Dailyhunt Logo
  • Light mode
    Follow system
    Dark mode
    • Play Story
    • App Story
'ಕುಲುಮೆ' ಬರೆದಿದ್ದು ಏಕೆ? ತಮ್ಮ ಆತ್ಮಕಥೆಯ ಅಂತರಂಗ ಬಿಚ್ಚಿಟ್ಟ ರಹಮತ್ ತರೀಕೆರೆ

'ಕುಲುಮೆ' ಬರೆದಿದ್ದು ಏಕೆ? ತಮ್ಮ ಆತ್ಮಕಥೆಯ ಅಂತರಂಗ ಬಿಚ್ಚಿಟ್ಟ ರಹಮತ್ ತರೀಕೆರೆ

ರಹಮತ್ ತರೀಕೆರೆ ಅವರ ಬಾಳಕಥನ 'ಕುಲುಮೆ'. ಕುಟುಂಬ, ಬೀದಿ, ಊರು, ಸೀಮೆಗಳನ್ನು ಪ್ರತಿಫಲಿಸುವ ಕಥನವಿದು. ಇವರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯವರು. ಬದುಕು ಕಲಿಸಿದ ಪಾಠ, ತಾವು ಕಂಡ ಜೀವನವನ್ನು 'ಕುಲುಮೆ'ಯಲ್ಲಿ ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಈ ಆತ್ಮಕಥೆ ಬರೆಯಬೇಕಿನಿಸಿದ್ದು ಏಕೆ ಎನ್ನುವ ಬಗ್ಗೆ 'ಪ್ರಜಾವಾಣಿ ಡಿಜಿಟಲ್‌' ಜತೆಗೆ ಹಂಚಿಕೊಂಡಿದ್ದು ಹೀಗೆ...

ನನ್ನ ತಂದೆಯ ಕಸುಬು ಕಮ್ಮಾರಿಕೆಯಾಗಿತ್ತು. ಹೀಗಾಗಿ ಕುಲುಮೆ ನಮ್ಮನ್ನು ಆರ್ಥಿಕವಾಗಿ ರೂಪಿಸಿತ್ತು. ತಂದೆಯ ವರ್ಕ್‌ಶಾಪ್‌ಗೆ ಕಬ್ಬಿಣದ ಕೆಲಸ ಮಾಡಿಸಲು ರೈತರು ಸೇರಿದಂತೆ ಎಲ್ಲಾ ತರಹದ, ಎಲ್ಲಾ ಸಮುದಾಯಗಳ ಜನ ಬರುತ್ತಿದ್ದರು. ಅದೊಂದು ರೀತಿಯ 'ಮೀಟಿಂಗ್ ಪಾಯಿಂಟ್‌' ಆಗಿತ್ತು.

ಅಲ್ಲಿ, ಕಬ್ಬಿಣದ ಕೆಲಸ ಆಗುವವರೆಗೂ ಬಂದವರು ಮಾತನಾಡುತ್ತಿದ್ದರು. ತಮ್ಮ ಜೀವನದ ಅನುಭವಗಳನ್ನು ಅಪ್ಪನೊಂದಿಗೆ ಹಂಚಿಕೊಳ್ಳುತ್ತಿದ್ದರು. ಹೀಗಾಗಿ ವಿಭಿನ್ನ ಅನುಭವಗಳು ಸೇರುವ ಜಾಗವೂ ಅದಾಗಿತ್ತು. ಅವೆಲ್ಲ ಮಾತಿಗೂ ನಾನು ಕಿವಿಯಾಗುತ್ತಿದ್ದೆ.

