Dailyhunt
ಕೋವಿಡ್‌ ಲಸಿಕೆ ಕಡ್ಡಾಯಗೊಳಿಸಲು ಸಾಧ್ಯವಿಲ್ಲ: ಗೌರವ್ ಗುಪ್ತ

ಕೋವಿಡ್‌ ಲಸಿಕೆ ಕಡ್ಡಾಯಗೊಳಿಸಲು ಸಾಧ್ಯವಿಲ್ಲ: ಗೌರವ್ ಗುಪ್ತ

ಬೆಂಗಳೂರು: 'ನಾಗರಿಕರು ಲಸಿಕೆ ಪಡೆಯಲೇಬೇಕು ಎಂದು ಕಡ್ಡಾಯಗೊಳಿಸಲು ಸಾಧ್ಯವಿಲ್ಲ. ಲಸಿಕೆ ಕುರಿತ ಸಂಶಯಗಳನ್ನು ಹೋಗಲಾಡಿಸಿ, ಈ ಬಗ್ಗೆ ಜನರ ಮನವೊಲಿಸಲು ಕ್ರಮವಹಿಸಲಾಗುವುದು' ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸ್ಪಷ್ಟಪಡಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, 'ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾಗಿ ನಗರದಲ್ಲಿ ಸರಾಸರಿ 350 ರಿಂದ 400 ಕೋವಿಡ್ ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿವೆ' ಎಂದರು.

'ನಗರದಲ್ಲಿ ಕೋವಿಡ್‌ನಿಂದ ಬಳಲುತ್ತಿರುವ 368 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವುಗಳಲ್ಲಿ ಸರ್ಕಾರಿ ಕೋಟಾದಡಿ 93 ಮಂದಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 275 ಮಂದಿ ದಾಖಲಾಗಿದ್ದಾರೆ. ಅವರಲ್ಲಿ 260 ಮಂದಿಗೆ ಗಂಭೀರ ಸಮಸ್ಯೆಗಳಿಲ್ಲ. ಅವರಿಗೆ ಸಾಮಾನ್ಯ ಹಾಸಿಗೆಗಳನ್ನು ಒದಗಿಸಲಾಗಿದೆ' ಎಂದರು.

'ಶಾಲಾ-ಕಾಲೇಜುಗಳಲ್ಲಿ ತರಗತಿಗಳು ನಡೆಯುತ್ತಿವೆ. ಬೇರೆ ಬೇರೆ ವಾಣಿಜ್ಯ ಚಟುವಟಿಕೆ ಪೂರ್ಣಪ್ರಮಾಣದಲ್ಲಿ ಆರಂಭಗೊಂಡಿದೆ. ಇವುಗಳ ನಡುವೆಯೂ ಕೋವಿಡ್ ಸೋಂಕು ನಿಯಂತ್ರಣದಲ್ಲಿದೆ. ನಾಗರಿಕರೆಲ್ಲರೂ ಲಸಿಕೆ ಪಡೆಯುವುದರ ಜೊತೆಗೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಸೊಂಕನ್ನು ನಿಯಂತ್ರಣದಲ್ಲಿಡಲು ನೆರವಾಗಬೇಕು' ಎಂದು ಕೋರಿದರು.

'ಕೋವಿಡ್‌ನಿಂದ ಸಂಭವಿಸಿದ ಸಾವುಗಳ ಲೆಕ್ಕಪರಿಶೋಧನಾ ವರದಿಯನ್ನು ತಜ್ಞರ ತಂಡವು ಸಿದ್ಧಪಡಿಸುತ್ತಿದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani