Dailyhunt Logo
  • Light mode
    Follow system
    Dark mode
    • Play Story
    • App Story
ಕ್ಷೇಮ-ಕುಶಲ: ನಿದ್ದೆ ಆರೋಗ್ಯದ ಸಹಜಸೂತ್ರ

ಕ್ಷೇಮ-ಕುಶಲ: ನಿದ್ದೆ ಆರೋಗ್ಯದ ಸಹಜಸೂತ್ರ

ಸ್ವಾಭಾವಿಕವಾಗಿ ಆಗುವ ಮಾನಸಿಕ ಹಾಗೂ ದೈಹಿಕ ಕ್ರಿಯೆಯೇ ನಿದ್ದೆ (ಅಥವಾ ನಿದ್ರೆ); ಅದರ ಮುಖ್ಯ ಲಕ್ಷಣ: ಪೂರ್ಣ ಪ್ರಜ್ಞೆ ಇರುವುದಕ್ಕೂ, ಪ್ರಜ್ಞೆ ಇಲ್ಲದಿರುವುದಕ್ಕೂ ಮಧ್ಯದಲ್ಲಿ ಇರುವ ಸ್ಥಿತಿ. ಈ ಸ್ಥಿತಿಯಲ್ಲಿ, ಇಂದ್ರಿಯಗಳು ಅತಿ ಕಡಿಮೆಯ ಮಟ್ಟದಲ್ಲಿ ಕೆಲಸ ಮಾಡುತ್ತವೆ.

ಸ್ನಾಯುಗಳು ಸಂಪೂರ್ಣವಾಗಿ
ಸಡಿಲವಾಗಿರುತ್ತವೆ. ಸುತ್ತಮುತ್ತಲಿನ ಆಗುಹೋಗುಗಳ ಪರಿವೆ ಇರುವುದಿಲ್ಲ. ಮನುಷ್ಯನು ಆರೋಗ್ಯಪೂರ್ಣವಾಗಿರಲು, ತಾನು ಪ್ರಜ್ಞಾವಸ್ಥೆಯಲ್ಲಿ ಚಟುವಟಿಕೆಯಿಂದ ಇರಲು ನಿದ್ರೆ ಅತ್ಯಗತ್ಯ.

ಹುಟ್ಟಿದ ಮಗು 16-20 ಗಂಟೆ ನಿದ್ದೆ ಮಾಡುತ್ತದೆ, ಬೆಳೆಯುವ ಮಕ್ಕಳು 9-10 ಗಂಟೆ, ಹದಿಹರಯದವರು 8 -9 ಗಂಟೆ, ವಯಸ್ಕರು 7-8 ಗಂಟೆ, ವೃದ್ಧರು 5-6 ಗಂಟೆ ಗಳಷ್ಟು ನಿದ್ದೆ ಮಾಡಬೇಕು.

ನಾವು ಸೇವಿಸಿದ ಆಹಾರ, ನೀರು, ಆಮ್ಲಜನಕ ದಿಂದ ಶಕ್ತಿ ಉತ್ಪತ್ತಿಯಾಗಿ, ಜೀವಕೋಶಗಳು ಸದಾ ಕೆಲಸಮಾಡುತ್ತವೆ. ಜೊತೆಗೆ, ಹೊಸ ಜೀವಕೋಶಗಳ ಉತ್ಪತ್ತಿ, ರಿಪೇರಿ, ಹಾಳಾದ ಕೋಶಗಳ ನಾಶ - ಇವೆಲ್ಲಾ ಕ್ರಿಯೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಈ ಎಲ್ಲ ಕ್ರಿಯೆಗಳಲ್ಲೂ ವಿವಿಧ ರೀತಿಯ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಹೀಗೆ ಎಚ್ಚರದ ಸ್ಥಿತಿಯಲ್ಲಿ ಕ್ರೋಡೀಕರಣಗೊಂಡಿರುವ ವಿಷಮಧಾತುಗಳು, ನಿದ್ರಾವಸ್ಥೆಯಲ್ಲಿ ವಿಸರ್ಜನೆಗೊಳ್ಳುವುದು. ನಾವು ನಿದ್ದೆ ಎಂದು ಕರೆಯುವ ಸಮಯದಲ್ಲಿ ಬಹಳಷ್ಟು ಕ್ರಿಯೆಗಳು ನಮಗೆ ಅರಿವಿಲ್ಲದೆಯೇ ನಡೆಯುತ್ತಿರುತ್ತವೆ. ಜೀವಕೋಶಗಳು ಪುನರ್ಜೀವಗೊಳ್ಳುವುದಕ್ಕೂ ನಿದ್ದೆಯ ಅಗತ್ಯವಿದೆ.