ನನ್ನ ಅಪ್ಪ ಕನ್ನಡ ಮಾತ್ರ ಮಾತನಾಡುತ್ತಿದ್ದರು. ಹೀಗಾಗಿ ಆ ಜಗ ನನ್ನ ಪಾಲಿಗೆ ಜಾತ್ಯತೀತ ಸ್ಥಳವಾಗಿತ್ತು. ಅದನ್ನೇ ನಾನು ದೊಡ್ಡವನಾದ ಮೇಲೆ ಸಂವಿಧಾನದಲ್ಲಿ ಓದಿದೆ. ಹೀಗಾಗಿ ನನ್ನ ಕಲಿಕೆಯ ಆರಂಭ ಆಗಿದ್ದು ನಮ್ಮ ಬೀದಿಯಿಂದ... ಕುಲುಮೆಯಿಂದ. ಏಕೆಂದರೆ ನಮ್ಮ ಬೀದಿಯಲ್ಲಿ ಎಲ್ಲಾ ಜಾತಿಯ, ಎಲ್ಲಾ ಕಸುಬಿನ ಬಡ ಜನರಿದ್ದರು. ಅವರು ಜಗಳವನ್ನೂ ಮಾಡುತ್ತಿದ್ದರು. ಆದರೆ ಹಬ್ಬ ಬಂದಾಗ ಒಟ್ಟಾಗಿ ಭಾಗವಹಿಸುತ್ತಿದ್ದರು. ತಾವು ತಯಾರಿಸಿದ ಆಹಾರಗಳನ್ನು, ಸುಖ- ದುಃಖ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದರು.

ಇವೆಲ್ಲವೂ ನನ್ನ 'ಕುಲುಮೆ'ಯಲ್ಲಿದೆ. ಆ ಬೀದಿಗಳ ಬಗ್ಗೆಯೂ ಉಲ್ಲೇಖಿಸಿದ್ದೇನೆ.

ಕೆಳ ಮಧ್ಯಮ ವರ್ಗದ ಜನರಿರುವ ಪ್ರದೇಶದಲ್ಲಿ ನಾನು ಬೆಳೆದಿದ್ದು. ರೈತರು, ಕೂಲಿ ಕಾರ್ಮಿಕರು, ಪೊಲೀಸರು, ಫಾರೆಸ್ಟ್‌ ಗಾರ್ಡ್‌ಗಳು ತಮ್ಮದೇ ಭಾಷೆಯಲ್ಲಿ, ಅನುಭವಗಳನ್ನು ಅಪ್ಪನೊಂದಿಗೆ ಹಂಚಿಕೊಳ್ಳುತ್ತಿದ್ದರು. ಹೀಗಾಗಿ ಕನ್ನಡ ಭಾಷೆಯ ಬಗ್ಗೆ ನನಗೊಂದು ಒಲವನ್ನು ಹುಟ್ಟಿಸಿದ ಜಾಗ ಅದು.

ಅಲ್ಲಿ ಇಂದಿರಾ ಗಾಂಧಿಯಿಂದ ಹಿಡಿದು ಗಣೇಶ್ ಬೀಡಿವರೆಗೆ ಎಲ್ಲಾ ವಿಚಾರಗಳು ಚರ್ಚೆ ಆಗುತ್ತಿತ್ತು. ಯಾವ ಬೀಡಿ ಆರೋಗ್ಯಕ್ಕೆ ಒಳ್ಳೆಯದು ಎಂದು ಮಾತು ಶುರು ಮಾಡಿದರೆ, ಇಂದಿರಾ ಗಾಂಧಿ ಆಳ್ವಿಕೆ ಹೇಗಿದೆ ಎನ್ನುವುದನ್ನೂ ಚರ್ಚಿಸುತ್ತಿದ್ದರು, ಹೀಗಾಗಿ ಅದೊಂಥರ 'ಸಂಸತ್ತು' ಆಗಿತ್ತು.

ಈ ಪುಸ್ತಕ ಹುಟ್ಟಲು ಮೊದಲ ಕಾರಣ, ನಮ್ಮ ಕುಟುಂಬವನ್ನು ಸಾಕಿದ್ದು 'ಕುಲುಮೆ. ಎರಡನೆಯದು, ಜಾತ್ಯತೀತ ಪಾಠವನ್ನು ಕಲಿಸಿದ್ದು ಮತ್ತು ನಮ್ಮ ತಾಲ್ಲೂಕಿನ ಕನ್ನಡವನ್ನು ನನ್ನ ಕಿವಿಯ ಮೇಲೆ ಬೀಳಿಸಿದ ಜಾಗವದು. ಅಲ್ಲದೆ, ತಂದೆ ಕಬ್ಬಿಣವನ್ನು ಬೆಂಕಿಯ ಮೇಲೆ ಎಸೆಯುತ್ತಿದ್ದರು, ಅದನ್ನು ಕಾಸಿ, ಬಡಿದು ಕತ್ತಿ, ಕೊಡಲಿ ಹೀಗೆ ಯಾವುದೋ ಒಂದು ನಿರ್ದಿಷ್ಟ ರೂಪ ಕೊಡುತ್ತಿದ್ದರು. ಅದು ನನಗೆ ಸೃಜನಶೀಲತೆಯ ರೂಪಕದ ರೀತಿ ಕಾಣಿಸುತ್ತಿತ್ತು. ಅದೇ ರೀತಿ ನಮ್ಮ ಅನುಭವ, ಯೋಚನೆ, ಕಲ್ಪನೆ ಎಲ್ಲಾ ಕರಗಿ ಒಂದು ಸಾಹಿತ್ಯ ಹುಟ್ಟುತ್ತದೆ. ಅದೂ ರೂಪಾಂತರವೇ. ಅದರ ಕುರಿತಾಗಿ ಬರೆದ ಪುಸ್ತಕಕ್ಕೆ 'ಕುಲುಮೆ' ಎಂದು ಹೆಸರಿಟ್ಟೆ.

