ಕುಕನೂರು: ತಾಲ್ಲೂಕಿನ ಯುವಜನರು ಹಾಗೂ ಕ್ರೀಡಾಪಟುಗಳ ಬಹುದಿನಗಳ ಬೇಡಿಕೆಯಾಗಿರುವ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಇದೀಗ ಮತ್ತಷ್ಟು ಬಲ ಬಂದಿದೆ. ಕಳೆದ ಆಯವ್ಯಯದಲ್ಲಿ ಸರ್ಕಾರ ₹2 ಕೋಟಿ ಅನುದಾನ ಮೀಸಲಿಟ್ಟಿದ್ದು, ಇದೀಗ ಉನ್ನತ ಶಿಕ್ಷಣ ಇಲಾಖೆಯಿಂದ ಹೆಚ್ಚುವರಿಯಾಗಿ ₹9 ಕೋಟಿ ಅನುದಾನ ಹಾಗೂ ಯಲಬುರ್ಗಾ ನಗರದಲ್ಲಿ ₹3 ಕೋಟಿ ವೆಚ್ಚದಲ್ಲಿ ಡಿಜಿಟಲ್ ಗ್ರಂಥಾಲಯ ಒದಗಿಸುವ ನಿಟ್ಟಿನಲ್ಲಿ ಸಚಿವ ಬಸವರಾಜ ರಾಯರಡ್ಡಿ ಅವರು ಪ್ರಯತ್ನ ಫಲಪ್ರದವಾಗಿದೆ.
ತಾಲ್ಲೂಕಿನಲ್ಲಿ ಕ್ರಿಕೆಟ್, ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುವ ಯುವಕರ ಸಂಖ್ಯೆ ಹೆಚ್ಚಿದೆ. ಆದರೆ ಸುಸಜ್ಜಿತ ಮೈದಾನ, ತರಬೇತಿ ವ್ಯವಸ್ಥೆ ಹಾಗೂ ಅಗತ್ಯ ಮೂಲಸೌಕರ್ಯಗಳ ಕೊರತೆಯಿಂದ ಕ್ರೀಡಾಪಟುಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಾಲ್ಲೂಕು ಮಟ್ಟದ ಕ್ರೀಡಾಂಗಣ ನಿರ್ಮಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿತ್ತು. ಇದೀಗ ಹೆಚ್ಚುವರಿ ಅನುದಾನದ ಪ್ರಯತ್ನದಿಂದ ಈ ಬೇಡಿಕೆ ಸಾಕಾರಗೊಳ್ಳುವ ಆಶಾಭಾವನೆ ಮೂಡಿದೆ.
ಯೋಜನೆ ಅನುಷ್ಠಾನಗೊಂಡರೆ ಸುಸಜ್ಜಿತ ಕ್ರೀಡಾಂಗಣ, ಓಟದ ಟ್ರ್ಯಾಕ್ ಸೇರಿದಂತೆ ಅಗತ್ಯ ಕ್ರೀಡಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅವಕಾಶವಿದೆ. ಇದರಿಂದ ಗ್ರಾಮೀಣ ಭಾಗದ ಪ್ರತಿಭಾವಂತ ಕ್ರೀಡಾಪಟುಗಳಿಗೆ ತರಬೇತಿ ಪಡೆಯಲು ಹಾಗೂ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅನುಕೂಲವಾಗಲಿದೆ. ಯುವಜನರಲ್ಲಿ ಕ್ರೀಡಾಸಕ್ತಿ ಬೆಳೆಸುವುದರ ಜತೆಗೆ ಸ್ಥಳೀಯ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿದಂತಾಗಲಿದೆ.
261104-35-1759306000

