Dailyhunt Logo
  • Light mode
    Follow system
    Dark mode
    • Play Story
    • App Story
ಕ್ಷೇಮ ಕುಶಲ: ಮೂಲವ್ಯಾಧಿ ದೇಹಕ್ಕೆ ಮುಳ್ಳು!

ಕ್ಷೇಮ ಕುಶಲ: ಮೂಲವ್ಯಾಧಿ ದೇಹಕ್ಕೆ ಮುಳ್ಳು!

ಊರ್ಧ್ವಮೂಲಂ ಅಧಃ ಶಾಖಂ ಎಂಬ ಶ್ಲೋಕದಲ್ಲಿ ಶ್ರೀಕೃಷ್ಣನು ಅರಳಿ ಮರದ ವ್ಯಾಖ್ಯಾನ ಮಾಡುವನು. ಅಂದರೆ ಅರಳಿ ಮರದ ರೆಂಬೆ ಕೊಂಬೆ ನೆಲದಡಿಯಂತೆ. ಬೇರಿರುವುದು ಮೇಲ್ಗಡೆ! ಈ ಸಂಗತಿ ಊಹಿಸಿಕೊಳ್ಳಿರಿ. ಒಂದರ ಮೇಲೊಂದರಂತೆ ಪೇರಿಸಿದ ನಾಣ್ಯದಾಕಾರದ ನಿದರ್ಶನ. ಕತ್ತಿನ ಭಾಗದಿಂದ ಬೆನ್ನು ಮೂಳೆಯ ಕೆಳತುದಿಯ ಬಾಲಂಗೋಚಿ ತುಣುಕು ಮೂಳೆಯ ತನಕವಿದೆ ಬೆನ್ನು ಮೂಳೆ ರಚನೆ.

ಅದರ ಒಳಗಿದೆ ಮಿದುಳ ಬಳ್ಳಿ. ಅದರ ಕೆಳ ತುದಿಯು ಕವಲೊಡೆಯುವುದು ಕೊನೆಯ ತುಣುಕು ಬಾಲದ ಮೂಳೆಯಲ್ಲಿ. ಅಕ್ಷರಶಃ ಮರದ ಬೇರಿನಂತೆ ನರ ಮಂಡಲದ ಕೊನೆ ತುದಿಯು ಎರಡು ಕವಲಾಗುತ್ತದೆ. ಅದರ ಸಂಗಡ ಸೂಕ್ಷ್ಮಾತಿಸೂಕ್ಷ್ಮ ರಕ್ತದ ಕಿರುನಾಳಗಳು ಬಲೆಯಂತೆ ಜೋಡಿಸಿಕೊಂಡಿವೆ. ಕಿರುರಕ್ತ ನಾಳಗಳ ವಕ್ರತೆ, ಉಬ್ಬುವಿಕೆಯಿಂದ ಗುದಭಾಗದಲ್ಲಿ ಗಂಟು ಉಂಟಾಗುತ್ತದೆ. ಆರಂಭದಲ್ಲಿ ಅದು ಚುಚ್ಚುವ ರೀತಿಯ ಸಂವೇದನೆ. ಅನಂತರ ಅಲ್ಲಿ ಒತ್ತಡ ಬಿದ್ದರೆ ಬಿರಿಯುವುದು. ಆಗ ರಕ್ತಸ್ರಾವ. ಸದಾಕಾಲ ಉರಿ.

ಇಂತಹ ಜಟಿಲ ಸಮಸ್ಯೆಗೆ ಮೂಲವ್ಯಾಧಿ, ಮೊಳೆರೋಗ, ಫಿಷರ್, ಪೈಲ್ಸ್ ಎಂಬ ಹಲವು ಹಂತ ಮತ್ತು ಹೆಸರುಗಳಿವೆ. ಕುರವಾಗಿ ಒಡೆದ ಹುಣ್ಣು ಒಳಮುಖವಾಗಿ ವ್ಯಾಪಿಸಿಕೊಂಡರೆ ಅದು ಭಗಂದರಾ(ಫಿಸ್ಟುಲಾ). ಕುಂತ್ರೆ ನಿಂತ್ರೆ ನಿಂದೇ ಧ್ಯಾನ ಹಾಡಿದೆ. ಇದು ಅಕ್ಷರಶಃ ಮೂಲವ್ಯಾಧಿಗೆ ಅನ್ವಯ. ಆಯುರ್ವೇದ ಸಂಹಿತೆಗಳು ಮೂಲವ್ಯಾಧಿಯನ್ನು' ಅರ್ಶಸ್' ಎಂದು ಕರೆದಿವೆ.

ಅರಿ ಎಂದರೆ ಶತ್ರು. ಮಗ್ಗುಲ ಮುಳ್ಳು ಎಂಬ ಮಾತಿದೆ. ಆದರೆ ಇಲ್ಲಿ ಮುಳ್ಳು ತಗುಲುವುದು ಮಗ್ಗುಲ ಬದಿಯಲ್ಲಲ್ಲ. ಕುಳಿತೇಳುವ ಆಸನದಲ್ಲಿ. ಅದರ ಕಾರಣ, ಪರಿಹಾರ ಮತ್ತು ತಡೆಯ ಬಗ್ಗೆ ಆಯುರ್ವೇದದ ವಿವರಗಳನ್ನು ತಿಳಿಯೋಣ.

