Dailyhunt Logo
  • Light mode
    Follow system
    Dark mode
    • Play Story
    • App Story
ಮಗು ಮಾತು ಕೇಳುತ್ತಿಲ್ಲವೇ? ಮೊದಲು ಮನಸ್ಸನ್ನು ಅರ್ಥಮಾಡಿಕೊಳ್ಳಿ!

ಮಗು ಮಾತು ಕೇಳುತ್ತಿಲ್ಲವೇ? ಮೊದಲು ಮನಸ್ಸನ್ನು ಅರ್ಥಮಾಡಿಕೊಳ್ಳಿ!

'ನಾನು ಎಷ್ಟು ಹೇಳಿದರೂ ನನ್ನ ಮಗು ಮಾತೇ ಕೇಳುವುದಿಲ್ಲ, ಓದು ಎಂದರೆ ತಪ್ಪಿಸಿಕೊಳ್ಳುವುದು, ಆಟ ಸಾಕು ಮನೆಗೆ ಬಾ ಎಂದರೆ ಹಠ ಮಾಡುವುದು, ಅತಿಯಾಗಿ ಮೊಬೈಲ್ ನೋಡುವುದು, ಮೊಬೈಲ್ ಕಸಿದರೆ ಜೋರಾಗಿ ಅಳುತ್ತದೆ' ಹೀಗೆ ನೂರಾರು ದೂರುಗಳನ್ನು ಸಾಮಾನ್ಯವಾಗಿ ಒಂದಲ್ಲ ಒಂದು ಸಂದರ್ಭದಲ್ಲಿ ಪೋಷಕರು ಹೇಳಿಕೊಂಡಿರುತ್ತಾರೆ.
ಮಕ್ಕಳ ಈ ನಡುವಳಿಕೆ ಪೋಷಕರಿಗೆ ಅವರು ವಿಧೇಯತೆಯಿಂದ ಇರುವುದಿಲ್ಲ ಎಂದೂ ಎನ್ನಿಸುವಂತೆ ಮಾಡಬಲ್ಲದು. ಆದರೆ ನಿಜವಾಗಿಯೂ ಮಗುವಿನ ಮನಸ್ಸನ್ನು ಅರ್ಥಮಾಡಿಕೊಂಡರೆ ಯಾವ ಸಮಸ್ಯೆಯೂ ಇರದು.

'ಏಳು ವರ್ಷದ ಆದಿತ್ಯ ಸಂಜೆ ಶಾಲೆಯಿಂದ ಮನೆಗೆ ಬಂದನು. ಮುಖದಲ್ಲಿ ಬೇಸರ, ಕಣ್ಣಲ್ಲಿ ಆಯಾಸ ಸ್ಪಷ್ಟವಾಗಿತ್ತು. ಬ್ಯಾಗ್ ಅನ್ನು ಮೂಲೆಯಲ್ಲಿ ಇಟ್ಟು ಮೌನವಾಗಿ ಕುಳಿತಿದ್ದ.

ಅಮ್ಮ ತಕ್ಷಣ, 'ಹೋಗಿ ಕೈ ತೊಳೆದು ಹೋಂವರ್ಕ್ ಮಾಡು' ಎಂದರು. ಆದಿತ್ಯ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಎರಡನೇ ಬಾರಿ ಜೋರಾಗಿ ಹೇಳಿದರು. ಆದರೂ ಮಗು ಅಲ್ಲೇ ಕುಳಿತಿತ್ತು.

ಕೊನೆಗೆ ಕೋಪಗೊಂಡ ಅಮ್ಮ, 'ನೀನು ಯಾವತ್ತೂ ಮಾತು ಕೇಳುವುದೇ ಇಲ್ಲ!' ಎಂದು ಬೈದರು. ಆದಿತ್ಯ ಅಳುತ್ತಾ ತನ್ನ ಕೋಣೆಗೆ ಹೋಗಿಬಿಟ್ಟ.

ಮರುದಿನ ಅಮ್ಮ ಮಾತಿನ ಶೈಲಿ ಬದಲಿಸಿದ್ದರು.

