ಮಾಯಕೊಂಡ: ಮಹಿಳೆಯೊಬ್ಬರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಅವರ ಪ್ರಿಯಕರ ಹಾಗೂ ಪ್ರಿಯಕರನ ಪುತ್ರನನ್ನು ಬಂಧಿಸಿದ್ದಾರೆ.
ಬಾಡಾ ಗ್ರಾಮದಲ್ಲಿ ಪ್ರಿಯಕರನೊಂದಿಗೆ ವಾಸಿಸುತ್ತಿದ್ದ ದೀಪಾ (37) ಮೃತ ಮಹಿಳೆ. ಮೃತರ ಸೋದರ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಮಾಯಕೊಂಡ ಪೊಲೀಸರು, ಅಂಜಿನಿ ಹಾಗೂ ಆತನ ಪುತ್ರ ಅಭಿ ಎಂಬುವವನನ್ನು ಬಂಧಿಸಿದ್ದಾರೆ.
ಹಿರೇಕೋಗಲೂರು ಗ್ರಾಮದ ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದ ದೀಪಾ 10 ವರ್ಷಗಳ ಹಿಂದೆಯೇ ಪತಿಯನ್ನು ತೊರೆದು, ಬಾಡಾ ಗ್ರಾಮದ ಅಂಜಿನಿ ಎಂಬಾತನೊಂದಿಗೆ ವಾಸವಿದ್ದರು. ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಅ. 31ರಂದು ನಡೆದ ಜಗಳ ವಿಕೋಪಕ್ಕೆ ತಿರುಗಿತ್ತು.
ಅಂಜಿನಿ, ಆತನ ತಾಯಿ ರತ್ನಮ್ಮ, ಪತ್ನಿ ರೇಣುಕಾ ಹಾಗೂ ಪುತ್ರ ಅಭಿ ಸೇರಿಕೊಂಡು ದೀಪಾ ಅವರ ಮೇಲೆ ಅ. 31ರಂದು ತೀವ್ರವಾಗಿ ಹಲ್ಲೆ ನಡೆಸಿ ನೇಣು ಬಿಗಿದು ಹತ್ಯೆಗೆ ಯತ್ನಿಸಿದ್ದರು. ಆ ನಂತರ ಅಂಜಿನಿಯೇ ಗಾಯಾಳು ದೀಪಾ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ದೀಪಾ ಪುತ್ರಿಗೆ ಕರೆ ಮಾಡಿ, 'ನಿನ್ನ ತಾಯಿ ತಲೆಸುತ್ತು ಬಂದು ಬಿದ್ದಿದ್ದು ಆಸ್ಪತ್ರೆಗೆ ದಾಖಲಿಸಿದ್ದೇನೆ' ಎಂದು ತಿಳಿಸಿದ್ದ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ದೀಪಾ ಪುತ್ರಿಯು ಆಸ್ಪತ್ರೆಗೆ ತೆರಳುವಷ್ಟರಲ್ಲಿ ಮಹಿಳೆ ಮೃತಪಟ್ಟಿದ್ದರು.
ಚಿಕಿತ್ಸೆ ವೇಳೆ ಅವರು ತಮ್ಮ ಕೈ ಮೇಲೆ ಆರೋಪಿಗಳ ಹೆಸರನ್ನು ಬರೆದುಕೊಂಡಿದ್ದರಿಂದ ಹತ್ಯೆಯ ಮಾಹಿತಿ ದೊರೆಯಿತು. ಈ ಸಂಬಂಧ ಮೃತಳ ಸಹೋದರ ರುದ್ರೇಶ್ ಮಾಯಕೊಂಡ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿಸಿದ್ದು, ತಲೆ ಮರೆಸಿಕೊಂಡಿರುವ ರತ್ನಮ್ಮ, ರೇಣುಕಾ ಬಂಧನಕ್ಕೆ ಬಲೆ ಬೀಸಿದ್ದಾರೆ.
261104-43-1253087547

