Dailyhunt Logo
  • Light mode
    Follow system
    Dark mode
    • Play Story
    • App Story
ಕ್ಷಮೆ ಎಂದರೆ ಸೋಲಲ್ಲ... ನಿಮ್ಮ ಮನಸ್ಸಿನ ಗೆಲುವು!

ಕ್ಷಮೆ ಎಂದರೆ ಸೋಲಲ್ಲ... ನಿಮ್ಮ ಮನಸ್ಸಿನ ಗೆಲುವು!

ನುಷ್ಯನ ಜೀವನದಲ್ಲಿ ತಪ್ಪು-ಒಪ್ಪುಗಳು ಸಹಜ. ಆದರೆ ಆ ತಪ್ಪುಗಳನ್ನು ಹಿಡಿದುಕೊಂಡೇ ಬದುಕಿದರೆ ಮನಸ್ಸಿಗೆ ಶಾಂತಿ ಸಿಗುವುದಿಲ್ಲ. ಕ್ಷಮಿಸುವ ಗುಣ ಬೆಳೆಸಿಕೊಂಡರೆ ಮನಸ್ಸು ಹಗುರವಾಗುತ್ತದೆ, ಸಂಬಂಧಗಳು ಗಟ್ಟಿಯಾಗುತ್ತವೆ ಮತ್ತು ಜೀವನ ಹೆಚ್ಚು ಸಂತೋಷಕರವಾಗುತ್ತದೆ.

ಕ್ಷಮೆ ಎನ್ನುವುದು ಬೇರೆಯವರಿಗೆ ಮಾಡುವ ಉಪಕಾರವಲ್ಲ; ಅದು ನಮ್ಮ ಮನಸ್ಸಿನ ಆರೋಗ್ಯಕ್ಕಾಗಿ ನಾವು ನಮಗೇ ನೀಡುವ ಉಡುಗೊರೆ.

ತಪ್ಪಿನ ಮೂಲವನ್ನು ಅರಿಯಿರಿ

ಯಾರಾದರೂ ಮಾಡಿದ ತಪ್ಪನ್ನು ಕ್ಷಮಿಸಲು ಕಷ್ಟವಾಗುತ್ತಿದ್ದರೆ, ಮೊದಲು ನಿಮ್ಮ ಕೋಪದ ಮೂಲವನ್ನು ಹುಡುಕಿ. ಯಾವ ಕಾರಣಕ್ಕೆ ಅಷ್ಟು ಬೇಸರವಾಯಿತು? ಆ ಘಟನೆ ನಿಮ್ಮ ಮೇಲೆ ಯಾವ ರೀತಿಯ ಪರಿಣಾಮ ಬೀರಿತು? ನಿಮ್ಮ ಕೋಪ ವ್ಯಕ್ತಿಯ ಮೇಲಿದೆಯೇ ಅಥವಾ ಅವನ ತಪ್ಪಿನ ಮೇಲಿದೆಯೇ? ಹೀಗೆ ಆತ್ಮಾವಲೋಕನ ಮಾಡಿದಂತೆ ಮನಸ್ಸು ನಿಧಾನವಾಗಿ ಶಾಂತವಾಗುತ್ತದೆ. ಆಗ ಕ್ಷಮಿಸುವುದು ಸುಲಭವಾಗುತ್ತದೆ.

ಕ್ಷಮೆಗೆ ಸಮಯ ನೀಡಿ

ಕೋಪ ಕ್ಷಣಾರ್ಧದಲ್ಲಿ ಬರುತ್ತದೆ. ಆದರೆ ಕ್ಷಮೆ ಅಷ್ಟು ಬೇಗ ಹುಟ್ಟುವುದಿಲ್ಲ. ಆದ್ದರಿಂದ ತಕ್ಷಣವೇ ಕ್ಷಮಿಸಲು ನಿಮ್ಮನ್ನು ಒತ್ತಾಯಿಸಬೇಡಿ. ಸಮಯದೊಂದಿಗೆ ಮನಸ್ಸಿನ ನೋವು ಕಡಿಮೆಯಾಗುತ್ತದೆ. ದಿನಗಳು, ವಾರಗಳು ಅಥವಾ ತಿಂಗಳುಗಳು ಕಳೆದಂತೆ ಗಾಯ ಮಾಸುತ್ತದೆ. ಆಗ ಮನಸ್ಸು ಸಹಜವಾಗಿಯೇ ಕ್ಷಮಿಸಲು ಸಿದ್ಧವಾಗುತ್ತದೆ.