ನಿದ್ದೆಯ ಚಕ್ರವನ್ನು ಈ ರೀತಿಯಾಗಿ ವಿಂಗಡಿಸಬಹುದು: ಎಚ್ಚರಿಕೆ, ಲಘುನಿದ್ರೆ, ಗಾಢನಿದ್ರೆ, ಆರ್‌. ಇ. ಎಂ. ನಿದ್ರೆ, ಪುನರಾವರ್ತನೆ.

ಲಘುನಿದ್ರೆ

ನಿದ್ದೆಗೆ ಜಾರಿದ ನಂತರದ ಮೊದಲ ಹಂತ ಇದು. ಸ್ನಾಯು, ಮಾಂಸಖಂಡಗಳು, ಕೀಲುಗಳು ಸಡಿಲವಾಗುತ್ತಾ ಹೋಗುತ್ತವೆ; ಉಸಿರಾಟದ ವೇಗ ಕಡಿಮೆಯಾಗುತ್ತದೆ; ಹೃದಯದ ಬಡಿತ ಕಡಿಮೆಯಾಗುತ್ತದೆ; ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ.

ಮುಂದೆ ಬರುವುದು ಗಾಢನಿದ್ರೆಯ ಹಂತ. ತ್ಯಾಜ್ಯವಸ್ತುಗಳ ವಿಸರ್ಜನೆ ಮತ್ತು ಜೀವಕೋಶಗಳ ಪುನರ್ಜೀ ವನವಾಗದ ಸಮಯ, ಸ್ನಾಯುಗಳ ಜೀರ್ಣೋದ್ದಾರ ಬೆಳವಣಿಗೆ, ಜೊತೆಗೆ ನರಮಂಡಲದಲ್ಲಿ ದಿನಪೂರ್ತಿ ಸಂಗ್ರಹವಾಗುವ ತ್ಯಾಜ್ಯವಸ್ತುಗಳನ್ನು ದೇಹ ತೆಗೆದು, ಮರುದಿನದ ಚಟುವಟಿಕೆಗೆ ಅಣಿ ಮಾಡುವಂತಹ ಹಂತ. ಈ ಸ್ಥಿತಿಯಲ್ಲಿರುವ ಮನುಷ್ಯನನ್ನು ಎಚ್ಚರಗೊಳಿಸುವುದು ಕಷ್ಟ. ಜೊತೆಗೆ ಎಚ್ಚರಗೊಂಡರೂ ಅವರು ವಿಚಲಿತರಾಗಿರುತ್ತಾರೆ, ರಕ್ತದ ಒತ್ತಡ ಕಡಿಮೆಯಾಗಿರುತ್ತದೆ; ಸ್ನಾಯುಗಳಿಗೆ ರಕ್ತಪರಿಚಲನೆ ಜಾಸ್ತಿಯಾಗಿರುತ್ತದೆ, 'ಗ್ರೋಥ್' ಹಾರ್ಮೋನ್‌ಗಳು (ರಿಪೇರ್ ಹಾರ್ಮೋನ್) ಉತ್ಪತ್ತಿಯಾಗಿರುತ್ತವೆ, ಜೀವಕೋಶಗಳು ಪುನರುಜ್ಜೀವಗೊಳ್ಳುತ್ತವೆ.

ಆರ್‌. ಇ. ಎಂ. ನಿದ್ರೆ

* ಕನಸು, ನೆನಪುಗಳು, ಕಲಿಕೆಯಾಗುವುದು ಈ ಹಂತದಲ್ಲಿ.

* ವಯಸ್ಸಾದಂತೆ ಈ ಹಂತ ಕಡಿಮೆಯಾಗುತ್ತಾ ಹೋಗುತ್ತದೆ.

