Dailyhunt Logo
  • Light mode
    Follow system
    Dark mode
    • Play Story
    • App Story
ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್: ಹರ್ಮನ್‌ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ

ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್: ಹರ್ಮನ್‌ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ

ಲಂಡನ್: ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು ಮಹಿಳೆಯರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ಆರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಭಾರತಕ್ಕೆ ಸೆಮಿಫೈನಲ್ ಹಾದಿ ಸುಗಮವಾಗಲಿದೆ.

ಈ ಟೂರ್ನಿಯಲ್ಲಿರುವ ಎರಡೂ ಗುಂಪುಗಳಿವೆ.

ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ನಾಲ್ಕರ ಘಟ್ಟಕ್ಕೆ ಪ್ರವೇಶಿಸಲಿವೆ. ಎ ಗುಂಪಿನಲ್ಲಿ ಎಂಟು ಅಂಕ ಗಳಿಸಿರುವ ಆಸ್ಟ್ರೇಲಿಯಾ ತಂಡವು ಅಗ್ರಸ್ಥಾನದಲ್ಲಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿಯೂ ಗೆದ್ದಿದೆ. ಭಾರತ ತಂಡವು ನಾಲ್ಕರಲ್ಲಿ ಮೂರು ಗೆದ್ದು ಆರು ಅಂಕ ಗಳಿಸಿದೆ. ಎರಡನೇ ಸ್ಥಾನದಲ್ಲಿದೆ. ಆರು ಅಂಕ ಗಳಿಸಿ ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಭಾನುವಾರ ನಡೆಯಲಿರುವ ಇನ್ನೊಂದು ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.

ಒಂದೊಮ್ಮೆ ಭಾರತವು ಆಸ್ಟ್ರೇಲಿಯಾ ಎದುರು ಸೋತು, ಬಾಂಗ್ಲಾ ಎದುರು ದಕ್ಷಿಣ ಆಫ್ರಿಕಾ ಗೆದ್ದರೆ ಹರ್ಮನ್ ಬಳಗದ ಸೆಮಿಫೈನಲ್ ಕನಸು ಭಗ್ನವಾಗುವುದು ಖಚಿತ. ಉಭಯ ಪಂದ್ಯಗಳಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ಸೋತರೆ ನಿವ್ವಳ ರನ್ ಸರಾಸರಿಯ ಲೆಕ್ಕಾಚಾರ ಮುಂಚೂಣಿಗೆ ಬರಲಿದೆ. ಆದರೆ ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾಗಿಂತ ಹೆಚ್ಚು ಬಲಾಢ್ಯವಾಗಿದೆ. ಆಸ್ಟ್ರೇಲಿಯಾ ತಂಡವನ್ನು ಮಣಿಸುವುದು ಭಾರತಕ್ಕೆ ಸುಲಭವಲ್ಲ.

ಅದರಲ್ಲೂ ಕಳಪೆ ಫೀಲ್ಡಿಂಗ್‌ನಿಂದಾಗಿ ಟೂರ್ನಿಯುದ್ದಕ್ಕೂ ಕ್ಯಾಚ್‌ಗಳನ್ನು ಕೈಚೆಲ್ಲುತ್ತಿರುವ ಹರ್ಮನ್‌ ಬಳಗವು ಎಚ್ಚರಿಕೆಯಿಂದ ಆಡುವ ಒತ್ತಡವೂ ಇದೆ. ಎರಡು ಪಂದ್ಯಗಳಲ್ಲಿ ಒಟ್ಟು ಆರು ಕ್ಯಾಚ್‌ಗಳು ಮಣ್ಣುಪಾಲಾಗಿವೆ. ರಾಧಾ ಯಾದವ್ ಅವರಂತಹ ಉತ್ತಮ ಫೀಲ್ಡರ್ ಕೂಡ ಕ್ಯಾಚ್ ಬಿಡುತ್ತಿರುವುದು ಬೌಲರ್‌ಗಳನ್ನು ಆತಂಕಕ್ಕೆ ದೂಡಿದೆ. ಆದರೂ ಸ್ಪಿನ್ನರ್ ಶ್ರೀಚರಣಿ (12 ವಿಕೆಟ್), ದೀಪ್ತಿ ಶರ್ಮಾ(6 ವಿಕೆಟ್) ಹಾಗೂ ಮಧ್ಯಮವೇಗಿ ಕ್ರಾಂತಿ ಗೌಡ್ ಅವರು ತಮ್ಮ ಲಯ ಉಳಿಸಿಕೊಂಡಿರುವುದು ಸಮಾಧಾನಕರ.

