Dailyhunt Logo
  • Light mode
    Follow system
    Dark mode
    • Play Story
    • App Story
ಕ್ಷೇಮ ಕುಶಲ: ದಕ್ಷಿಣಾಯನದ ಆಹಾರ-ಆಚಾರಗಳು

ಕ್ಷೇಮ ಕುಶಲ: ದಕ್ಷಿಣಾಯನದ ಆಹಾರ-ಆಚಾರಗಳು

ಇದು ವಿಸರ್ಗ ಕಾಲ. ರವಿಯ ಪ್ರತಾಪ ಉಡುಗುತ್ತದೆ. ದೇಹದ ಬಲ ಹೆಚ್ಚುತ್ತದೆ. ಆಗ ನಮ್ಮ ಆಹಾರ, ಆಚರಣೆಗಳು ಹೇಗಿರಬೇಕು?

ಈ ಬಾರಿಯ ಮಳೆಗಾಲದ ಅಬ್ಬರ ಉಬ್ಬರ ಇಳಿಯಿತು. ಆದರೆ ಇನ್ನೂ ಹಿಂಗಾರು ಮಳೆ ಬಾಕಿ ಇದೆ. ಆಗೊಮ್ಮೆ ಈಗೊಮ್ಮೆ ಏಕಾಏಕಿ ಮೋಡ ಕವಿದು ಮಳೆ ಸುರಿಸಿ ಮಾಯ.

ಇದನ್ನೂ ವರ್ಷಾಋತು ಎಂದು ಭಾವಿಸುವೆವು. ಅನಂತರ ಶರದೃತು. ಅದು ನವರಾತ್ರಿಯ ಮೊದಲ ದಿನದಿಂದ ಆರಂಭ. ಮುಂದಿನ ಎರಡು ತಿಂಗಳು ಶರದೃತು. ಅನಂತರ ಹೇಮಂತ ಕಾಲದ್ದು ಎರಡು ತಿಂಗಳು. ವರ್ಷ, ಶರದ್ ಮತ್ತು ಹೇಮಂತ ಋತುಗಳಿಗೆ ದಕ್ಷಿಣಾಯಣ ಋತುಗಳೆಂಬರು.

ವಿಸರ್ಗ ಕಾಲ ಎಂದರೂ ಇದೇನೇ. ರವಿಯ ಪ್ರತಾಪ ಉಡುಗುತ್ತದೆ. ದೇಹದ ಬಲ ಹೆಚ್ಚುವುದು. ಆಗ ನಮ್ಮ ಆಹಾರ, ಆಚರಣೆಗಳು ಹೇಗಿರಬೇಕು? ಇದು ವಿಸರ್ಗ ಕಾಲ. ಅಂದರೆ ದೇಹ ಬಲವನ್ನು ವಿಶೇಷವಾಗಿ ಸೃಜಿಸುವ ಕಾಲ. ರವಿಯ ಪ್ರಖರತೆ ಇಳಿಮುಖ. ಸೋಮ, ಎಂದರೆ ಚಂದ್ರನು ಬಲವತ್ತರ. ಇರುಳು ಉದ್ದವಾಗುವುದು. ಹಗಲು ಕ್ರಮೇಣ ಕಡಿಮೆ. ಭೂಮಿಯ ಧಗೆಯಡಗಿ ಶೀತಗಾಳಿ ಬೀಸುವ ದಿನಗಳಿವು. ಆಗೊಮ್ಮೆ ಈಗೊಮ್ಮೆ ನೆನಪಾದಾಗ ಮಳೆ ಸುರಿಯುವ ತಂಪು ಕಾಲ! ದೇಹ ಮತ್ತು ಮನಸ್ಸು ಉತ್ತೇಜನಗೊಳುವ ಆಹಾರ, ಆಚಾರ, ನಿಯಮಗಳನ್ನು ಅರಿಯುವಾ.

