ಮೈಸೂರು: ಅರಮನೆಯಲ್ಲಿ ಜಂಬೂಸವಾರಿಗೆ ಭರದ ಸಿದ್ದತೆಗಳು ನಡೆದಿರುವಾಗಲೇ ನಗರದ ಚಾಮರಾಜ ಮೊಹಲ್ಲಾದಲ್ಲಿರುವ ಹಜರತ್ ಇಮಾಮ್ ಶಾ ವಲೀ ದರ್ಗಾಕ್ಕೆ ಮಂಗಳವಾರ ಸಂಜೆ ದಸರಾ ಜಂಬೂಸವಾರಿಯಲ್ಲಿ ಅಂಬಾರಿ ಹೊರುವ ಆನೆ ಹಾಗೂ ಕುಮ್ಕಿ ಆನೆಗಳು ಬಂದು 'ಸಲಾಂ' ಮಾಡಿದವು.
ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಲು ನೂರಾರು ಜನರು ಜಮಾಯಿಸಿದ್ದರು.
ಸೂಫಿ ಸಂತ ಇಮಾಮ್ ಶಾ ವಲೀ ಅವರಿಗೆ, ಚಾಮುಂಡೇಶ್ವರಿ ದೇವಿಗೆ ಭಕ್ತರು ಜಯಕಾರ ಹಾಕಿದರು.
85 ವರ್ಷಗಳಿಂದಲೂ ವಿಜಯದಶಮಿಯ ಮುನ್ನಾ ದಿನ ಆನೆಗಳು ಇಲ್ಲಿಗೆ ಬರುತ್ತಿವೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅವಧಿಯಲ್ಲಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಯೊಂದಕ್ಕೆ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿತ್ತು. ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆದ ನಂತರ ಸರಿಯಾಯಿತು. ಅಂದಿನಿಂದ ಇಂದಿನವರೆಗೂ ಆನೆಗಳು ನಿರಂತರವಾಗಿ ಪ್ರತಿ ದಸರೆಯಲ್ಲೂ ಬರುತ್ತಿವೆ.
ಅಂಬಾರಿ ಆನೆ 'ಪ್ರಶಾಂತ' ಕುಮ್ಕಿ ಆನೆಗಳಾದ ಕಾವೇರಿ ಹಾಗೂ ರೂಪಾ ಅರಮನೆ ದಕ್ಷಿಣ ದ್ವಾರವಾದ 'ಬ್ರಹ್ಮಪುರಿ'ಯಿಂದ ಆಗಮಿಸಿದವು. ಜಗನ್ಮೋಹನ ಅರಮನೆ ಹಾದಿಯಲ್ಲಿ ಕ್ರಮಿಸಿ, ಕೃಷ್ಣವಿಲಾಸ ರಸ್ತೆಯಲ್ಲಿರುವ ದರ್ಗಾಕ್ಕೆ ಬಂದವು. ಧೂಪಾರತಿ ಮಾಡಿದ ನಂತರ ವಿಭೂತಿಯನ್ನು ಹಣೆಗೆ ಹಚ್ಚಲಾಯಿತು. ದರ್ಗಾದ ಚಾದರ ಮೇಲಿಟ್ಟಿದ್ದ ನವಿಲುಗರಿಯಿಂದ ಆಶೀರ್ವಾದವನ್ನು ದರ್ಗಾದ ಮುಖ್ಯಸ್ಥ ಮೊಹಮ್ಮದ್ ನಖೀಬುಲ್ಲಾ ಷಾ ಖಾದ್ರಿ ಮಾಡಿದರು.
ಪ್ರತಿ ವರ್ಷ ಎಲ್ಲಾ ಆನೆಗಳನ್ನು ಕರೆತರಲಾಗುತ್ತಿತ್ತು. ಆದರೆ ಈ ಬಾರಿ ಮೂರು ಆನೆಗಳನ್ನಷ್ಟೇ ಕರೆತರಲಾಗಿದೆ ಎಂದು ಮುಸ್ಲಿಂ ಮುಖಂಡರು ಆರೋಪಿಸಿದರು.
ಅಬ್ದುಲ್ ರಜಾಕ್ ಮಾತನಾಡಿ, ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಎಂಬಂತಾಗಿದೆ. ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟಿದ್ದೆವು. ಪ್ರತಿ ವರ್ಷ ಇಲ್ಲಿಗೆ 18 ಆನೆ ಬರುತ್ತಿತ್ತು. ಈ ಬಾರಿ ಬರೇ 3 ಆನೆಗಳನ್ನು ಕರೆತಂದಿದ್ದಾರೆ. ಇದು ಯಾವ ರೀತಿಯ ಪಿತೂರಿ, ರಾಜಕಾರಣ ಎಂದು ಸರ್ಕಾರ ಉತ್ತರ ಕೊಡಬೇಕು. ಹಿಂದೂ ಮುಸಲ್ಮಾನರು ಒಟ್ಟಿಗೆ ಇರುವುದು ಸರ್ಕಾರಕ್ಕೆ ಇಷ್ಟ ಇಲ್ಲ ಎಂದು ಕಿಡಿಕಾರಿದರು.



