ನವದೆಹಲಿ: 'ನಾನಿಲ್ಲಿ ಆರಾಮಾಗಿದ್ದೀನಿ... ಚಿಂತೆ ಮಾಡಬೇಡಿ. ಫೋನ್ ಸ್ವಿಚ್ ಆಫ್ ಆಗಬಹುದು'... ಮಗ ಸುರಕ್ಷಿತವಾಗಿದ್ದಾನೆ ಎಂದು ಭಾವಿಸಿದ್ದ ಕುಟುಂಬಕ್ಕೆ ಈ ಪುಟ್ಟ ಸಂದೇಶ ಧೈರ್ಯ ತುಂಬಿತ್ತು. ಆದರೆ... ಇದರ ಹಿಂದೆ ಅಡಗಿದ್ದ ಸತ್ಯ ಬಯಲಾದಾಗ ಇಡೀ ಕುಟುಂಬವೇ ಬೆಚ್ಚಿಬಿದ್ದಿದೆ.
ಗುರುಗ್ರಾಮದ ಚರಂಡಿಯೊಂದರಲ್ಲಿ ಯುವರಾಜ್ ಸಿಂಗ್ ಮಂಚಂದ ಅವರ ಮೃತದೇಹ ಪತ್ತೆಯಾಗಿದ್ದು, ಅವರ ಫೋನ್‌ನಿಂದಲೇ ಯುವರಾಜ್ ಕುಟುಂಬಕ್ಕೆ ಸಂದೇಶ ಕಳುಹಿಸುತ್ತಿದ್ದವರು ಕೊಲೆ ಆರೋಪಿಗಳ ಎಂಬುದನ್ನು ಪೊಲೀಸರು ತನಿಖೆಯಿಂದ ಬಯಲು ಮಾಡಿದ್ದಾರೆ.
ಇನ್ನೊಂದು ತಿಂಗಳಲ್ಲಿ ಮದುವೆಯಾಗಬೇಕಿದ್ದ ಯುವರಾಜ್‌ನನ್ನು ಸಹೋದ್ಯೋಗಿ ಆನ್ಯಾ ಹಾಗೂ ಆಕೆಯ ಪತಿ ಸಂಯಮ್ ಸಚದೇವ ಹತ್ಯೆ ಮಾಡಿದ್ದು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹಣಕಾಸಿನ ವ್ಯವಹಾರಕ್ಕೆ ಈ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 6ರಂದು ಮಧ್ಯಾಹ್ನ ಸಹೋದರಿಯರ ಜೊತೆ ಶಾಪಿಂಗ್‌ಗೆ ತೆರಳಿದ್ದ ಯುವರಾಜ್ ಮದುವೆಯ ಶೇರ್ವಾನಿ ಖರೀದಿಸಿದ್ದರು. ಅದೇ ದಿನ ಆನ್ಯಾಳನ್ನು ಭೇಟಿಯಾಗುವುದಾಗಿ ಗುರುಗ್ರಾಮಕ್ಕೆ ತೆರಳಿದ್ದರು. ಸಂಜೆ 7.30ರ ಸುಮಾರಿಗೆ ಕುಟುಂಬದವರಿಗೆ ಕರೆ ಮಾಡಿ, ಆನ್ಯಾ ಇನ್ನು 20 ನಿಮಿಷಗಳಲ್ಲಿ ಬರುತ್ತಾರೆ, ಸಭೆ ಮುಗಿದ ಬಳಿಕ ಕರೆ ಮಾಡುತ್ತೇನೆ ಎಂದಿದ್ದರು.
ಆದರೆ ಕರೆ ಬರಲಿಲ್ಲ, ಬಂದಿದ್ದು ಸಂದೇಶಗಳು ಮಾತ್ರ!
ಯುವರಾಜ್ ಮನೆಗೆ ಬರದಿದ್ದರೂ ಅವರ ಫೋನ್‌ನಿಂದ ಕುಟುಂಬಕ್ಕೆ ಸಂದೇಶಗಳು ಬರುತ್ತಲೇ ಇದ್ದವು. ಸೆಪ್ಟೆಂಬರ್ 8ರಂದು 'ನಾನು ಚೆನ್ನಾಗಿದ್ದೇನೆ' ಎಂಬ ಸಂದೇಶ ಬಂದಿತ್ತು. ಇಂತಹ ಸಂದೇಶಗಳಿಂದ ಅನುಮಾನಗೊಂಡ ಕುಟುಂಬದವರು ವಿಡಿಯೊ ಕಾಲ್ ಮಾಡುವಂತೆ ಒತ್ತಾಯಿಸಿದ್ದರು. ನಂತರ ಆದರೆ ವಿಡಿಯೊ ಕಾಲ್‌ಗಳಾಗಲಿ, ಸಂದೇಶಗಳಾಗಲಿ ಬರಲೇ ಇಲ್ಲ.
ಯುವರಾಜ್ ಕುಟುಂಬದವರು ಸೆಪ್ಟೆಂಬರ್ 11ರಂದು ಲಜಪತ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಹತ್ಯೆ ಮಾಡಿದ್ದು ಹೇಗೆ?
ಗುರುಗ್ರಾಮಕ್ಕೆ ಬಂದ ಯುವರಾಜ್‌ನನ್ನು ಆರೋಪಿಗಳು ತಮ್ಮ ಎಸ್‌ಯುವಿ ಕಾರಿಗೆ ಹತ್ತಿಸಿಕೊಂಡಿದ್ದಾರೆ. ಯುವರಾಜ್ ಮುಂಭಾಗದ ಸೀಟಿನಲ್ಲಿ ಕುಳಿತಿದ್ದರೆ, ಆನ್ಯಾ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದಳು. ಆಕೆಯ ಪತಿ ಕಾರು ಚಲಾಯಿಸುತ್ತಿದ್ದ. ಪ್ರಯಾಣದ ಮಧ್ಯೆ ಆನ್ಯಾ ಪಿಸ್ತೂಲ್‌ನಿಂದ ಯುವರಾಜ್ ಕುತ್ತಿಗೆಗೆ ಗುಂಡು ಹಾರಿಸಿದ್ದಾಳೆ.
ಕೊಲೆಯ ನಂತರ ಮೃತದೇಹದೊಂದಿಗೆ ಕಾರಿನಲ್ಲಿ ಸುತ್ತಾಡಿದ ದಂಪತಿ, ಬಳಿಕ ಗುರುಗ್ರಾಮದ ಚರಂಡಿಯೊಂದಕ್ಕೆ ಎಸೆದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಣಕಾಸಿನ ವಿವಾದವೇ ಕೊಲೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಯುವರಾಜ್ ಮತ್ತು ಆನ್ಯಾ ರಿಯಲ್ ಎಸ್ಟೇಟ್ ಕಂಪನಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಆನ್ಯಾ ಅಕ್ರಮ ಎಸಗಿದ್ದರಿಂದ ಕಂಪನಿಯಿಂದ ವಜಾಗೊಂಡಿದ್ದಳು.
ಯುವರಾಜ್ ಕೂಡ ರಿಯಲ್ ಎಸ್ಟೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಯುವರಾಜ್‌ನ ರಿಯಲ್ ಎಸ್ಟೇಟ್ ಡೀಲ್‌ಗಳಲ್ಲಿ ಆನ್ಯಾ ನೆರವಾಗುತ್ತಿದ್ದಳು. ಸಾಲದ ಸುಳಿಯಲ್ಲಿದ್ದರೂ ಆನ್ಯಾ ಐಷಾರಾಮಿ ಜೀವನ ನಡೆಸುತ್ತಿದ್ದರೆಂದು ತಿಳಿದುಬಂದಿದೆ. ಇವರಿಗೆ ಒಂದು ವರ್ಷದ ಮಗುವಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.
