Thursday, 03 Dec, 10.25 am ಪ್ರಜಾವಾಣಿ

ರಾಷ್ಟ್ರೀಯ
ಮಹಾರಾಷ್ಟ್ರದಲ್ಲಿ ಜಾತಿ ಸೂಚಕ ಹೆಸರಿನ ಪ್ರದೇಶಗಳಿಗೆ ಮರುನಾಮಕರಣ: ಸಂಪುಟ ನಿರ್ಧಾರ

ಮುಂಬೈ: ಮಹಾರಾಷ್ಟ್ರದಲ್ಲಿ ಜಾತಿ ಸೂಚಕ ಹೆಸರುಗಳನ್ನು ಹೊಂದಿರುವ ಎಲ್ಲಾ ಕಾಲನಿಗಳಿಗೆ ಮರುನಾಮಕರಣ ಮಾಡುವ ಪ್ರಸ್ತಾಪವನ್ನು ಸಂಪುಟ ಬುಧವಾರ ಅಂಗೀಕರಿಸಿದೆ.

'ಬ್ರಿಟಿಷರ ವಸಾಹತುಶಾಹಿ ಆಡಳಿತದಲ್ಲಿ ಪ್ರದೇಶಗಳಿಗೆ ಜಾತಿ ಸೂಚಕ ಹೆಸರುಗಳನ್ನು ನಾಮಕರಣ ಮಾಡಲಾಗಿತ್ತು. ಜನರನ್ನು ಒಡೆದು ಆಳುವುದು ಅವರ ತಂತ್ರವಾಗಿತ್ತು. ನಮ್ಮ ಸರ್ಕಾರ ಈಗ ಅವುಗಳಿಗೆ ಮರುನಾಮಕರಣ ಮಾಡುತ್ತಿದೆ. ಸಾಮಾಜಿಕ ಸೇವೆಯ ಮೂಲಕ ದೇಶಕ್ಕಾಗಿ ದುಡಿದವರ ಹೆಸರುಗಳನ್ನು ಹೊಸದಾಗಿ ನಾಮಕರಣ ಮಾಡುವ ಪ್ರದೇಶಗಳಿಗೆ ಇಡಲು ಸರ್ಕಾರ ನಿರ್ಧರಿಸಿದೆ,' ಎಂದು ಸಚಿವ ಅಸ್ಲಾಮ್ ಶೇಖ್ ತಿಳಿಸಿದ್ದಾರೆ.

'ಮಹರ್-ವಾಡಾ, ಬೌದ್ಧ-ವಾಡಾ, ಮಾಂಗ್-ವಾಡಾ, ಧೋರ್-ವಸ್ತಿ, ಬ್ರಹ್ಮನ್-ವಾಡಾ, ಮಾಲಿ-ಗಲ್ಲಿ ಮುಂತಾದ ಹೆಸರುಗಳು ಸಾಮಾನ್ಯವೇ ಆದರೂ, ಮಹಾರಾಷ್ಟ್ರದಂಥ ಪ್ರಗತಿಪರ ರಾಜ್ಯದಲ್ಲಿ ಅವು ಸೂಕ್ತವಾದವುಗಳಲ್ಲ. ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಐಕ್ಯತೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಪ್ರದೇಶಗಳ ಮರುನಾಮಕರಣ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ,' ಎಂದು ಮುಖ್ಯಮಂತ್ರಿ ಕಚೇರಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

'ಮರುನಾಮಕರಣಗೊಂಡ ಪ್ರದೇಶಗಳಿಗೆ ಸಮತಾ ನಗರ, ಭೀಮ ನಗರ, ಜ್ಯೋತಿನಗರ, ಶಾಹು ನಗರ, ಕ್ರಾಂತಿ ನಗರ ಎಂಬ ಹೆಸರುಗಳನ್ನು ನೀಡಲಾಗುತ್ತದೆ,' ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top