* ಉಸಿರಾಟ ತೀವ್ರಗತಿಯಲ್ಲಿರುತ್ತದೆ.

* ಹೃದಯದ ಬಡಿತ ಹೆಚ್ಚುತ್ತದೆ.

* ಮಿದುಳಿನ ಕ್ರಿಯೆ ಜಾಸ್ತಿಯಾಗುತ್ತದೆ.

* ಕನಸುಗಳು ಬೀಳುತ್ತವೆ.

* ಜನನಾಂಗಗಳಿಗೆ ರಕ್ತಪರಿಚಲನೆ ಹೆಚ್ಚಾಗುತ್ತದೆ. ಈ ರೀತಿಯ ಚಕ್ರಗಳು ಸುಮಾರು 4-5 ಬಾರಿ ಪ್ರತಿ ರಾತ್ರಿ ನಡೆಯಬಹುದು.

ಎನ್. ಆರ್. ಇ. ಎಂ.

* ಶೇ 80ರಷ್ಟು ನಿದ್ದೆ ಎನ್. ಆರ್. ಇ. ಎಂ

* ಉಸಿರಾಟ ನಿಧಾನಗತಿ.

* ಹೃದಯದ ಬಡಿತ ಕಡಿಮೆಯಾಗುತ್ತದೆ.

* ಬಿ. ಪಿ. ಕಡಿಮೆಯಾಗುತ್ತದೆ.

ಒಳ್ಳೆಯ ನಿದ್ರೆಗಾಗಿ

ಬೆಳಗಿನ ಹೊತ್ತು ಮಲಗುವುದನ್ನು 30 ನಿಮಿಷಗಳಿಗೆ ಸೀಮಿತಗೊಳಿಸುವುದು, ಕಾಫಿ, ಟಿ, ಕೋಲ, ಕೆಲವು ನೋವುನಿವಾರಕ ಮಾತ್ರೆಗಳು, ಚಾಕೊಲೇಟ್ ಮತ್ತು ನಿಕೋಟಿನ್ ಅಂಶವಿರುವ ಪದಾರ್ಥಗಳನ್ನು ಮಲಗುವ ಕೆಲವು ಗಂಟೆಗಳಿಗೂ ಮುಂಚೆ ಸೇವಿಸದಿರುವುದು. ನಿದ್ದೆಯ ಸಮಯಕ್ಕೂ ಮೊದಲು 10 ನಿಮಿಷದ ಲಘು ನಡಿಗೆಯನ್ನು ಮಾಡಬೇಕು. ಮದ್ಯವು ನಿದ್ದೆ ಬರುವಂತೆ ಮಾಡಿದರೂ, ಅನಂತರ ನಿದ್ದೆಯ ಗುಣಮಟ್ಟವನ್ನು ಕುಸಿಯುವಂತೆ ಮಾಡುತ್ತದೆ. ಮಸಾಲೆ, ಎಣ್ಣೆಯುಕ್ತ ಆಹಾರವನ್ನು ಸೇವಸದಿರುವುದು ಒಳ್ಳೆಯದು. ಬೆಳಗಿನ ಹೊತ್ತು ಸ್ವಾಭಾವಿಕವಾದ ಸೂರ್ಯನ ಬೆಳಕಿಗೆ ಒಡ್ಡಿಕೊಂಡಿರಬೇಕು. ಪ್ರತಿ ದಿನ ಬೆಳಗ್ಗೆ ವ್ಯಾಯಾಮದ ಅಭ್ಯಾಸ ಒಳ್ಳೆಯದು.

