ಬೆಂಗಳೂರು: ರಾಜ್ಯದಲ್ಲಿ ಬರ ಪರಿಹಾರಕ್ಕಾಗಿ ಮನವಿ ಸಲ್ಲಿಸಿ ಹಲವು ದಿನಗಳು ಕಳೆದಿವೆ. ಈ ಕೂಡಲೇ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಿ ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದಾರೆ.
'ರಾಜ್ಯದಲ್ಲಿನ ಬರದ ಸ್ಥಿತಿಯ ಬಗ್ಗೆ ಖುದ್ದಾಗಿ ವಿವರಿಸಲು ಭೇಟಿ ಸಮಯ ನೀಡಿ' ಎಂದೂ ನವೆಂಬರ್ 2ರ ಸೋಮವಾರ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.
'ರಾಜ್ಯದ 226 ತಾಲ್ಲೂಕುಗಳು ಬರ ಪೀಡಿತವಾಗಿದ್ದು, 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳಿಗೆ ವ್ಯಾಪಕ ಹಾನಿಯಾಗಿದೆ. ಇದರಿಂದ ₹62,481.88 ಕೋಟಿ ಅಂದಾಜು ಆರ್ಥಿಕ ನಷ್ಟ ಉಂಟಾಗಿದೆ. ಈ ಸಂಕಷ್ಟದಿಂದ ಲಕ್ಷಾಂತರ ರೈತ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದಕ್ಕೆ ತಕ್ಷಣದ ಪರಿಹಾರವಾಗಿ ₹20,585.73 ಕೋಟಿ ಬಿಡುಗಡೆ ಮಾಡಿ ಎಂದು ಈ ಹಿಂದೆಯೇ ಕೋರಲಾಗಿತ್ತು' ಎಂಬುದರ ಕುರಿತು ಪತ್ರದಲ್ಲಿ ಗಮನ ಸೆಳೆದಿದ್ದಾರೆ.
ಪರಿಹಾರ ₹22,400.58 ಕೋಟಿಗೆ ಹೆಚ್ಚಳ: 'ಈ ಮಧ್ಯೆ ಕೇಂದ್ರ ಸರ್ಕಾರವು ಬರ ಪರಿಹಾರ ನಿಯಮಗಳನ್ನು ಪರಿಷ್ಕರಿಸಿದೆ. ಪರಿಷ್ಕೃತ ನಿಯಮಗಳ ಆಧಾರದಲ್ಲಿ ರಾಜ್ಯಕ್ಕೆ ಈಗ ₹22,400.58 ಕೋಟಿ ನೀಡಬೇಕಾಗುತ್ತದೆ' ಎಂದು ಪತ್ರದಲ್ಲಿ ವಿವರಿಸಿದ್ದಾರೆ.
'ಕೃಷಿ ವೆಚ್ಚಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹವಾಮಾನ ವೈಪರೀತ್ಯಗಳಿಂದ ಉಂಟಾಗುತ್ತಿರುವ ವಿಪತ್ತುಗಳ ತೀವ್ರತೆಯೂ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ರೈತರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಹೋಲಿಸಿದರೆ ಪರಿಹಾರದ ಮೊತ್ತದಲ್ಲಿ ಮಾಡಿರುವ ಹೆಚ್ಚಳ ಸಾಕಾಗುವುದಿಲ್ಲ' ಎಂದಿದ್ದಾರೆ.
'ಪರಿಷ್ಕೃತ ಮಾನದಂಡಗಳ ಪ್ರಕಾರ ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ₹11,000, ನೀರಾವರಿ ಬೆಳೆಗಳಿಗೆ ₹22,000 ಹಾಗೂ ಬಹುವಾರ್ಷಿಕ ಬೆಳೆಗಳಿಗೆ ₹30,000 ಪರಿಹಾರ ನಿಗದಿಪಡಿಸಲಾಗಿದೆ. ಆದರೆ ಬೀಜ, ರಸಗೊಬ್ಬರ, ಕೃಷಿ ಕಾರ್ಮಿಕರ ಕೂಲಿ, ನೀರಾವರಿ ಮತ್ತು ಇತರ ಅಗತ್ಯ ಕೃಷಿ ಪರಿಕರಗಳಿಗೆ ರೈತರು ಮಾಡುತ್ತಿರುವ ನೈಜ ವೆಚ್ಚಕ್ಕೆ ಹೋಲಿಸಿದರೆ ಈ ಪರಿಹಾರ ಮೊತ್ತಗಳು ಸಾಕಾಗುವುದಿಲ್ಲ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
'2026ರ ಕೃಷಿ ವೆಚ್ಚ ಹಾಗೂ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಪರಿಹಾರ ಮಾನದಂಡಗಳು ಇರಬೇಕು. ರೈತರು ಬೆಳೆ ಬೆಳೆಯಲು ಮಾಡಿರುವ ನೈಜ ಖರ್ಚು ಹಾಗೂ ಅನುಭವಿಸಿರುವ ನಷ್ಟವನ್ನು ಸರಿಯಾಗಿ ಪರಿಗಣಿಸದ ಪರಿಹಾರ ವ್ಯವಸ್ಥೆಯಿಂದ ಅವರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಹೀಗಾಗಿ ಪರಿಹಾರ ನಿಗದಿ ಮಾನದಂಡವನ್ನು ಕೂಲಂಕಷವಾಗಿ ಪರಿಷ್ಕರಿಸಬೇಕು' ಎಂದು ಒತ್ತಾಯಿಸಿದ್ದಾರೆ.
ವಿಪತ್ತು ಪರಿಹಾರವು ಕೇವಲ ಸಾಂಕೇತಿಕ ನೆರವಿಗೆ ಸೀಮಿತವಾಗಬಾರದು. ಬೆಳೆ ನಷ್ಟದಿಂದ ರೈತರು ಚೇತರಿಸಿಕೊಳ್ಳಲು, ತಮ್ಮ ಜೀವನೋಪಾಯವನ್ನು ಮರಳಿ ಕಂಡುಕೊಳ್ಳಲು ಸಾಧ್ಯವಾಗುವಂತಿರಬೇಕು
ಜಿ.ಪರಮೇಶ್ವರ, ಉಪ ಮುಖ್ಯಮಂತ್ರಿ
261104-4-267582513

