Dailyhunt Logo
  • Light mode
    Follow system
    Dark mode
    • Play Story
    • App Story
ಕ್ಷೇಮ ಕುಶಲ| ಕ್ಯಾನ್ಸರ್‌; ಬೇಡ ಭೀತಿ ಇರಲಿ ಜಾಗೃತಿ

ಕ್ಷೇಮ ಕುಶಲ| ಕ್ಯಾನ್ಸರ್‌; ಬೇಡ ಭೀತಿ ಇರಲಿ ಜಾಗೃತಿ

ಅಂಕಿ-ಅಂಶಗಳ ಪ್ರಕಾರ ಎರಡು ದಶಕಗಳಿಂದ ಜನರಲ್ಲಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಯೆಂದರೆ ಅದುವೇ ಕ್ಯಾನ್ಸರ್‌. ಆದರೆ ಕ್ಯಾನ್ಸರ್‌ನ ಸಂಖ್ಯೆಯಲ್ಲಿ ಹೆಚ್ಚಳಗೊಂಡಿದ್ದರೂ, ಅದರಲ್ಲಿ ಕ್ಯಾನ್ಸರ್‌ ಎಂಬ ಹೆಸರಿಗೇ ಹೆದರಿಕೊಂಡವರ ಸಂಖ್ಯೆಯೂ ಕಡಿಮೆಯೇನಿಲ್ಲ. ದೇಹದಲ್ಲಿ ಯಾವುದೇ ಭಾಗದಲ್ಲಿ ವ್ಯತ್ಯಾಸಗೊಂಡರೂ ಇದು ಕ್ಯಾನ್ಸರ್ ಇರಬಹುದೇ?- ಎಂಬ ಗುಮಾನಿಯನ್ನು ಇಟ್ಟುಕೊಂಡೇ ವೈದ್ಯರನ್ನು ಕಾಣುವವರ ಸಂಖ್ಯೆಯೂ ಹೆಚ್ಚಿದೆ.

ಕೆಲವೊಮ್ಮೆ ಕ್ಯಾನ್ಸರ್‌ ಆಗಿದ್ದರೂ ನಿರ್ಲಕ್ಷ್ಯ ಮಾಡಿ ಕೊನೆಯ ಹಂತದಲ್ಲಿ ತಪಾಸಣೆಗೆ ಒಳಗಾಗುವವರೂ ಇದ್ದಾರೆ. ಎಲ್ಲದಕ್ಕೂ ಮೂಲ ಕ್ಯಾನ್ಸರ್‌ ಬಗೆಗಿನ ಭಯ. ಹಾಗಾಗಿ ಈ ಭಯ ನಿವಾರಣೆಯಾಗಿ, ಜಾಗೃತಿ ಮೂಡಬೇಕಿದೆ.

ಯಾವ ರೋಗಲಕ್ಷಣ ಕ್ಯಾನ್ಸರ್‌ನ ಮುನ್ಸೂಚನೆ, ಯಾವುದು ಅಲ್ಲ ಎಂಬುದರ ಬಗ್ಗೆ ಸ್ಪಷ್ಟತೆ ಇರಬೇಕಾಗಿರುವುದು ಬಹಳ ಮುಖ್ಯ.

ಕ್ಯಾನ್ಸರ್ ಎಂದರೇನು ?

ದೇಹದಲ್ಲಿ ಸಾಮಾನ್ಯವಾಗಿ ನಿಯಂತ್ರಿತ ರೀತಿಯಲ್ಲಿ ಹೊಸ ಜೀವಕೋಶಗಳು ಹುಟ್ಟುತ್ತಾ, ಹಳೆಯ ಜೀವಕೋಶಗಳು ಸಾಯುತ್ತಾ ಅಂಗಾಂಗಗಳು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತವೆ. ಈ ನಿರ್ದಿಷ್ಟ ಜೀವಕೋಶಗಳು ಸಹಜವಾಗಿರುವ ನಿಯಂತ್ರಣ ಕಳೆದುಕೊಂಡು ಅನವಶ್ಯಕ ವೇಗದಲ್ಲಿ, ಅಸಹಜವಾಗಿ, ವಿಭಜನೆಯಾಗುತ್ತವೆ. ಹೀಗಾಗುವುದರಿಂದ ಕಾರ್ಯನಿರ್ವಹಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಹೀಗಾಗುತ್ತ ತನ್ನ ಅಕ್ಕಪಕ್ಕದ ಅಂಗಾಂಶಗಳನ್ನು, ಅಂಗಗಳನ್ನು ಗಾಸಿಗೊಳಿಸುತ್ತವೆ. ಇಂಥ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಯೇ ಕ್ಯಾನ್ಸರ್.