ಮಲಗುವ ಮುನ್ನ

ನಿಯಮಿತವಾದ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಉದಾಹರಣೆಗೆ; ಬೆಚ್ಚಗಿನ ನೀರಿನಲ್ಲಿ ಸ್ನಾನವನ್ನು ಮಾಡುವುದು, ಪುಸ್ತಕವನ್ನು ಓದುವುದು, ಲಘು ಸಂಗೀತವನ್ನು ಕೇಳುವುದು. ಮಲಗುವ ಕೋಣೆ ಶುಚಿಯಾಗಿರಬೇಕು; ಪ್ರಖರವಾದ ದೀಪ, ಶಬ್ದ, ಸೊಳ್ಳೆಗಳು ಇರದಂತೆ ನೋಡಿಕೊಳ್ಳಬೇಕು. ಟಿ.ವಿ. ಪರದೆ, ಮೊಬೈಲ್, ಲ್ಯಾಪ್‌ಟಾಪ್‌ಗಳನ್ನು ಮಲಗುವ ಮುನ್ನ ಉಪಯೋಗಿಸದಿರುವುದು ಉತ್ತಮ, ಮನಸ್ಸಿಗೆ ಹಿತ ನೀಡುವಂತಹ ಸಂಭಾಷಣೆಯು ಕಿವಿಗೆ ಬೀಳಬೇಕು. ಕೆಲವೊಮ್ಮೆ ಮಲಗಿದ 20-25 ನಿಮಿಷಗಳಲ್ಲಿ ನಿದ್ದೆ ಬರಲಿಲ್ಲವೆಂದರೆ, ಹಾಸಿಗೆಯಿಂದ ಎದ್ದು ಪುಸ್ತಕ ಓದುವುದು, ಸಂಗೀತ ಕೇಳುವುದುದನ್ನು ಮಾಡಬೇಕು. ಗಡಿಯಾರವನ್ನು ಪದೇ ಪದೇ ನೋಡುವುದನ್ನು ಬಿಡಬೇಕು. ರಾತ್ರಿ ಮಲಗುವ ಮತ್ತು ಬೆಳಗ್ಗೆ ಏಳುವ ಸಮಯ ಪ್ರತಿ ದಿನ ಒಂದೇ ಸಮಯದಲ್ಲಿರುವಂತೆ ನೋಡಿಕೊಳ್ಳಬೇಕು. ಮಲಗುವ 2-3 ಗಂಟೆಯ ಮುಂಚೆ ಊಟ ಮಾಡುವುದು ಒಳ್ಳೆಯದು. ಅತಿಯಾಗಿ ದ್ರವ್ಯಪದಾರ್ಥಗಳ ಸೇವನೆ ಬೇಡ.

ನಿದ್ರಾಹೀನತೆ

ಮಲಗಿದ 20-30 ನಿಮಿಷಗಳಲ್ಲಿ ನಿದ್ದೆಗೆ ಜಾರದಿರುವುದು ನಿದ್ರಾಹೀನತೆಯ ಲಕ್ಷಣ. ಈ ರೀತಿಯ ತೊಂದರೆ ಕೆಲವೊಮ್ಮೆ ಆಗುವುದು ಸಹಜ, ಗಾಬರಿಯಾದಾಗ, ಆತಂಕಗೊಂಡಿರುವಾಗ ಇದು ಸಹಜ. ಆದರೆ, ಇದು ತುಂಬಾ ಬಾರಿ ಆದಾಗ ಅದು ನಿದ್ರಾಹೀನತೆ. ಜೊತೆಗೆ, ಪದೇ ಪದೇ ಏಳುವುದು, ಬಹಳ ಬೇಗನೆ ಎಚ್ಚರಗೊಳ್ಳುವುದು, ಬೆಳಗ್ಗೆ ಎದ್ದಾಗ ತಾಜಾತನವಿಲ್ಲದಿರಿವುದು, ಬೆಳಗ್ಗಿನ ಹೊತ್ತು ಆಕಳಿಕೆ, ತೂಕಡಿಕೆ, ಸುಸ್ತು, ಆಲಸ್ಯ - ಇವು ನಿದ್ರಾಹೀನತೆಯಿಂದ ಆಗುವಂತಹವುಗಳು. ವಯಸ್ಸಾದಂತೆ ನಿದ್ದೆ ಕಡಿಮೆಯಾಗುವುದು ಸಹಜ, ದೇಹದ ಜೈವಿಕ ಗಡಿಯಾರ, ಹಾರ್ಮೋನ್‍ಗಳ ವ್ಯತ್ಯಾಸದಿಂದ ನಿದ್ದೆಯ ವಿನ್ಯಾಸದಲ್ಲಿ ಬದಲಾವಣೆ ಆಗುವುದು.

Dailyhunt
Disclaimer: This content has not been generated, created or edited by Dailyhunt. Publisher: Prajavani