'ಇವತ್ತು ಶಾಲೆಯಲ್ಲಿ ಏನಾದರೂ ಆಯಿತಾ? ನೀನು ಸ್ವಲ್ಪ ದಣಿದ ಹಾಗೆ ಕಾಣುತ್ತಿದ್ದೀಯ' ಎಂದು ಕೇಳಿದರು.

ಆಗ ಆದಿತ್ಯ ನಿಧಾನವಾಗಿ ಹೇಳಿದ: 'ಇವತ್ತು ನನ್ನ ಸ್ನೇಹಿತ ನನ್ನ ಜೊತೆ ಮಾತಾಡಲಿಲ್ಲ. ಅದರಿಂದ ನನಗೆ ತುಂಬಾ ಬೇಸರ ಆಯ್ತು'.
ಸ್ವಲ್ಪ ಹೊತ್ತು ಮಾತನಾಡಿದ ನಂತರ ಅಮ್ಮ 'ಸರಿ, ಮೊದಲು ಮುಖ ತೊಳೆದು ತಿಂಡಿ ತಿನ್ನೋಣ. ನಂತರ ಇಬ್ಬರೂ ಸೇರಿ ಹೋಂವರ್ಕ್ ನೋಡೋಣ' ಎಂದರು. ಈ ಬಾರಿ ಯಾವುದೇ ಜಗಳವಾಗಲಿಲ್ಲ, ಮಗು ಕೋ‍ಪವನ್ನೂ ವ್ಯಕ್ತಪಡಿಸಲಿಲ್ಲ.

ಇಲ್ಲಿ ಸಮಸ್ಯೆ ಮಗುವಿನ ಹಠದ್ದಾಗಿರಲಿಲ್ಲ, ಅದರ ಮನಸ್ಸಿನದಲ್ಲಿ ತುಂಬಿಕೊಂಡಿದ್ದ ಭಾವನೆಗಳಿಗೆ ಮೊದಲ ಜಾಗ ಬೇಕಿತ್ತು.

ಇನ್ನೊಂದು ಸಂದರ್ಭ ನೋಡುವುದಾದರೆ,

ಐದು ವರ್ಷದ ವಿಹಾನ್‌ಗೆ ಪ್ರತಿದಿನ ಬೆಳಗ್ಗೆ ಹಲ್ಲು ತೊಳೆಯುವುದು ದೊಡ್ಡ ಯುದ್ಧವಾಗಿತ್ತು. 'ಬಾ, ಬ್ರಷ್ ಮಾಡೋಣ' ಎಂದು ಅಮ್ಮ ಹೇಳಿದ ತಕ್ಷಣ ಅವನು ಓಡಿಹೋಗುತ್ತಿದ್ದ ಅಥವಾ 'ಬೇಡ!' ಎಂದು ಜೋರಾಗಿ ಕೂಗುತ್ತಿದ್ದ.

ಮೊದಲಿಗೆ ಅಮ್ಮ ಬೈಯುತ್ತಿದ್ದರು. ಕೆಲವೊಮ್ಮೆ ಬಲವಂತವಾಗಿ ಬಾತ್‌ರೂಮ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಪ್ರತಿದಿನವೂ ಅಳು, ಕೋಪ ಮತ್ತು ಒತ್ತಡದೊಂದಿಗೆ ದಿನ ಆರಂಭವಾಗುತ್ತಿತ್ತು. ಒಂದು ದಿನ ಮಕ್ಕಳ ವರ್ತನೆ ಕುರಿತು ನಡೆದ ಕಾರ್ಯಾಗಾರದಲ್ಲಿ ಭಾಗವಹಿಸಿದ ನಂತರ ಅಮ್ಮ ಮಗುವನ್ನು ಕರೆಯುವ ವಿಧಾನ ಬದಲಿಸಿದರು.

ಮರುದಿನ ಬೆಳಗ್ಗೆ ಅವರು ನೇರವಾಗಿ 'ಹಲ್ಲುಜ್ಜು' ಎಂದು ಹೇಳಲಿಲ್ಲ. ಬದಲಿಗೆ, 'ಇಂದು ಮೊದಲು ಟೂತ್‌ಪೇಸ್ಟ್ ನೀನೇ ಹಾಕುತ್ತೀಯಾ ಅಥವಾ ನಾನು ಹಾಕಲಾ?' ಎಂದು ಕೇಳಿದರು.
ವಿಹಾನ್ 'ನಾನೇ ಹಾಕುತ್ತೇನೆ' ಎಂದಿದ್ದ.

