Dailyhunt
ಮಾರುಕಟ್ಟೆಯಲ್ಲಿ ಜನದಟ್ಟಣೆ; ಖರೀದಿ ಜೋರು

ಮಾರುಕಟ್ಟೆಯಲ್ಲಿ ಜನದಟ್ಟಣೆ; ಖರೀದಿ ಜೋರು

ಕಲಬುರ್ಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದ್ದರಿಂದ ಜಿಲ್ಲಾಡಳಿತವು ಜಿಲ್ಲೆಯಾದ್ಯಂದ ವಿಧಿಸಿದ್ದ ನಿರ್ಬಂಧಗಳನ್ನು ಸೋಮವಾರದಿಂದ ಬಹುತೇಕ ತೆರವುಗೊಳಿಸಿತು. ಇದರಿಂದ ವಿವಿಧ ವಾಣಿಜ್ಯ ಮಳಿಗೆಗಳಲ್ಲಿ ಖರೀದಿ ನಡೆಯಿತು. ಉಳಿದ ದಿನಗಳಿಗೆ ಹೋಲಿಸಿದರೆ ಗ್ರಾಹಕರ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡು ಬಂತು.

ಜಿಲ್ಲೆಯಾದ್ಯಂತ ಎಲ್ಲ ದೇವಸ್ಥಾನ, ಮಸೀದಿ, ಚರ್ಚ್‌ ಸೇರಿದಂತೆ ಎಲ್ಲ ಬಗೆಯ ಪ್ರಾರ್ಥನಾ ಮಂದಿರಗಳ ಬಾಗಿಲನ್ನು ತೆರೆದು ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಯಿತು. ಆದರೂ, ಭಕ್ತರ ಸಂಖ್ಯೆ ವಿರಳವಾಗಿತ್ತು.

ನಗರದ ಶರಣಬಸವೇಶ್ವರ ದೇವಸ್ಥಾನದ ಬಳಿಯೂ ಭಕ್ತರ ಸಂಖ್ಯೆ ವಿರಳವಾಗಿತ್ತು. ಬಂದ ಭಕ್ತರಿಗೆ ಪರಸ್ಪರ ಅಂತರ ಕಾಯ್ದುಕೊಂಡು ದರ್ಶನ ಪಡೆಯಲು ದೇವಸ್ಥಾನದ ಆಡಳಿತ ಮಂಡಳಿಯವರು ವ್ಯವಸ್ಥೆ ಮಾಡಿದ್ದರು.


ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

ಖಾಜಾ ಬಂದಾ ನವಾಜ್ ದರ್ಗಾ ಬಳಿಯೂ ದಟ್ಟಣಿ ಕಂಡು ಬರಲಿಲ್ಲ.

ಮಾಲ್‌ಗಳು ಆರಂಭ: ಸುಮಾರು 2 ತಿಂಗಳಿಂದ ತಮ್ಮ ವಹಿವಾಟನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದ ನಗರದ ಮಾಲ್‌ಗಳಲ್ಲಿ ವಹಿವಾಟು ಪುನರಾರಂಭಗೊಂಡಿತು.

ವಿವಿಧ ಬ್ರಾಂಡ್‌ನ ಬಟ್ಟೆ ಅಂಗಡಿಗಳು, ಆಭರಣ ಮಳಿಗೆಗಳು, ಕ್ರೀಡಾ ಸಾಮಗ್ರಿ ಮಾರಾಟ ಮಳಿಗೆಗಳು, ಪುಸ್ತಕದಂಗಡಿಗಳು ವಹಿವಾಟು ನಡೆಸಿದವು.

ಸೂಪರ್‌ ಮಾರ್ಕೆಟ್‌ ರಸ್ತೆಯ ಇಕ್ಕೆಲಗಳಲ್ಲಿ ಹರಡಿಕೊಂಡಿರುವ ಪ್ರಸಿದ್ಧ ಬ್ರಾಂಡ್‌ಗಳ ಬಟ್ಟೆ ಅಂಗಡಿಗಳು ಬೆಳಿಗ್ಗೆಯಿಂದ ರಾತ್ರಿಯವರೆಗೆ ವಹಿವಾಟಿ ನಡೆಸಿದವು.

ಸಂಜೆಯ ಬಳಿಕ ಮುಚ್ಚುತ್ತಿದ್ದ ಹೋಟೆಲ್‌ಗಳು, ಬೇಕರಿಗಳು, ಬೀದಿ ಬದಿ ತಿನಿಸಿನ ಅಂಗಡಿಗಳು, ಚಹಾ ಅಂಗಡಿಗಳ ಎದುರು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು.

ರಸ್ತೆಗಳಲ್ಲಿ ವಾಹನ ಸವಾರರ ದಟ್ಟಣಿ ಹೆಚ್ಚಾಗಿದ್ದರಿಂದ ಪೊಲೀಸರು ವೃತ್ತಗಳಲ್ಲಿ ಸಿಗ್ನಲ್‌ ದೀಪಗಳನ್ನು ಉರಿಸಿದರು. ಸಂಚಾರ ದಟ್ಟಣಿ ನಿಯಂತ್ರಣಕ್ಕೆ ಎಸ್‌ವಿಪಿ ವೃತ್ತ, ಅನ್ನಪೂರ್ಣ ಕ್ರಾಸ್, ಜಗತ್ ವೃತ್ತ, ಸೂಪರ್ ಮಾರ್ಕೆಟ್‌ನ ಚೌಕ ಸೇರಿದಂತೆ ಪ್ರಮುಖ ಸ್ಥಳಗಳ ಬಳಿ ಸಂಚಾರ ಠಾಣೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Prajavani