ಆದರೂ ಬ್ಯಾಟಿಂಗ್ ವಿಭಾಗದಲ್ಲಿ ಸ್ಮೃತಿ ಮಂದಾನ (167 ರನ್) ಮತ್ತು ಶಫಾಲಿ ವರ್ಮಾ (145) ಉತ್ತಮವಾಗಿ ಆಡುತ್ತಿದ್ದಾರೆ. ಆದರೆ ನಾಯಕಿ ಹರ್ಮನ್‌ಪ್ರೀತ್‌ ಕೌರ್ (85) ಮತ್ತು ಜೆಮಿಮಾ ರಾಡ್ರಿಗಸ್ (58) ಒಳಗೊಂಡ ಭಾರತದ ಮಧ್ಯಮ ಕ್ರಮಾಂಕವು ವಿಫಲವಾಗಿದೆ.

ಹೋದ ವರ್ಷ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ ಇತಿಹಾಸ ಇದೆ. ಆ ಪಂದ್ಯದಲ್ಲಿ ಜಿಮಿಮಾ ಅವರು ತಮ್ಮ ಜೀವನಶ್ರೇಷ್ಠ ಇನಿಂಗ್ಸ್ ಆಡಿದ್ದರು. ಇದೀಗ ಅಂತಹದೇ ಮತ್ತೊಂದು ಆಟದ ನಿರೀಕ್ಷ ಗರಿಗೆದರಿದೆ.

ಸೋಫಿ ಮಾಲಿನೆ ನಾಯಕತ್ವದ ಆಸ್ಟ್ರೇಲಿಯಾ ತಂಡಕ್ಕೆ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತವಾಗಿದೆ. ತಂಡದ ಎಲಿಸ್ ಪೆರಿ, ಅನಾಬೆಲ್ ಸದರ್ಲೆಂಡ್, ನಿಕೊಲಾ ಕ್ಯಾರಿ, ಜಾರ್ಜಿಯಾ ವೊಲ್, ಆಯಷ್ಲೆ ಗಾರ್ಡನರ್ ಮತ್ತು ಬೌಲರ್ ಕಿಮ್ ಗಾರ್ಥ್ ಅವರು ತಮ್ಮ ತಂಡದ ಗೆಲುವಿಗಾಗಿ ಯಾವುದೇ ಹಂತದಲ್ಲಿಯೂ ಮಿಂಚುವ ಸಮರ್ಥರು. ಆದ್ದರಿಂದ ಭಾರತ ತಂಡದ ಮುಖ್ಯ ಕೋಚ್ ಅಮೋಲ್ ಮಜುಂದಾರ್ ಮತ್ತು ಚಿಂತಕರ ಚಾವಡಿಯು ಆಡುವ ಹನ್ನೊಂದರ ಬಳಗದ ಆಯ್ಕೆ ಮತ್ತು ತಂತ್ರಗಾರಿಕೆಯನ್ನು ಅಳೆದು ಸುರಿದು ಮಾಡಬೇಕಾದ ಸವಾಲು ಇದೆ.

ಪಂದ್ಯ ಆರಂಭ: ರಾತ್ರಿ 7

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊಹಾಟ್‌ಸ್ಟಾರ್ ಆಯಪ್‌

Dailyhunt
Disclaimer: This content has not been generated, created or edited by Dailyhunt. Publisher: Prajavani