ಸಮಾಧಾನದ ವಿಷಯವೆಂದರೆ, ಕ್ಯಾನ್ಸರ್ ಏಕಾಏಕಿಯಾಗಿ ಬೆಳೆಯುವುದು ತೀರಾ ಅಪರೂಪ. ಅದು ನಿಧಾನವಾಗಿ ಬೆಳೆದಂತೆ ಯಾವುದಾದರೂ ರೋಗಲಕ್ಷಣದ ಮೂಲಕ ಸೂಚನೆಯನ್ನು ಕೊಡುತ್ತದೆ. ಹಾಗಾಗಿ ಯಾವ ರೋಗಲಕ್ಷಣ ಕ್ಯಾನ್ಸರ್‌ನ ಸೂಚನೆ ಗಳಾಗಿರಬಹುದು? ಎಂಬುದನ್ನು ಅರಿಯುವುದು ಬಹಳ ಮುಖ್ಯ. ದೇಹದ ಯಾವುದೇ ಭಾಗದಲ್ಲಿ ಯಾವುದೇ ಜೀವಕೋಶವು ಕ್ಯಾನ್ಸರ್ ಆಗಿ ಬೆಳೆಯುವ ಸಾಧ್ಯತೆಗಳಿವೆ. ತಲೆಯಿಂದ ಪಾದದವರೆಗೆ ದೇಹದ ಯಾವುದೇ ಭಾಗದಲ್ಲಿಯಾದರೂ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಈ ಕೆಳಕಂಡ ರೋಗಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಬೇಡಿ. ತಜ್ಞ ವೈದ್ಯರನ್ನು ಕಾಣಿರಿ.

l→ಬಾಯಿಯಲ್ಲಿ ಹುಣ್ಣು: ಎರಡು ವಾರಗಳಿಗೂ ಮೀರಿ ಬಾಯಿಯಲ್ಲಿ ವಾಸಿಯಾಗದ ಹುಣ್ಣು, ಬಿಳಿ ಅಥವಾ ಕೆಂಪು ಬಣ್ಣದ ಕಲೆಗಳು ಕಾಣಿಸಿಕೊಂಡರೆ ಇವು ಬಾಯಿಯ ಕ್ಯಾನ್ಸರ್‌ನ ಸೂಚನೆಗಳಾಗಿರಬಹುದು. ಗುಟ್ಕಾ, ತಂಬಾಕುಗಳನ್ನು ಸೇವಿಸುವವರಲ್ಲಿ, ಧೂಮಪಾನ ಮಾಡುವವರಲ್ಲಿ, ಪದೇ ಪದೇ ತುಟಿ ಕಚ್ಚುವುದು, ಬಾಯಿಯ ಸ್ವಚ್ಛತೆ ಇಲ್ಲದಿರುವುದು ಕೂಡ ಬಾಯಿಯ ಕ್ಯಾನ್ಸರ್ ಉಂಟಾಗಲು ಕಾರಣವಾಗಬಹುದು

l→ಗಂಟಲು: ಕಾರಣವಿಲ್ಲದೆ ಧ್ವನಿಯಲ್ಲಿ ಬದಲಾವಣೆ, ಧ್ವನಿ ಗಡಸಾಗುವುದು, ಮಾತನಾಡಲು ಕಷ್ಟವಾಗುವುದು, ಆಹಾರ ಅಥವಾ ಎಂಜಲು ನುಂಗಲು ಕಷ್ಟವಾಗುವುದು- ಇವು ಗಂಟಲಿನ ಮೇಲ್ಭಾಗದ ಅಥವಾ ಅನ್ನನಾಳ ಕ್ಯಾನ್ಸರ್‌ನ ಸೂಚನೆಗಳಾಗಿರಬಹುದು.

l→ಶ್ವಾಸಕೋಶ: ಮೂರು ವಾರಗಳಿಗಿಂತಲೂ ಹೆಚ್ಚುಕಾಲ ವಾಸಿಯಾಗದೆ ಕಾಡುವ ಕೆಮ್ಮು, ಕೆಮ್ಮುವಾಗ ಕಫದಲ್ಲಿ ರಕ್ತ ಕಾಣಿಸಿಕೊಳ್ಳುವುದು, ಆಗಾಗ ಶ್ವಾಸಕೋಶದಲ್ಲಿ ನಂಜು ಕಾಣಿಸಿ ಕೊಳ್ಳುವುದು- ಶ್ವಾಸಕೋಶ ಕ್ಯಾನ್ಸರ್‌ನ ಲಕ್ಷಣಗಳಾಗಿರಬಹುದು.