ಮಕರ ಸಂಕ್ರಮಣ ಪರ್ಯಂತ ನಮ್ಮ ಜೀವನಶೈಲಿ ಬಹುತೇಕ ಒಂದೇ ತರಹ. ಉತ್ತರಾಯಣದ ಶಿಶಿರ, ವಸಂತ, ಗ್ರೀಷ್ಮದಲ್ಲಿ ಸೂರ್ಯನಿಗೆ ಬಹಳ ಹೆಚ್ಚು ಬಲ. ಅದಕ್ಕೆ ಮೊದಲು ನಾವು ನಮ್ಮ ದೇಹದ ಬಲ ಹೆಚ್ಚಿಸಿಕೊಳ್ಳುವ ಸುವಿಧಾನಗಳಿವೆ. ಮಳೆಗಾಲದ ಶೀತ ಮತ್ತು ಪ್ರಬಲ ಗುಣಗಳಿಂದ ಸೂರ್ಯನು ಕೆರಳಿಸುವುದು ದೇಹದ ಪಿತ್ತವನ್ನು. ಅದನ್ನು ಹೊರಹಾಕುವುದು ಅತಿಸರಳ. ಪ್ರಬಲ ಅಸ್ತ್ರ ಸಹ. ವಿರೇಚನ ಎಂಬ ಸುಲಭದ ವಿಧಾನದಿಂದ ಶೋಧನ ಮಾಡುವರು. ಅಧೋಮುಖವಾಗಿ, ಎಂದರೆ ಗುದದ್ವಾರದಿಂದ ಕೆರಳಿದ ಪಿತ್ತವನ್ನು ಹೊರಹಾಕಲಾದೀತು. ಆದರೆ ಈ ಚಳಿಯ ದಿನಗಳಲ್ಲಿ ಬಹಳ ಹೆಚ್ಚು ಹೃದಯಾಘಾತದ ಸಂಭವತೆ ಇದೆ. ಬಹಳ ಹೆಚ್ಚಿನ ಸಂಖ್ಯೆಯ ಹೃದಯ ಸ್ತಂಭನ ತಡೆಯ ಉಪಾಯಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಕೂಡ ಇದೆ.

l→ ಸಿಹಿ, ಒಗರು, ಕಹಿರಸ ಬಹಳ ಪ್ರಧಾನ. ಅಂತಹ ಉಣಿಸು, ತಿನಿಸುಗಳ ಸೇವಿಸುವಾ.

l→ ಬೇಗ ಅರಗುವ ಅನ್ನ, ಹೆಸರು ಬೇಳೆ, ನೆಲ್ಲಿಕಾಯಿ, ಕಲ್ಲುಸಕ್ಕರೆ, ಪಡವಲ ಕಾಯಿಯ ಬಳಕೆಗೆ ಒತ್ತು ನೀಡುವಾ.

l→ ಮಾಂಸಾಹಾರಿಗಳಿಗೆ ಮೇಕೆ, ಕುರಿಯ ಮಾಂಸ ಸೇವನೆಗೆ ಅವಕಾಶವಿದೆ.

l→ ಹಗಲು ಕಡಿಮೆ. ಅತಿ ಉದ್ದದ ರಾತ್ರಿಕಾಲ. ಬೆಳಿಗ್ಗೆ ಏಳುತ್ತಲೇ ಹಸಿವಾಗುತ್ತದೆ.

l→ ತಲೆ, ಮೈ, ಕೈಗೆ ಹದ ಬಿಸಿ ಎಣ್ಣೆ ಅಭ್ಯಂಗ, ಎಂದರೆ ಮಾಲೀಶು ಒಳ್ಳೆಯದು. ಅನಂತರ ಹಿತವಾದ ಬಿಸಿನೀರಿನ ಜಳಕದಿಂದ ದೇಹ ಮತ್ತು ಮನಸ್ಸಿಗೆ ಆನಂದ. ಸೀಗೆ, ಬಾಗೆ, ಕಡಲೆ, ಹೆಸರುಹಿಟ್ಟಿನ ಮಿಶ್ರಣದಿಂದ ಮೈಯನ್ನು ಉಜ್ಜಿಕೊಂಡು ಎಣ್ಣೆಪಸೆ ತೆಗೆಯಬೇಕು. ಇದಕ್ಕೆ 'ಉದ್ವರ್ತನ' ಎಂಬರು. ರಕ್ತಸಂಚಾರಕ್ಕೆ ಅನುಕೂಲ. ರಕ್ತದ ಏರೊತ್ತಡಕ್ಕೆ, ಹೃದಯದ ರೋಗಗಳಿಗೆ ಕಡಿವಾಣ.

