ಡಯಾಬಿಟಿಸ್ (ಮಧುಮೇಹ) ಬಂದಿದೆ ಎಂದಾಕ್ಷಣ ಬಹುತೇಕರು ಹೌಹಾರುತ್ತಾರೆ. ಇದಕ್ಕೆ ಕಾರಣ ಮಧುಮೇಹದ ಕುರಿತು ಸಮಾಜದಲ್ಲಿ ಬೇರೂರಿರುವ ತಪ್ಪು ಕಲ್ಪನೆಗಳು ಮತ್ತು ಅನಗತ್ಯ ಭಯ. ವಾಸ್ತವವಾಗಿ, ಮಧುಮೇಹ ಒಂದು ದೀರ್ಘಕಾಲೀನ ಕಾಯಿಲೆ. ಆದರೆ ಸೂಕ್ತ ಜೀವನಶೈಲಿ, ಚಿಕಿತ್ಸೆ ಮೂಲಕ ಸಮರ್ಥವಾಗಿ ನಿರ್ವಹಿಸಬಹುದು.
ಡಯಾಬಿಟಿಸ್ ಕುರಿತು ಸಮಾಜದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಚಾರಗಳಲ್ಲಿ ಎಷ್ಟು ಸತ್ಯ, ಎಷ್ಟು ಮಿಥ್ಯೆ ಎಂಬುದನ್ನು ಡಾ. ಶಶಿಕಿರಣ್ ಉಮಾಕಾಂತ್ ಅವರ 'ಮಧುಮೇಹ ಮನೋಹರ' ಕೃತಿ ಸರಳವಾಗಿ ವಿವರಿಸುತ್ತದೆ.
ಮಧುಮೇಹದ ಕುರಿತು ಕನ್ನಡದಲ್ಲಿ ಸಾಕಷ್ಟು ಕೃತಿಗಳು ಬಂದಿವೆಯಾದರೂ, ಭಯ ಹುಟ್ಟಿಸದೆ, ಕಾಯಿಲೆಯ ಕಾರಣಗಳು, ನಿರ್ವಹಣೆಯ ವೈಜ್ಞಾನಿಕ ವಿಧಾನಗಳನ್ನು ಸರಳವಾಗಿ ತಿಳಿಸಿಕೊಡುವುದು ಈ ಕೃತಿಯ ವಿಶೇಷ. ವೈದ್ಯಕೀಯ ವಿಜ್ಞಾನದ ಸಂಗತಿಗಳು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವುದಿಲ್ಲ. ಮಧುಮೇಹದ ವಿಚಾರದಲ್ಲೂ ಇದು ನಿಜ. ಆದರೆ, ಕಾರು, ಪೆಟ್ರೋಲ್, ಎಂಜಿನ್, ಬಾಗಿಲು, ಬೀಗದ ಕೈ ಇಂತಹ ಸರಳ ರೂಪಕಗಳ ಮೂಲಕ ಸಂಕೀರ್ಣ ಸಂಗತಿಗಳನ್ನು ಸುಲಭವಾಗಿ ಅರ್ಥವಾಗುವಂತೆ ನಿರೂಪಿಸಿದ್ದಾರೆ. ಚಿಣ್ಣರು, ಗರ್ಭಿಣಿಯರು, ಮಧ್ಯವಯಸ್ಕರು ಮತ್ತು ವೃದ್ಧರಲ್ಲಿ ಮಧುಮೇಹದಿಂದ ಆಗುವ ಪರಿಣಾಮಗಳು, ಅವುಗಳನ್ನು ನಿಯಂತ್ರಿಸುವ ವಿಧಾನಗಳ ಮಾಹಿತಿಯೂ ಇಲ್ಲಿದೆ. ಮುಖ್ಯವಾಗಿ, ಇನ್ಸುಲಿನ್ ಹೇಗೆ ಕಾರ್ಯನಿರ್ವಹಿಸುತ್ತದೆ, ಅದರ ಕಾರ್ಯದಲ್ಲಿ ವ್ಯತ್ಯಯವಾದಾಗ ಕಣ್ಣು, ಕಿಡ್ನಿ ಮತ್ತು ಹೃದಯದ ಮೇಲೆ ಉಂಟಾಗಬಹುದಾದ ಪರಿಣಾಮಗಳೇನು, ಆಹಾರ ಪದ್ಧತಿ ಹೇಗಿರಬೇಕು, ಮಧುಮೇಹದ ಚಿಕಿತ್ಸಾ ವಿಧಾನಗಳೇನು ಎಂಬುದನ್ನು ಸರಳ ಕನ್ನಡದಲ್ಲಿ ವಿವರಿಸಲಾಗಿದೆ. ಅನಗತ್ಯ ಭಯಕ್ಕೆ ಒಳಗಾಗದೆ, ಆಹಾರ ಕ್ರಮ, ವ್ಯಾಯಾಮ, ಒತ್ತಡ ನಿರ್ವಹಣೆ ಮತ್ತು ಸೂಕ್ತ ಔಷಧೋಪಚಾರದ ಮೂಲಕ ಮಧುಮೇಹವನ್ನು ಸಮರ್ಥವಾಗಿ ನಿಭಾಯಿಸುವ ದಾರಿಯನ್ನು ಈ ಕೃತಿ ತೋರಿಸುತ್ತದೆ. v
ಮಧುಮೇಹ ಮನೋಹರ
ಲೇ: ಡಾ. ಶಶಿಕಿರಣ್ ಉಮಾಕಾಂತ್
ಪ್ರ: ವಿಕ್ರಮ್ ಪ್ರಕಾಶನ
ಪ್ರ: 9740994008
261101-51-1906964548