l ಸ್ತನ: ನೋವಿಲ್ಲದ, ಗಟ್ಟಿಯಾದ, ಹೊಸದಾದ ಗಡ್ಡೆ ಕಾಣಿಸಿಕೊಳ್ಳುವುದು. ಸ್ತನದ ತೊಟ್ಟು ಒಳಗೇ ಎಳೆದುಕೊಳ್ಳುವುದು, ಸ್ತನದ ತೊಟ್ಟಿನಲ್ಲಿ ರಕ್ತಮಿಶ್ರಿತ ದ್ರವ ಕಾಣಿಸಿಕೊಳ್ಳುವುದು.

l ಕರುಳು: ನಿರಂತರ ಅಜೀರ್ಣ, ಮಲ ವಿಸರ್ಜನೆಯಲ್ಲಿ ಬದಲಾವಣೆ, ದೀರ್ಘಕಾಲದ ಮಲಬದ್ಧತೆ, ಭೇದಿ, ರಕ್ತಸ್ರಾವ - ಕರುಳು ಹಾಗೂ ಗುದದ್ವಾರದ ಕ್ಯಾನ್ಸರ್‌ನ ಗುಣಲಕ್ಷಣಗಳು.

l→ಗರ್ಭಕೋಶ: ಋತುಬಂಧದ ಬಳಿಕ ರಕ್ತಸ್ರಾವ, ಅಸಹಜ ರಕ್ತಸ್ರಾವ, ಲೈಂಗಿಕ ಸಂಬಂಧದ ಬಳಿಕ ರಕ್ತಸ್ರಾವ, ವಿಪರೀತ ಕೆಂಪುಮಿಶ್ರಿತ ಬಿಳಿ ಬಣ್ಣದ ಸ್ರಾವ - ಗರ್ಭಕೋಶ, ಗರ್ಭಕಂಠದ ಕ್ಯಾನ್ಸರ್‌ಗಳಾಗಿರಬಹುದು.

l→ಚರ್ಮ: ಚರ್ಮದಲ್ಲಿರುವ ಮಚ್ಚೆ ದೊಡ್ಡದಾಗುವುದು, ಬಣ್ಣ ಬದಲಾಗುವುದು, ಆಕಾರದಲ್ಲಿ ವ್ಯತ್ಯಾಸವಾಗುವುದು, ತುರಿಕೆ ಅಥವಾ ರಕ್ತ ಬರುವುದು. ಚರ್ಮದಲ್ಲಿನ ಹುಣ್ಣು ವಾಸಿಯಾಗದೇ ಇರುವುದು, ಮುಟ್ಟಿದರೆ ರಕ್ತಸ್ರಾವವಾಗುವುದೂ ಚರ್ಮ ಕ್ಯಾನ್ಸರ್‌ನ ಲಕ್ಷಣಗಳಾಗಿರಬಹುದು.

ಈ ರೋಗಲಕ್ಷಣಗಳಿವೆಯೇ?:

ಯಾವುದೇ ಭಾಗದಲ್ಲಿ ಗಡ್ಡೆ ಕಾಣಿಸಿಕೊಳ್ಳುವುದು, ಅಥವಾ ಮೊದಲೇ ಇದ್ದ ಗಡ್ಡೆ ದೊಡ್ಡದಾಗುವುದು, ಕುತ್ತಿಗೆಯಲ್ಲಿ, ಕಂಕುಳಲ್ಲಿ ನೋವುಗಳಿಲ್ಲದ ಗಡ್ಡೆ. ಸಾಮಾನ್ಯವಾಗಿ ಎಲ್ಲಾ ಕ್ಯಾನ್ಸರ್‌ನ ಜೊತೆಗೆ ಕಾಣುವ ಮುಖ್ಯ ಲಕ್ಷಣಗಳು. ಆಕಾರಣವಾಗಿ ತೂಕ ಇಳಿಯುವುದು. ಆರು ತಿಂಗಳಲ್ಲಿ ಶೇ 10ರಷ್ಟು ತೂಕ ಕಡಿಮೆಯಾಗುವುದು. ನಿರಂತರ ಸಣ್ಣ ಜ್ವರ, ಅಕಾರಣ ಸುಸ್ತು, ರಾತ್ರಿ ಬೆವರುವುದು, ನಿರಂತರ ಹೊಟ್ಟೆನೋವು, ತಲೆನೋವುಗಳು ಕಾಣಿಸಿಕೊಳ್ಳುವುದು, ನೋವಿನ ಮಾತ್ರೆಗಳನ್ನು ಸೇವಿಸಿದರೂ ಈ ನೋವು ಕಡಿಮೆಯಾಗದೇ ಇರುವುದು, ಹಸಿವು ಇಲ್ಲದೇ ಇರುವುದು ಕ್ಯಾನ್ಸರ್‌ನ ಮುಖ್ಯ ಲಕ್ಷಣಗಳಾಗಿರಬಹುದು.

ನೆನಪಿಡಿ: ಮೇಲಿನ ಲಕ್ಷಣಗಳಲ್ಲಿ, ಯಾವುದಾದರೂ ಒಂದು ಇದ್ದ ಮಾತ್ರಕ್ಕೆ ಕ್ಯಾನ್ಸರ್‌ನ ಸೂಚನೆಯಲ್ಲ. ಆದರೆ ಈ ಸೂಚನೆಗಳು ಎರಡು ವಾರಕ್ಕಿಂತಲೂ ಹೆಚ್ಚು ಕಾಲ ಕಂಡುಬಂದಲ್ಲಿ ತಕ್ಷಣ ತಪಾಸಣೆ ಮಾಡಿಸಿಕೊಳ್ಳಿ.

ಪತ್ತೆ ಹಚ್ಚುವುದು ಹೇಗೆ?

l→ಬಯಾಪ್ಸಿ: ಗಡ್ಡೆಯಿಂದ/ ಹುಣ್ಣಿನಿಂದ ಜೀವಕೋಶ ತೆಗೆದು ಸೂಕ್ಷ್ಮದರ್ಶಕದ ಮೂಲಕ ಪರೀಕ್ಷೆ

l ರಕ್ತ ಪರೀಕ್ಷೆ, ಅಸ್ಥಿಮಜ್ಜೆಯ ಪರೀಕ್ಷೆ

l→ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್, ಸಿಟಿ ಸ್ಕ್ಯಾನಿಂಗ್, ಎಂಆರ್‌ಐಗಳ ಮೂಲಕ ಗಡ್ಡೆಯ ಸ್ವರೂಪ, ಹಾಗೂ ಇತರ ಕಡೆಗೆ ಹರಡಿರುವುದನ್ನು ಹುಡುಕುವುದು

l ಕ್ಯಾನ್ಸರ್ ಜೀವಕೋಶಗಳಲ್ಲಿರುವ ರಾಸಾಯನಿಕಗಳನ್ನು ರಕ್ತದಲ್ಲಿ ಇರುವುದನ್ನು ದೃಢಪಡಿಸಿಕೊಂಡು ಕ್ಯಾನ್ಸರ್ ಅನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ, ಅಂಡಾಶಯದ ಕ್ಯಾನ್ಸರ್‌ ಗೆ 'CA 125', ಪ್ರೋಸ್ಟೇಟ್ ಕ್ಯಾನ್ಸರ್ ಗೆ 'PSA' ಇತ್ಯಾದಿ.

ತಡೆಗಟ್ಟುವುದು ಹೇಗೆ?

ಆರೋಗ್ಯಯುತ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ಶೇ 40ರಷ್ಟು ಕ್ಯಾನ್ಸರ್‌ಗಳನ್ನು ತಡೆಗಟ್ಟಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ.

l→ ಯಾವುದೇ ರೀತಿಯಲ್ಲಿ ತಂಬಾಕುಸೇವನೆ ಮಾಡುತ್ತಿದ್ದರೆ, ಸಂಪೂರ್ಣವಾಗಿ ನಿಲ್ಲಿಸಿ ಬಿಡಿ. ಸಿಗರೇಟು , ಗುಟ್ಕಾ , ಪಾನ್ ಮಸಾಲದಿಂದ ಶೇ 50ರಷ್ಟು ಕ್ಯಾನ್ಸರ್ ಬರುತ್ತದೆ. ಬಾಯಿ, ಗಂಟಲು, ಶ್ವಾಸಕೋಶ, ಅನ್ನನಾಳದ ಕ್ಯಾನ್ಸರ್ ಗೆ ಇದು ನೇರ ಕಾರಣ.

l→ ಮದ್ಯಪಾನವನ್ನು ಮಿತಗೊಳಿಸಿ. ಬಾಯಿ, ಯಕೃತ್ ಕ್ಯಾನ್ಸರ್‌ ಅಪಾಯವನ್ನು ಮದ್ಯಸೇವನೆ ಹೆಚ್ಚುಗೊಳಿಸುತ್ತದೆ.

ಲಸಿಕೆ

HPV ಲಸಿಕೆ: ಗರ್ಭಕಂಠ, ಗುದದ್ವಾರ, ಅನ್ನನಾಳದ ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ

ಹೆಪಟೈಟಿಸ್ 'ಬಿ' ಲಸಿಕೆ: ಯಕೃತ್ ಕ್ಯಾನ್ಸರ್ ತಡೆಗಟ್ಟುತ್ತದೆ.

ನಿಯಮಿತ ತಪಾಸಣೆ:
( ಸ್ಕ್ರೀನಿಂಗ್) ಗರ್ಭಕಂಠದ ಕೊರಳಿನ ಕ್ಯಾನ್ಸರ್‌ಗೆ ಪಾಪ್ ಸ್ಮಿಯರ್ ಪರೀಕ್ಷೆ: 18 ವರ್ಷದ ಬಳಿಕ ಅಥವಾ ಲೈಂಗಿಕ ಜೀವನ ಪ್ರಾರಂಭಿಸಿದ ಬಳಿಕ ವರುಷಕ್ಕೊಮ್ಮೆ ಪಾಪ್‌ಸ್ಮಿಯರ್ ಪರೀಕ್ಷೆ ಮಾಡಿಸಿಕೊಳ್ಳುವುದು. ಗರ್ಭಕೋಶದ ಒಳಪದರದ ದಪ್ಪವನ್ನು ಪರೀಕ್ಷಿಸುವುದು.

ಸ್ತನಗಳ ಸ್ವಯಂ ಪರೀಕ್ಷೆ: ತಿಂಗಳಿಗೊಮ್ಮೆ ಸ್ವಯಂ ಪರೀಕ್ಷೆ ಮಾಡಿಕೊಳ್ಳಿ. ವರ್ಷಕ್ಕೊಮ್ಮೆ ವೈದ್ಯರಿಂದ ಪರೀಕ್ಷೆ ಮಾಡಿಸಿ.

ಬಾಯಿಯ ಪರೀಕ್ಷೆ: ತಂಬಾಕನ್ನು ಸೇವಿಸುವವರು ಆರು ತಿಂಗಳಿಗೊಮ್ಮೆ ವೈದ್ಯರಿಂದ ಬಾಯಿಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

l→ ಆಹಾರದಲ್ಲಿ ಹೆಚ್ಚು ಹಸಿರು ಸೊಪ್ಪು , ತರಕಾರಿ, ಹಣ್ಣು , ದ್ವಿದಳ ಧಾನ್ಯಗಳನ್ನು ಉಪಯೋಗಿಸಿ. ಅತಿ ಎಣ್ಣೆ, ಉಪ್ಪು, ಕೆಂಪು ಮಾಂಸ, ಸಂಸ್ಕರಿಸಿದ ಮಾಂಸ , ಕರಿದ ತಿಂಡಿಗಳ ಸೇವನೆಯನ್ನು ಕಡಿಮೆ ಮಾಡಿ.

l→ ಅತಿ ಬಿಸಿಯಾದ ಕಾಫಿ ಹಾಗೂ ಟೀ ಅನ್ನು ಕುಡಿಯಬೇಡಿ.

l→ ಪ್ಲಾಸ್ಟಿಕ್ ನಲ್ಲಿ ಬಿಸಿ ಆಹಾರ ಇಡಬೇಡಿ.

l→ ಬಿಸಿಲಿನಲ್ಲಿ ಹೆಚ್ಚು ಹೊತ್ತು ಇರುವಾಗ ಟೋಪಿ, ಸನ್‌ಸ್ಕ್ರೀನ್ ಗಳನ್ನು ಬಳಸಬಹುದು.

l ದೈಹಿಕ ಚಟುವಟಿಕೆ: ನಿತ್ಯ 30 ನಿಮಿಷಗಳ ಕಾಲ ವಾಕಿಂಗ್ ಯೋಗ, ಮನೆ ಕೆಲಸ, ಹೂದೋಟದ ಕೆಲಸಗಳನ್ನು ಮಾಡಿ. ಒತ್ತಡರಹಿತ ಜೀವನ ನಡೆಸಿ, ಸದಾ ಹಸನ್ಮುಖಿಯಾಗಿರಿ.

Dailyhunt
Disclaimer: This content has not been generated, created or edited by Dailyhunt. Publisher: Prajavani