Dailyhunt
ಲೋಕಸಭೆಯಲ್ಲಿ ಡ್ಯಾನಿಶ್ ಅಲಿಯನ್ನು ನಿಂದಿಸಿದ ಬಿಜೆಪಿ ಸಂಸದ ರಮೇಶ್

ಲೋಕಸಭೆಯಲ್ಲಿ ಡ್ಯಾನಿಶ್ ಅಲಿಯನ್ನು ನಿಂದಿಸಿದ ಬಿಜೆಪಿ ಸಂಸದ ರಮೇಶ್

‌‌ನವದೆಹಲಿ: ಬಹುಜನ ಸಮಾಜವಾದಿ ಪಕ್ಷದ ಸಂಸದ ಡ್ಯಾನಿಶ್‌ ಅಲಿ ಅವರನ್ನು ಬಿಜೆಪಿ ಸಂಸದ ರಮೇಶ್‌ ಬಿಧೂರಿ ಅವರು ಲೋಕಸಭೆಯಲ್ಲಿ ಅಸಂಸದೀಯ ‍‍ಪದಗಳ ಮೂಲಕ ನಿಂದಿಸಿದ್ದಾರೆ. ಅವರ ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಇಂಥ ವರ್ತನೆ ಪುನರಾವರ್ತನೆಯಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸ್ಪೀಕರ್‌ ಓಂ ಬಿರ್ಲಾ ಎಚ್ಚರಿಸಿದ್ದಾರೆ.

ಗುರುವಾರ ಲೋಕಸಭೆಯಲ್ಲಿ ಚಂದ್ರಯಾನ-3ರ ಬಗ್ಗೆ ಚರ್ಚೆ ನಡೆಯುವ ವೇಳೆ ದಕ್ಷಿಣ ದೆಹಲಿಯ ಸಂಸದ ರಮೇಶ್‌ ಬಿಧೂರಿಯವರು ಡ್ಯಾನಿಶ್‌ ಅಲಿಯವರನ್ನು ಅಸಂಸದೀಯ ಪದಗಳನ್ನು ಸಂಬೋಧಿಸಿ ನಿಂದಿಸಿದ್ದಾರೆ.

ಈ ವೇಳೆ ಸ್ಪೀಕರ್‌ ಪೀಠದಲ್ಲಿ ಕೋಡಿಕುನ್ನಿಲ್‌ ಸುರೇಶ್‌ ಅವರು ಇದ್ದರು.

ರಮೇಶ್‌ ಅವರ ಹೇಳಿಕೆಗೆ ಸಚಿವ ರಾಜನಾಥ್‌ ಸಿಂಗ್ ವಿಷಾದ ವ್ಯಕ್ತಪಡಿಸಿದ್ದಾರೆ. ರಮೇಶ್‌ ಅವರನ್ನು ಅಮಾನತು ಮಾಡಬೇಕು ಎಂದು ಕಾಂಗ್ರೆಸ್‌ ನಾಯಕ ಜೈರಾಮ್ ರಮೇಶ್ ಒತ್ತಾಯಿಸಿದ್ದಾರೆ.

'ರಮೇಶ್‌ ಅವರ ಮಾತುಗಳನ್ನು ನಾನು ಕೇಳಿಸಿಕೊಂಡಿಲ್ಲ. ಅವರ ಮಾತುಗಳಿಂದ ವಿರೋಧ ಪಕ್ಷದ ಸದಸ್ಯರಿಗೆ ನೋವಾಗಿದ್ದರೆ ಅದನ್ನು ಕಡತದಿಂದ ತೆಗೆಯಬೇಕು ಎಂದು ನಾನು ಸ್ಪೀಕರ್‌ ಅವರನ್ನು ಕೋರುತ್ತೇನೆ' ಎಂದು ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

'ಡ್ಯಾನಿಶ್ ಅಲಿ ಅವರ ವಿರುದ್ಧ ರಮೇಶ್‌ ಅವರು ಹೇಳಿದ ಮಾತು ತೀವ್ರ ಖಂಡನೆಗೆ ಅರ್ಹವಾದುದು. ಇದನ್ನು ಎಷ್ಟು ನಿಂದಿಸಿದರೂ ಸಾಲದು. ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರು ಕ್ಷಮೆ ಕೇಳಿದ್ದಾರೆ. ಆದರೆ ಅದು ಸಾಲದು. ನಾನು ಈ ಥರದ ಭಾಷೆಯನ್ನು ಕೇಳಿಯೇ ಇಲ್ಲ. ಇಂತ ಭಾಷೆಯನ್ನು ಸಂಸತ್ತಿನ ಒಳಗೂ, ಹೊರಗೂ ಉಪಯೋಗಿಸಕೂಡದು. ಇದು ಡ್ಯಾನಿಶ್ ಅಲಿ ಅವರಿಗೆ ಮಾತ್ರವಲ್ಲ, ನಮಗೆಲ್ಲರಿಗೂ ಮಾಡಿದ ಅವಮಾನ. ಹೊಸ ಸಂಸತ್‌ ಭವನದ ಆರಂಭದಲ್ಲಿ ರಮೇಶ್ ಅವರಿಂದ ಈ ಮಾತುಗಳು ಬಂದಿವೆ. ಇದು ಬಿಜೆಪಿಯವರ ಉದ್ದೇಶವನ್ನು ತೋರಿಸುತ್ತದೆ. ಅವರನ್ನು ಅಮಾನತುಗೊಳಿಸಿ, ಕಠಿಣ ಕ್ರಮ ತೆಗೆದುಕೊಳ್ಳಲು ಇದು ಸೂಕ್ತವಾದ ಪ್ರಕರಣ' ಎಂದು ಜೈರಾಮ್ ರಮೇಶ್‌ ಹೇಳಿದ್ದಾರೆ.

ಡ್ಯಾನಿಶ್ ಅಲಿ ವಿರುದ್ಧ ಅಸಂಸದೀಯ ಪದ ಬಳಕೆ: BJP ಸಂಸದ ರಮೇಶ್‌ಗೆ ಶೋಕಾಸ್ ನೋಟಿಸ್
Dailyhunt
Disclaimer: This content has not been generated, created or edited by Dailyhunt. Publisher: Prajavani