Dailyhunt Logo
  • Light mode
    Follow system
    Dark mode
    • Play Story
    • App Story
ಕ್ಷೇಮ ಕುಶಲ: ಸಂಬಂಧಗಳ ನಡುವೆ ಅರಳಲಿ ಬದುಕು

ಕ್ಷೇಮ ಕುಶಲ: ಸಂಬಂಧಗಳ ನಡುವೆ ಅರಳಲಿ ಬದುಕು

ಮಾನವನ ಬದುಕಿನಲ್ಲಿ ಸಂಪತ್ತು, ಸಾಧನೆ, ಅಧಿಕಾರ ಮತ್ತು ಪ್ರಸಿದ್ಧಿಗೆ ಎಷ್ಟು ಮಹತ್ವವಿದೆಯೋ, ಆತ್ಮೀಯ ಸಂಬಂಧಗಳಿಗೂ ಅಷ್ಟೇ ಮಹತ್ವವಿದೆ. ಆದರೆ ಇಂದಿನ ಧಾವಂತದ ಬದುಕಿನಲ್ಲಿ ನಾವು ಒಂದು ವಿಚಿತ್ರವಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಬದುಕನ್ನು ಸುಂದರಗೊಳಿಸಲು ಬೇಕಾದ ಹಣವನ್ನು ಗಳಿಸುವ ಆತುರದಲ್ಲಿ, ನಮ್ಮ ಬದುಕನ್ನು ಸುಂದರಗೊಳಿಸುವ ಸುತ್ತಲಿನ ಜನರಿಗಾಗಿ ಸಮಯ ಮೀಸಲಿಡಲು ಸಾಧ್ಯವಾಗುತ್ತಿಲ್ಲ.

ಕುಟುಂಬದ ಸದಸ್ಯರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ, ಪ್ರತಿಯೊಬ್ಬರೂ ತಮ್ಮ ತಮ್ಮ ಮೊಬೈಲ್ ಫೋನ್‌ಗಳಲ್ಲಿ, ಕೆಲಸಗಳಲ್ಲಿ ಮತ್ತು ತಮ್ಮದೇ ಲೋಕಗಳಲ್ಲಿ ಮುಳುಗಿರುತ್ತಾರೆ. ಮಾತುಕತೆ ಕಡಿಮೆಯಾಗಿದೆ; ಮನದ ಮಾತುಗಳನ್ನು ಹಂಚಿಕೊಳ್ಳುವ ಅವಕಾಶವೂ ಕಡಿಮೆಯಾಗಿದೆ. ಈ ಬದಲಾವಣೆ ನಮ್ಮ ಸಂಬಂಧಗಳ ಮೇಲಷ್ಟೇ ಅಲ್ಲ, ನಮ್ಮ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.

ಸಮಾಜವಿಜ್ಞಾನಿಗಳು ಮಾನವನನ್ನು ಸಂಘಜೀವಿ ಎಂದು ಗುರುತಿಸಿದ್ದಾರೆ. ಮನುಷ್ಯ ಒಂಟಿಯಾಗಿ ಬದುಕಲು ಸೃಷ್ಟಿಯಾದವನಲ್ಲ. ಅವನಿಗೆ ಪ್ರೀತಿ, ವಿಶ್ವಾಸ, ಸ್ನೇಹ, ಸಹಾನುಭೂತಿ ಮತ್ತು ಆತ್ಮೀಯತೆಯ ಅಗತ್ಯವಿದೆ. ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳಲು, ದುಃಖದ ಸಂದರ್ಭದಲ್ಲಿ ಸಾಂತ್ವನ ಪಡೆಯಲು ಮತ್ತು ಸಂಕಷ್ಟಗಳಲ್ಲಿ ಧೈರ್ಯ ತುಂಬಲು ಮತ್ತೊಬ್ಬರ ಸಾಂಗತ್ಯ ಬೇಕು. ಕೆಲವೊಮ್ಮೆ ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲು ಯಾರಿಂದಲೂ ಸಾಧ್ಯವಾಗದಿರಬಹುದು. ಆದರೆ ನಮ್ಮ ಮಾತುಗಳನ್ನು ತಾಳ್ಮೆಯಿಂದ ಕೇಳುವ ಒಬ್ಬ ಆತ್ಮೀಯ ವ್ಯಕ್ತಿ ಸಿಕ್ಕರೆ ಸಾಕು, ಮನಸ್ಸಿನ ಭಾರ ಬಹಳಷ್ಟು ಕಡಿಮೆಯಾಗುತ್ತದೆ.