ನಂತರ ಅಮ್ಮ, 'ನಿನ್ನ ಹಲ್ಲಿನಲ್ಲಿರುವ ಪುಟ್ಟ ಕ್ರಿಮಿಗಳನ್ನು ಸೋಲಿಸಲು ಎಷ್ಟು ಬೇಗ ಬ್ರಷ್ ಮಾಡಬಹುದು ನೋಡೋಣವೇ?' ಎಂದು ಆಟದ ರೀತಿಯಲ್ಲಿ ಹೇಳಿದರು.
ಕೆಲವೇ ನಿಮಿಷಗಳಲ್ಲಿ ವಿಹಾನ್ ಯಾವುದೇ ಜಗಳವಿಲ್ಲದೆ ಹಲ್ಲುಜ್ಜಿದ್ದ.

ಈ ಘಟನೆಯ ನಂತರ ಅಮ್ಮನಿಗೆ ಅರ್ಥವಾಗಿದ್ದು.ವಿಹಾನ್‌ಗೆ ಬ್ರಷ್ ಮಾಡುವುದರ ವಿರುದ್ಧ ವಿರೋಧ ಇರಲಿಲ್ಲ ಬದಲಿಗೆ ಅವನಿಗೆ ಆದೇಶಗಳನ್ನು ಇಷ್ಟವಾಗುತ್ತಿರಲಿಲ್ಲ ಮತ್ತು ತನ್ನ ನಿರ್ಧಾರಕ್ಕೂ ಸ್ವಲ್ಪ ಅವಕಾಶ ಬೇಕಿತ್ತು ಎನ್ನುವುದು.

ಮಕ್ಕಳು ಯಾಕೆ ಹೀಗೆ ವರ್ತಿಸುತ್ತಾರೆ?

ಮಕ್ಕಳಲ್ಲಿ ಯೋಚನೆ, ಯೋಜನೆ ಮತ್ತು ಆತ್ಮನಿಯಂತ್ರಣಕ್ಕೆ ಸಂಬಂಧಿಸಿದ ಮೆದುಳಿನ ಭಾಗ ಇನ್ನೂ ಬೆಳವಣಿಗೆಯ ಹಂತದಲ್ಲಿರುತ್ತದೆ. ಆದರೆ ಕೋಪ, ಭಯ, ನಿರಾಶೆ ಮತ್ತು ಉತ್ಸಾಹದಂತಹ ಭಾವನೆಗಳು ತಕ್ಷಣವೇ ಪ್ರಭಾವ ಬೀರುತ್ತವೆ.

ಆದ್ದರಿಂದ ಮಗು ಕೋಪಗೊಂಡಾಗ ಅಥವಾ ಬೇಸರದಲ್ಲಿದ್ದಾಗ ಅದು ನಿಮ್ಮ ಮಾತು ಕೇಳಲು ಇಷ್ಟಪಡುವುದಿಲ್ಲ ಎಂಬುದಲ್ಲ; ಆ ಕ್ಷಣದಲ್ಲಿ ಅದರ ಭಾವನೆಗಳು ಅದರ ವರ್ತನೆಯನ್ನು ನಿಯಂತ್ರಿಸುತ್ತಿರುತ್ತವೆ.

ಪೋಷಕರು ಅನುಸರಿಸಬಹುದಾದ ಸರಳ ವಿಧಾನಗಳು

ಮೊದಲು ಭಾವನೆಯನ್ನು ಒಪ್ಪಿಕೊಳ್ಳಿ: ಮಕ್ಕಳು ಅಳುತ್ತಿದ್ದರೆ, ಅಳಬೇಡ ಎಂದು ಗದರುವ ಬದಲು ನಿನಗೆ ಬೇಸರವಾಗಿದೆ ಎನಿಸುತ್ತಿದೆ, ಏನಾಯಿತು ಎಂದು ಸಮಾಧಾನದಲ್ಲಿ ಕೇಳಿ. ಮಗುವಿನ ಭಾವನೆಗಳನ್ನು ಗುರುತಿಸಿದಾಗ, ಸುರಕ್ಷಿತ ಭಾವನೆ ಮೂಡುತ್ತದೆ.