ರೋಗಕಾರಣಗಳು

  • ವಂಶವಾಹಿ ತಳಿಸಂಕರ. ತಂದೆ ತಾಯಿಯರಲ್ಲಿದ್ದರೆ ಮಕ್ಕಳಿಗೆ ಸಹಜ

  • ಮಲ ಮೂತ್ರಾದಿ ಕರೆಗೆ ಕಾಲ ಕಾಲಕ್ಕೆ ಓಗೊಡದೆ ಸದಾ ಹತ್ತಿಕ್ಕುವ ಸ್ವಭಾವ

  • ಸದಾ ಕಾಲ ಒರಟು ಆಸನದಲ್ಲಿ ಮತ್ತು ತಪ್ಪು ಭಂಗಿಯಲ್ಲಿ ಕುಳಿತು ಮಾಡುವ ಕೆಲಸ

  • ಬಹುಕಾಲ ದೇಹ ಮತ್ತು ಮನಸ್ಸಿಗೆ ಒತ್ತಡ ಬೀಳುವ ಕೆಲಸ(ದ್ವಿಚಕ್ರ, ಹಗುರ, ಭಾರಿ ವಾಹನ ಚಾಲನೆ)

  • ಫಿಟ್‌ನೆಸ್‌ ನೆಪದಲ್ಲಿ ಕುಳಿತ ಮತ್ತು ನಿಂತ ಭಂಗಿಯ ಅತಿ ವ್ಯಾಯಾಮ, ಭಾರ ಎತ್ತುವ ಸಂಗತಿಗಳು

  • ಅತಿಯಾದ ಲೈಂಗಿಕಾಸಕ್ತಿ, ದ್ವೇಷ, ಅಸೂಯೆ, ಚಿಂತೆ

  • ಗರ್ಭವತಿಯಲ್ಲಿ ಮಲಬದ್ಧತೆ, ಮಲವಿಸರ್ಜನೆಗೆ ತಿಣುಕುವ, ತಡೆಯುವ ಪ್ರವೃತ್ತಿ,

  • ದೇಹದಲ್ಲಿ ಯದ್ವಾತದ್ವಾ ಬೊಜ್ಜು ಸೇರುವಿಕೆ, ಹಗಲು ನಿದ್ದೆ, ರಾತ್ರಿ ಪಾಳಿಯ ಎಚ್ಚರ

  • ಖಾರ, ಉಪ್ಪು, ಹಸಿ ಮೆಣಸು ಅತಿ ಬಳಕೆ, ಪದೇ ಪದೇ ಅತಿ ಕಾಫಿ, ಚಹಾ, ಮದ್ಯ, ಉತ್ತೇಜಕ ಪಾನೀಯ ಬಳಕೆ

ರೋಗಪರಿಹಾರದ ಸುಲಭ ಸೂತ್ರಗಳು

  • ಮುಂದಿನ ಏಳೇಳು ತಲೆಮಾರಿಗೆ ಕಾಯಿಲೆ ತಡೆ ಸಾಧ್ಯ. ಎಂದರೆ ಸಾತ್ವಿಕಾಹಾರ ಮತ್ತು ಸ್ವಭಾವ ನಿಮ್ಮದಾಗಲಿ

  • ಬಸಳೆ, ಮೂಲಂಗಿ, ಅಗಸೆ ಮೊದಲಾದ ಸೊಪ್ಪು, ತರಕಾರಿ ಬಳಕೆ

  • ತಾಜಾ ಮತ್ತು ಆಯಾ ಶ್ರಾಯದಲ್ಲಿ ಸಿಗುವ ಹಣ್ಣುಗಳನ್ನು ಬಳಸಿರಿ. ಸೇಬು ಮಾತ್ರ ಅಲ್ಲ, ಉಳಿದವೂ ಹಲವಿವೆ

  • ಈರುಳ್ಳಿ ದಂಟು, ಈರುಳ್ಳಿಯ ಧಾರಾಳ ಬಳಕೆ

  • ಮಜ್ಜಿಗೆ ಸಂಗಡ ಸೋಂಪು, ಜೀರಿಗೆ ಮತ್ತು ಹಿಪ್ಪಲಿ ಪುಡಿ ಸೇರಿಸಿ ಆಗಾಗ ಸೇವನೆ

  • ಅಳಲೆ, ತಾರೆಕಾಯಿ ಪುಡಿ ಮತ್ತು ನೆಲ್ಲಿ ಕಾಯಿಯ ಧಾರಾಳ ಬಳಕೆ

  • ಕಾಶೀ ಬಿಲ್ಪತ್ರೆ ಕಾಯಿ, ಬೇಲದ ಷರಬತ್

  • ಚಿತ್ರಮೂಲ ಎಂಬ ಕಡ್ಡಿ ನೆಟ್ಟರೆ ಚಿಗುರುವ ಸಸ್ಯ ಬೆಳೆಸಿರಿ. ಅದರ ಎಲೆ ತಂಬುಳಿ ನಿತ್ಯ ಸೇವನೆಗೆ ಒತ್ತು

  • ಸೂರಣಗಡ್ಡೆ ಉತ್ತಮ. ಆಲೂಗಡ್ಡೆಗೆ ನಿಷೇಧ

  • ನಡಿಗೆ, ಹೊರಾಂಗಣ ಕ್ರೀಡೆಗಳಿಗೆ ಇರಲಿ ಅವಕಾಶ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260818-51-2137294807

Dailyhunt
Disclaimer: This content has not been generated, created or edited by Dailyhunt. Publisher: Prajavani