Dailyhunt Logo
  • Light mode
    Follow system
    Dark mode
    • Play Story
    • App Story
ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ: ಅಮೆರಿಕ ಬದ್ಧತೆ ಪ್ರಶ್ನಿಸಿದ ಇರಾನ್‌

ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ: ಅಮೆರಿಕ ಬದ್ಧತೆ ಪ್ರಶ್ನಿಸಿದ ಇರಾನ್‌

ಟೆಹರಾನ್: ಲೆಬನಾನ್‌ನ ದಕ್ಷಿಣಕ್ಕಿರುವ ಪ್ರದೇಶಗಳ ಮೇಲೆ ಇಸ್ರೇಲ್‌ ಪಡೆಗಳು ಭಾನುವಾರ ದಾಳಿ ನಡೆಸಿವೆ.

'ಇರಾನ್‌ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಗೆ ಸೇರಿದ ಸ್ಥಳಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ' ಎಂದು ಇಸ್ರೇಲ್‌ ಹೇಳಿದೆ. 'ದಹಿಯೇಹ್‌ ಪ್ರದೇಶದ ಮೇಲೆ ಇರಾನ್‌ ನಡೆಸಿದ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ' ಎಂದು ಲೆಬನಾನ್‌ ಹೇಳಿದೆ.

ಈ ಬೆಳವಣಿಗೆಯಿಂದಾಗಿ ಅಮೆರಿಕ ಮತ್ತು ಇರಾನ್‌ ನಡುವಿನ ಉದ್ದೇಶಿತ ಶಾಂತಿ ಒಪ್ಪಂದ ಕುರಿತಂತೆ ಮತ್ತೆ ಅನಿಶ್ಚಿತತೆ ಮುಂದುವರಿಯುವ ಆತಂಕ ಮನೆ ಮಾಡಿದೆ.

'ಅಮೆರಿಕದ ಮಿತ್ರ ರಾಷ್ಟ್ರ ಇಸ್ರೇಲ್‌, ಬೈರೂತ್‌ ಮೇಲೆ ದಾಳಿ ನಡೆಸಿದೆ. ಹೀಗಾಗಿ ಅಮೆರಿಕದೊಂದಿಗೆ ಶಾಂತಿ ಒಪ್ಪಂದ ಕುರಿತ ಮಾತುಕತೆ ನಡೆಸುವುದರಲ್ಲಿ ಯಾವುದೇ ಅರ್ಥ ಇಲ್ಲ' ಎಂದು ಇರಾನ್‌ನ ಮುಖ್ಯ ಮಧ್ಯಸ್ಥಿಕೆದಾರ ಮೊಹಮ್ಮದ್‌ ಬಾಖಿರ್ ಖಾಲೀಬಾಫ್ ಹೇಳಿದ್ದಾರೆ.

ಈ ಕುರಿತು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿರುವ ಅವರು,'ತಾನು ಕೊಟ್ಟ ಭರವಸೆಗಳನ್ನು ಈಡೇರಿಸಲು ಅಮೆರಿಕಕ್ಕೆ ಇಚ್ಛಾಶಕ್ತಿ ಅಥವಾ ಸಾಮರ್ಥ್ಯ ಇಲ್ಲ ಎಂಬುದನ್ನು ಇಸ್ರೇಲ್‌ ಪಡೆಗಳು ನಡೆಸಿರುವ ಈ ದಾಳಿ ತೋರಿಸಿದೆ' ಎಂದು ಟೀಕಿಸಿದ್ದಾರೆ.

'ಶಾಂತಿ ಒಪ್ಪಂದಕ್ಕೆ ಭಾನುವಾರ ಸಹಿ ಹಾಕಲಾಗುತ್ತದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್ ಹೇಳಿದ್ದರು. ಈಗ, ಲೆಬನಾನ್‌ ಮೇಲಿನ ಇಸ್ರೇಲ್‌ ದಾಳಿ ವಿಚಾರ ಮುಂದಿಟ್ಟುಕೊಂಡು ಇರಾನ್ ಈ ಒಪ್ಪಂದಕ್ಕೆ ತಕರಾರು ಎತ್ತಿದ್ದರೆ, ಸರ್ಕಾರವನ್ನು ಬೆಂಬಲಿಸುವ ಪ್ರತಿಭಟನಕಾರರಿಂದಲೂ ಇದಕ್ಕೆ ವಿರೋಧ ವ್ಯಕ್ತವಾಗಿದೆ.