ಖಲೀಲ್ ಗಿಬ್ರಾನ್ ತನ್ನ ‌ʻದಿ ಪ್ರಾಫೆಟ್ ʼ ಕೃತಿಯಲ್ಲಿ ಸ್ನೇಹದ ಕುರಿತು ಅತ್ಯಂತ ಸುಂದರವಾದ ಮಾತೊಂದನ್ನು ಹೇಳುತ್ತಾನೆ: `ಸ್ನೇಹದ ಮಾಧುರ್ಯದಲ್ಲಿ ನಗುವಿಗೂ, ಸಂತೋಷಗಳನ್ನು ಹಂಚಿಕೊಳ್ಳುವುದಕ್ಕೂ ಅವಕಾಶವಿರಲಿ. ಏಕೆಂದರೆ, ಬದುಕಿನ ಸಣ್ಣಪುಟ್ಟ ಸಂಗತಿಗಳಲ್ಲಿಯೇ ಹೃದಯಕ್ಕೆ ಹೊಸ ಚೈತನ್ಯ ದೊರೆಯುತ್ತದೆ.' ನಿಜಕ್ಕೂ, ಆತ್ಮೀಯರೊಂದಿಗೆ ಕುಳಿತು ಮಾತನಾಡುವುದು, ಹಳೆಯ ನೆನಪುಗಳನ್ನು ಮೆಲುಕು ಹಾಕುವುದು, ಒಟ್ಟಿಗೆ ಊಟ ಮಾಡುವುದು ಅಥವಾ ಕಾರಣವಿಲ್ಲದೆ ನಗುವುದು ಕೂಡ ಬದುಕಿಗೆ ಹೊಸ ಉತ್ಸಾಹ ನೀಡುತ್ತದೆ. ಇಂತಹ ಸರಳ ಕ್ಷಣಗಳೇ ನಮ್ಮ ಬದುಕಿನ ಅಮೂಲ್ಯ ಸಂಪತ್ತು.

ಭಾರತೀಯ ಪರಂಪರೆಯಲ್ಲಿಯೂ ಸತ್ಸಂಗಕ್ಕೆ ವಿಶೇಷ ಮಹತ್ವವಿದೆ. ʻಭಜಗೋವಿಂದಂʼನಲ್ಲಿ `ಸತ್ಸಂಗತ್ವೇ ನಿಸ್ಸಂಗತ್ವಂ' ಎಂಬ ಮಾತು ಬರುತ್ತದೆ. ಒಳ್ಳೆಯವರ ಒಡನಾಟ ನಮ್ಮ ಆಲೋಚನೆಗಳನ್ನು ಬದಲಾಯಿಸುತ್ತದೆ; ಮನಸ್ಸಿಗೆ ಒಳ್ಳೆಯ ದಿಕ್ಕನ್ನು ನೀಡುತ್ತದೆ. ಆತ್ಮೀಯರ ಸಾಂಗತ್ಯ ಎಂದರೆ ಕೇವಲ ಮನರಂಜನೆಯಲ್ಲ. ಅದು ಪರಸ್ಪರ ಅರಿವು, ಪ್ರೀತಿ, ತಾಳ್ಮೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಅವಕಾಶವೂ ಹೌದು.

ಬದುಕಿನ ಒತ್ತಡದಿಂದ ದೂರವಿರುವುದೂ ಅಷ್ಟೇ ಮುಖ್ಯ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ಒತ್ತಡದಲ್ಲಿ ಬದುಕುತ್ತಿದ್ದಾರೆ. ಉದ್ಯೋಗದ ಒತ್ತಡ, ಆರ್ಥಿಕ ಚಿಂತೆ, ಕುಟುಂಬದ ಜವಾಬ್ದಾರಿ, ಮಕ್ಕಳ ಭವಿಷ್ಯ, ಸಾಮಾಜಿಕ ಹೋಲಿಕೆಗಳು ಹೀಗೆ ಚಿಂತೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ನಾಳೆಯ ಬಗ್ಗೆ ಅತಿಯಾಗಿ ಚಿಂತಿಸುವಾಗ ಇಂದಿನ ದಿನದ ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ. ಎಲ್ಲವನ್ನೂ ನಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂಬ ಸರಳ ಸತ್ಯವನ್ನು ಒಪ್ಪಿಕೊಳ್ಳುವುದು ಮಾನಸಿಕ ನೆಮ್ಮದಿಯ ಮೊದಲ ಹೆಜ್ಜೆ.