ಆರಂಭದ ದಿನಗಳಲ್ಲಿ ಆ ಕಸುಬಿನ ಜತೆ ಗುರುತಿಸಿಕೊಳ್ಳುವುದಕ್ಕೆ, ನನ್ನ ಅಪ್ಪ ಕುಲುಮೆ ಕೆಲಸ ಮಾಡುತ್ತಾರೆ ಎನ್ನುವುದಕ್ಕೇ ನಾಚಿಕೆಯಾಗುತ್ತಿತ್ತು. ಆದರೆ ನಾನು ಹೈಸ್ಕೂಲ್‌ನಲ್ಲಿ ಇದ್ದಾಗ ನನ್ನ ತಾಯಿ, ಆ ಕಸುಬನ್ನು ಸಂಭ್ರಮಿಸಬೇಕು, ಅದು ನಮ್ಮನ್ನು ರೂಪಿಸಿದ ಐತಿಹಾಸಿಕ ಶಕ್ತಿ, ಅದನ್ನು ಗೌರವಿಸಬೇಕು ಎಂದು ತಿದ್ದಿದರು. ಬೇರೆ ಹುಡುಗರ ಜತೆ ಬೆರೆಯುವಾಗ ಅಂತರ ಕಾಯ್ದುಕೊಳ್ಳುತ್ತಿದ್ದೆ, ಹಿಂಜರಿಯುತ್ತಿದ್ದೆ. ಆಮೇಲೆ ಅಮ್ಮನ ಮಾತುಗಳಿಂದ ನನಗೆ ಮನವರಿಕೆಯಾಗಿತ್ತು.

ಇನ್ನೊಂದು ಮಹತ್ವದ ಕಾರಣ ಎಂದರೆ,

ಈಗೆಲ್ಲಾ ಇಸ್ಲಾಮೋಫೋಬಿಕ್ ಆಗಿರುವಂತಹ ವಾತಾವರಣ ನಿರ್ಮಾಣವಾಗಿದೆ. ಅದು ಬೇರೆಯವರ ಜೀವನ, ಬೇರೆ ಧರ್ಮ, ನಮ್ಮದಲ್ಲ ಎನ್ನುವ ರೀತಿ ಬದಲಾಗಿದೆ. ಈ 'ಅದರಿಂಗ್' ಎನ್ನುವುದು ದೊಡ್ಡ ಪ್ರಮಾಣದಲ್ಲೇ ನಡೆಯುತ್ತಿದೆ. ಆದರೆ, ಈ ಆತ್ಮಕಥೆ ಬರೆದ ಮೇಲೆ ಬಹಳ ಜನ ಹೇಳಿದ್ದು, 'ಏನು ಮಾರಾಯ, ನಿಮ್ಮ ಭಾಷೆ ಉರ್ದು, ನೀವು ಮುಸ್ಲಿಂ ಅನ್ನೋದು ಬಿಟ್ಟರೆ ನಿಮ್ಮ ಜೀವನ ಎಲ್ಲಾ ನಮ್ಮ ರೀತಿಯೇ ಇದೆ' ಎಂದು.

