Dailyhunt Logo
  • Light mode
    Follow system
    Dark mode
    • Play Story
    • App Story
ಮೈಸೂರಿನ ಪುಟ್ಟಹಳ್ಳಿಯಲ್ಲಿ ಆರಂಭಗೊಂಡ ನೈಸರ್ಗಿಕ ಕೃಷಿ ಫಲ ಲಾಲ್‌ಬಾಗ್‌ಗೆ ತಲುಪಿತು

ಮೈಸೂರಿನ ಪುಟ್ಟಹಳ್ಳಿಯಲ್ಲಿ ಆರಂಭಗೊಂಡ ನೈಸರ್ಗಿಕ ಕೃಷಿ ಫಲ ಲಾಲ್‌ಬಾಗ್‌ಗೆ ತಲುಪಿತು

ಹಳ್ಳಿಗೊಬ್ಬ ರೈತನಿಂದ ಆರಂಭಿಸಿ, ಒಂದೊಂದು ಹೆಜ್ಜೆ ಇಟ್ಟು ಮುನ್ನಡೆಯುತ್ತಾ, ರಾಸಾಯನಿಕಮುಕ್ತ ಕೃಷಿ ಪರಿಸರವನ್ನು ನಿರ್ಮಿಸುವ ವಿಶಿಷ್ಟ ಪಯಣ ಯುವ ಕೃಷಿಕರಿಗೆ ಉತ್ಸಾಹ ನೀಡುವುದೆಂಬ ಭರವಸೆಯೊಂದಿಗೆ ಸಾಗಿದೆ.

ಮೈಸೂರಿನಿಂದ ಹೆಚ್‌ಡಿಕೋಟೆ ಕಡೆಗೆ ಹೋಗುವಾಗ ಜಯಪುರ ದಾಟಿದ ಮೇಲೆ ಸಿಗುವ ಊರು ಹಾರೋಹಳ್ಳಿ.

ಅಲ್ಲಿಂದ ಅನತಿ ದೂರದಲ್ಲಿರುವ ಊರು ಮಂಡನಹಳ್ಳಿ. ಈ ಊರಿನ ಕೃಷಿಕರಲ್ಲಿ ನೈಸರ್ಗಿಕ ಕೃಷಿಯತ್ತ ಒಲವು ಮೂಡಿಸುವ ಮಹದಾಸೆಯಿಂದ ಬೆಳವಲ ತಂಡ ಚಟುವಟಿಕೆ ಆರಂಭಿಸಿತು. ಕಳೆದ ವರ್ಷ ಆ ಊರಿನ ಬಳಿ ಇರುವ ನಿಸರ್ಗ ಕ್ಷೇತ್ರದಲ್ಲಿ ತನ್ನ ಪಯಣವನ್ನು ಯೋಜಿಸಿದಂತೆ ಶುರು ಮಾಡಿತು.. ಆರು ತಿಂಗಳ ಪೂರ್ವಸಿದ್ಧತೆಯೊಂದಿಗೆ ನಿಸರ್ಗ ಕುಟುಂಬದ ಸದಸ್ಯರು, ಬೆಳವಲ ವಿದ್ಯಾರ್ಥಿಗಳು ಹಾಗೂ ತರಬೇತುದಾರರು ಸೇರಿ ಮೊದಲ ಸಸಿ ನೆಟ್ಟು ಶುಭಾರಂಭ ಮಾಡಿದೆವು.

ರಾಸಾಯನಿಕ ಪದ್ಧತಿಗಳ ಮೂಲಕ ತರಕಾರಿ ಕೃಷಿ ಮಾಡುತ್ತಿರುವ ಸುತ್ತಮುತ್ತಲಿನ ಬಹುತೇಕ ಕೃಷಿಕರು ನಮ್ಮ ಪ್ರಯತ್ನಗಳನ್ನು ನೋಡಿ, 'ಅದು ಹೇಗೆ ಸಾಧ್ಯ?' ಎಂದು ಹುಬ್ಬೇರಿಸಿದರು. ಇನ್ನು ಕೆಲವೇ ಮಂದಿ, 'ಅದು ಹೇಗೆ ನಡೆಯುತ್ತದೋ ನೋಡಿ ಮುಂದುವರಿಯೋಣ' ಎಂದು ತಟಸ್ಥರಾದರು.

