು ಉತ್ತೇಜಿಸುತ್ತಿದೆ. ಕೌಶಲ ಶಿಕ್ಷಣ ಉನ್ನತ ಶಿಕ್ಷಣದ ಅವಿಭಾಜ್ಯ ಅಂಗ. ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ, ವ್ಯಕ್ತಿತ್ವ ಅಭಿವೃದ್ಧಿಗಾಗಿ ಡಿಜಿಟಲ್ ಸಾಕ್ಷರತೆ, ಕೃತಕ ಬುದ್ಧಿಮತ್ತೆ, ಸಂವಹನ ಮುಂತಾದ ಕೌಶಲಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ' ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ಹೇಳಿದರು.
ಇಲ್ಲಿನ ಸೇಂಟ್ ಆಗ್ನೆಸ್ ಸ್ವಾಯತ್ತ ಕಾಲೇಜಿನ 13ನೇ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಈಚೆಗೆ ಮಾತನಾಡಿದರು.
'ಪ್ರಾಚೀನ ಭಾರತ ಉನ್ನತ ಕಲಿಕೆಯ ಕೇಂದ್ರಸ್ಠಾನವಾಗಿತ್ತು. ನಳಂದಾ, ತಕ್ಷಶಿಲಾ ವಿಶ್ವವಿದ್ಯಾಲಯಗಳಲ್ಲಿ ವಿದೇಶಿ ವಿದ್ಯಾರ್ಥಿಗಳೂ ಕಲಿಯುತ್ತಿದ್ದರು. ಇಂದು ಭಾರತ ಉನ್ನತ ಶಿಕ್ಷಣದಲ್ಲಿ ವಿವಿಧ ಸವಾಲುಗಳನ್ನು ಹೊಂದಿದೆ. ಅವುಗಳನ್ನು ಎದುರಿಸಲು, ಅದರ ಭವಿಷ್ಯದ ಬೆಳವಣಿಗೆಗೆ ತಲಾವಾರು ಜಿಡಿಪಿ ಹೆಚ್ಚಿಸಲು ಉನ್ನತ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು' ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಪೊಸ್ಟೊಲಿಕ್ ಕಾರ್ಮೆಲ್ ಕರ್ನಾಟಕ ಪ್ರಾಂತದ ಪ್ರಾಂತೀಯ ಸುಪೀರಿಯರ್ ಸಿ. ಮರಿಯಾ ನವೀನ ಎ.ಸಿ. ಮಾತನಾಡಿ, 'ಸೇಂಟ್ ಆಗ್ನೆಸ್ ಕಾಲೇಜು ಶತಮಾನದಿಂದಲೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ಪಡೆದಿದೆ. ಪಠ್ಯ- ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ' ಎಂದು ಹೇಳಿದರು.
ಪದವಿ, ಸ್ನಾತಕೋತ್ತರ ವಿಭಾಗದ 647 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಉನ್ನತ ರ್‍ಯಾಂಕ್ ಗಳಿಸಿದ 22 ಮಂದಿಯನ್ನು ಸನ್ಮಾನಿಸಲಾಯಿತು.
ಪ್ರಾಂಶುಪಾಲೆ ಎಂ. ವೆನಿಸ್ಸಾ ಎ.ಸಿ. ಪ್ರತಿಜ್ಞಾವಿಧಿ ಬೋಧಿಸಿದರು. ಸೇಂಟ್ ಆಗ್ನೆಸ್ ಶಿಕ್ಷಣ ಸಂಸ್ಥೆಗಳ ಜೊತೆ ಕಾರ್ಯದರ್ಶಿ ಎಂ. ಪ್ರೇಮ್ ಡಿಸೋಜ ಎ.ಸಿ., ಸ್ನಾತಕೋತ್ತರ ಸಂಯೋಜಕಿ ಎಂ. ವಿನೋರಾ ಎ.ಸಿ., ರಿಜಿಸ್ಟ್ರಾರ್ ಪ್ರೊ.ಶುಭರೇಖಾ, ಮಂಗಳೂರು ವಿಶ್ವವಿದ್ಯಾನಿಲಯದ ಪ್ರತಿನಿಧಿ ಪ್ರೊ.ಸಂಗಪ್ಪ, ಶಿಕ್ಷಣ ತಜ್ಞ ಸಂತೋಷ್ ರೆಬೆಲ್ಲೊ, ಆಡಳಿತ ಡೀನ್ ಶಾಂತಿ ನಜರೆತ್, ವಿವಿಧ ವಿಭಾಗಗಳ ಡೀನ್‌ಗಳು, ಆಡಳಿತ, ಶೈಕ್ಷಣಿಕ ಮಂಡಳಿ ಸದಸ್ಯರು ಭಾಗವಹಿಸಿದ್ದರು. ವಾಣಿಜ್ಯ ವಿಭಾಗದ ದೇವಿಪ್ರಭಾ ಆಳ್ವ ಸ್ವಾಗತಿಸಿದರು. ಸ್ನಾತಕೋತ್ತರ ಆಡಳಿತ ನಿರ್ವಹಣಾ ವಿಭಾಗದ ಮಲ್ಲಿಕಾ ಶೆಟ್ಟಿ ವಂದಿಸಿದರು. ರಸಾಯನ ವಿಜ್ಞಾನ ವಿಭಾಗದ ಪ್ರೊ.ಹೆಲೆನ್ ಸೆರಾವೊ ನಿರೂಪಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-29-354332194