ಧರ್ಮ, ಭಾಷೆ ಬೇರೆಯದ್ದೇ ಆದರೂ, ಕೊನೆಗೆ ದುಡಿಯುವವರ ಜೀವನ, ಅವರ ನೋವು, ನಲಿವು ಒಂದೇ ರೀತಿ ಇರುತ್ತದೆ. ನಾವೆಲ್ಲರೂ ಮಾನವ ಸಮುದಾಯಕ್ಕೆ ಸೇರಿದವರು. ಸಂಸ್ಕೃತಿಯಲ್ಲಿ ವಿಭಿನ್ನತೆ ಇದ್ದರೂ ನೋವುಗಳು ಮತ್ತು ಸುಖಗಳು ಒಂದೇ. 'ಅದರಿಂಗ್' ಮಾಡುವುದರಲ್ಲಿ ಅರ್ಥವೇ ಇಲ್ಲ. ರಾಜಕೀಯವಾಗಿ ಬೇರೆಯಾಗಿ ನೋಡಿದರೂ, ನಿಜ ಜೀವನ ಹಾಗಲ್ಲ ಎನ್ನುವುದನ್ನು ತೋರಿಸಬೇಕಿತ್ತು. ಅಲ್ಲಿ 'ನಾನು' ಎನ್ನುವುದಕ್ಕಿಂತ ನನ್ನನ್ನು ರೂಪಿಸಿದ ಆ ಜಗತ್ತು, ಜೀವನ, ಸಮುದಾಯದ ಬದುಕು ಮಹತ್ವ ಪಡೆದುಕೊಳ್ಳಬೇಕು ಎನ್ನುವ ಕಾರಣಕ್ಕೆ 'ಕುಲುಮೆ' ಬರೆದಿದ್ದು.

ನನ್ನ ಸಮೂಹ -ಎಲ್ಲ ಜಾತಿಗಳ, ಎಲ್ಲ ಧರ್ಮಗಳಿರುವ ಸಮೂಹ. ಅದು ನನ್ನನ್ನು ಮತ್ತು ನನ್ನಂಥವರನ್ನು ಹೇಗೆ ರೂಪಿಸಿತು ಎನ್ನುವುದನ್ನು ತೋರಿಸಲು ಪುಸ್ತಕ ಬರೆಯಲು ಪ್ರಯತ್ನಿಸಿದೆ. ಒಬ್ಬನೇ ವ್ಯಕ್ತಿ ನಾಯಕನಾಗಬಾರದು. ಆ ಸಮುದಾಯದ ಜೀವನವನ್ನು ಬೆಳಕಿಗೆ ತರುವಲ್ಲಿ ನಾನು ಧ್ವನಿಯಾದೆ ಅಷ್ಟೇ.

ಬಡತನದಿಂದ ಬಂದವರೆಲ್ಲ ಒಂದು ರೀತಿಯ ಗೋಳಿನ ಧ್ವನಿಯಲ್ಲಿ ಬರೆಯುವುದೇ ಹೆಚ್ಚು. ಇದರಿಂದ ಜೀವನದ ಬೇರೆ ಬೇರೆ ರೀತಿಯ ಮೋಜು, ಸೃಜನಶೀಲತೆ ಕಳೆದುಹೋಗಿಬಿಡುತ್ತದೆ. ಹೀಗಾಗಿ ನಾನು ಅವನ್ನೇ ಮುಂದಿಟ್ಟು, ಜೀವನದ ಕಥೆಗೆ ಹಾಸ್ಯದ ರೂಪ ನೀಡಲು ಪ್ರಯತ್ನಿಸಿದೆ. ಹಾಸ್ಯ ಎನ್ನುವುದು ಕನ್ನಡ ಸಾಹಿತ್ಯದಲ್ಲಿ ನಗಿಸಲು ಇರುವಂತಹ ಒಂದು ಮಾಧ್ಯಮ ಅಲ್ಲ. ಅದೊಂದು ದೃಷ್ಟಿಕೋನ. ಅಧೀನ ದೃಷ್ಟಿಕೋನ ಎಂತಲೂ ಹೇಳಬಹುದು. ಏಕೆಂದರೆ ಅದು ನೋಡಲು ಕಣ್ಣಿಗೆ ಕಾಣದಿರುವ ದೃಷ್ಟಿಕೋನ. ಅದೇ ಕಾರಣಕ್ಕೆ ನನ್ನ ಜೀವನವನ್ನು ಚಿತ್ರಿಸಲು ನಾನು ಹಾಸ್ಯವನ್ನು ಬಳಸಲು ಪ್ರಯತ್ನಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani