ಮೈಸೂರು: ಜಿಲ್ಲೆಯಲ್ಲಿ 'ವಿಬಿ ಜಿ ರಾಮ್‌ಜಿ' ಯೋಜನೆಯನ್ನು ಜುಲೈ 1ರಿಂದ ಜಾರಿಗೊಳಿಸಲಾಗಿದ್ದು, ಕೂಲಿಯನ್ನು ಏರಿಕೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್‌ಕುಮಾರ್ ತಿಳಿಸಿದ್ದಾರೆ.
'ಜುಲೈ 1ರಿಂದಲೇ ಅನ್ವಯ ಆಗುವಂತೆ ಪರಿಷ್ಕೃತ ಕೂಲಿ ದೊರೆಯಲಿದೆ.
ರಾಜ್ಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ₹ 370 ಕೂಲಿ ಇತ್ತು. ಹೊಸ ಯೋಜನೆಯಲ್ಲಿ ₹ 382ಕ್ಕೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
'ಬಡವರು, ರೈತರು, ಮಹಿಳೆಯರು ಹಾಗೂ ಯುವಶಕ್ತಿ ಆಧರಿಸಿ ಯೋಜನೆಯನ್ನು ಮರು ರೂಪಿಸಲಾಗಿದೆ. 125 ದಿನಗಳಿಗೆ ಕೂಲಿ ಖಾತ್ರಿಯ ಉದ್ಯೋಗ ದಿನಗಳನ್ನು ಹೆಚ್ಚಿಸಲಾಗಿದೆ. ಕೆಲಸ ಮಾಡಿದ 15 ದಿನಗಳಲ್ಲಿ ಕೂಲಿ ಪಾವತಿಸಲಾಗುತ್ತದೆ. ಜಲ ಭದ್ರತೆಗಾಗಿ, ಉತ್ಕೃಷ್ಟ ಗ್ರಾಮೀಣ ಮೂಲ ಸೌಕರ್ಯಗಳ ನಿರ್ಮಾಣ ಸುಸ್ಥಿರ ಆದಾಯಕ್ಕಾಗಿ ಜೀವನೋಪಾಯ ಮೂಲಸೌಕರ್ಯ, ಹವಮಾನ ಸ್ಥಿತಿ ಸ್ಥಾಪಕತ್ವ ಮತ್ತು ವಿಪತ್ತು ಸನ್ನದ್ಧ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ' ಎಂದು ತಿಳಿಸಿದ್ದಾರೆ.
'ಮೈಸೂರಿನ ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಂಸ್ಥೆಯಲ್ಲಿ ತರಬೇತಿ ಪಡೆದ ಮಾಸ್ಟರ್ ಟ್ರೈನರ್‌ಗಳಿಂದ ಎಲ್ಲಾ ವರ್ಗದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಸಹಾಯಕ ನಿರ್ದೇಶಕರು, ಆಡಳಿತಾಧಿಕಾರಿಗಳು, ಪಿಡಿಒ ಹಾಗೂ ಸಿಬ್ಬಂದಿಗೆ ತರಬೇತಿ ಕೊಡಿಸಲಾಗಿದೆ' ಎಂದು ಹೇಳಿದ್ದಾರೆ.
'ಪ್ರತಿ ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಬದಲಿಗೆ ಈಗ 125 ದಿನಗಳವರೆಗೆ ಉದ್ಯೋಗ ನೀಡಲಾಗುವುದು. ಕೂಲಿಕಾರರು ಇದನ್ನು ಬಳಸಿಕೊಳ್ಳಬೇಕು' ಎಂದು ಕೋರಿದ್ದಾರೆ.

