Dailyhunt Logo
  • Light mode
    Follow system
    Dark mode
    • Play Story
    • App Story
ಲಂಕಾ ಯುವ ಬ್ಯಾಟರ್‌ಗಳ ಮಿಂಚು

ಲಂಕಾ ಯುವ ಬ್ಯಾಟರ್‌ಗಳ ಮಿಂಚು

ಕೊಲಂಬೊ (ಪಿಟಿಐ): ಶ್ರೀಲಂಕಾದ ಭವಿಷ್ಯದ ಬ್ಯಾಟರ್‌ಗಳ ಕೈಲಿ ಭಾರತದ ಬೌಲಿಂಗ್ ಪಡೆ ಚೆನ್ನಾಗಿ ದಂಡಿಸಿ ಕೊಂಡಿತು. ಕೊನೆಯ ಅವಧಿಯಲ್ಲಷ್ಟೇಕುಲದೀಪ್ ಯಾದವ್ ನೇತೃತ್ವದಲ್ಲಿ ಸ್ಪಿನ್ನರ್‌ಗಳು ತಂಡ ಪುಟಿದೇಳಲು ನೆರವಾದರು. ಶುಕ್ರವಾರ ಆರಂಭವಾದ ಮೂರು ದಿನಗಳ ಈ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ಕ್ರಿಕೆಟ್‌ ಇಲೆವೆನ್ ಮೊದಲ ದಿನದ ಆಟದಲ್ಲಿ 8 ವಿಕೆಟ್‌ಗೆ 363 ರನ್‌ಗಳ ಉತ್ತಮ ಮೊತ್ತ ಕಲೆಹಾಕಿತು.

ಈ ಪಂದ್ಯವು ಮೊದಲ ದರ್ಜೆ ಪಂದ್ಯದ ಸ್ಥಾನಮಾನ ಹೊಂದಿಲ್ಲದ ಕಾರಣ ಎರಡೂ ತಂಡಗಳಿಗೆ ಮೊದಲ ಎರಡು ದಿನ ತಲಾ 90 ಓವರುಗಳನ್ನು ನಿಗದಿ ಮಾಡಲಾಗಿದೆ. ಅಂತಿಮ ದಿನ ತಲಾ 45 ಓವರುಗಳನ್ನು ಆಡುವ ಅವಕಾಶ ಕಲ್ಪಿಸಲಾಗಿದೆ.

ದಿನದಾಟ ಸಾಗಿದ ರೀತಿಯು, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶುಭಮನ್ ಗಿಲ್ ಅವರನ್ನು ಗಹನವಾದ ಚಿಂತನೆಗೆ ಹಚ್ಚಿದೆ. ಗಾಯದಿಂದ ಪೂರ್ಣವಾಗಿ ಚೇತರಿಸದ ಗಿಲ್‌ ಇಲ್ಲಿ ಕಣಕ್ಕಿಳಿಯಲಿಲ್ಲ.

ದಿನದಾಟದ ನಿರ್ವಹಣೆ ಗಮನಿಸಿದರೆ, ಆಫ್‌ ಸ್ಪಿನ್ನರ್ ಸಾರಾಂಶ್ ಜೈನ್ (11 ಓವರುಗಳಲ್ಲಿ 54/0) ಅವರಿಗೆ ಟೆಸ್ಟ್ ಸ್ಥಾನದ ರೇಸ್‌ ಕಠಿಣವಾಗಲಿದೆ. ಕುಲದೀಪ್ (18 ಓವರುಗಳಲ್ಲಿ 76ಕ್ಕೆ2) ಮತ್ತು ಮಾನವ್ ಸುತಾರ್ (11 ಓವರುಗಳಲ್ಲಿ 33ಕ್ಕೆ2) ಅವರು ಜೈನ್‌ಗಿಂತ ಪರಿಣಾಮಕಾರಿ ಎನಿಸಿದರು. ಅನುಭವಿ ರವೀಂದ್ರ ಜಡೇಜ ಸಹ ಎಂದಿನ ಲಯದಲ್ಲಿಲ್ಲದಿದ್ದರೂ ಎರಡು ವಿಕೆಟ್‌ಗಳನ್ನು ಪಡೆದರು.

ಇದರ ಹೊರತಾಗಿ ದಿನದಾಟ ಲಂಕಾ ಇಲೆವೆನ್‌ನ ಯುವ ಬ್ಯಾಟರ್‌ಗಳಿಗೆ ಸೇರಿತ್ತು. ಅವರಲ್ಲಿ ಕೆಲವರಷ್ಟೇ ಒಂದೆರಡು ಟೆಸ್ಟ್‌ ಆಡಿದ ಅನುಭವಿಗಳಿದ್ದರು.

ನಿಶಾನ್ ಫೆರ್ನಾಂಡೊ (66, 65 ಎಸೆತ) ಅವರು ಅನುಭವಿ ವೇಗಿಗಳಾದ ಮೊಹಮ್ಮದ್‌ ಸಿರಾಜ್ (44/0) ಮತ್ತು ಪ್ರಸಿದ್ಧ ಕೃಷ್ಣ (32/0) ಅವರನ್ನು ಆರಾಮವಾಗಿ ಎದುರಿಸಿದರು. ಗುರ್ನೂರ್ ಬ್ರಾರ್ (49/1) ಮಾತ್ರ ಸವಾಲೆಸೆದರು. ಫೆರ್ನಾಂಡೊ, ಇತ್ತೀಚಿನ ವೆಸ್ಟ್ ಇಂಡೀಸ್‌ ಪ್ರವಾಸದಲ್ಲಿ ಟೆಸ್ಟ್‌ ಪಂದ್ಯಗಳನ್ನು ಆಡಿದ್ದರು.

ನಿಶಾನ್ ಮೊದಲ ವಿಕೆಟ್‌ಗೆ ರವಿಂದು ರಸಂತ (71, 143 ಎಸೆತ) ಜೊತೆ ಲಗುಬಗನೇ 110 ರನ್ ಸೇರಿಸಿದರು. ಎಡಗೈ ಬ್ಯಾಟರ್ ಹಾಗೂ ನಾಯಕ ಸೋನಲ್ ದಿನುಶಾ (52, 72 ಎಸೆತ) ಮಿಂಚಿದ ಇನ್ನೊಬ್ಬ ಆಟಗಾರ. ಅವರ ಕೌಶಲದ ಆಟ ಗಮನಸೆಳೆಯಿತು. ಅವರು ಕುಲದೀಪ್ ಅವರನ್ನು ವಿಶ್ವಾಸದಿಂದ ಎದುರಿಸಿದರು. ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ನಲ್ಲಿ ಅವರು 92 ರನ್ ಬಾರಿಸಿದ್ದರು.

5 ಓವರುಗಳ ಮೊದಲ ಸ್ಪೆಲ್‌ನಲ್ಲಿ ಕುಲದೀಪ್ ವೇಗದಲ್ಲಿ ಏರಿಳಿತ ತಂದು ಕಡಿವಾಣ ಹಾಕಿದರು. ಅವರು ಅಹನ್ ವಿಕ್ರಮ ಸಿಂಘೆ ಮತ್ತು ಅಜಂತಾ ಬಂಡಾರ ವಿಕೆಟ್‌ಗಳನ್ನು ಪಡೆದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಶ್ರೀಲಂಕಾ ಕ್ರಿಕೆಟ್ ಇಲೆವೆನ್: 90 ಓವರುಗಳಲ್ಲಿ 8ಕ್ಕೆ 363 (ನಿಶಾನ್ ಫೆರ್ನಾಂಡೊ 66, ರವಿಂದು ರಸಂತ 71, ಪಸಿಂದು ಸೂರಿಯಬಂಡಾರ 35, ಪವನ್ ರತ್ನಾಯಕೆ 39, ಅಹನ್ ವಿಕ್ರಮಸಿಂಘೆ 31, ಸೋನಲ್ ದಿನುಶಾ 52, ರಮೇಶ್ ಮೆಂಡಿಸ್ 32; ಜಡೇಜ 64ಕ್ಕೆ2, ಕುಲದೀಪ್ ಯಾದವ್‌ 76ಕ್ಕೆ2, ಮಾನವ್ ಸುತಾರ್ 33ಕ್ಕೆ2) ವಿರುದ್ಧ ಭಾರತ.

ಲಂಕಾ ಟೆಸ್ಟ್‌ ಸರಣಿ: ಉಚಿತ ಪ್ರವೇಶ

ಕೊಲಂಬೊ (ಪಿಟಿಐ): ಭಾರತ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕ್ರಿಕೆಟ್‌ ಅಭಿಮಾನಿಗಳಿಗೆ ಉಚಿತವಾಗಿ ಪ್ರವೇಶ ಅವಕಾಶ ಕಲ್ಪಿಸ ಲಾಗುವುದು ಎಂದು ಕ್ರಿಕೆಟ್‌ ಶ್ರೀಲಂಕಾ (ಎಸ್‌ಎಲ್‌ಸಿ) ಶುಕ್ರವಾರ ಪ್ರಕಟಿಸಿದೆ. ಮೊದಲ ಟೆಸ್ಟ್‌ ಇದೇ 15ರಂದು ಗಾಲ್‌ನಲ್ಲಿ ಆರಂಭವಾಗಲಿದೆ.

'ವಿಶ್ವ ದರ್ಜೆಯ ಕ್ರಿಕೆಟ್‌ ಪಂದ್ಯಗಳನ್ನು ಕಾಸು ಖರ್ಚು ಮಾಡದೇ ವೀಕ್ಷಿಸಲು ಅಭಿಮಾನಿಗಳಿಗೆ ಇದೊಂದು ಅತ್ಯುತ್ತಮ ಅವಕಾಶ' ಎಂದು ಎಸ್‌ಎಲ್‌ಸಿ ಹೇಳಿಕೆಯಲ್ಲಿ ತಿಳಿಸಿದೆ. ಎರಡನೇ ಟೆಸ್ಟ್‌ ಪಂದ್ಯ ಆಗಸ್ಟ್‌ 23 ರಿಂದ 27ರವರೆಗೆ ನಡೆಯಲಿದೆ.

ಶ್ರೀಲಂಕಾದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದಿಲ್ಲ. ಈ ಹಿಂದೆಯೂ ಭಾರತ ತಂಡಗಳು ಇಲ್ಲಿ ಆಡಿದ್ದಾಗ ಗ್ಯಾಲರಿಗಳು ಖಾಲಿ ಹೊಡೆಯುತ್ತಿದ್ದ ನಿದರ್ಶನಗಳಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260808-39-1601731655

Dailyhunt
Disclaimer: This content has not been generated, created or edited by Dailyhunt. Publisher: Prajavani