ಬೆಂಗಳೂರಿನಲ್ಲಿ ಇತ್ತೀಚೆಗೆ 34 ವರ್ಷದ ಸಾಫ್ಟ್ವೇರ್ ಉದ್ಯೋಗಿಯೊಬ್ಬರು ಜಿಮ್ನಲ್ಲಿ ಕುಸಿದು ಮೃತಪಟ್ಟರು. ಮಂಡ್ಯದಲ್ಲಿ 40 ವರ್ಷದ ರೈತ ಹೊಲದಲ್ಲಿ ಕೆಲಸ ಮಾಡುವಾಗಲೇ ಹೃದಯಾಘಾತಕ್ಕೊಳಗಾದರು. ಇಂತಹ ವರದಿಗಳು ಇಂದು ಪತ್ರಿಕೆಯ ಒಳಪುಟದ ಸುದ್ದಿಯಾಗಿಯೂ ಉಳಿದಿಲ್ಲ; ಇವು ನಮ್ಮ ಮನೆಮನೆಯ ಕಥೆಗಳಾಗುತ್ತಿವೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ವರದಿ ಪ್ರಕಾರ, ಕರ್ನಾಟಕದಲ್ಲಿ ಹೃದ್ರೋಗದಿಂದ ಮರಣಪ್ರಮಾಣ ಕಳೆದ ದಶಕದಲ್ಲಿ ಶೇ. 25ರಷ್ಟು ಏರಿಕೆಯಾಗಿದೆ. ಆತಂಕಕಾರಿ ವಿಷಯವೆಂದರೆ, ಈಗ ಹೃದಯಾಘಾತ 60ರ ವಯಸ್ಸಿನ ಕಾಯಿಲೆಯಲ್ಲ. 30-45ರ ವಯೋಮಾನದವರಲ್ಲಿ ಇದು ಹೆಚ್ಚುತ್ತಿದೆ. ಬದಲಾದ ಜೀವನದ ಪರಿಸ್ಥಿತಿಗಳು, ಕೆಲಸದ ಒತ್ತಡಗಳು ಮತ್ತು ಆಹಾರಪದ್ಧತಿಗಳು ನಮ್ಮ ಹೃದಯದ ಮೇಲೆ ಹೆಚ್ಚಿನ ಒತ್ತಡವನ್ನು ಹಾಕಿವೆ. ಇಂದು ಹೃದಯಾಘಾತವು ಹಿರಿಯರ ಅಥವಾ ಶ್ರೀಮಂತರ ಕಾಯಿಲೆಯಾಗಿ ಉಳಿದಿಲ್ಲ, ಬದಲಿಗೆ ಸಮಾಜದ ಎಲ್ಲಾ ವಯಸ್ಸಿನ ಮತ್ತು ವರ್ಗದ ಜನರೂ ಇದಕ್ಕೆ ತುತ್ತಾಗುತ್ತಿದ್ದಾರೆ.
ಹೃದಯಾಘಾತವಾಗಬಲ್ಲ ಪರಿಸ್ಥಿತಿ ನಮ್ಮ ಹೃದಯಕ್ಕೆ ಬರಲು ಹಲವು ಕಾರಣಗಳಿವೆ. ಆ ಪರಿಸ್ಥಿತಿಗಳನ್ನು ನಿಯಂತ್ರಣದಲ್ಲಿಟ್ಟರೆ ಹೃದಯಾಘಾತವನ್ನು ಕಡಿಮೆಮಾಡಿಕೊಳ್ಳಬಹುದು. ಕರ್ನಾಟಕದಲ್ಲಿ ಪ್ರತಿ ನಾಲ್ವರಲ್ಲಿ ಒಬ್ಬರಿಗೆ ಅಧಿಕ ರಕ್ತದೊತ್ತಡವಿದೆ; ಪ್ರತಿ ಹತ್ತರಲ್ಲಿ ಒಬ್ಬರಿಗೆ ಮಧುಮೇಹವಿದೆ. ಎರಡೂ ಪತ್ತೆಯಾಗುವುದೇ ಇಲ್ಲ. ಇದು ಹೃದಯದ ರಕ್ತನಾಳಗಳನ್ನು ಸದ್ದಿಲ್ಲದೆ ಹಾಳು ಮಾಡುತ್ತದೆ. ಈ ಎರಡು ಪ್ರಮುಖ ಕಾಯಿಲೆಗಳನ್ನು ಪತ್ತೆ ಹಚ್ಚುವುದರಲ್ಲಿ ತಡವಾದರೆ ಮತ್ತು ಅವುಗಳಿಗೆ ಸೂಕ್ತ ಚಿಕಿತ್ಸೆಯನ್ನು ಶಿಸ್ತಿನಿಂದ ಪಡೆಯದಿದ್ದರೆ ಹೃದಯಾಘಾತ ಕಟ್ಟಿಟ್ಟ ಬುತ್ತಿ. ಕಳೆದ ಕೆಲವು ದಶಕಗಳಲ್ಲಿ ನಮ್ಮ ದೇಶದ ಆರ್ಥಿಕ ಸ್ಥಿತಿ ಬದಲಾದಂತೆ ನಮ್ಮ ಜೀವನಶೈಲಿ ಬದಲಾಗಿದೆ. ನಮ್ಮ ಆಹಾರದಲ್ಲಿ ಮೊಳಕೆಕಾಳು, ಸಿರಿಧಾನ್ಯ ಕಡಿಮೆಯಾಗಿ, ಉಪ್ಪು, ಎಣ್ಣೆ, ಸಕ್ಕರೆಗಳು ಹೆಚ್ಚಾಗಿವೆ. ದಿನಕ್ಕೆ 8-10 ಗಂಟೆ ಕುಳಿತು ದುಡಿಯುವ ಕೆಲಸ ಮಾಡುವ ಒಂದು ದೊಡ್ಡ ವರ್ಗ ಸೃಷ್ಟಿಯಾಗಿದೆ. ಕೆಲಸದ ಒತ್ತಡದ ಕಾರಣದಿಂದಾಗಿ 'ನಡಿಗೆ' ಇಲ್ಲದಿರುವುದು ಮತ್ತು ವ್ಯಾಯಾಮ ಮಾಡಲು ಸಮಯವಿಲ್ಲದವರ ಸಂಖ್ಯೆ ಜಾಸ್ತಿಯಾಗಿದೆ. ಹೊಲದಲ್ಲಿ ದುಡಿಯುವ ಒಂದು ದೊಡ್ಡ ವರ್ಗ ಜಾಗತೀಕರಣದಿಂದಾಗಿ ಕುಳಿತು ದುಡಿಯುವವರಾಗಿದ್ದಾರೆ. ಇದರಿಂದ ಹೃದಯದ ಅನಾರೋಗ್ಯಕ್ಕೆ ಕಾರಣವಾಗುವ ಬೊಜ್ಜಿನ ಸಮಸ್ಯೆಗಳು ಹೆಚ್ಚಾಗಿವೆ. ಮನಸ್ಸು ಮತ್ತು ದೇಹದ ಆಯಾಸವನ್ನು ತಣಿಸಲು ದಿನಕ್ಕೆ ಎಂಟು ಗಂಟೆಯ ಆರೋಗ್ಯಕರ ನಿದ್ದೆಯ ಅಗತ್ಯವಿರುತ್ತದೆ. ನಿದ್ರಾಹೀನತೆಯಿಂದ ಬಳಲುವವರು ಮತ್ತು ರಾತ್ರಿ ಪಾಳಿಯಲ್ಲಿ ದುಡಿಯುವವರು ಹೆಚ್ಚಾಗಿದ್ದಾರೆ. ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚಾಗಿರುವ ವಾಯುಮಾಲಿನ್ಯ ಮತ್ತು ಧೂಮಪಾನ ಕೂಡ ಹೃದಯಾಘಾತಗಳು ಹೆಚ್ಚಾಗುವಂತೆ ಮಾಡಿವೆ.
ಹೃದಯಾಘಾತದ ಲಕ್ಷಣಗಳು ಕೆಲವು ಸಂದರ್ಭಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಕಾಣಿಸಿಕೊಳ್ಳುವುದಿಲ್ಲ. ಮಧುಮೇಹವಿರುವ ರೋಗಿಗಳಲ್ಲಿ ಹೃದಯಾಘಾತವಾದಾಗ ಎದೆಭಾರ, ಎಡಭುಜ ಮತ್ತು ದವಡೆಗೆ ಹರಡುವ ನೋವು, ಸುಸ್ತು ಮತ್ತು ಬೆವರುವಿಕೆಗಳು ಕಾಣಿಸಿಕೊಳ್ಳಬಹುದು. ಈ ಲಕ್ಷಣಗಳನ್ನು ಎದೆಯುರಿ ಎಂದು ಭಾವಿಸಿ ಇದನ್ನು 'ಗ್ಯಾಸ್ಟ್ರಿಕ್' ಎಂದುಕೊಂಡು ಮನೆಮದ್ದು ಮಾಡುವವರು ಇದ್ದಾರೆ. ಈ ಕಾರಣದಿಂದಾಗಿ ವೈದ್ಯರನ್ನು ಕಂಡು ತಪಾಸಣೆ ಮಾಡಿಸಿಕೊಳ್ಳಲು ತಡಮಾಡುತ್ತಾರೆ. ರಾತ್ರಿ ನಿದ್ದೆಗೆ ಹೋದ ನಂತರ ಚಿರನಿದ್ದೆಗೆ ಜಾರಿದವರ ಸಂಖ್ಯೆಯೂ ಜಾಸ್ತಿಯಿದೆ.
