ಕುಕನೂರು: ತಾಲ್ಲೂಕಿನ ಚಿಕೇನಕೊಪ್ಪ ಗ್ರಾಮದಲ್ಲಿ ಕಳೆದ ಮೂರು ದಶಕಗಳಿಂದ ನಿರಂತರವಾಗಿ ಗ್ರಾಮೀಣ ರಂಗಭೂಮಿ ಮತ್ತು ಸಾಂಸ್ಕೃತಿಕ ಬದುಕಿಗೆ ಜೀವ ತುಂಬುತ್ತಿರುವ ಅಪರೂಪದ ಕಲಾ ಸೇವಕನಾಗಿ ಸಂಗಪ್ಪ ಅಡಗಿಮನಿ ಗುರುತಿಸಿಕೊಂಡಿದ್ದಾರೆ.
ವೇದಿಕೆಯ ಹಿಂದೆ ನಿಂತು ಕಲಾವಿದರ ಮುಖಕ್ಕೆ ಬಣ್ಣ ಹಚ್ಚುವುದು ಮಾತ್ರವಲ್ಲದೇ ಕಲಾವಿದರಿಗೆ ಸೂಕ್ತವಾದ ವಸ್ತ್ರಾಲಂಕಾರ ಮಾಡುವ ಮೂಲಕವೂ ಅವರು ನಾಟಕಗಳಿಗೆ ಸಂಪೂರ್ಣ ರೂಪ ನೀಡುತ್ತಿದ್ದಾರೆ.
ಅವರ ಕೈಚಳಕವೇ ಇಂದು ಅನೇಕ ನಾಟಕಗಳ ಯಶಸ್ಸಿಗೆ ಅಡಿಪಾಯವಾಗಿದೆ. ಹೆಸರು ಬೆಳಕಿಗೆ ಬಾರದಿದ್ದರೂ, ವೇದಿಕೆಯ ಬೆಳಕು ಅವರ ಕಲೆಯ ಮೂಲಕವೇ ಕಂಗೊಳಿಸುತ್ತಿದೆ.
ಸಂಗಪ್ಪ ಅವರು ತಾಲೀಮು ಕೋಣೆಯಲ್ಲಿ ಕಲಾವಿದರಿಗೆ ನಾಟಕವನ್ನೂ ಕಲಿಸುತ್ತಾರೆ. ಅಡಗಿಮನಿ ಅವರ ಸೇವೆಯ ವಿಶೇಷತೆ ಎಂದರೆ, ಅವರು ಬಹುಪಾಲು ಸಂದರ್ಭಗಳಲ್ಲಿ ತಮ್ಮ ಸೇವೆಯನ್ನು ಉಚಿತವಾಗಿಯೇ ನೀಡುತ್ತಾರೆ. ಹಣಕ್ಕಿಂತ ಕಲೆಯ ಮೇಲಿನ ಪ್ರೀತಿ ಮತ್ತು ಸಮರ್ಪಣೆಯೇ ಅವರ ಪ್ರೇರಣೆ. ಅವರ ಈ ನಿಸ್ವಾರ್ಥ ಸೇವೆಯಿಂದ ಅನೇಕ ಯುವ ಕಲಾವಿದರು ವೇದಿಕೆಗೆ ಆತ್ಮವಿಶ್ವಾಸದಿಂದ ಪ್ರವೇಶಿಸುವಂತಾಗಿದೆ.