l→ ಲಘು ವ್ಯಾಯಾಮದಿಂದ ಲಾಭವಿದೆ. ದೇಹದ ಒಟ್ಟು ಶಕ್ತಿಯನ್ನು ಒಂದು ಪರಿಮಾಣ ಎಂದು ಭಾವಿಸಿರಿ. ಅದರ ಅರ್ಧದಷ್ಟು ಮಾತ್ರ ವಿನಿಯೋಗಿಸಬೇಕು. ಉಳಿದ ಅರ್ಧ ದೇಹದ ರೋಗನಿರೋಧಕ ಶಕ್ತಿಯ ಸಂಚಯನಕ್ಕೆ ದಕ್ಷಿಣಾಯನವು ಯೋಗ್ಯ ಕಾಲ. ಹಣೆ ಬೆವರುವಷ್ಟು ಮಾತ್ರ ಲಘುವ್ಯಾಯಾಮ ಸಾಕಾಗುತ್ತದೆ.

l→ ವರ್ಷವಿಡೀ 'ವರ್ಕೌಟ್' ಎಂಬ ಅತಿವ್ಯಾಯಾಮದಿಂದ ಅಪಾಯವಿದೆ.

l→ ಚಂದ್ರನ ಶೀತಲ ಸ್ಪರ್ಶದಿಂದ ಉತ್ತಮ ರಸವನ್ನು ಹೊಂದುವ ಕೆರೆ, ಜಲಾಶಯದ ನೀರು ಹಂಸೋದಕ (ಅಂಶೂದಕ) ಪಾನ ಒಳ್ಳೆಯದು. ಆದರೆ ನೀರು ಶುದ್ಧವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಿ.

l→ ನೀರಡಿಕೆ ಆಗದಿದದ್ದರೂ ನೀರು ಕಡಿಮೆ ಕುಡಿಯಬಾರದು. ಉಗುರು ಬಿಸಿ ನೀರು ಕುಡಿಯಿರಿ.

l→ ಶ್ರೀಗಂಧ, ಲಾವಂಚ, ಕರ್ಪೂರ ಬೆರೆಸಿದ ಪರಿಮಳ ಮೈಗೆ ಹಚ್ಚಿರಿ. ಸುಗಂಧ ಭರಿತ ಬೆಚ್ಚನೆ ಕೋಣೆಯಲ್ಲಿ ವಾಸ.

l→ ಸೌಮ್ಯ ಬೆಳದಿಂಗಳ ವಿಹಾರಕ್ಕಿದೆ ಅವಕಾಶ.

l→ ಮೊಸರನ್ನು ಕಡಿಮೆ ಸೇವಿಸಿ. ಎಣ್ಣೆ ವಸ್ತು ಅತಿ ಬಳಕೆ ಕೂಡದು. ಬಿಸಿಲಿನ ಓಡಾಟ, ಹಗಲು ನಿದ್ದೆ ಖಂಡಿತ ಸಲ್ಲದು.

l→ ಮುಂಜಾವಿನ ಶೀತ ಗಾಳಿಗೆ ಮೈಒಡ್ಡುವ ವಾಕಿಂಗ್‌ಗೆ ಕಡಿವಾಣ. ಸಂಜೆಯ ಬಿಸಿಲಿಗೆ ಮೈಯ ಒಡ್ಡುವ ನಡಿಗೆ ಲೇಸು.

l→ ಹತ್ತಿಯ ದಪ್ಪನೆ ಬಟ್ಟೆ ಮತ್ತು ಉಣ್ಣೆಯ ದಿರಿಸನ್ನು ಧರಿಸಿರಿ. ಅತಿಯಾದ ಫ್ಯಾನ್ ಗಾಳಿಗೆ ಮುಖ, ಮೈ ಗಳನ್ನು ಒಡ್ಡಿಕೊಳ್ಳದಿರಿ.

Dailyhunt
Disclaimer: This content has not been generated, created or edited by Dailyhunt. Publisher: Prajavani