ಲಕ್ಷ್ಮೇಶ್ವರ: 'ಸರ್ಕಾರಿ ನೌಕರರಿಗೆ ಅನುಕೂಲ ಆಗುವ ರೀತಿಯಲ್ಲಿ ಹಳೇ ಪಿಂಚಣಿ ಯೋಜನೆ ಮರುಜಾರಿ ಮಾಡಬೇಕು' ಎಂದು ಆಗ್ರಹಿಸಿ ಶನಿವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಸದಸ್ಯರು ಮೆರವಣಿಗೆ ನಡೆಸಿ ತಹಶೀಲ್ದಾರ್ ಎಂ.ಧನಂಜಯ ಅವರಿಗೆ ಮನವಿ ಸಲ್ಲಿಸಿದರು.
ಮೆರವಣಿಗೆಗೂ ಮುನ್ನ ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಸಮಾವೇಶ ನಡೆಸಿದರು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ ಮಾತನಾಡಿ, 'ಹಳೇ ಪಿಂಚಣಿ ಯೋಜನೆ ಜಾರಿಗಾಗಿ ಅನೇಕ ಸಂಘಟನೆಗಳು ಹೋರಾಟ ಮಾಡುತ್ತಲೇ ಇವೆ. ಸರ್ಕಾರ ಕೂಡಲೇ ಒಪಿಎಸ್ ಯೋಜನೆಯನ್ನು ಜಾರಿಗೆ ತರಬೇಕು' ಎಂದು ಒತ್ತಾಯಿಸಿದರು.
'ಅನುದಾನಿತ ಶಾಲೆಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಕಾಲ್ಪನಿಕ ವೇತನ ಜಾರಿಗೆ ತರಬೇಕು, ಕೆಪಿಎಸ್ ಮತ್ತು ಪಿಎಂಶ್ರೀ ಶಾಲೆಗಳನ್ನು ಅನುದಾನಿತ ಶಾಲೆಯಿಂದ 3 ಕಿ.ಮೀ ವ್ಯಾಪ್ತಿಯ ಹೊರಗೆ ಆರಂಭಿಸಬೇಕು. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ವಿಸ್ತರಿಸಬೇಕು. ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಚಿತ್ರಕಲಾ, ಸಂಗೀತ, ಹೊಲಿಗೆ, ನಾಟಕ ಹುದ್ದೆಗಳನ್ನು ಭರ್ತಿ ಮಾಡಬೇಕು' ಎಂದು ಆಗ್ರಹಿಸಿದರು.
ಎ.ಜಿ. ಲಿಂಗಶೆಟ್ಟರ, ಬಿ.ಬಿ. ಬಳಿಗಾರ, ವಿ.ಸಿ. ಬೆಂಡಿಗೇರಿ, ಎಂ.ಬಿ. ಕಲ್ಲೂರ, ಟಿ.ಎಸ್. ಹೂಗಾರ, ಪಿ.ಟಿ. ಪವಾರ, ಎಸ್.ಬಿ. ಬೆಟಗೇರಿ, ಎ.ಬಿ. ಹೂಗಾರ ಇದ್ದರು.
ನರಗುಂದ: ಅನುದಾನಿತ ಹಾಗೂ ಸರ್ಕಾರಿ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಮರುಜಾರಿಗೊಳಿಸುವಂತೆ ಆಗ್ರಹಿಸಿ ಶನಿವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ತಾಲ್ಲೂಕು ಘಟಕದಿಂದ ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕರ ಸಂಘ, ಸರ್ಕಾರಿ ನೌಕರರ ಸಂಘ, ಏನ್‌ಪಿಎಸ್ ನೌಕರರ ಸಂಘಗಳ ಆಶ್ರಯದಲ್ಲಿ ಪಟ್ಟಣದಲ್ಲಿ ಪ್ರತಿಭಟನಾ ಬೈಕ್ ರ್‍ಯಾಲಿ ನಡೆಯಿತು.
