Dailyhunt Logo
  • Light mode
    Follow system
    Dark mode
    • Play Story
    • App Story
ಕ್ವಾರಿ ಮಾಲೀಕರು ಪೊಲೀಸರಿಗೆ ಸಿಕ್ಕಿಲ್ಲ, ಇಬ್ಬರ ಬಂಧನ

ಕ್ವಾರಿ ಮಾಲೀಕರು ಪೊಲೀಸರಿಗೆ ಸಿಕ್ಕಿಲ್ಲ, ಇಬ್ಬರ ಬಂಧನ

ರಾಮನಗರ: ಬೆಂಗಳೂರು ದಕ್ಷಿಣ ತಾಲ್ಲೂಕಿನ ಮಾದಾಪಟ್ಟಣದ ಕ್ವಾರಿಯಲ್ಲಿ ದುರಂತ ನಡೆದು 4 ದಿನವಾದರೂ ತಲೆ ಮರೆಸಿಕೊಂಡಿರುವ ಬಸವೇಶ್ವರ ಸ್ಟೋನ್ಸ್‌ ಕ್ವಾರಿ ಮಾಲೀಕ ಆನಂದಸ್ವಾಮಿ, ಎಸ್.ಆರ್.ಉದಯಶಂಕರ್ ಸ್ಟೋನ್ಸ್ ಕ್ವಾರಿ ಮಾಲೀಕ ಉದಯ್ ಶಂಕರ್‌ ಇದುವರೆಗೆ ಪೊಲೀಸರ ಕೈಗೆ ಸಿಕ್ಕಿಲ್ಲ.

ದುರ್ಘಟನೆ ಕುರಿತು ತಾವರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಕ್ವಾರಿ ಪರವಾನಗಿ ಪಡೆದಿರುವ ಪಾಂಡುರಂಗ, ವ್ಯವಸ್ಥಾಪಕ ಎನ್.ಲೋಕೇಶ್ ಹಾಗೂ ಮೇಲ್ವಿಚಾರಕ ರಾಜು ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

'ಪ್ರಕರಣದ 1 ಮತ್ತು 2ನೇ ಆರೋಪಿಗಳಾದ ಇಬ್ಬರು ಕ್ವಾರಿ ಮಾಲೀಕರ ಪತ್ತೆಗೆ ಎರಡು ತಂಡ ರಚಿಸಲಾಗಿದೆ. ಘಟನೆ ನಡೆದ ದಿನದಿಂದಲೇ ಇಬ್ಬರೂ ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಹೊರ ರಾಜ್ಯದಲ್ಲಿ ತಲೆ ಮರೆಸಿಕೊಂಡಿರುವ ಶಂಕೆ ಇದ್ದು ತಂಡವೊಂದನ್ನು ಅಲ್ಲಿಗೆ ಕಳಿಸಲಾಗಿದೆ' ಎಂದು ಪೊಲೀಸ್ ಮೂಲಗಳು ತಿಳಿಸಿವೆ.

52 ಕ್ವಾರಿ ಸ್ಥಗಿತ: 'ಘಟನೆ ನಡೆದ ದಿನದಿಂದಲೇ ಮಾದಾಪಟ್ಟಣ ಮತ್ತು ಹುಳುವೇನಹಳ್ಳಿ ಪ್ರದೇಶದಲ್ಲಿರುವ 52 ಕ್ವಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಅವಘಡ ಸಂಭವಿಸಿರುವ ಎರಡೂ ಕ್ವಾರಿಗಳ ಪರವಾನಗಿ ಅವಧಿ 2035ರವರೆಗೆ ಇದ್ದು, ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ದುರಂತ ಕುರಿತು ಜಿಲ್ಲಾಧಿಕಾರಿ ಮತ್ತು ಇಲಾಖೆ ಮೇಲಧಿಕಾರಿಗಳಿಗೆ ವರದಿ ಕೊಟ್ಟಿದ್ದೇನೆ' ಎಂದು ಬೆಂಗಳೂರು ನಗರ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಕೃಷ್ಣವೇಣಿ 'ಪ್ರಜಾವಾಣಿ'ಗೆ ತಿಳಿಸಿದರು.

'ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ನಿರ್ಲಕ್ಷ್ಯದಿಂದ ಘಟನೆ ನಡೆದಿದೆಯೇ ಹೊರತು, ಇದರಲ್ಲಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಲೋಪವಿಲ್ಲ. ಕ್ವಾರಿಗಳಿಗೆ ಆಗಾಗ ಭೇಟಿ ನೀಡಿ ನಿಯಮ ಪಾಲನೆ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಈಚೆಗೆ ಮಾಲೀಕರ ಜತೆ ಸಭೆ ನಡೆಸಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದೆ' ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260706-51-742440767

Dailyhunt
Disclaimer: This content has not been generated, created or edited by Dailyhunt. Publisher: Prajavani