ಕುಶಾಲನಗರ: ಪಟ್ಟಣದ ರೈತ ಭವನದಲ್ಲಿ ಆರಂಭಿಸಿರುವ ಕೋವಿಡ್ ಲಸಿಕಾ ಕೇಂದ್ರದ ಆವರಣದಲ್ಲಿ ಗುರುವಾರ ಜನಸಂದಣಿ ಕಂಡು ಬಂತು.
ವಿವಿಧೆಡೆಗಳಿಂದ ಕೋವಿಡ್ ಲಸಿಕೆ ಪಡೆಯಲು ಆಗಮಿಸಿದ ಜನರು, ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಪರಸ್ಪರ ಅಂತರ ಕಾಯ್ದುಕೊಳ್ಳದೆ ಗುಂಪಾಗಿ ಕೇಂದ್ರದ ಮುಂಭಾಗ ಜಮಾಯಿಸಿದ್ದರು.
ಜನರು ಬೆಳಿಗ್ಗೆಯೇ ಲಸಿಕೆ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದರು. ಕೊರೊನಾ ವಾರಿಯರ್ಸ್ ಮತ್ತು ಅಂಗವಿಕಲರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಯಿತು.
ಲಸಿಕೆ ಪಡೆಯಲು ಗುರುವಾರ 500ಕ್ಕೂ ಹೆಚ್ಚು ಮಂದಿ ಬಂದಿದ್ದರು. 300 ಜನರಿಗೆ ಲಸಿಕೆ ನೀಡಲು ನಿಗದಿಯಾಗಿದ್ದ ಕಾರಣ ಬೆಳಿಗ್ಗೆಯಿಂದ ಸಂಜೆವರೆಗೂ ಕಾದುನಿಂತ ಬಹುತೇಕ ಜನರು ಲಸಿಕೆ ಸಿಗದೆ ಮನೆಗಳಿಗೆ ಹಿಂತಿರುಗಿದರು.
150 ಮಂದಿಗೆ ಕೋವ್ಯಾಕ್ಸಿನ್ ಎರಡನೇ ಡೋಸ್ ಅನ್ನು ಮತ್ತು 150 ಮಂದಿಗೆ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ನೀಡಲಾಯಿತು.
ಕೋವಿಡ್ ಕುರಿತ ಎಲ್ಲಾ ಲೇಟೆಸ್ಟ್ ಅಪ್‌ಡೇಟ್ಸ್ ಓದಿ
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ.ಶಾಂತಿ, ಇಲಾಖೆಯ ಸಿಬ್ಬಂದಿ ನಟರಾಜ್, ಜಿ.ಪಂ.ಮಾಜಿ ಸದಸ್ಯೆ ಕೆ.ಆರ್.ಮಂಜುಳಾ, ಸ್ವಯಂ ಸೇವಕರಾದ ಎಂ.ವಿ.ನಾರಾಯಣ, ರೆಡ್‌ಕ್ರಾಸ್ ಸಂಸ್ಥೆಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಶೇಖರ್, ಸಂಸ್ಥೆಯ ಸ್ವಯಂ ಸೇವಕರಾದ ಎಚ್.ಎಂ.ಚಂದ್ರು, ಎಚ್.ಆರ್.ವೆಂಕಟೇಶ್, ಶಿಕ್ಷಣ ಇಲಾಖೆಯ ಸೋಮಯ್ಯ, ಎಚ್.ಟಿ.ವಸಂತ್, ಸುಕುಮಾರಿ, ಫ್ರಾನ್ಸಿಲ್ ಗೋನ್ಸಾಲಿನ್, ಆರೋಗ್ಯ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಭೇಟಿ: ಲಸಿಕಾ ಕೇಂದ್ರಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಿ.ಜಯವರ್ಧನ್ ಭೇಟಿ ನೀಡಿ ಪರಿಶೀಲಿಸಿದರು. ನೂಕುನುಗ್ಗಲು ಹಾಗೂ ಗೊಂದಲ ಮಾಡಿಕೊಳ್ಳದೆ ಶಾಂತ ರೀತಿಯಿಂದ ಸರತಿ ಸಾಲಿನಲ್ಲಿ ಬಂದು ಲಸಿಕೆ ಪಡೆಯುವಂತೆ ಮನವಿ ಮಾಡಿದರು.
ಕೂಡಾ ಅಧ್ಯಕ್ಷ ಎನ್.ಎನ್.ಚರಣ್, ಪಟ್ಟಣ ಪಂಚಾಯಿತಿ ಸದಸ್ಯ ಆನಂದಕುಮಾರ್ ಇದ್ದರು.
ಅಂತರ ಕಾಯ್ದುಕೊಳ್ಳಲು ಮನವಿ: ಲಸಿಕಾ ಕೇಂದ್ರದ ಆವರಣದಲ್ಲಿ ಜನಸಂದಣಿ ಇದ್ದ ಹಿನ್ನೆಲೆಯಲ್ಲಿ ಪಿಎಸ್‌ಐ ಗಣೇಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಅಂತರ ಕಾಪಾಡಲು ಮನವಿ ಮಾಡಿದರು.

