Dailyhunt Logo
  • Light mode
    Follow system
    Dark mode
    • Play Story
    • App Story
ಮೈಸೂರು-ಚಾಮರಾಜನಗರ ಎಲೆಕ್ಟ್ರಿಕ್‌ ರೈಲು ಮಾರ್ಗ: ₹81 ಕೋಟಿ ಅನುತ್ಪಾದಕ ವೆಚ್ಚ

ಮೈಸೂರು-ಚಾಮರಾಜನಗರ ಎಲೆಕ್ಟ್ರಿಕ್‌ ರೈಲು ಮಾರ್ಗ: ₹81 ಕೋಟಿ ಅನುತ್ಪಾದಕ ವೆಚ್ಚ

ವದೆಹಲಿ: ಮೈಸೂರು- ಚಾಮರಾಜ ನಗರ ರೈಲು ಮಾರ್ಗ ವಿದ್ಯುದೀಕರಣಗೊಂಡ ಬಳಿಕ ಮೂರು ವರ್ಷ ಎಲೆಕ್ಟ್ರಿಕ್‌ ರೈಲುಗಳು ಸಂಚಾರ ನಡೆಸದ ಕಾರಣ, ₹81 ಕೋಟಿ ಅನುತ್ಪಾದಕ ವೆಚ್ಚವಾಗಿ ಮಾರ್ಪಟ್ಟಿತು ಎಂದು ಮಹಾಲೇಖಪಾಲರು (ಸಿಎಜಿ) ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರೈಲ್ವೆ ಇಲಾಖೆಯ ಕಾರ್ಯಕ್ಷಮತೆ ಕುರಿತ ಸಿಎಜಿ ವರದಿಯನ್ನು ಸಂಸತ್‌ನ ಉಭಯ ಸದನಗಳಲ್ಲಿ ಬುಧವಾರ ಮಂಡಿಸಲಾಯಿತು.

ನೈರುತ್ಯ ರೈಲ್ವೆ ಎಸಗಿದ ಲೋಪದ ಬಗ್ಗೆ ಈ ವರದಿಯಲ್ಲಿ ಬೊಟ್ಟು ಮಾಡಲಾಗಿದೆ. 13 ನಿಲ್ದಾಣಗಳನ್ನು ಒಳಗೊಂಡ ಈ ಮಾರ್ಗದ ವಿದ್ಯುದೀಕರಣ ಮಾಡಲು ನೈರುತ್ಯ ರೈಲ್ವೆ 2020ರ ಫೆಬ್ರುವರಿಯಲ್ಲಿ ತೀರ್ಮಾನಿಸಿತ್ತು. ₹69 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿ, 2022ರ ಜನವರಿಯೊಳಗೆ ಕಾಮಗಾರಿ ಪೂರ್ಣ ಗೊಳಿಸಲು ಗಡುವು ವಿಧಿಸಲಾಗಿತ್ತು.

2021ರ ಜನವರಿಯಲ್ಲಿ ಕಾಮಗಾರಿ ಆರಂಭವಾಗಿತ್ತು. ಮೈಸೂರು ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ಸಂಭಾವ್ಯ ಅಪಾಯ ಎದುರಾಗುತ್ತದೆ ಎಂಬ ಕಾರಣ ನೀಡಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಅಶೋಕಪುರ-ಕಡಕೋಳ ರೈಲು ನಿಲ್ದಾಣಗಳ ನಡುವೆ ಅಳವಡಿಸಿರುವ ತಾತ್ಕಾಲಿಕ ರೈಲ್ವೆ ವಿದ್ಯುತ್‌ ಕಂಬಗಳನ್ನು ತೆಗೆಯುವಂತೆ ಪ್ರಾಧಿಕಾರ ನಿರ್ದೇಶನ ನೀಡಿತ್ತು. ಕಾಮಗಾರಿ ಮುಂದುವರಿಸಲು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯುವಂತೆ ಸೂಚನೆ ನೀಡಿತ್ತು.

ನೈರುತ್ಯ ರೈಲ್ವೆಯು ಎನ್‌ಒಸಿಗಾಗಿ 2021ರ ಜುಲೈನಲ್ಲಿ ಅರ್ಜಿ ಸಲ್ಲಿಸಿತ್ತು. ವಿಮಾನ ನಿಲ್ದಾಣಕ್ಕೆ ಹತ್ತಿರವಿರುವ ಎರಡು ನಿಲ್ದಾಣಗಳ ನಡುವೆ ಒಎಚ್‌ಇ ಮಾಸ್ಟ್‌ಗಳನ್ನು (ವಿದ್ಯುತ್ ರೈಲಿಗೆ ಶಕ್ತಿ ತುಂಬುವ ವಿದ್ಯುತ್ ಉಪಕರಣಗಳಿಗೆ ಬೆಂಬಲ ನೀಡುವ ವ್ಯವಸ್ಥೆ) ಅಳವಡಿಸುವಂತಿಲ್ಲ ಎಂಬ ಷರತ್ತು ಒಡ್ಡಿ ಪ್ರಾಧಿಕಾರವು 2021ರ ಆಗಸ್ಟ್‌ನಲ್ಲಿ ಎನ್‌ಒಸಿ ನೀಡಿತ್ತು.