ಬಾಲಕಿಯರ ಸರ್ಕಾರಿ ಪ್ರಢಶಾಲಾ ಆವರಣದಲ್ಲಿ ಆರಂಭವಾದ ಪ್ರತಿಭಟನಾ ರ್‍ಯಾಲಿಗೆ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಚಾಲನೆ ನೀಡಿದರು. ನಂತರ ಪ್ರತಿಭಟನಾ ರ್‍ಯಾಲಿ ಕೆಲ ಹೊತ್ತು ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮೇಲಿನ ಶಿವಾಜಿ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಿನಿವಿಧಾನಸೌಧದಲ್ಲಿ ಸಮಾರೋಪಗೊಂಡಿತು. ತಹಶೀಲ್ದಾರ್ ಶ್ರೀಶೈಲ ತಳವಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ಲಮಾಣಿ, ತಾಲ್ಲೂಕು ಘಟಕದ ಅಧ್ಯಕ್ಷ ಝೆಡ್.ಎಂ. ಖಾಝಿ ಮಾತನಾಡಿದರು. ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಾರುತಿ ನಾಯಕ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ಸಿ. ಹಿರೇಮಠ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮುಖಂಡ ಎಸ್.ವಿ. ಕ್ಯಾಮನಗೌಡ್ರ, ಅಮೀನ್ ಅತ್ತಾರ ಸಿ.ಎಂ. ಕೊಳ್ಳಿಯವರ ಇದ್ದರು.
'ಶಿಕ್ಷಕರನ್ನು ಅನ್ಯ ಕಾರ್ಯಕ್ಕೆ ಬಳಸದಿರಿ'
ಮುಂಡರಗಿ: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರಾಜ್ಯ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ್ ಎರ್ರಿಸ್ವಾಮಿ.ಪಿ.ಎಸ್. ಅವರಿಗೆ ಮನವಿ ಸಲ್ಲಿಸಿದರು.
'ಶಿಕ್ಷಕರನ್ನು ಅನ್ಯ ಕಾರ್ಯಗಳಿಗೆ ಬಳಸಿಕೊಂಡರೆ ಶಾಲಾ ಚಟುವಟಿಕೆಗಳಿಗೆ ಹಾಗೂ ಮಕ್ಕಳ ಕಲಿಕೆಗೆ ಹಿನ್ನಡೆಯಾಗುತ್ತದೆ. ಶಿಕ್ಷಕರನ್ನು ಇತರೆ ಕರ್ತವ್ಯಗಳಿಂದ ಸಂಪೂರ್ಣವಾಗಿ ಮುಕ್ತಗೊಳಿಸಬೇಕು' ಎಂದು ಮನವಿ ಮಾಡಿಕೊಂಡರು.
ತಹಶೀಲ್ದಾರ್ ಎರ್ರಿಸ್ವಾಮಿ.ಪಿ.ಎಸ್. ಮನವಿ ಸ್ವೀಕರಿಸಿದರು. ಶಿಕ್ಷಕರ ಸಂಘದ ಡಿ.ಜಿ.ಪೂಜಾರ, ಮಂಜುನಾಥ ತೆಗ್ಗಿನಮನಿ, ಎಸ್.ಎಸ್.ಗಡ್ಡದ, ಧನೇಶ ನಾಯಕ, ಅಶೋಕ ಭಜಂತ್ರಿ, ಶಿವಕುಮಾರ ಗಿಂಡಿಮಠ, ಕಾಶೀನಾಥ ಶಿರಬಡಗಿ, ಎಂ.ಪಿ.ಶೀರನಹಳ್ಳಿ, ಎಸ್.ಡಿ.ಬಸೇಗೌಡರ, ನಾಗಭೂಷಣ ಹಿರೇಮಠ, ಚಂದ್ರಪ್ಪ ಗದ್ದಿ ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260705-23-1435089248