ಸಂವಹನ ನಡೆಸಿ: ಶಾಲೆಯಿಂದ ಬಂದ ತಕ್ಷಣ ಓದಲು ಕುಳಿತುಕೊ ಎಂದು ಒಂದೇ ಸಲಕ್ಕೆ ಆದೇಶ ನೀಡದಿರಿ. ಅದರ ಬದಲಾಗಿ ಇವತ್ತು ಶಾಲೆಯಲ್ಲಿ ಯಾವ ವಿಷಯ ಹೆಚ್ಚು ಇಷ್ಟವಾಯಿತು? ಎಂದು ಮಾತು ಆರಂಭಿಸಿ ಓದಿನತ್ತ ಗಮನಹರಿಸುವಂತೆ ಮಾಡಿ. ನಿಮ್ಮ ಮತ್ತು ಮಗುವಿನ ನಡುವಿನ ಸಂಬಂಧ ಗಟ್ಟಿಯಾದಾಗ ಹೇಳುವ ಮಾತನ್ನೂ ಕೇಳುತ್ತಾರೆ.

ಸಣ್ಣ ಆಯ್ಕೆಗಳನ್ನು ನೀಡಿ: ಈಗಲೇ ಹೋಮರ್ಕ್ ಮುಗಿಸು ಎಂದು ಕಣ್ಣರಳಿಸಿ ಹೇಳುವ ಬದಲು ಮೊದಲು ಹತ್ತು ನಿಮಿಷ ವಿಶ್ರಾಂತಿ ಬೇಕಾ, ಅಥವಾ ಮೊದಲು ಹೋಂವರ್ಕ್ ಮುಗಿಸಿ ನಂತರ ಆಟ ಆಡುತ್ತೀಯಾ ಎಂದು ಕೇಳಿ. ಆಯ್ಕೆಗಳನ್ನು ನೀಡಿದಾಗ ಮಕ್ಕಳು ಅವರೇ ಮಾಡಬೇಕಾದ ಕೆಲಸ ಎಂಬ ಜವಾಬ್ದಾರಿಯ ಭಾವನೆ ಮೂಡುತ್ತದೆ.

ನೀವು ಹೇಗಿದ್ದೀರೋ ಅದನ್ನೇ ಮಗು ಕಲಿಯುತ್ತದೆ: ತಂದೆ, ತಾಯಿ ಮನೆಯ ವಾತಾವರಣಕ್ಕೆ ತಕ್ಕಹಾಗೆ ಪ್ರತಿ ಮಗುವಿನ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಕೋಪದಲ್ಲಿ ಕೂಗುವ ಬದಲು ಶಾಂತವಾಗಿ ಮಾತನಾಡಿದರೆ, ಅದೇ ವರ್ತನೆಯನ್ನು ಮಗು ಅನುಕರಿಸುತ್ತದೆ. ಅದರ ಮನಸ್ಥಿತಿಯೂ ಅದೇ ಹಾದಿಯಲ್ಲಿ ಬೆಳೆಯುತ್ತದೆ.

ಮೆಚ್ಚುಗೆ ಸೂಚಿಸಿ: ಮಗುವಿನ ಸಣ್ಣ ಪ್ರಯತ್ನಗಳನ್ನೂ ಮೆಚ್ಚಿ, ಪ್ರೋತ್ಸಾಹಿಸಿ. ಇಂದು ಯಾರೂ ಹೇಳದೇ ನಿನ್ನ ಪುಸ್ತಕಗಳನ್ನು ಜೋಡಿಸಿದ್ದೀಯ. ತುಂಬಾ ಸಂತೋಷ ಆಯಿತು. ಬೇಗ ಎದ್ದು ಶಾಲೆಗೆ ತಯಾರಾಗಿದ್ದೀಯಾ ಹೀಗೆ ಸಣ್ಣ ಸಣ್ಣ ಮೆಚ್ಚುಗೆ ಅವರ‌ಲ್ಲಿ ಆತ್ಮವಿಶ್ವಾಸವನ್ನು ಬೆಳೆಸುತ್ತದೆ.