ಒಂದು ವರ್ಷದ ಅವಧಿಯ ನಮ್ಮ ಪಯಣದ ಫಲಿತಾಂಶಗಳು ಈಗ ಜನರ ಕಣ್ಮುಂದಿವೆ! ಮೊನ್ನೆ ನಾವು ನಿಸರ್ಗ ಕ್ಷೇತ್ರಕ್ಕೆ ಭೇಟಿ ನೀಡಿದಾಗ, ಜಮೀನಿನ ಮಾಲೀಕ ಪರಶುರಾಮೇಗೌಡ ಅವರೂ ಬಂದಿದ್ದರು. ಅವರು ಈಗಾಗಲೇ ಅಲ್ಲಿ ಬೆಳೆದಿರುವ ಹಣ್ಣು ಮತ್ತು ತರಕಾರಿಗಳನ್ನು ಮನೆಗೆ ಒಯ್ದು ಸವಿದಿದ್ದಾರೆ. ಸ್ನೇಹಿತರಿಗೂ ಕೊಟ್ಟಿದ್ದಾರೆ! ಯಾವುದೇ ರಾಸಾಯನಿಕಗಳಿಲ್ಲದೆ ಸೊಂಪಾಗಿ ಬೆಳೆದಿರುವ ಬೆಳೆಗಳನ್ನು ನೋಡಿ ಖುಷಿಪಟ್ಟಿದ್ದಾರೆ. ಈ ಸಂತೋಷದ ಪರಿಯನ್ನು ಅವರ ಮಾತುಗಳಲ್ಲೇ ಹೇಳುವುದಾದರೆ, "ಈಗ ಕುರಿ, ಮೇಕೆ ಮಾಂಸದ ಬೆಲೆ ಒಂದು ಕೆಜಿಗೆ ₹ 750 ಇದೆ. ಆದರೆ ನನ್ನ ಪ್ರಕಾರ, ಒಂದು ಕೆಜಿ ಈ ತರಕಾರಿಗಳ ಬೆಲೆ ಎರಡು ಕೆಜಿ ಮಾಂಸದ ಬೆಲೆಗೆ ಸಮ. ಇದು ನಮ್ಮ ಹೊಲದ ಬೆಳೆ ಅಂತ ನಾನು ಹೇಳುವ ಮಾತಲ್ಲ, ಈ ತರಕಾರಿಗಳಿಂದ ಅಡುಗೆ ಮಾಡಿದ ಪ್ರತಿಯೊಬ್ಬರ ಪ್ರಶಂಸೆ!" ಎಂದು ಹೆಮ್ಮೆಪಟ್ಟರು.

ಪರಿಸರ ಕೃಷಿಯ ಮೌಲ್ಯ, ಗುಣಮಟ್ಟ ಮತ್ತು ಸಾಮರ್ಥ್ಯಕ್ಕೆ ಗ್ರಾಹಕರಿಂದ ದೊರೆತ ಪ್ರತಿಫಲ ಇದಾಗಿದೆ ಎಂದು ನಮಗೂ ಸಂತೋಷವಾಯಿತು.

ಆದರೆ, ಇದಕ್ಕಿಂತಲೂ ಆನಂದವಾಗಿದ್ದು ನಿಸರ್ಗ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾಂತಮ್ಮ , ಮಣಿಯಮ್ಮ ಮತ್ತು ಕಲ್ಪನಾ ಅವರೊಂದಿಗೆ ಮಾತನಾಡಿದಾಗ. "ಇಲ್ಲಿ ಕೆಲಸ ಮಾಡಲು ನಮಗೆ ಖುಷಿಯಾಗುತ್ತದೆ. ಬೇರೆ ತರಕಾರಿ ತೋಟಗಳಲ್ಲಿ ಕೆಲಸ ಮಾಡುವಾಗ ನೆಗಡಿ, ಮೈಕೈ ನವೆ, ರಾತ್ರಿ ಸರಿಯಾಗಿ ನಿದ್ದೆಯೇ ಬರುತ್ತಿರಲಿಲ್ಲ. ಗಂಡಸರೆಲ್ಲ ಅದರಿಂದಾಗಿ ಹೆಚ್ಚಾಗಿ ಕುಡಿಯುವುದನ್ನು ಕಲಿತಿದ್ದು, ಆಸ್ಪತ್ರೆಯ ಖರ್ಚು ಬೇರೆ" ಎಂದು ಹೇಳಿದರು. ಇದನ್ನೆಲ್ಲ ಹೇಳುವಾಗ ಅವರ ಕಣ್ಣಲ್ಲಿ ಕಂಡ ಹೊಳಪು ನೋಡಿ, 'ಇವರಿಗೆಲ್ಲ ಇಷ್ಟು ಬೇಗ ಅರ್ಥವಾಗಿದೆಯಲ್ಲ!' ಎಂದು ಅಚ್ಚರಿಯಾಯಿತು.

ದೂರದಲ್ಲಿದ್ದ ಶಿವಲಿಂಗಯ್ಯ ಬಂದು, "ಅಷ್ಟೇ ಅಲ್ಲ, ನಮ್ಮ ತರಕಾರಿ, ಬಾಳೆ, ಪಪ್ಪಾಯಿಯನ್ನು ನೋಡಲು ಅಕ್ಕಪಕ್ಕದವರೂ ಈಗ ಬಂದು ನೋಡಲು ಶುರು ಮಾಡಿದ್ದಾರೆ. 'ನೀವೇನು ಗೊಬ್ಬರ ಹಾಕುತ್ತೀರಿ, ಯಾವ ಔಷಧಿ ಹೊಡೆಯುತ್ತೀರಿ?' ಎಂದು ಕೇಳುತ್ತಾರೆ. ನಾವು ಗೊಬ್ಬರದ ಅಂಗಡಿಯಿಂದ ಯಾವುದನ್ನೂ ಬಳಸುವುದಿಲ್ಲ ಎಂದಾಗ, ಇನ್ನೂ ಸ್ವಲ್ಪ ಅನುಮಾನದಲ್ಲೇ ಹೋಗುತ್ತಾರೆ" ಎಂದಾಗ, ನಾವು ಇನ್ನೂ ಮಾಡುವುದು ತುಂಬಾ ಇದೆ ಅನ್ನಿಸಿತು.