ಹೃದಯಾಘಾತವಾಗದಂತೆ ಮುನ್ನೆಚ್ಚರಿಕೆ ವಹಿಸಲು ಜೀವನಶೈಲಿಯ ಬದಲಾವಣೆಗಳು ಅತ್ಯಗತ್ಯವಾಗಿವೆ. ಹೃದಯದ ಆರೈಕೆಗೆ ದುಬಾರಿ ಆಸ್ಪತ್ರೆ ಬೇಕಿಲ್ಲ, ಬದಲಿಗೆ ಮುನ್ನೆಚ್ಚರಿಕೆಗಳು ಮತ್ತು ಶಿಸ್ತುಬದ್ಧ ಜೀವನ ಅಗತ್ಯ. 30 ವರ್ಷ ದಾಟಿದ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ರಕ್ತದೊತ್ತಡ, ಸಕ್ಕರೆ, ಕೊಲೆಸ್ಟ್ರಾಲ್ ಗಳನ್ನು ತಪಾಸಣೆ ಮಾಡಿಸಿಕೊಳ್ಳಬೇಕು. ಇದು ಕೇವಲ 500 ರೂಪಾಯಿಯೊಳಗೆ ಆಗುವ ಕೆಲಸ. ನಾವು ಏನನ್ನು ಸೇವಿಸುತ್ತೇವೆ, ಅದು ನಮ್ಮ ಆರೋಗ್ಯದ ತಳಹದಿಯನ್ನು ನಿರ್ಮಿಸುತ್ತದೆ. ಉಪ್ಪು ದಿನಕ್ಕೆ ಒಂದು ಚಮಚಕ್ಕಿಂತ ಕಡಿಮೆ ಸೇವಿಸಬೇಕು; ಕರಿದ ಪದಾರ್ಥಗಳ ಬದಲಿಗೆ ಹಸಿರು ತರಕಾರಿಗಳನ್ನು ಹೆಚ್ಚು ಸೇವಿಸಬೇಕು. ರಾಗಿ, ಜೋಳ, ಸೊಪ್ಪು-ತರಕಾರಿ, ಮೀನು ಮುಂತಾದವುಗಳು ಹೃದಯದ ಆರೋಗ್ಯಕ್ಕೆ ಉತ್ತಮವಾಗಿವೆ. ಹೊರಗಿನಿಂದ ತರಿಸಿದ ಬಿರಿಯಾನಿ, ಪ್ಯಾಕೆಟ್ ಆಹಾರ ಮತ್ತು ತಂಪು ಪಾನೀಯಗಳಿಂದ ದೂರವಿದ್ದಷ್ಟು ಉತ್ತಮ.
ಹೃದಯವು ನಿಮಗಾಗಿ ಯಾವುದೇ ವಿರಾಮ ತೆಗೆದುಕೊಳ್ಳದೆ ಓಡುತ್ತಿರುತ್ತದೆ. ನಾವು ನಮ್ಮ ಹೃದಯದ ಅರೋಗ್ಯಕ್ಕಾಗಿ ದಿನಕ್ಕೆ ಕನಿಷ್ಠ ಅರ್ಥ ಗಂಟೆಯ ಸಮಯವನ್ನು ವ್ಯಾಯಾಮಕ್ಕಾಗಿ ಬಳಸಬೇಕು. ಬಿರುಸಾದ ನಡಿಗೆ ಅಥವಾ ಸೈಕಲ್ ಚಲಾಯಿಸುವುದರಿಂದ ಹೃದಯದ ಆರೋಗ್ಯವು ಉತ್ತಮವಾಗುವುದು. ಮಾನಸಿಕ ಒತ್ತಡವನ್ನು ತಣಿಸಲು ಯೋಗ ಮತ್ತು ಧ್ಯಾನದ ಕಡೆಗೆ ಗಮನ ಹರಿಸುವುದು ಹೆಚ್ಚು ಲಾಭದಾಯಕ. ಧೂಮಪಾನ ಮತ್ತು ತಂಬಾಕುವಿನ ಬಳಕೆಯು ಹೃದಯದ ಆರೋಗ್ಯಕ್ಕೆ ಹೆಚ್ಚು ಹಾನಿಕಾರಕ.
261006-51-97634496

