ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಜೀವನದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿದ್ದಾರೆ. 61ನೇ ವಯಸ್ಸಿನಲ್ಲಿ ಮೂರನೇ ಮದುವೆಯಾಗುತ್ತಿರುವುದರ ಬಗ್ಗೆ ಅಮೀರ್ ಖಾನ್ ಅವರನ್ನು ಹಲವರು ಕಿಚಾಯಿಸಿದ್ದಾರೆ.
'ಅಮೀರ್ ಖಾನ್ ಪ್ರೊಡಕ್ಷನ್ಸ್' ಸಂಸ್ಥೆ ಆರಂಭವಾಗಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಅಮೀರ್ ಅವರನ್ನು ಮದುವೆಯಾಗಲಿರುವ ಬೆಂಗಳೂರಿನ ಮೂಲದ ಗೌರಿ ಸ್ಪ್ರಾಟ್, ನಟಿ ಕಾಜೋಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿರುವ ಕಾಜೋಲ್, ಅಮೀರ್ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಸಿನಿಮಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಶ್ಲಾಘಿಸಿದ್ದಾರೆ. 2001 ರಲ್ಲಿ ಬಿಡುಗಡೆಯಾದ 'ಲಗಾನ್' ಮೂಲಕ ಈ ನಿರ್ಮಾಣ ಸಂಸ್ಥೆ ಆರಂಭಗೊಂಡಿತ್ತು.
'ಅಮೀರ್ ಖಾನ್ ಸಿನಿಮಾಗಳ ಬಗ್ಗೆ ಉತ್ತಮ ಅಭಿರುಚಿಯನ್ನು ಹೊಂದಿದ್ದಾರೆ, ಮಾತ್ರವಲ್ಲದೆ ಮಹಿಳೆಯರ ಬಗ್ಗೆಯೂ ಉತ್ತಮ ಅಭಿರುಚಿ ಇದೆ' ಎಂದಿದ್ದಾರೆ. ಈ ಹೇಳಿಕೆ ಅಮೀರ್ ಖಾನ್ ಅವರಿಗೆ ಆ ಕ್ಷಣಕ್ಕೆ ಮುಜುಗರವನ್ನುಂಟು ಮಾಡಿದರೂ, ನೆರೆದಿದ್ದವರು ನಕ್ಕ ಕಾರಣ ತಮಾಷೆಯಾಗಿ ಬದಲಾಯಿತು.
ಅಮೀರ್ ಖಾನ್ ಅವರು ಮೊದಲು ರೀನಾ ದತ್ತ ಅವರನ್ನು ಮತ್ತು 2005ರಲ್ಲಿ ಕಿರಣ್ ರಾವ್ ಅವರನ್ನು ವಿವಾಹವಾಗಿದ್ದರು. ಎರಡೂ ಮದುವೆಗಳೂ ವಿಚ್ಛೇದನದಲ್ಲಿ ಅಂತ್ಯಗೊಂಡಿವೆ. ಈಗ ಮೂರನೇ ಮದುವೆಯಾಗಲು ಬಾಲಿವುಡ್ ನಟ ಸಜ್ಜಾಗಿದ್ದಾರೆ.
ಅಮೀರ್ ಖಾನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಯಾವುದೇ ಚಿತ್ರದಲ್ಲಿ ಕಾಜೋಲ್ ನಟಿಸಿಲ್ಲ. ಆದರೆ ಅಮೀರ್ ಖಾನ್ ಅವರೊಂದಿಗೆ ಅನೇಕ ಸಿನಿಮಾಗಳಲ್ಲಿ ಕಾಜೋಲ್ ತೆರೆ ಹಂಚಿಕೊಂಡಿದ್ದಾರೆ. 'ಇಷ್ಕ್' 'ಫನಾ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಜೋಲ್ ಮತ್ತು ಅಮೀರ್ ಖಾನ್ ಒಟ್ಟಿಗೆ ಕೆಲಸ ಮಾಡಿದ್ದಾರೆ.