ಮಂಡನಹಳ್ಳಿಯ ರೈತರನ್ನು ರಾಸಾಯನಿಕಮುಕ್ತ ಕೃಷಿ ಪದ್ಧತಿಗಳತ್ತ ಪ್ರೇರೇಪಿಸುವ ನಮ್ಮ ಪ್ರಯತ್ನದಲ್ಲಿ ಇದೊಂದು ಸಣ್ಣ ಹೆಜ್ಜೆ. ಕೃಷಿಯಲ್ಲಿ ಸುಧಾರಣೆ ಆರಂಭವಾಗುವುದು ಹೀಗೆಯೇ - ಕೇವಲ ಮಾತುಗಳಿಂದ ಮನವೊಲಿಸುವುದು ಸಾಧ್ಯವಿಲ್ಲ; ಕಾರ್ಯದ ಮೂಲಕ ತೋರಿಸುವುದರಿಂದ ಮಾತ್ರ ಸಾಧ್ಯ! ಹಾಗೆಯೇ, ಕೃಷಿ ಪದ್ಧತಿಯಲ್ಲಿ ಬದಲಾವಣೆ ಒಂದೇ ರಾತ್ರಿಯಲ್ಲಿ ಆಗಬೇಕೆಂದಿಲ್ಲ. ಸಣ್ಣಪುಟ್ಟ ಹೆಜ್ಜೆಗಳ ಮೂಲಕ, ಹಂತ ಹಂತವಾಗಿ ಸಾಗಿದರೂ ಮಹತ್ವದ ಬದಲಾವಣೆ ತರಬಹುದು ಎನ್ನುವುದಕ್ಕೆ ಈ ಪ್ರಯಾಣ ಸಾಕ್ಷಿ!

ರಿಸರ ಕೃಷಿಯ ತತ್ವದಲ್ಲಿ ನಂಬಿಕೆ ಇಟ್ಟು, ಬೆಳವಲ ತಂಡಕ್ಕೆ ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡುತ್ತಿರುವ ನಿಸರ್ಗ ಕುಟುಂಬದವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ಹಾಗೆಯೇ, ಈ ಪಯಣವನ್ನು ಮುನ್ನಡೆಸುವಲ್ಲಿ ಉತ್ಸಾಹ ಮತ್ತು ಆಸಕ್ತಿಯನ್ನು ತೋರುತ್ತಿರುವ ಮದನ್ ಗೂ ಅಭಿನಂದನೆಗಳು.

ಹಳ್ಳಿಗೊಬ್ಬ ರೈತನಿಂದ ಆರಂಭಿಸಿ, ಒಂದೊಂದು ಹೆಜ್ಜೆ ಇಟ್ಟು ಮುನ್ನಡೆಯುತ್ತಾ, ರಾಸಾಯನಿಕಮುಕ್ತ ಕೃಷಿ ಪರಿಸರವನ್ನು ನಿರ್ಮಿಸುವಲ್ಲಿ ಸಾಗಿರುವ ಈ ಪಯಣ ಯುವ ಕೃಷಿಕರಿಗೆ ಉತ್ಸಾಹ ನೀಡುವುದೆಂಬ ಭರವಸೆಯೊಂದಿಗೆ!

ಈ ಕ್ಷೇತ್ರದ ಎಲ್ಲಾ ತರಕಾರಿಗಳು ಪ್ರತಿ ಶನಿವಾರ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಬೆಳಿಗ್ಗೆ 6 ರಿಂದ 11 ಗಂಟೆಗೆ ನಡೆಯಲಿರುವ ಜೈವಿಕ ಸಂತೆಯಲ್ಲಿ ದೊರೆಯುತ್ತವೆ. ಈ ಪಯಣದಲ್ಲಿ ನಮ್ಮೊಂದಿಗೆ ಹೆಜ್ಜೆ ಹಾಕಲು ಇಷ್ಟ ಪಡುವವರು ಸಂಪರ್ಕಿಸಿ : 6366121241

( ಲೇಖಕರು: ತೋಟಗಾರಿಕೆ ಇಲಾಖೆ, ನಿವೃತ್ತ ನಿರ್ದೇಶಕರು)

Dailyhunt
Disclaimer: This content has not been generated, created or edited by Dailyhunt. Publisher: Prajavani