Dailyhunt Logo
  • Light mode
    Follow system
    Dark mode
    • Play Story
    • App Story
ಮಾದಾಪಟ್ಟಣ ಕಲ್ಲು ಕ್ವಾರಿ ದುರಂತ: ಸಿಎಂ ಡಿಕೆಶಿ, ಎಚ್‌ಡಿಕೆ ಸೇರಿ ಗಣ್ಯರ ಸಂತಾಪ

ಮಾದಾಪಟ್ಟಣ ಕಲ್ಲು ಕ್ವಾರಿ ದುರಂತ: ಸಿಎಂ ಡಿಕೆಶಿ, ಎಚ್‌ಡಿಕೆ ಸೇರಿ ಗಣ್ಯರ ಸಂತಾಪ

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದಲ್ಲಿ ಕಲ್ಲು ಕ್ವಾರಿಯ ಬಂಡೆ ಕುಸಿದು ಏಳು ಜನ ಕಾರ್ಮಿಕರು ಮೃತಪಟ್ಟಿರುವ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.

'ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದಲ್ಲಿ ಕ್ರಷರ್ ಬಂಡೆ ಕುಸಿದು 7 ಮಂದಿ ಕಾರ್ಮಿಕರು ಮೃತಪಟ್ಟಿರುವುದು ತೀವ್ರ ದುಃಖವನ್ನುಂಟು ಮಾಡಿದೆ.

ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ, ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲಿ ಹಾಗೂ ಗಾಯಾಳುಗಳು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಸಿಎಂ ಡಿ.ಕೆ.ಶಿವಕುಮಾರ್ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿದ್ದಾರೆ.

'ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಜೀವ ರಕ್ಷಣೆ ಹಾಗೂ ಭದ್ರತೆ ಒದಗಿಸುವುದು ಕ್ವಾರಿ ಮಾಲೀಕರ ಕರ್ತವ್ಯವಾಗಿದೆ. ನಿಯಮ ಉಲ್ಲಂಘಿಸುವ ಕ್ವಾರಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮಕೈಗೊಳ್ಳಲಿದೆ' ಎಂದು ಅವರು ತಿಳಿಸಿದ್ದಾರೆ.

'ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದಲ್ಲಿ ಕಲ್ಲು ಕ್ವಾರಿಯ ಬಂಡೆ ಕುಸಿದು ಏಳು ಜನ ಕಾರ್ಮಿಕರು ಸಾವಿಗೀಡಾಗಿರುವ ಘಟನೆ ನನಗೆ ಅತೀವ ನೋವುಂಟು ಮಾಡಿದೆ. ಮೃತಪಟ್ಟ ಕಾರ್ಮಿಕರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ ಹಾಗೂ ಗಾಯಗೊಂಡವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಎಚ್‌.ಡಿ.ಕುಮಾರಸ್ವಾಮಿ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿದ್ದಾರೆ.

'ರಾಜ್ಯ ಸರಕಾರ ನೊಂದ ಕುಟುಂಬ ಕುಟುಂಬಗಳಿಗೆ ತಕ್ಷಣವೇ ಸೂಕ್ತ ಪರಿಹಾರ ನೀಡುವುದರ ಜತೆಗೆ ಇನ್ನಿತರ ತುರ್ತು ನೆರವು ಒದಗಿಸಬೇಕು. ಜತೆಗೆ, ಕ್ವಾರಿಗಳಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳನ್ನು ಜಾರಿಗೆ ಕ್ರಮ ವಹಿಸಿ ಸಂಬಂಧಿತ ಇಲಾಖೆ ತೀವ್ರ ನಿಗಾ ಇರಿಸುವಂತೆ ಆದೇಶಿಸಬೇಕು. ಇಂಥ ಕಠಿಣ ಕ್ರಮಗಳು ಆಗದಿರುವ ಕಾರಣಕ್ಕೆ ಈ ರೀತಿಯ ದುರಂತಗಳು ಮರುಕಳಿಸುತ್ತಿವೆ. ರಾಜ್ಯದಲ್ಲಿ ಪದೇಪದೇ ಕ್ವಾರಿ ದುರಂತಗಳು ಸಂಭವಿಸುತ್ತಿದ್ದರೂ ಯಾರ ಮೇಲೆಯೂ ಕ್ರಮ ಆಗಿಲ್ಲ ಎನ್ನುವುದು ಅತ್ಯಂತ ಬೇಸರದ ಸಂಗತಿ. ಕ್ವಾರಿ ಮಾಲೀಕರು ಕೂಡ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ವಹಿಸಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು' ಎಂದು ಅವರು ಒತ್ತಾಯಿಸಿದ್ದಾರೆ.

ಏನಿದು ಘಟನೆ?

ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಮಾದಾಪಟ್ಟಣದಲ್ಲಿರುವ ಕಾವೇರಿ ಜಲ್ಲಿ ಕ್ರಷರ್‌ನಲ್ಲಿ ಗುರುವಾರ ನಡೆದಿದೆ. ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರ ಶವಗಳನ್ನು ಹೊರೆತೆಗೆಯುವ ಕಾರ್ಯಾಚರಣೆ ಆರಂಭವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ತಾವರೆಕೆರೆ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಮೃತರೆಲ್ಲರೂ ದಿನಗೂಲಿ ಕಾರ್ಮಿಕರಾಗಿದ್ದು, ಕ್ರಷರ್ ಬಳಿಯೇ ವಾಸಿಸುತ್ತಿದ್ದರು ಎನ್ನಲಾಗಿದೆ. ಬೆಳಿಗ್ಗೆ 7.30ರ ಸುಮಾರಿಗೆ ಎಂದಿನಂತೆ ಕೆಲಸದಲ್ಲಿ ತೊಡಗಿದ್ದಾಗ ಘಟನೆ ಸಂಭವಿಸಿದೆ.

ಮಾದಾಪಟ್ಟಣ: ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ

ಬೆಂಗಳೂರು ದಕ್ಷಿಣ ಜಿಲ್ಲೆ ಮಾದಾಪಟ್ಟಣದ ಕಲ್ಲು ಕ್ವಾರಿಯಲ್ಲಿ ಗುರುವಾರ ಬಂಡೆ ಕುಸಿದು ಸಾವನ್ನಪ್ಪಿದ ಏಳು ಮಂದಿಯ ಪಾರ್ಥಿವ ಶರೀರ ಇರಿಸಿರುವ ಹಾಗೂ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಆರ್ ಆರ್ ಆಸ್ಪತ್ರೆಗೆ ಸಿಎಂ ಡಿ ಕೆ ಶಿವಕುಮಾರ್ ಅವರು ಗುರುವಾರ ಭೇಟಿ ನೀಡಿ, ಗಾಯಾಳುಗಳು ಹಾಗೂ ಸಂತ್ರಸ್ತ ಕುಟುಂಬದವರಿಗೆ ಸಾಂತ್ವನ ಹೇಳಿದರು. ಸಚಿವ ಕೃಷ್ಣ ಬೈರೇಗೌಡ, ಶಾಸಕರಾದ ಎಸ್ ಟಿ ಸೋಮಶೇಖರ್, ಎ ಸಿ ಶ್ರೀನಿವಾಸ್ ಜತೆಗಿದ್ದರು

Dailyhunt
Disclaimer: This content has not been generated, created or edited by Dailyhunt. Publisher: Prajavani