ಡಾರ್ಲಿಂಗ್ ಕೃಷ್ಣ ಅವರು ನಿರ್ದೇಶಿಸಿ, ನಟಿಸಿರುವ ಲವ್ ಮಾಕ್ಟೇಲ್-3 ಚಿತ್ರವು ಮಾರ್ಚ್ 19ರಂದು ಬಿಡುಗಡೆಯಾಗಿದೆ. ಇದೀಗ ಈ ಚಿತ್ರ ಕಥೆ ಕುರಿತು ನಿರ್ದೇಶಕ ರಾಘವೇಂದ್ರ ಎಂ. ನಾಯ್ಕ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?
'ನನ್ನ ಹಿಂದಿನ ಪೋಸ್ಟ್ ನೋಡಿ ಚಿತ್ರರಂಗದ ಮಿತ್ರರು, ಮಾಧ್ಯಮದ ಸ್ನೇಹಿತರು ಹಾಗೂ ಹಿತೈಷಿಗಳು ಕರೆ ಮಾಡಿ ವಿಚಾರಿಸಿದ್ದಾರೆ. 'ಯಾಕೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದೀರಿ? ಅನ್ಯಾಯವಾಗಿದ್ದರೆ ನೇರವಾಗಿ ಹೇಳಬಾರದೇ? ಭಯವೇ? ಎಂದು ಕೇಳಿದ್ದಾರೆ. ಖಂಡಿತ ನನಗೆ ಯಾವುದೇ ಭಯವಿಲ್ಲ. ಅಸಲಿಗೆ ಏನಾಗಿದೆ ಎಂಬ ವಿವರ ಇಲ್ಲಿದೆ.
ನನ್ನ ಮೊದಲ ಸಿನಿಮಾ 'ಮಾರಿಗೋಲ್ಡ್' ನಂತರ, ಮುಂದಿನ ಚಿತ್ರದ ತಯಾರಿಯ ನಡುವೆ ಜೀವನೋಪಾಯಕ್ಕಾಗಿ ನಾನು ಹಲವು ಸಿನಿಮಾಗಳಿಗೆ ಚಿತ್ರಕಥೆ ಬರೆಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಸಂದರ್ಭದಲ್ಲಿ ನಿರ್ದೇಶಕ ಗುರುದೇಶ್‌ಪಾಂಡೆ ಅವರ ಕಡೆಯಿಂದ ಕರೆ ಬಂದಿತ್ತು. ಅವರ 'ಜಾನ್ ಜಾನಿ ಜನಾರ್ಧನ್' ಸಿನಿಮಾದಲ್ಲಿ ನಾನು ಸಹ-ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಅವರನ್ನು ಭೇಟಿಯಾದಾಗ ಅವರು ಒಂದು ಲೈನ್ ಹೇಳಿ ಚಿತ್ರಕಥೆ ಬರೆಯಲು ಹೇಳಿದರು. ಅದಕ್ಕೆ ನಾನು ಚಿತ್ರಕಥೆ ಬರೆದುಕೊಟ್ಟೆ. ಅವರು ಸೂಕ್ತ ಸಂಭಾವನೆಯನ್ನೂ ನೀಡಿದ್ದರು.
'ಆ ಸಮಯದಲ್ಲಿ ಅವರಿಗೆ ನಾನೊಂದು ಕಥೆಯನ್ನು ಹೇಳಿದ್ದೆ. ಕಥೆ ಕೇಳಿ ತುಂಬಾ ಖುಷಿಯಾದ ಅವರು, 'ಈ ಕಥೆಯನ್ನು ನನಗೆ ಕೊಡುತ್ತೀರಾ? ನಾನೇ ನಿರ್ದೇಶನ ಮಾಡುತ್ತೇನೆ' ಎಂದರು. ನಾನು ಸಂತೋಷದಿಂದ ಒಪ್ಪಿ ಮುಂಗಡ ಹಣವನ್ನು ಪಡೆದೆ. ಸುಮಾರು 6 ತಿಂಗಳು ಆ ಕಥೆಯ ಮೇಲೆ ಕೆಲಸ ಮಾಡಿ ಸ್ಕ್ರೀನ್‌ಪ್ಲೇ ಸಿದ್ಧಪಡಿಸಿದೆವು. ಖ್ಯಾತ ಸಂಭಾಷಣೆಕಾರ ರಘು ನಿಡುವಳ್ಳಿ ಅವರು ಇದಕ್ಕೆ ಸಂಭಾಷಣೆ ಕೂಡ ಬರೆದಿದ್ದಾರೆ' ಎಂದು ಹೇಳಿಕೊಂಡಿದ್ದಾರೆ.
'ಬ್ಯಾಕ್ ಟು ಬ್ಯಾಕ್ ಎರಡು ಒಂದೇ ಜಾನರ್ ಕಥೆಗಳು ಬೇಡ'
'ನಂತರ ಈ ಕಥೆಯನ್ನು ನಟ ಕೃಷ್ಣ ಅವರಿಗೆ ಹೇಳುವುದೆಂದು ತೀರ್ಮಾನವಾಯಿತು. ಆಗಸ್ಟ್ 2023ರಲ್ಲಿ ಗುರುದೇಶ್‌ಪಾಂಡೆ ಅವರೇ ಕೃಷ್ಣ ಅವರ ಭೇಟಿಗೆ ಸಮಯ ನಿಗದಿಪಡಿಸಿದ್ದರು. ಓರಿಯನ್ ಮಾಲ್ ಎದುರಿಗಿನ ಅವರ ಫ್ಲಾಟ್‌ನಲ್ಲಿ ನಾನು ಸವಿಸ್ತಾರವಾಗಿ ಕಥೆ ನರೇಟ್ ಮಾಡಿದ್ದೆ. ಕಥೆ ಕೇಳಿದ ನಂತರ ಕೃಷ್ಣ ಅವರು ಹೇಳಿದ್ದು ಹೀಗೆ: 'ನಾವು ಕೂಡ 'ಲವ್ ಮಾಕ್‌ಟೇಲ್ 3' ಮಾಡಲು ನಿರ್ಧರಿಸಿದ್ದೇವೆ, ಅದರ ಸ್ಕ್ರಿಪ್ಟ್ ಕೆಲಸ ಇನ್ನೇನು ಆರಂಭವಾಗಲಿದೆ. ಅದು ಕೂಡ ಮಗುವಿನ ಮೇಲೆ ನಡೆಯುವ ಕಥೆಯಾಗಿದೆ. ನೀವು ಹೇಳಿದ ಕಥೆಯೂ ಮಗುವಿನ ಸುತ್ತ ಇರುವುದರಿಂದ, ಬ್ಯಾಕ್ ಟು ಬ್ಯಾಕ್ ಎರಡು ಒಂದೇ ಜಾನರ್ ಕಥೆಗಳು ಬೇಡ. ಬೇರೆ ಕಥೆ ಇದ್ದರೆ ಹೇಳಿ ಎಂದು ವಾಪಸ್ಸು ಕಳುಹಿಸಿದರು' ಎಂದಿದ್ದಾರೆ.
'ಇದೇ ಕಥೆಯನ್ನು ನಟ ರಮೇಶ್ ಅರವಿಂದ್ ಮತ್ತು ಶರಣ್ ಅವರೊಂದಿಗೂ ಚರ್ಚಿಸಿದ್ದೆವು'
'ಆನಂತರ ನಾವು ಇದೇ ಕಥೆಯನ್ನು ನಟರಾಗಿರುವ ರಮೇಶ್ ಅರವಿಂದ್ ಮತ್ತು ಶರಣ್ ಅವರೊಂದಿಗೂ ಚರ್ಚಿಸಿದ್ದೆವು. ಇಬ್ಬರು ಸ್ಟಾರ್‌ಗಳನ್ನು ಇಟ್ಟುಕೊಂಡು ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡುವುದು ಗುರುದೇಶ್‌ಪಾಂಡೆ ಅವರ ಕನಸಾಗಿತ್ತು. ಮಗುವಿನ ತಂದೆಯಾಗಿ ಒಬ್ಬರು ಹಾಗೂ ನ್ಯಾಯಾಲಯದಲ್ಲಿ ನ್ಯಾಯ ಕೊಡಿಸುವ ಲಾಯರ್ ಪಾತ್ರದಲ್ಲಿ ಇನ್ನೊಬ್ಬರು ನಟಿಸಬೇಕಿತ್ತು. ಈ ಕಾರಣಕ್ಕೆ ಸಿನಿಮಾ ತಡವಾಯಿತು. ಅಷ್ಟರಲ್ಲಿ ಅವರು 'ರಾಮರಸ' ಸಿನಿಮಾ ಪ್ರೊಡಕ್ಷನ್ ಶುರು ಮಾಡಿದರು. ನಾನು ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡೆ'ಎಂದು ಬರೆದುಕೊಂಡಿದ್ದಾರೆ.
'ಕಳೆದ ಬುಧವಾರ 'ಲವ್ ಮಾಕ್‌ಟೇಲ್ 3' ಬಿಡುಗಡೆಯಾದಾಗ, ಪೇಯ್ಡ್ ಪ್ರೀಮಿಯರ್ ನೋಡಿ ಗುರುದೇಶ್‌ಪಾಂಡೆ ಅವರು ನನಗೆ ಕರೆ ಮಾಡಿದರು. ನಾನು ಕೂಡ ಸಿನಿಮಾ ನೋಡಿದೆ. ಆಶ್ಚರ್ಯವೆಂದರೆ, ಚಿತ್ರದ ಇಡೀ ದ್ವಿತೀಯಾರ್ಧ ನಮ್ಮ ಕಥೆಯ ಹಂದರವನ್ನೇ ಹೊಂದಿದೆ. ಮಧ್ಯಂತರದಲ್ಲಿ ಮಗುವಿನ ಬಯೋಲಾಜಿಕಲ್ ಪೋಷಕರು ಬಂದು ಮಗುವನ್ನು ಕ್ಲೈಮ್ ಮಾಡುವುದು, ನಂತರ ಸಾಕು ತಂದೆ ಮತ್ತು ಹೆತ್ತವರ ನಡುವೆ ನಡೆಯುವ ಕಾನೂನು ಹೋರಾಟ, ಕೋರ್ಟ್ ರೂಮ್ ಡ್ರಾಮಾ, ಹಾಗೂ ಕ್ಲೈಮ್ಯಾಕ್ಸ್‌ನಲ್ಲಿ ಕೋರ್ಟ್ ನೀಡುವ ತೀರ್ಪು-ಎಲ್ಲವೂ ನಾವು ಬರೆದ ಕಥೆಯಂತೆಯೇ ಇದೆ. ಕಥೆಯ ಪರಿಸರ ಮತ್ತು ಮಗುವಿನ ಲಿಂಗ ಬೇರೆಯಿರಬಹುದು ಆದರೆ ಆತ್ಮ ಮಾತ್ರ ಒಂದೇ' ಎಂದಿದ್ದಾರೆ.
'ನಮಗೆ ನೀವು ಹೇಳಿರೋ ಕಥೆಯೇ ನೆನಪಿಲ್ಲ'
ಇದರ ಬಗ್ಗೆ ಗುರುದೇಶ್‌ಪಾಂಡೆ ಅವರು ಕೃಷ್ಣ ಅವರನ್ನು ವಿಚಾರಿಸಿದಾಗ, 'ನಮಗೆ ನೀವು ಹೇಳಿರೋ ಕಥೆಯೇ ನೆನಪಿಲ್ಲ' ಎಂಬ ಉತ್ತರ ಬಂದಿದೆ. ಒಂದು ವೇಳೆ ನಾವು ಅವರಿಗೆ ಕಥೆಯನ್ನೇ ಹೇಳಿರದಿದ್ದರೆ, 'ಒಂದೇ ರೀತಿಯ ಆಲೋಚನೆ ಇಬ್ಬರಿಗೂ ಬಂದಿರಬಹುದು' ಎಂದು ನಾನು ಸುಮ್ಮನಿರುತ್ತಿದ್ದೆ. ಆದರೆ ಎರಡು ವರ್ಷಗಳ ಹಿಂದೆಯೇ ಕಥೆಯನ್ನು ಕೇಳಿ ಈಗ ಗೊತ್ತಿಲ್ಲ ಅಂತ ಹೇಳುತ್ತಿರುವುದು ನಿಜಕ್ಕೂ ಬೇಸರ ತಂದಿದೆ' ಎಂದು ಹೇಳಿಕೊಂಡಿದ್ದಾರೆ.
'ಚಿತ್ರರಂಗ ಸೊರಗುತ್ತಿರುವುದೇ ಬರಹಗಾರರ ಅಭಾವದಿಂದ'
'ಈ ಕಥೆ ಕೃಷ್ಣ ಅವರಿಗೆ ಹೇಳಿದ್ದು ಸಹ ನಮ್ಮ ತಂಡಕ್ಕೆ ಮತ್ತು ಚಿತ್ರರಂಗದ ಹಲವು ಸ್ನೇಹಿತರಿಗೆ ತಿಳಿದಿದೆ. ಸಿನಿಮಾ ನೋಡಿದ ನಂತರ ಬಹಳಷ್ಟು ಮಿತ್ರರೂ ನನಗೆ ಕರೆ ಮಾಡಿ ಈ ಬಗ್ಗೆ ಮಾತನಾಡಿದ್ದಾರೆ. ಇಂದು ಚಿತ್ರರಂಗ ಸೊರಗುತ್ತಿರುವುದೇ ಬರಹಗಾರರ ಅಭಾವದಿಂದ. ಬರಹಗಾರ ತನ್ನ ಬರವಣಿಗೆಯನ್ನು ನಂಬಿ ಬದುಕಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಅಂಥದ್ರಲ್ಲಿ ಹೀಗೆ ಬೇರೆಯವರ ಕಲ್ಪನೆಗೆ ಕನ್ನ ಹಾಕುವುದು ನನಗಷ್ಟೇ ಅಲ್ಲ… ಇಡೀ ಬರಹಗಾರರ ಸಮೂಹಕ್ಕೆ ಮಾಡುವ ದ್ರೋಹವಾಗಿದೆ. ಭವಿಷ್ಯದಲ್ಲಿ ಯಾವ ಬರಹಗಾರನಿಗೂ ಇಂತಹ ಸ್ಥಿತಿ ಬರಬಾರದು, ಎಲ್ಲರಿಗೂ ಒಂದು ಎಚ್ಚರಿಕೆಯ ಸಂದೇಶ ರವಾನೆಯಾಗಲಿ ಎಂಬ ಉದ್ದೇಶದಿಂದ ಮಾತ್ರ ನಾನು ಇದನ್ನು ಪ್ರಶ್ನಿಸುತ್ತಿದ್ದೇನೆ. ಶುಭವಾಗಲಿ' ಎಂದು ಪೋಸ್ಟ್ ಮಾಡಿದ್ದಾರೆ.

