Dailyhunt
LPG ಬೆಲೆ ಏರಿಕೆ: ಟ್ರೋಲ್ ಆದ ಶೋಭಾ ಕರಂದ್ಲಾಜೆ, ಪ್ರಲ್ಹಾದ್ ಜೋಶಿ

LPG ಬೆಲೆ ಏರಿಕೆ: ಟ್ರೋಲ್ ಆದ ಶೋಭಾ ಕರಂದ್ಲಾಜೆ, ಪ್ರಲ್ಹಾದ್ ಜೋಶಿ

ಬೆಂಗಳೂರು: ವಾಣಿಜ್ಯ ಬಳಕೆಯ 19 ಕೆ.ಜಿ ತೂಕದ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು ವಿರೋಧ ಪಕ್ಷಗಳೂ ಸೇರಿದಂತೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಬೆಲೆ ಏರಿಕೆ ನಿರ್ಧಾರವನ್ನು ತಮ್ಮ ಸರ್ಕಾರದ ಪರವಾಗಿ ಸಮರ್ಥಿಸಿಕೊಳ್ಳಲು ಹೋದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಪ್ರಲ್ಹಾದ್ ಜೋಶಿ ಅವರು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿರುವುದಲ್ಲದೇ ಟ್ರೂಲ್ ಆಗಿದ್ದಾರೆ.

ಮಾಧ್ಯಮದವರು, ಬೆಲೆ ಏರಿಕೆ ಬಗ್ಗೆ ಕೇಳಿದರೆ ಶೋಭಾ ಕರಂದ್ಲಾಜೆ ಅವರು ಇನ್ನೇನೋ ಸಂಬಂಧವಿಲ್ಲದ ವಿಷಯ ಮಾತನಾಡಿ ವಿಷಯ ಮರೆಮಾಚಿರುವ ವಿಡಿಯೊ ಹಂಚಿಕೊಂಡು ಹಲವರು ಟೀಕಿಸಿದ್ದಾರೆ. ಬೆಲೆ ಏರಿಕೆ ಕೇಳಿದರೆ, ಮೋದಿ ಅವರು ಮೀಸಲಾತಿ ಬಿಲ್ ತರಲು ಹೊರಟಿದ್ದರು ಅದನ್ನು ಕಾಂಗ್ರೆಸ್ ತಡೆಯಿತು ಎಂದು ವಿಷಯಾಂತರ ಮಾಡಿದ್ದಾರೆ.

ಇನ್ನು, ಪ್ರಲ್ಹಾದ್ ಜೋಶಿ ಅವರು, ಬೆಲೆ ಏರಿಕೆಗೂ ಕೇಂದ್ರ ಸರ್ಕಾರಕ್ಕೂ ಸಂಬಂಧವಿಲ್ಲ. ಅದನ್ನು ಆಯಿಲ್ ಕಂಪನಿಗಳು ಮಾಡುವುದು ಎಂದು ಹೇಳಿದ್ದರು. ಈ ಬಗ್ಗೆ ಜೋಶಿ ಅವರಿಗೂ ವಿರೋಧ ವ್ಯಕ್ತವಾಗಿದೆ. ಈ ವ್ಯಕ್ತಿ ಬೆಲೆ ಇಳಿದರೆ ಅದನ್ನು ಮೋದಿ ಅವರು ಮಾಡಿದ್ದು ಎಂದು ಯಾವುದೇ ಸಂಕೋಚವಿಲ್ಲದೇ ಹೇಳುತ್ತಾರೆ. ಈಗ ನೋಡಿ ಎಂದು ಲೇವಡಿ ಮಾಡಿದ್ದಾರೆ.

ವಾಣಿಜ್ಯ ಬಳಕೆಯ 19 ಕೆ.ಜಿ ತೂಕದ ಎಲ್‌ಪಿಜಿ ಸಿಲಿಂಡರ್‌ ಬೆಲೆ ಬರೋಬ್ಬರಿ ₹993 ಏರಿಕೆಯಾಗಿದೆ.

ಗೃಹ ಬಳಕೆಯ 14.2 ಕೆ.ಜಿ ತೂಕದ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಕೊನೆಯದಾಗಿ ಮಾರ್ಚ್ 7ರಂದು ₹60 ಹೆಚ್ಚಿಸಲಾಗಿತ್ತು. ದೆಹಲಿಯಲ್ಲಿ ಇದರ ಬೆಲೆ ₹913ಆಗಿದೆ. ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆ ಸರಪಳಿಗೆ ಅಡಚಣೆಯುಂಟಾಗಿದ್ದು, ಜಾಗತಿಕ ತೈಲ ಬೆಲೆಗಳು ಶೇ 50ರಷ್ಟು ಹೆಚ್ಚಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani