ಬೆಂಗಳೂರು: ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಮತ್ತಿಗಟ್ಟಿ ಗ್ರಾಮದ ಕೃಷಿಕರಾದ ಈಶ್ವರಗೌಡ ಪಾಟೀಲ ಅವರು ಸಿರಿಧಾನ್ಯ ತಳಿಗಳ ಸಂರಕ್ಷಣೆ ಮತ್ತು 'ಗುಳಿ ರಾಗಿ' ಕೃಷಿ ಪದ್ಧತಿಯ ಪ್ರಚಾರಕ್ಕಾಗಿ ಭಾರತ ಸರ್ಕಾರದ ಸಸ್ಯ ತಳಿ ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಪ್ರಾಧಿಕಾರ (PPV&FRA) ನೀಡುವ ಪ್ರತಿಷ್ಠಿತ 'ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ' (Plant Genome Saviour Farmer Reward) ಗೆ ಭಾಜನರಾಗಿದ್ದಾರೆ.
ಪ್ರಶಸ್ತಿಯು ₹1 ಲಕ್ಷ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ನವೆಂಬರ್ 12 ರಂದು ನವದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಮರೆತುಹೋಗುತ್ತಿದ್ದ ಸಾಂಪ್ರದಾಯಿಕ 'ಗುಳಿ ರಾಗಿ' ಪದ್ಧತಿಯನ್ನು ಪುನರುಜ್ಜೀವನಗೊಳಿಸಿ ಪ್ರಚಾರ ಮಾಡುತ್ತಿರುವ ಈಶ್ವರಗೌಡ ಅವರ ಜಮೀನಿಗೆ ಪ್ರತಿ ವರ್ಷ ವಿವಿಧ ರಾಜ್ಯಗಳ ನೂರಾರು ರೈತರು ತರಬೇತಿಗಾಗಿ ಭೇಟಿ ನೀಡುತ್ತಾರೆ. ಹವಾಮಾನ ಬದಲಾವಣೆಯ ಈ ಸಂದರ್ಭದಲ್ಲಿ ಸಿರಿಧಾನ್ಯಗಳು ರೈತರಿಗೆ ಉತ್ತಮ ಪರ್ಯಾಯ. ಈ ಪ್ರಶಸ್ತಿಯು ಇನ್ನಷ್ಟು ರೈತರನ್ನು ಸಿರಿಧಾನ್ಯ ಕೃಷಿಯತ್ತ ಪ್ರೇರೇಪಿಸಲಿ ಎಂದು ಲೇಖಕ ಮಲ್ಲಿಕಾರ್ಜುನ ಹೊಸಪಾಳ್ಯ ತಿಳಿಸಿದ್ದಾರೆ.