ನೈರುತ್ಯ ರೈಲ್ವೆಯ ಪ್ರಧಾನ ಮುಖ್ಯ ಎಂಜಿನಿಯರ್‌ ಅವರು ಈ ಮಾರ್ಗದಲ್ಲಿ 2022ರ ಸೆಪ್ಟೆಂಬರ್‌ನಲ್ಲಿ ತಪಾಸಣೆ ನಡೆಸಿದ್ದರು. ವಿದ್ಯುದೀಕರಣಗೊಂಡ ಮಾರ್ಗದಲ್ಲಿ ಪ್ರಯಾಣಿಕರು ಹಾಗೂ ಸರಕುಗಳ ಸಾಗಣೆಗೆ ಅಕ್ಟೋಬರ್‌ನಲ್ಲಿ ಅವರು ಅನುಮತಿ ನೀಡಿದ್ದರು. ಕೆಲವು ಷರತ್ತು ವಿಧಿಸಿ ಅಶೋಕಪುರ-ಕಡಕೋಳ ಮಾರ್ಗಗಳ ನಡುವೆ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಿದ್ದರು.

ವಿದ್ಯುದೀಕರಣಗೊಂಡ ಈ ಮಾರ್ಗದಲ್ಲಿ ರೈಲುಗಳ ಕಾರ್ಯಾಚರಣೆಗೆ 2022ರ ಅಕ್ಟೋಬರ್‌ನಲ್ಲೇ ಅನುಮತಿ ನೀಡಿದ್ದರೂ, ವಿದ್ಯುತ್‌ಚಾಲಿತ ರೈಲುಗಳು 2025ರ ಮಾರ್ಚ್‌ವರೆಗೆ ಕಾರ್ಯಾ ಚರಣೆ ನಡೆಸಿರಲಿಲ್ಲ. ಇದರಿಂದಾಗಿ, ನಿರ್ಮಿಸಿದ್ದ ವಿದ್ಯುತ್‌ ಮೂಲಸೌಕರ್ಯ ಮೂರು ವರ್ಷ ಅನುತ್ಪಾದಕವಾಗಿತ್ತು. ಇದಲ್ಲದೆ, ಡೀಸೆಲ್‌ ಲೋಕೋಗಳ ಬಳಕೆಗೆ ಪ್ರತಿ ತಿಂಗಳು ₹80 ಲಕ್ಷ ಹೆಚ್ಚುವರಿ ವೆಚ್ಚ ಮಾಡಲಾಗಿತ್ತು ಎಂದು ವರದಿ ಆಕ್ಷೇಪಿಸಿದೆ. ಈ ಬಗ್ಗೆ ನೈರುತ್ಯ ರೈಲ್ವೆ ಹಾಗೂ ರೈಲ್ವೆ ಇಲಾಖೆಯಿಂದ ವಿವರಣೆ ಕೋರಲಾಗಿತ್ತು. ಒಎಚ್‌ಇ ವಿನ್ಯಾಸಕ್ಕೆ ತಾಂತ್ರಿಕ ಪರಿಹಾರ ಕಂಡುಹಿಡಿದು, ಇಡೀ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ಎನ್‌ಒಸಿ ನೀಡುವಂತೆ ರೈಲ್ವೆ ಇಲಾಖೆಯು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಮನವಿ ಮಾಡಿತ್ತು. ಪ್ರಾಧಿಕಾರವು 2025ರ ಅಕ್ಟೋಬರ್‌ನಲ್ಲಿ ಎನ್‌ಒಸಿ ನೀಡಿತ್ತು. ಬಳಿಕ ನವೆಂಬರ್‌ನಲ್ಲಿ ಎಲೆಕ್ಟ್ರಿಕ್‌ ರೈಲುಗಳ ನಿಯಮಿತ ಸಂಚಾರ ಆರಂಭವಾಯಿತು. ನೈರುತ್ಯ ರೈಲ್ವೆಯು ಆರಂಭದಲ್ಲೇ ಎನ್‌ಒಸಿ ಪಡೆದಿದ್ದರೆ ಎಲೆಕ್ಟ್ರಿಕ್‌ ರೈಲುಗಳ ಸಂಚಾರ ಮೂರು ವರ್ಷ ವಿಳಂಬವಾಗುವುದು ತಪ್ಪುತ್ತಿತ್ತು ಎಂದು ಸಿಎಜಿ ವರದಿ ಹೇಳಿದೆ.

ವಿಮಾನ ನಿಲ್ದಾಣ, ರಕ್ಷಣಾ ಇಲಾಖೆಗೆ ಸೇರಿದ ಭೂಮಿ, ಹೆದ್ದಾರಿ ಸಮೀಪ ಸೇರಿದಂತೆ ವಿವಿಧ ಕಡೆಗಳಲ್ಲಿ ಭವಿಷ್ಯದಲ್ಲಿ ಇಂತಹ ಸಮಸ್ಯೆ ಉದ್ಭವವಾಗುವುದನ್ನು ತಪ್ಪಿಸಲು ರೈಲ್ವೆ ಮಂಡಳಿ ಮಾರ್ಗಸೂಚಿ ರೂಪಿಸಬೇಕು ಎಂದು ಮಹಾಲೇಖಪಾಲರು ಶಿಫಾರಸು ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-39-1420982820

Dailyhunt
Disclaimer: This content has not been generated, created or edited by Dailyhunt. Publisher: Prajavani