Thursday, 03 Dec, 6.07 am ಪ್ರಜಾವಾಣಿ

ರಾಜ್ಯ
ಕೋವಿಡ್: 8.87 ಲಕ್ಷಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಬುಧವಾರ 1,440 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿಗೀಡಾದವರ ಒಟ್ಟು ಸಂಖ್ಯೆ 8.87 ಲಕ್ಷಕ್ಕೆ ಏರಿಕೆಯಾಗಿದೆ.

ಎರಡು ದಿನಗಳಿಂದ ಇಳಿಕೆ ಕಂಡಿದ್ದ ಕೋವಿಡ್ ಪರೀಕ್ಷೆಗಳ ಸಂಖ್ಯೆಯು ಮತ್ತೆ ಲಕ್ಷದ ಗಡಿ ದಾಟಿದ್ದು, ಒಂದೇ ದಿನ 86,434 ಆರ್‌ಟಿ-ಪಿಸಿಆರ್ ಸೇರಿದಂತೆ 1.05 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ. ಈವರೆಗೆ 1.13 ಕೋಟಿ ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಸೋಂಕಿತರಲ್ಲಿ ಮತ್ತೆ 16 ಮಂದಿ ಮೃತಪಟ್ಟಿದ್ದು, ಈವರೆಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 11,808ಕ್ಕೆ ತಲುಪಿದೆ.

ಕೋವಿಡ್ ಪೀಡಿತರಲ್ಲಿ ರಾಜ್ಯದಲ್ಲಿ 983 ಮಂದಿಗೆ ಕಾಯಿಲೆ ವಾಸಿಯಾಗಿದೆ. ಇದರಿಂದಾಗಿ ಗುಣಮುಖರ ಸಂಖ್ಯೆ 8.51 ಲಕ್ಷ ದಾಟಿದೆ. ಸೋಂಕಿತರಲ್ಲಿ ಸದ್ಯ 24,150 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇವರಲ್ಲಿ ಸದ್ಯ 318 ಮಂದಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ. ಕಳೆದ 14 ದಿನಗಳ ಅವಧಿಯಲ್ಲಿ 1.12 ಲಕ್ಷ ನೇರ ಸಂಪರ್ಕಿತರು ಹಾಗೂ 1.27 ಲಕ್ಷ ಪರೋಕ್ಷ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ. ಕಳೆದ 7 ದಿನಗಳ ಅವಧಿಯಲ್ಲಿ 29,456 ಮಂದಿಯನ್ನು ಮನೆ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಬೆಂಗಳೂರಿನಲ್ಲಿ 712 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 3.71 ಲಕ್ಷ ದಾಟಿದೆ. ತುಮಕೂರಿನಲ್ಲಿ ಮತ್ತೆ 80 ಪ್ರಕರಣಗಳು ವರದಿಯಾಗಿದೆ. ಮೈಸೂರು (64), ಮಂಡ್ಯ (52), ಚಿತ್ರದುರ್ಗ (46) ಜಿಲ್ಲೆಯಲ್ಲಿ ಅಧಿಕ ಪ್ರಕರಣಗಳು ವರದಿಯಾಗಿವೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top