ದೃಷ್ಟಿಕೋನ ಬದಲಿಸಿಕೊಳ್ಳಿ

ಯಾವುದೇ ಅಹಿತಕರ ಘಟನೆ ನಡೆದಾಗ ನಮ್ಮನ್ನು ನಾವು ಸದಾ ಬಲಿಪಶುವೆಂದು ಭಾವಿಸಿದರೆ ನೋವು ಕಡಿಮೆಯಾಗುವುದಿಲ್ಲ. ಬದಲಾಗಿ, ಆ ವ್ಯಕ್ತಿಯ ಸ್ಥಾನದಲ್ಲಿ ನಾವಿದ್ದರೆ ನಮ್ಮಿಂದಲೂ ಅಂತಹ ತಪ್ಪು ಆಗುತ್ತಿತ್ತೇ ಎಂಬುದನ್ನು ಪ್ರಾಮಾಣಿಕವಾಗಿ ಯೋಚಿಸಿ. ತಪ್ಪು ಮಾಡುವುದು ಮಾನವ ಸಹಜ ಗುಣ; ತಪ್ಪನ್ನು ಕ್ಷಮಿಸುವುದು ಮಹತ್ತರ ಮಾನವೀಯ ಗುಣ.

ವರ್ತಮಾನದಲ್ಲಿ ಬದುಕಿ

ಹಿಂದಿನ ನೋವನ್ನು ಪದೇಪದೇ ನೆನೆದು ಇಂದಿನ ಸಂತೋಷವನ್ನು ಕಳೆದುಕೊಳ್ಳಬೇಡಿ. ನಡೆದ ಘಟನೆಗಳಿಂದ ಪಾಠ ಕಲಿಯಿರಿ, ಆದರೆ ಅವುಗಳಲ್ಲೇ ಸಿಲುಕಿಕೊಳ್ಳಬೇಡಿ. ಬೇರೆಯವರ ಬಗ್ಗೆ ಅತಿಯಾದ ನಿರೀಕ್ಷೆಗಳನ್ನು ಕಡಿಮೆ ಮಾಡಿ. ಮನಸ್ಸು ಉದ್ವಿಗ್ನವಾದಾಗ ಆಳವಾದ ಉಸಿರಾಟ, ಧ್ಯಾನ ಅಥವಾ ಮನಸ್ಸನ್ನು ವರ್ತಮಾನದಲ್ಲಿ ನೆಲೆಗೊಳಿಸುವ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.

ಕ್ಷಮೆ ನಿಮ್ಮ ಕ್ಷೇಮಕ್ಕಾಗಿ

ಕ್ಷಮಿಸುವುದು ತಪ್ಪು ಮಾಡಿದ ವ್ಯಕ್ತಿಯ ಮೇಲಿನ ಕರುಣೆ ಮಾತ್ರವಲ್ಲ; ಅದು ನಮ್ಮೊಳಗಿನ ನಕಾರಾತ್ಮಕ ಭಾವನೆಗಳಿಂದ ನಮ್ಮನ್ನು ಮುಕ್ತಗೊಳಿಸುವ ಮಾರ್ಗ. ಕ್ಷಮೆ ಎಂದರೆ ಪಂಜರದಲ್ಲಿದ್ದ ಹಕ್ಕಿಯನ್ನು ಬಿಡುಗಡೆ ಮಾಡಿದಂತೆ. ಆದರೆ ಬಿಡುಗಡೆಯಾಗುವುದು ಆ ಹಕ್ಕಿಯಷ್ಟೇ ಅಲ್ಲ, ನಮ್ಮ ಮನಸ್ಸೂ ಆಗಿದೆ. ಆದ್ದರಿಂದ ಎದುರಾಳಿ "ಕ್ಷಮಿಸಿ" ಎನ್ನುವವರೆಗೆ ಕಾಯಬೇಕಾಗಿಲ್ಲ. ನಮ್ಮ ಮನಶಾಂತಿಗಾಗಿ ನಾವು ಮೊದಲೇ ಕ್ಷಮಿಸಬಹುದು.

ಕ್ಷಮೆ ಭಿಕ್ಷೆಯಲ್ಲ, ಅದು ಅಮೂಲ್ಯ ಉಡುಗೊರೆ. ಅದನ್ನು ನಾವು ನಮಗೇ ನೀಡಿಕೊಳ್ಳುವಾಗ ಮನಸ್ಸು ಹಗುರವಾಗುತ್ತದೆ, ಬದುಕು ಹೊಸ ಅಧ್ಯಾಯಕ್ಕೆ ಕಾಲಿಡುತ್ತದೆ. ಹಾಗೆಯೇ, ನಮ್ಮಿಂದ ತಪ್ಪಾದಾಗ ಕ್ಷಮೆಯಾಚಿಸುವುದನ್ನೂ, ನಮ್ಮನ್ನೇ ನಾವು ಕ್ಷಮಿಸಿಕೊಳ್ಳುವುದನ್ನೂ ಕಲಿಯಬೇಕು. ಕ್ಷಮೆ ನಮ್ಮ ಜೀವನದಲ್ಲಿ ಸದಾ ಹರಿದಾಡಿದರೆ ಮನಸ್ಸು ನಿತ್ಯ ಹಸಿರಾಗಿರುತ್ತದೆ; ಕ್ಷೇಮವೂ ನಮ್ಮೊಂದಿಗೇ ಇರುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani