Thursday, 26 Nov, 6.25 pm ಪ್ರಜಾವಾಣಿ

ರಾಷ್ಟ್ರೀಯ
'ಲವ್‌ ಜಿಹಾದ್‌'ಗೆ ಆರ್ಥಿಕ ನೆರವಿನ ಬಲವಿದೆ: ಮಧ್ಯಪ್ರದೇಶ ಸಚಿವ

ಭೋಪಾಲ: 'ಲವ್‌ ಜಿಹಾದ್‌' ಮತ್ತು ಧಾರ್ಮಿಕ ಮತಾಂತರಗಳಿಗೆ ಆರ್ಥಿಕ ನೆರವಿನ ಬಲವಿದೆ ಎಂದು ಮಧ್ಯಪ್ರದೇಶ ಸಚಿವ ಅರವಿಂದ ಭದೌರಿಯಾ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಗುರುವಾರ ಮಾತನಾಡಿರುವ ಅವರು, 'ಲವ್ ಜಿಹಾದ್‌ ಹಾಗೂ ಧಾರ್ಮಿಕ ಮತಾಂತರಗಳಿಗೆ ಹಣದ ನೆರವು ಸಿಗುತ್ತಿದೆ. ಹಿಂದು ಹೆಣ್ಣು ಮಕ್ಕಳನ್ನು ಮದುವೆಯಾದರೆ ನಿಮಗೆ ಹಣ ನೀಡಲಾಗುವುದು ಎಂದು ಹೇಳುವ ಮೂಲಕ ಅವರಿಗೆ ನಿರ್ದಿಷ್ಟ ಗುರಿ ನೀಡಲಾಗುತ್ತಿದೆ,' ಎಂದು ಅವರು ಆರೋಪಿಸಿದ್ದಾರೆ.

ಈ ವಿಚಾರದಲ್ಲಿ ತನಿಖೆಗೂ ಆಗ್ರಹಿಸಿದ್ದಾರೆ ಭದೌರಿಯಾ. ' ಲವ್‌ ಜಿಹಾದ್‌ಗೆ ಸಿಗುತ್ತಿರುವ ಆರ್ಥಿಕ ನೆರವಿನ ಕುರಿತು ಕೇಂದ್ರ ಸರ್ಕಾರ ಆಳ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು,' ಎಂದು ಅವರು ಆಗ್ರಹಿಸಿದ್ದಾರೆ.

ಕೇವಲ ಮದುವೆ ಉದ್ದೇಶಕ್ಕಾಗಿ ಮಾತ್ರ ನಡೆಯುವ ಮತಾಂತರ ಸ್ವೀಕಾರಾರ್ಹವಲ್ಲ ಎಂದು ಅಲಹಾಬಾದ್ ಹೈಕೋರ್ಟ್‌ ಇತ್ತೀಚೆಗೆ ಅಭಿಪ್ರಾಯಪಟ್ಟಿತು.

ಇದೇ ಹಿನ್ನೆಲೆಯಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ 'ಲವ್‌ ಜಿಹಾದ್‌' ಹೆಸರಿನ, ಮದುವೆ ಉದ್ದೇಶದ ಧಾರ್ಮಿಕ ಮತಾಂತರ ತಡೆಯುವ ಕಾನೂನು ಜಾರಿಗೆ ತರುವ ಚರ್ಚೆಗಳು ನಡೆಯುತ್ತಿವೆ. ನ.24ರ ಮಂಗಳವಾರ ನಡೆದ ಉತ್ತರ ಪ್ರದೇಶ ಸಚಿವ ಸಂಪುಟ ಸಭೆಯಲ್ಲಿ 'ಲವ್‌ ಜಿಹಾದ್‌' ತಡೆಯುವ ಕಾನೂನಿಗೆ ಸುಗ್ರೀವಾಜ್ಞೆ ತರಲು ನಿರ್ಧರಿಸಲಾಗಿದೆ.

ಕರ್ನಾಟಕವೂ ಈ ನಿಟ್ಟಿನಲ್ಲಿ ಗಂಭೀರವಾದ ಚಿಂತನೆ ನಡೆಸುತ್ತಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top