ಬಾಲಿವುಡ್‌ನ ಬಹುನಿರೀಕ್ಷಿತ ಹಾಗೂ ದೊಡ್ಡ ಬಜೆಟ್ ಸಿನಿಮಾ ರಾಮಾಯಣ ಟ್ರೇಲರ್ ಬಿಡುಗಡೆಗೆ ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಈ ನಡುವೆ, ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಗೂ ಮುನ್ನವೇ ಅದರ ಪ್ರಮುಖ ಆಯಕ್ಷನ್ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ ಎಂಬ ಸುದ್ದಿ ಸಿನಿರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಇತ್ತೀಚೆಗೆ ನಡೆದ ಕಾಮಿಕ್-ಕಾನ್ ಎಂಬ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ ತುಣುಕು ಇದಾಗಿದೆ ಎಂದು ಹೇಳಲಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದರದ್ದೇ ಚರ್ಚೆ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಾದ ರೆಡ್ಡಿಟ್ ಮತ್ತು ಎಕ್ಸ್‌ನಲ್ಲಿ ಹರಿದಾಡುತ್ತಿರುವ 11 ಸೆಕೆಂಡುಗಳ ಅಸ್ಪಷ್ಟ ವಿಡಿಯೊದಲ್ಲಿ, ನಟ ರಣಬೀರ್ ಕಪೂರ್ ಅವರು ಶ್ರೀರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಡಿಯೊ ಅಸಲಿಯೇ ಅಥವಾ ಯಾರೋ ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಿರುವ ನಕಲಿ ವಿಡಿಯೊ ಇರಬಹುದು ಎಂದು ನೆಟ್ಟಿಗರು ಗೊಂದಲದಲ್ಲಿದ್ದಾರೆ.
ಹರಿದಾಡುತ್ತಿರುವ ವಿಡಿಯೊದಲ್ಲಿ, ಭೀಕರ ಯುದ್ಧಭೂಮಿಯ ಮಧ್ಯೆ ನಿಂತಿರುವ ಶ್ರೀರಾಮ (ರಣಬೀರ್ ಕಪೂರ್), ಬಿಲ್ಲು ಹೂಡಿ ದಿವ್ಯಾಸ್ತ್ರವೊಂದನ್ನು ಪ್ರಯೋಗಿಸುತ್ತಾರೆ. ಆ ಬಾಣವು ಹೋಗಿ ಎದುರಿಗಿರುವ ದೈತ್ಯ ರಕ್ಕಸನಿಗೆ ತಗುಲಿ ಭಾರಿ ಪ್ರಮಾಣದ ಸ್ಫೋಟ ಸಂಭವಿಸುವ ದೃಶ್ಯ ಅದರಲ್ಲಿದೆ. ಈ ದೃಶ್ಯವನ್ನು ಕಂಡ ಒಂದು ವರ್ಗದ ನೆಟ್ಟಿಗರು ಇದು ಕೇವಲ ಲೈಕ್ಸ್ ಮತ್ತು ವೀವ್ಸ್‌ಗಾಗಿ ಅಭಿಮಾನಿಗಳು ಎಐ ಮೂಲಕ ಸೃಷ್ಟಿಸಿರುವ ವಿಡಿಯೊ ಎಂದು ತಳ್ಳಿಹಾಕಿದ್ದಾರೆ.
ಇನ್ನೂ ಕೆಲವರು ಈ ದೃಶ್ಯವನ್ನು ಗ್ರಾಫಿಕ್ಸ್ ಸಿನಿಮಾಗಳಿಗೆ ಹೋಲಿಸಿ ಲೇವಡಿ ಮಾಡಿದ್ದಾರೆ. 'ರಾಮಾಯಣದ ಯಾವ ಆವೃತ್ತಿಯಲ್ಲಿ ಶ್ರೀರಾಮನು ಗಾಡ್ಜಿಲ್ಲಾ ಜೊತೆ ಯುದ್ಧ ಮಾಡಿದ್ದ ಉಲ್ಲೇಖವಿದೆ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
'ರಾಮಾಯಣ' ಚಿತ್ರದ ಕುರಿತು ಇಂತಹ ವದಂತಿಗಳು ಹರಡುತ್ತಿರುವುದು ಇದೇ ಮೊದಲೇನಲ್ಲ. ಇದೇ ವರ್ಷದ ಆರಂಭದಲ್ಲಿ 'ಸಿಯಾ ಕೆ ರಾಮ್' ಎಂಬ ಹಳೆಯ ಟಿವಿ ಧಾರಾವಾಹಿಯ ಚಿತ್ರಗಳನ್ನು ಎಡಿಟ್ ಮಾಡಿ, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅವರ ರಾಮ-ಸೀತೆಯ ಫಸ್ಟ್ ಲುಕ್ ಲೀಕ್ ಆಗಿದೆ ಎಂದು ಹರಿಬಿಡಲಾಗಿತ್ತು. ಸದ್ಯ ಹರಿದಾಡುತ್ತಿರುವ 11 ಸೆಕೆಂಡುಗಳ ವಿಡಿಯೊ ಬಗ್ಗೆ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ರಾವಣನಾಗಿ ಯಶ್, ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೋಲ್, ಲಕ್ಷ್ಮಣನ ಪಾತ್ರದಲ್ಲಿ ರವಿ ದುಬೆ ಅವರು ನಟಿಸಿದ್ದಾರೆ. ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿಎನ್‌ಇಜಿ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ಈ ಸಿನಿಮಾ ಬಿಡುಗಡೆ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

