Dailyhunt Logo
  • Light mode
    Follow system
    Dark mode
    • Play Story
    • App Story
ಲಖನೌದಲ್ಲಿ ಕಟ್ಟಡಕ್ಕೆ ಬೆಂಕಿ: 15 ಮಂದಿ ಸಜೀವ ದಹನ

ಲಖನೌದಲ್ಲಿ ಕಟ್ಟಡಕ್ಕೆ ಬೆಂಕಿ: 15 ಮಂದಿ ಸಜೀವ ದಹನ

ಖನೌ: ಉತ್ತರ ಲಖನೌ ವಸತಿ ಪ್ರದೇಶದಲ್ಲಿರುವ ಮೂರು ಅಂತಸ್ತಿನ ಕಟ್ಟಡದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ವಿದ್ಯಾರ್ಥಿಗಳು ಸೇರಿದಂತೆ 15 ಮಂದಿ ಮೃತಪಟ್ಟಿದ್ದು, ಹಲವರು ಗಾಯ ಗೊಂಡಿದ್ದಾರೆ.

ದುರಂತದಲ್ಲಿ ಬಲಿಯಾದವ ರಲ್ಲಿ ಹೆಚ್ಚಿನವರು ಕಟ್ಟಡದಲ್ಲಿದ್ದ ಆಯನಿಮೇಷನ್‌ ಸೆಂಟರ್‌ನಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳು.

ಮೃತರಲ್ಲಿ ಮೂವರು ಮಹಿಳೆಯರೂ ಸೇರಿದ್ದಾರೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಕೆಲವು ವಿದ್ಯಾರ್ಥಿಗಳು ಮೊದಲ ಮಹಡಿಯಿಂದ ಜಿಗಿದಿದ್ದಾರೆ. ಕಟ್ಟಡದಲ್ಲಿ ಸಿಲುಕಿದ್ದ ಹಲವರನ್ನು ಅಗ್ನಿಶಾಮಕ ದಳ ಹಾಗೂ ಪೊಲೀಸ್‌ ಸಿಬ್ಬಂದಿ, ಸ್ಥಳೀಯರ ನೆರವಿನಿಂದ ರಕ್ಷಿಸಿದ್ದಾರೆ.

ಅಲೀಗಂಜ್ ಪ್ರದೇಶದ ಉಷಾ ಮೆಹ್ತಾ ರಸ್ತೆಯಲ್ಲಿರುವ ಕಟ್ಟಡದಲ್ಲಿ ಮಧ್ಯಾಹ್ನ 3ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದ 19 ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡವು. ಬೆಂಕಿ ಹತೋಟಿಗೆ ತಂದ ಬಳಿಕ ಕಟ್ಟಡದಲ್ಲಿ ಶೋಧ ನಡೆಸಿದಾಗ 15 ಮೃತದೇಹಗಳು ಪತ್ತೆಯಾದವು.

ಕಟ್ಟಡದ ನೆಲಮಹಡಿಯಲ್ಲಿ ಸಾಕು ಪ್ರಾಣಿಗಳನ್ನು ಮಾರಾಟ ಮಾಡುವ ಮತ್ತು ಚಿಕಿತ್ಸೆ ನೀಡುವ ಮಳಿಗೆ ಇದ್ದು, ಹಲವು ಬೆಕ್ಕು ಹಾಗೂ ಶ್ವಾನಗಳು ಸತ್ತಿವೆ. ದಕ್ಷಿಣ ದೆಹಲಿಯ ಹೋಟೆಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ 20 ಮಂದಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ಈ ದುರ್ಘಟನೆ ಸಂಭವಿಸಿದೆ.

ಬೆಂಕಿಗೆ ಕಾರಣ ಏನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಉತ್ತರ ಪ್ರದೇಶ ಸರ್ಕಾರ ಘಟನೆ ಬಗ್ಗೆ ಉನ್ನತಮಟ್ಟದ ತನಿಖೆಗೆ ಆದೇಶಿಸಿದೆ. '11ರಿಂದ 12 ಮೃತದೇಹಗಳನ್ನು ಕಟ್ಟಡದಿಂದ ಹೊರಗೆ ತಂದ ದೃಶ್ಯವನ್ನು ಕಣ್ಣಾರೆ ಕಂಡೆ' ಎಂದು ಸ್ಥಳದಲ್ಲಿದ್ದ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ್‌ ಪಾಠಕ್‌ ಸುದ್ದಿಗಾರರಿಗೆ ತಿಳಿಸಿದರು.

ಬೆಂಕಿ ಕಾಣಿಸಿಕೊಂಡ ಕೂಡಲೇ ಸ್ಥಳೀಯರು ಕಟ್ಟಡದ ಕಿಟಕಿಯ ಗಾಜುಗಳನ್ನು ಒಡೆದು ವಿದ್ಯಾರ್ಥಿಗಳುಹೊರಬರಲು ಸಹಕರಿಸಿದರು.

ಅಗ್ನಿಶಾಮಕ ದಳದ ಸಿಬ್ಬಂದಿ ಕಟ್ಟಡದ ಗೋಡೆಯನ್ನು ಎರಡು ಕಡೆ ಕೊರೆದು ಒಳಗೆ ಪ್ರವೇಶಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

'15 ಮೃತದೇಹಗಳನ್ನು ಆಸ್ಪತ್ರೆಗೆ ತರಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಟ್ಟಡದಿಂದ ಜಿಗಿಯುವಾಗ ಬಿದ್ದದ್ದರಿಂದ ಇಬ್ಬರ ಬೆನ್ನಿಗೆ ಗಾಯಗಳಾಗಿವೆ' ಎಂದು ಲಖನೌದ ಕಿಂಗ್‌ ಜಾರ್ಜ್‌ ಮೆಡಿಕಲ್‌ ಯೂನಿವರ್ಸಿಟಿಯ ವೈದ್ಯಕೀಯ ಅಧೀಕ್ಷಕ ಡಾ.ಅನಿಲ್‌ ಅಗರವಾಲ್‌ ತಿಳಿಸಿದ್ದಾರೆ.