ಒತ್ತಡವನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಾಗದಿದ್ದರೂ, ಅದನ್ನು ನಿರ್ವಹಿಸಲು ಖಂಡಿತ ಸಾಧ್ಯವಿದೆ. ಕೆಲಸ ಮತ್ತು ವಿಶ್ರಾಂತಿಯ ನಡುವೆ ಸಮತೋಲನ ಇರಬೇಕು. ಪ್ರಕೃತಿಯೊಂದಿಗೆ ಸ್ವಲ್ಪ ಸಮಯ ಕಳೆಯುವುದು, ಸಂಗೀತ ಕೇಳುವುದು, ಪುಸ್ತಕ ಓದುವುದು, ವ್ಯಾಯಾಮ ಮಾಡುವುದು ಮತ್ತು ಧ್ಯಾನಕ್ಕೆ ಸಮಯ ಮೀಸಲಿಡುವುದು ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ, ನಮ್ಮ ಮನಸ್ಸಿನ ತಳಮಳವನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು.

ಆಧ್ಯಾತ್ಮಿಕ ದೃಷ್ಟಿಯಿಂದ ನೋಡಿದಾಗಲೂ ನೆಮ್ಮದಿಯ ಮನಸ್ಸು ಮತ್ತು ಪ್ರೀತಿಯ ಸಂಬಂಧಗಳು ಮನುಷ್ಯನ ಆಂತರಿಕ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಆಧ್ಯಾತ್ಮಿಕ ಸಂಘಟನೆಗಳಲ್ಲಿಯೂ ಅವರದೇ ಸೂತ್ರ, ಅನ್ಯೋನ್ಯ ಬಂಧ ಸಂಬಂಧಗಳು ಇರುತ್ತವೆ. ಅಸೂಯೆ, ದ್ವೇಷ, ಕೋಪ ಮತ್ತು ಅತಿಯಾದ ಆಸೆಗಳಿಂದ ಮನಸ್ಸನ್ನು ಮುಕ್ತಗೊಳಿಸಿ, ಪ್ರೀತಿ, ಕರುಣೆ ಮತ್ತು ಕ್ಷಮೆಯ ಗುಣಗಳನ್ನು ಬೆಳೆಸಿಕೊಳ್ಳುವುದು ಆಧ್ಯಾತ್ಮಿಕತೆಯ ಭಾಗವೇ ಆಗಿದೆ. ಇತರರೊಂದಿಗೆ ಉತ್ತಮ ಸಂಬಂಧ ಹೊಂದುವವನು ತನ್ನೊಳಗಿನ ಅಹಂಕಾರವನ್ನೂ ಕಡಿಮೆ ಮಾಡಿಕೊಳ್ಳಲು ಕಲಿಯುತ್ತಾನೆ.

ಬದುಕಿನ ಸಾರ್ಥಕತೆ ನಾವು ಎಷ್ಟು ಹಣ ಗಳಿಸಿದೆವು ಅಥವಾ ಎಷ್ಟು ಎತ್ತರಕ್ಕೆ ಬೆಳೆದೆವು ಎಂಬುದರಲ್ಲಿ ಮಾತ್ರ ಇಲ್ಲ. ನಮ್ಮಿಂದ ಎಷ್ಟು ಜನರಿಗೆ ಸಂತೋಷ ದೊರೆಯಿತು, ಎಷ್ಟು ಜನರ ಬದುಕಿನಲ್ಲಿ ಪ್ರೀತಿಯ ನೆನಪಾಗಿ ಉಳಿದೆವು ಎಂಬುದರಲ್ಲಿಯೂ ಇದೆ. ಆದ್ದರಿಂದ ಕೆಲಸಕ್ಕೆ ಸಮಯ ಕೊಡುವಷ್ಟೇ ಪ್ರಾಮುಖ್ಯತೆಯನ್ನು ಸಂಬಂಧಗಳಿಗೂ ಕೊಡೋಣ. ಆತ್ಮೀಯರೊಂದಿಗೆ ಮನಬಿಚ್ಚಿ ಮಾತನಾಡೋಣ; ನಗೋಣ, ನಗಿಸೋಣ. ನಾಳೆಯ ಚಿಂತೆಯಲ್ಲಿ ಇಂದಿನ ಸಂತೋಷವನ್ನು ಕಳೆದುಕೊಳ್ಳದೆ, ಒತ್ತಡವನ್ನು ಬದಿಗಿಟ್ಟು ಬದುಕಿನ ಸಣ್ಣಪುಟ್ಟ ಸುಖಗಳನ್ನು ಆಸ್ವಾದಿಸೋಣ. ಏಕೆಂದರೆ, ನೆಮ್ಮದಿಯಿಂದ ಬದುಕುವುದೂ ಒಂದು ಕಲೆ; ಆತ್ಮೀಯತೆಯಿಂದ ಬದುಕನ್ನು ಹಂಚಿಕೊಳ್ಳುವುದೂ ಒಂದು ಸುಂದರ ಸಾಧನೆ.

Dailyhunt
Disclaimer: This content has not been generated, created or edited by Dailyhunt. Publisher: Prajavani