ಕಠ್ಮಂಡು (ಪಿಟಿಐ): 'ಲಿಪುಲೇಖ್ ಪಾಸ್' ಮೇಲಿನ ತನ್ನ ಪ್ರಾದೇಶಿಕ ಹಕ್ಕು ಪ್ರತಿಪಾದಿಸಿರುವ ನೇಪಾಳವು ಈ ವಿಚಾರದಲ್ಲಿ ಭಾರತದೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿದೆ.
ಮುಂಬರುವ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಭಾರತ 'ಲಿಪುಲೇಖ್ ಪಾಸ್' ಮೂಲಕ ನಡೆಸಲು ಯೋಜಿಸುತ್ತಿರುವುದಕ್ಕೆ ನೇಪಾಳ ಭಾನುವಾರ ಆಕ್ಷೇಪ ವ್ಯಕ್ತಪಡಿಸಿತ್ತು.
ಈ ಆಕ್ಷೇಪಣೆಯನ್ನು ತಳ್ಳಿಹಾಕಿದ್ದ ಭಾರತ, ಉತ್ತಾರಾಖಂಡದ ಲಿಪುಲೇಖ್ ಪಾಸ್ ಮೂಲಕ ದಶಕಗಳಷ್ಟು (1954) ಹಿಂದಿನಿಂದಲೂ ಕೈಲಾಸ ಮಾನಸ ಸರೋವರ ಯಾತ್ರೆ ನಡೆದುಕೊಂಡು ಬಂದಿದೆ. ಇದು ಅತ್ಯಂತ ಹಳೆಯ ಮಾರ್ಗ ಎಂದು ಕಟುವಾಗಿ ಪ್ರತಿಕ್ರಿಯೆ ನೀಡಿತ್ತು. 'ನೇಪಾಳವು ತನ್ನ ಗಡಿಯನ್ನು ವಿಸ್ತರಿಸುವ ಉದ್ದೇಶ ಹೊಂದಿಲ್ಲ. 'ಲಿಪುಲೇಖ್ ಪಾಸ್' ನೇಪಾಳಕ್ಕೆ ಸೇರಿದ್ದಾಗಿದ್ದು, ನಮ್ಮ ನಿಲುವಿಗೆ ಬದ್ಧವಾಗಿದ್ದೇವೆ' ಎಂದು ಸರ್ಕಾರದ ವಕ್ತಾರ, ಶಿಕ್ಷಣ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಸಸ್ಮಿತ್ ಪೊಖಾರೆಲ್ ತಿಳಿಸಿದ್ದಾರೆ.
'ಎರಡು ದೇಶಗಳ ನಡುವಿನ ಸಹಯೋಗ ಹಾಗೂ ರಾಜತಾಂತ್ರಿಕ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಲಾಗುವುದು' ಎಂದು ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-51-573733150