ಬೆಂಕಿ ಅನಾಹುತದ ಮಾಹಿತಿ ದೊರೆತ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ಠಾಣೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ನಂತರ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ನಾಗರಿಕ ರಕ್ಷಣಾ ತಂಡಗಳೂ ರಕ್ಷಣಾ ಕಾರ್ಯಾಚರಣೆಯಲ್ಲಿ ಸೇರಿಕೊಂಡವು.

ಉತ್ತರ ಪ್ರದೇಶ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜಯ್‌ ಪ್ರಸಾದ್, ಡಿಜಿಪಿ ರಾಜೀವ್‌ ಕೃಷ್ಣ ಮತ್ತು ಲಖನೌ ಪೊಲೀಸ್‌ ಕಮಿಷನರ್ ಅಮರೇಂದ್ರ ಸೆಂಗರ್‌ ಅವರು ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು.

ಜಿಗಿದು ಪ್ರಾಣ ಉಳಿಸಿಕೊಂಡರು

ಬೆಂಕಿಯ ಕೆನ್ನಾಲಿಗೆ ಕಟ್ಟಡವನ್ನು ಆವರಿಸುತ್ತಿದ್ದಂತೆಯೇ ಕೆಲವರು ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಕೆಲವು ವಿದ್ಯಾರ್ಥಿಗಳು ಕೇಬಲ್‌ ಹಿಡಿದು
ಕೆಳಕ್ಕಿಳಿಯುವಾಗ ಹಾಗೂ ಒಬ್ಬರು ಪಾರಾಗಲು ಯತ್ನಿಸುವಾಗ ಆಯತಪ್ಪಿ
ಬಿದ್ದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ.

'ನಾನು ಸ್ಥಳಕ್ಕೆ ಬಂದಾಗ ಕಟ್ಟಡವನ್ನು ದಟ್ಟ ಹೊಗೆ ಆವರಿಸಿತ್ತು. ಕೆಲವು ಮಂದಿಯನ್ನು ಆಗಲೇ ರಕ್ಷಿಸಲಾಗಿತ್ತು. 4-5 ವಿದ್ಯಾರ್ಥಿಗಳು ಕಟ್ಟಡದಿಂದ ಹೊರಬರುವಲ್ಲಿ ಯಶಸ್ವಿಯಾದರು' ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು. 'ಏಳರಿಂದ ಎಂಟು ವಿದ್ಯಾರ್ಥಿಗಳು ಕಟ್ಟಡದಿಂದ ಜಿಗಿದರು' ಎಂದು ಇನ್ನೊಬ್ಬರು ವಿವರಿಸಿದರು.

₹7 ಲಕ್ಷ ಪರಿಹಾರ

ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ₹50 ಸಾವಿರ ಪರಿಹಾರ ಘೋಷಿಸಿದ್ದಾರೆ.

ಅಲೀಗಢಕ್ಕೆ ತೆರಳಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮ್ಮ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಲಖನೌಗೆ ವಾಪಸಾದರು. ಸಂಜೆ 6.15ಕ್ಕೆ ಸ್ಥಳಕ್ಕೆ ಭೇಟಿ ನೀಡಿದ ಅವರು ಮೃತರ ಕುಟುಂಬಗಳಿಗೆ ತಲಾ
₹5 ಲಕ್ಷ ಹಾಗೂ ಗಾಯಾಳುಗಳಿಗೆ ₹50 ಸಾವಿರ ಪರಿಹಾರ ಘೋಷಿಸಿದರು.

'ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು' ಎಂದು ಅವರು ಸಂತ್ರಸ್ತ ಕುಟುಂಬಗಳಿಗೆ ಭರವಸೆ ನೀಡಿದರು.

'ಮುಝೆ ಜಾನೆ ದೊ'

ಅಗ್ನಿ ಅವಘಡದ ಸುದ್ದಿ ತಿಳಿದು ಸಂತ್ರಸ್ತರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಸ್ಥಳಕ್ಕೆ ಧಾವಿಸಿದ್ದಾರೆ. ಒಳಗೆ ಸಿಲುಕಿದವರನ್ನು ರ‌ಕ್ಷಿಸಲು ತಮ್ಮನ್ನೂ ಕಟ್ಟಡದೊಳಗೆ ಬಿಡುವಂತೆ ಕೆಲವು ಮಹಿಳೆಯರು ಪೊಲೀಸ್‌ ಸಿಬ್ಬಂದಿಯನ್ನು ಬೇಡಿಕೊಂಡ ದೃಶ್ಯ ಕಂಡುಬಂತು. ಮಹಿಳೆಯೊಬ್ಬರು 'ಮುಝೆ ಜಾನೆ ದೊ ಅಪ್ನೆ ಬೇಟೆ ಕೆ ಪಾಸ್' (ನನ್ನ ಮಗನ ಬಳಿ ಹೋಗಲು ಬಿಡಿ) ಎಂದು ಪದೇ ಪದೇ ಬೇಡಿಕೊಂಡರು.

Dailyhunt
Disclaimer: This content has not been generated, created or edited by Dailyhunt. Publisher: Prajavani