ತಂದೆ-ತಾಯಿಗೆ ಮಗನೇ ಆಸರೆ: ಯುವರಾಜ್ ತಂದೆ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರೆ, ತಾಯಿ ಹೃದ್ರೋಗಿ. ಇಬ್ಬರಿಗೂ ಯುವರಾಜ್ ಒಬ್ಬನೇ ಆಸರೆಯಾಗಿದ್ದ. ಮಗನ ಮದುವೆಯ ಸಂಭ್ರಮಕ್ಕಾಗಿ ಕಾಯುತ್ತಿದ್ದ ಕುಟುಂಬಕ್ಕೆ ಇದೀಗ ಉಳಿದಿರುವುದು ಕಣ್ಣೀರು ಮತ್ತು ನೆನಪುಗಳು ಮಾತ್ರ.
ಅಮ್ಮನಿಗೆ ತೋರಿಸಲು ಅಣ್ಣನ ಯಾವುದಾದರೂ ವಸ್ತುವನ್ನು ಕೊಡಿ ಎಂದು ಬೇಡಿಕೊಂಡರೂ ಪೊಲೀಸರು ಏನನ್ನೂ ನೀಡಲಿಲ್ಲ. ಉಂಗುರ, ವಾಚ್ ಕೂಡ ನಮಗೆ ಸಿಗಲಿಲ್ಲ... ಎಂದು ಯುವರಾಜ್ ತಂಗಿ ಅಳಲು ತೋಡಿಕೊಂಡಿದ್ದಾರೆ.
ಪೊಲೀಸರಿಂದಲೇ ಅಂತ್ಯಸಂಸ್ಕಾರ: ಸೆಪ್ಟೆಂಬರ್ 10ರಂದು ಮೃತದೇಹ ಪತ್ತೆಯಾಗಿದ್ದರೂ ಪೊಲೀಸರು ತಮಗೆ ಮಾಹಿತಿ ನೀಡಿಲ್ಲ ಮತ್ತು ಪೋರ್ಟಲ್‌ನಲ್ಲಿ ವಿವರಗಳನ್ನು ಅಪ್‌ಲೋಡ್ ಮಾಡಿಲ್ಲ. ಅಲ್ಲದೆ, ಸೆಪ್ಟೆಂಬರ್ 14ರಂದೇ ಪೊಲೀಸರು ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸಿದ್ದು, ಸೆಪ್ಟೆಂಬರ್ 16ರಂದು ನಮಗೆ ವಿಷಯ ತಿಳಿಸಿದ್ದಾರೆ ಎಂದು ಯುವರಾಜ್ ಕುಟುಂಬ ಆರೋಪಿಸಿದೆ.
ನಿಯಮಗಳ ಪ್ರಕಾರ, ಮೃತದೇಹದ ಗುರುತು ಸಿಗದಿದ್ದಾಗ ಹಾಗೂ ಕೊಳೆತುಹೋಗಿದ್ದಾಗ ನಿಗದಿತ ಅವಧಿಯಲ್ಲಿ ಪೊಲೀಸರೇ ಅಂತ್ಯಸಂಸ್ಕಾರ ನಡೆಸಬಹುದು. ಆದರೆ ಕುಟುಂಬಸ್ಥರಿಗೆ ಮರಣೋತ್ತರ ಪರೀಕ್ಷೆ ವರದಿ, ಡಿಎನ್‌ಎ ಮಾದರಿ ಹಾಗೂ ಅವರ ವಸ್ತುಗಳನ್ನು ಕುಟುಂಬದವರಿಗೆ ಒಪ್ಪಿಸಬೇಕು ಎಂಬ ನಿಯಮವಿದೆ.
ಈ ಘಟನೆಯಲ್ಲಿ ಬಂಧಿತ ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