ಟೆಹರಾನ್‌ಗೆ ಭೇಟಿ: ಈ ನಡುವೆ, ಇರಾನ್‌ ಜೊತೆ ಮಾತುಕತೆ ನಡೆಸಿ, ಶಾಂತಿ ಒಪ್ಪಂದವನ್ನು ಅಂತಿಮಗೊಳಿಸುವುದಕ್ಕಾಗಿ ಕತಾರ್‌ನ ಸಂಧಾನಕಾರರು ಭಾನುವಾರ ಟೆಹರಾನ್‌ಗೆ ಬಂದಿಳಿದಿದ್ದಾರೆ.

'ನಿರ್ಧಾರ ಇಲ್ಲ': 'ದೇಶದಲ್ಲಿನ ರಾಜಕೀಯ ಪರಿಸ್ಥಿತಿ, ಕಾನೂನು ಹಾಗೂ ತಾಂತ್ರಿಕ ಅಂಶಗಳನ್ನು ಪರಿಗಣಿಸಿ ತಜ್ಞರ ಮಟ್ಟದಲ್ಲಿ ಪರಾಮರ್ಶೆಗಳು ನಡೆಯುತ್ತಿವೆ. ಹೀಗಾಗಿ, ಅಮೆರಿಕದೊಂದಿಗಿನ ಶಾಂತಿ ಒಪ್ಪಂದದ ಚೌಕಟ್ಟಿನ ಕುರಿತು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ' ಎಂದು ಮೂಲಗಳನ್ನು ಉಲ್ಲೇಖಿಸಿ ಇರಾನ್‌ನ ಫಾರ್ಸ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

ದಾಳಿ ನಡೆಯಬಾರದಿತ್ತು: ಟ್ರಂಪ್

ಲೆಬನಾನ್‌ ಮೇಲೆ ಇಸ್ರೇಲ್‌ ಪಡೆಗಳು ದಾಳಿ ನಡೆಸಿರುವುದಕ್ಕೆ ಭಾನುವಾರ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌'ಈ ದಾಳಿ ನಡೆಯಬಾರದಿತ್ತು' ಎಂದು ಹೇಳಿದ್ದಾರೆ. 'ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸುವುದಕ್ಕೆ ಒಪ್ಪಂದ ಮಾಡಿಕೊಳ್ಳಲಾಗುವುದು' ಎಂದಿರುವ ಅವರು 'ಈ ಒಪ್ಪಂದಕ್ಕೆ ಭಾನುವಾರವೇ ಸಹಿ ಹಾಕಲಾಗುತ್ತದೆ' ಎಂಬ ವರದಿಗಳನ್ನು ದೃಢಪಡಿಸಿಲ್ಲ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿರುವ ಅವರು'ಇದು ದೀರ್ಘಕಾಲದ ಮತ್ತು ಅಮೂಲ್ಯವಾದ ಶಾಂತಿ ಸ್ಥಾಪನೆಯ ಆರಂಭ. ಹೀಗಾಗಿ ಈ ವಿಚಾರವನ್ನು ದೊಡ್ಡದಾಗಿ ಮಾಡುವುದು ಬೇಡ' ಎಂದಿದ್ದಾರೆ.

ಅಂತಿಮ ಕರಡು ಸಿದ್ಧಪಡಿಸಿರುವ ಇರಾನ್

ಅಮೆರಿಕದೊಂದಿಗೆ ಮಾಡಿಕೊಳ್ಳಲಿರುವ ಒಪ್ಪಂದದ ಅಂತಿಮ ಕರಡುವನ್ನು ಇರಾನ್‌ ಸಿದ್ಧಪಡಿಸಿದ್ದಾಗಿ ಹಿರಿಯ ಅಧಿಕಾರಿಯೊಬ್ಬರು ಭಾನುವಾರ ಹೇಳಿದ್ದಾರೆ. ಅಣ್ವಸ್ತ್ರ ಕಾರ್ಯಕ್ರಮದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವುದು ಹಡಗುಗಳ ಸಂಚಾರಕ್ಕೆ ಹೊರ್ಮುಜ್‌ ಜಲಸಂಧಿಯನ್ನು ಮುಕ್ತಗೊಳಿಸುವುದು ಸೇರಿ ಹಲವಾರು ಅಂಶಗಳನ್ನು ಕರಡು ಒಳಗೊಂಡಿದೆ. ಎರಡೂ ದೇಶಗಳು ಒಪ್ಪಿದ ಬಳಿಕ 60 ದಿನಗಳಲ್ಲಿ ಒಪ್ಪಂದವನ್ನು ಅಂತಿಮಗೊಳಿಸುವ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಕರಡುವಿನಲ್ಲಿರುವ ಪ್ರಮುಖ ಅಂಶಗಳು