ಮಕ್ಕಳಿಗೆ ಸಮಯ ನೀಡಿ: ನಿತ್ಯ ಕನಿಷ್ಠ 15 ನಿಮಿಷ ಮಗುವಿಗಾಗಿಯೇ ಮೀಸಲಿಡಿ. ಅವರ ಮಾತಿಗೆ ಕಿವಿಯಾಗಿ. ಮೊಬೈಲ್, ಟಿವಿ ಅಥವಾ ಬೇರೆ ವ್ಯತ್ಯಯಗಳಿಲ್ಲದೆ ಕಥೆ ಹೇಳಿ, ಆಟ ಆಡಿ ಅಥವಾ ದಿನದ ಅನುಭವಗಳನ್ನು ಕೇಳಿ. ಈ ಸಮಯವೇ ಮಕ್ಕಳೊಂದಿಗೆ ಬಲವಾದ ಭಾವನಾತ್ಮಕ ಬಾಂಧವ್ಯವನ್ನು ಬೆಳೆಸಲು ನೆರವಾಗುತ್ತದೆ.

ಶಿಕ್ಷೆಯ ಬದಲು ಕಲಿಕೆಯ ಅವಕಾಶ ನೀಡಿ: ಸಣ್ಣ ಸಣ್ಣ ತಪ್ಪಿಗೂ ಶಿಕ್ಷಿಸುವ ಬದಲು ಅವಕಾಶ ನೀಡಿ. ಸಮಾಧಾನದಿಂದ ವರ್ತಿಸಿ. ಉದಾಹರಣೆಗೆ ಹಾಲು ಚೆಲ್ಲಿದರೆ, 'ನೀನು ಯಾವಾಗಲೂ ಹೀಗೇ ಮಾಡುತ್ತೀಯ' ಎಂದು ಸಿಟ್ಟೇರಿಸಿಕೊಂಡು ಹೇಳುವ ಬದಲು, 'ಪರವಾಗಿಲ್ಲ. ಬಾ, ಇಬ್ಬರೂ ಸೇರಿ ಇದನ್ನು ಸ್ವಚ್ಛಗೊಳಿಸೋಣ. ಮುಂದಿನ ಬಾರಿ ಹೇಗೆ ಜಾಗರೂಕರಾಗಿರಬಹುದು ನೋಡೋಣ' ಎಂದು ಹೇಳಿ. ತಪ್ಪುಗಳನ್ನು ಜೀವನ ಕೌಶಲ್ಯ ಕಲಿಸುವ ಅವಕಾಶಗಳಾಗಿ ಬಳಸಿಕೊಳ್ಳಿ.

ಪೋಷಕರಾಗಿ ದೊಡ್ಡ ಗೆಲುವು ಮಕ್ಕಳು ನಮ್ಮ ಮಾತೇ ಕೇಳಬೇಕು ಎನ್ನುವುದಲ್ಲ, ಅವರು ತಮ್ಮ ಮನದ ಮಾತನ್ನು ನಿರ್ಭಯವಾಗಿ ನಮ್ಮೊಂದಿಗೆ ಹಂಚಿಕೊಳ್ಳುವಂತಹ ವಿಶ್ವಾಸವನ್ನು ಬೆಳೆಸುವುದಾಗಿದೆ. ಆ ವಿಶ್ವಾಸ ಬೆಳೆದಾಗ ಶಿಸ್ತು ಸಹಜವಾಗಿ ಬರುತ್ತದೆ, ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ಮಕ್ಕಳು ಭಾವನಾತ್ಮಕವಾಗಿ ಸದೃಢ ವ್ಯಕ್ತಿಗಳಾಗಿ ಬೆಳೆಯುತ್ತಾರೆ.

ಲೇಖಕರು: ಸಹಾಯಕ ಪ್ರಾಧ್ಯಾಪಕಿ, ತೋಟಗಾರಿಕಾ ಮಹಾವಿದ್ಯಾಲಯ, ಬೆಂಗಳೂರು.

Dailyhunt
Disclaimer: This content has not been generated, created or edited by Dailyhunt. Publisher: Prajavani