ಮೊಹರಂ ಹಬ್ಬದ ಹುಲಿವೇಷಕ್ಕೆ ಜೀವ ನೀಡಿದ ಕೈಗಳು: ಮೊಹರಂ ಸಂದರ್ಭದಲ್ಲಿ ಪ್ರದರ್ಶಿಸುವ ಹುಲಿವೇಷವು ಗ್ರಾಮೀಣ ಸಂಸ್ಕೃತಿಯ ಪ್ರಮುಖ ಆಕರ್ಷಣೆ. ಕಳೆದ 30 ವರ್ಷಗಳಿಂದ ನರಸಪ್ಪ ತೆಕ್ಕಲಕೋಟಿ ಹಾಗೂ ರಾಮಣ್ಣ ತೆಕ್ಕಲಕೋಟಿ ಸೇರಿದಂತೆ ಅನೇಕ ಹುಲಿವೇಷಧಾರಿಗಳಿಗೆ ಬಣ್ಣ ಹಚ್ಚುವ ಕೆಲಸವನ್ನು ಸಂಗಪ್ಪ ಅಡಗಿಮನಿ ನಿರಂತರವಾಗಿ ಮಾಡುತ್ತಿದ್ದಾರೆ. ಅವರ ಕೈಯಿಂದ ಬಣ್ಣ ಹಚ್ಚಿಸಿಕೊಂಡ ಹುಲಿವೇಷಧಾರಿಗಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.
50ಕ್ಕೂ ಹೆಚ್ಚು ನಾಟಕಗಳಲ್ಲಿ ನಟನೆಯ ಅನುಭವ: ಸಂಗಪ್ಪ ಅವರು ಕೇವಲ ಮೇಕಪ್ ಕಲಾವಿದ ಮಾತ್ರವಲ್ಲ, ಸ್ವತಃ ರಂಗಭೂಮಿ ಕಲಾವಿದರೂ ಹೌದು. ಅವರು 50ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದು, ಅದರಲ್ಲಿ 30ಕ್ಕೂ ಹೆಚ್ಚು ಬಾರಿ ಸ್ತ್ರೀಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ಅವರ ವಿಶಿಷ್ಟ ಪ್ರತಿಭೆಗೆ ಸಾಕ್ಷಿಯಾಗಿದೆ. ರಂಗಭೂಮಿಯ ಪ್ರತಿಯೊಂದು ಪಾತ್ರವನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ತಾವು ತಯಾರಾಗುವ ಅವರ ಶೈಲಿ ಯುವ ಕಲಾವಿದರಿಗೆ ಮಾದರಿಯಾಗಿದೆ.
ಶಾಲಾ ಮಕ್ಕಳ ಪ್ರತಿಭೆಗೆ ವೇದಿಕೆ ಸಜ್ಜುಗೊಳಿಸುವ ಸೇವೆಯನ್ನೂ ಮಾಡುತ್ತಾರೆ.
ಅಡಗಿಮನಿ ಅವರ ಕಲಾ ಪಯಣಕ್ಕೆ ಚಿಕೇನಕೊಪ್ಪದ ಚೆನ್ನವೀರ ಶರಣರ ಆಶೀರ್ವಾದ ಇದೆ. ಜೊತೆಗೆ ಅವರ ಚಿಕ್ಕಪ್ಪ ಶಂಕ್ರಪ್ಪ ಹೊಸಮನಿ ಪ್ರಮುಖ ಪ್ರೇರಣೆಯಾಗಿದ್ದಾರೆ.ಇದುವರೆಗೆ 2000ಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಲ್ಲಿ ಕಲಾವಿದರಿಗೆ ಬಣ್ಣ ಹಚ್ಚಿರುವುದು ಅವರ ದೀರ್ಘಕಾಲದ ಸಮರ್ಪಣೆಗೆ ಸಾಕ್ಷಿಯಾಗಿದೆ.
ಸಂಗಪ್ಪ ಅಡಗಿಮನಿ, ಮೇಕಪ್ ಮತ್ತು ವಸ್ತ್ರಾಲಂಕಾರ ಮಾಸ್ತರ್ನನಗೆ ಹಣಕ್ಕಿಂತ ಕಲೆಯ ಮೇಲಿನ ಪ್ರೀತಿ ದೊಡ್ಡದು. ವೇದಿಕೆಯ ಮೇಲೆ ಕಲಾವಿದ ಚೆನ್ನಾಗಿ ಕಾಣಿಸಿದರೆ ನನಗೆ ಅದೇ ಸಂತೋಷ. ಕಲಾವಿದರಿಗೆ ಬಣ್ಣ ಹಚ್ಚುವುದು ನನಗೆ ಕೇವಲ ಕೆಲಸವಲ್ಲ, ಅದು ಸೇವೆ