  • ಎಲ್ಲ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಹೊರ್ಮುಜ್‌ ಜಲಸಂಧಿಯನ್ನು ಇರಾನ್‌ ತಕ್ಷಣವೇ ಮುಕ್ತಗೊಳಿಸುವುದು. ಇರಾನ್‌ನ ಬಂದರುಗಳ ಮೇಲೆ ವಿಧಿಸಿರುವ ನಿರ್ಬಂಧವನ್ನು ಅಮೆರಿಕ ತೆರವುಗೊಳಿಸಬೇಕು. ಈ ಪ್ರಕ್ರಿಯೆಯನ್ನು ಒಪ್ಪಂದಕ್ಕೆ ಸಹಿ ಹಾಕಿದ 30 ದಿನಗಳ ಒಳಗಾಗಿ ಪೂರ್ಣಗೊಳಿಸಬೇಕು

  • ಒಪ್ಪಂದ ಅಂತಿಮಗೊಳ್ಳುವವರೆಗೆ ಇರಾನ್‌ ಮೇಲೆ ಅಮೆರಿಕ ಯಾವುದೇ ರೀತಿಯ ಹೊಸ ನಿರ್ಬಂಧಗಳನ್ನು ಹೇರಬಾರದು

  • ಅಂತಿಮ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಅಮೆರಿಕ ಹಾಗೂ ವಿಶ್ವಸಂಸ್ಥೆ ವಿಧಿಸಿರುವ ಎಲ್ಲ ನಿರ್ಬಂಧಗಳನ್ನು ಎಲ್ಲರಿಗೂ ಒಪ್ಪಿತವಾದ ಕಾಲಮಿತಿಯೊಳಗಾಗಿ ತೆರವು ಮಾಡಬೇಕು

  • ಇರಾನ್‌ ತನ್ನ ತೈಲ ಮಾರಾಟ ಮಾಡಿ ಆದಾಯ ಗಳಿಸುವುದಕ್ಕೆ ಅನುಕೂಲವಾಗುಂತೆ ಅಮೆರಿಕ ವಿಧಿಸಿರುವ ನಿರ್ಬಂಧವನ್ನು ತೆಗೆದು ಹಾಕಬೇಕು

  • ಇರಾನ್‌ಗೆ ಸೇರಿದ 25 ಶತಕೋಟಿ ಡಾಲರ್‌ (ಅಂದಾಜು ₹2377 ಕೋಟಿ) ಮೌಲ್ಯದ ಸ್ವತ್ತುಗಳನ್ನು ಅಮೆರಿಕ ಮುಟ್ಟುಗೋಲು ಹಾಕಿಕೊಂಡಿದ್ದು ಇವುಗಳನ್ನು ಬಿಡುಗಡೆ ಮಾಡಬೇಕು

  • ಅಮೆರಿಕ ತನ್ನ ಮಿತ್ರ ರಾಷ್ಟ್ರಗಳ ಸಮನ್ವಯದೊಂದಿಗೆ ಇರಾನ್‌ನ ಪುನರ್‌ಅಭಿವೃದ್ಧಿ ಮತ್ತು ಪುನರ್‌ನಿರ್ಮಾಣಕ್ಕೆ ಯೋಜನೆ ರೂಪಿಸಿಸಬೇಕು. ಈ ಕುರಿತು 60 ದಿನಗಳಲ್ಲಿ ಮಾತುಕತೆ ನಡೆಸಿ ಒಮ್ಮತಕ್ಕೆ ಬರಬೇಕು ದಿಯನ್ನು ಇರಾನ್‌ ಕೈಬಿಡಲಿದೆ

  • ಅಂತಿಮ ಒಪ್ಪಂದಕ್ಕೆ ಒಳಪಟ್ಟಂತೆ ಇರಾನ್‌ ತನ್ನ ಅಣ್ವಸ್ತ್ರ ಕಾರ್ಯಕ್ರಮದಲ್ಲಿ 'ಯಥಾಸ್ಥಿತಿ' ಕಾಪಾಡಲಿದೆ. ಅಂದರೆ ಯುರೇನಿಯಂ ಸಮೃದ್ಧೀಕರಣ ಮತ್ತು ಇದಕ್ಕೆ ಸಂಬಂಧಿಸಿದ ಸೌಲಭ್ಯಗಳ ವಿಸ್ತರಣೆ ಕೈಬಿಡಲಿದೆ

Dailyhunt
Disclaimer: This content has not been generated, created or edited by Dailyhunt. Publisher: Prajavani