ದುಬೈ: ಎಂಟು ತಂಡಗಳು ಪಾಲ್ಗೊಳ್ಳುವ ಮಹಿಳೆಯರ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯು ಇದೇ 28ರಂದು ಪ್ರಾರಂಭವಾಗಲಿದೆ. ಸೆ.5ರಂದು ಭಾರತ ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎದುರಿಸಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಗುರುವಾರ ತಿಳಿಸಿದೆ.
ಉದ್ಘಾಟನಾ ಪಂದ್ಯದಲ್ಲಿ ಹಾಂಗ್‌ಕಾಂಗ್ ಮತ್ತು ಥಾಯ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಎ ಗುಂಪಿನಲ್ಲಿ ಏಳು ಬಾರಿಯ ಚಾಂಪಿಯನ್ ಭಾರತ, ಪಾಕಿಸ್ತಾನ, ಥಾಯ್ಲೆಂಡ್ ಮತ್ತು ಹಾಂಗ್‌ಕಾಂಗ್ ತಂಡಗಳಿವೆ. ಬಿ ಗುಂಪಿನಲ್ಲಿ ಹಾಲಿ ಚಾಂಪಿಯನ್ ಶ್ರೀಲಂಕಾ, ಬಾಂಗ್ಲಾದೇಶ, ಯುಎಇ ಮತ್ತು ಇಂಡೋನೇಷ್ಯಾ ತಂಡಗಳು ಸ್ಥಾನ ಪಡೆದಿವೆ.
ಟಿ20 ಮಾದರಿಯಲ್ಲಿ ನಡೆಯಲಿರುವ ಆರನೇ ಆವೃತ್ತಿಯ ಏಷ್ಯಾಕಪ್‌ನಲ್ಲಿ ತಂಡಗಳು ಒಂದೇ ರೌಂಡ್ ರಾಬಿನ್ ಗುಂಪು ಹಂತದಲ್ಲಿ ಸ್ಪರ್ಧಿಸಲಿವೆ. ಪ್ರತಿ ಗುಂಪಿನಿಂದ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಸೆಮಿಫೈನಲ್ ಪಂದ್ಯಗಳು ಸೆ.10 ಮತ್ತು ಸೆ.11ರಂದು ನಡೆಯಲಿದೆ. ಫೈನಲ್ ಪಂದ್ಯವು ಸೆ.13ರಂದು ನಿಗದಿಯಾಗಿದೆ.
ಟೂರ್ನಿಯಲ್ಲಿ ಭಾರತವು ಅತ್ಯಂತ ಯಶಸ್ವಿ ತಂಡವಾಗಿದೆ. ಏಕದಿನ ಮಾದರಿಯಲ್ಲಿ ನಾಲ್ಕು ಬಾರಿ (2004ರಿಂದ 2008) ಮತ್ತು ಟಿ20 ಮಾದರಿಯಲ್ಲಿ ಮೂರು ಬಾರಿ (2012, 2016 ಮತ್ತು 2022) ಪ್ರಶಸ್ತಿ ಗೆದ್ದಿದೆ.

