ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ನಾಪೋಕ್ಲು ಕೊಡವ ಸಮಾಜದ ವತಿಯಿಂದ 'ಮಕ್ಕಡ ನಮ್ಮೆ'ಯನ್ನು ಈ ವರ್ಷದ ಅಕ್ಟೋಬರ್ 24-25 ರಂದು ಆಯೋಜಿಸಲು, ಇತ್ತೀಚೆಗೆ ನಡೆದ ಉಭಯ ಸಂಸ್ಥೆಗಳ ಜಂಟಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಾಪೋಕ್ಲು ಕೊಡವ ಸಮಾಜದಲ್ಲಿ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಹಾಗೂ ನಾಪೋಕ್ಲು ಕೊಡವ ಸಮಾಜ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಯಿತು.
'ಮಕ್ಕಡ ನಮ್ಮೆ'ಯಲ್ಲಿ ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಕೊಡವ ಸಂಸ್ಕೃತಿ-ಭಾಷೆಯ ಪಾಲಕರ ಜನಾಂಗಗಳ ಒಗ್ಗೂಡುವಿಕೆಗಳೊಂದಿಗೆ 2 ದಿನಗಳ 'ಮಕ್ಕಡ ನಮ್ಮೆ'ಯನ್ನು ನಡೆಸುವಂತೆ ನಿರ್ಧರಿಸಲಾಯಿತು.
ಎಲ್ಲಾ ಕೊಡವ ಸಮಾಜಗಳು, ಸಂಘ-ಸಂಸ್ಥೆಗಳು ಹಾಗೂ ಕೊಡವ ಭಾಷಿಕ ಸಮಾಜಗಳು, ಸಂಘ-ಸಂಸ್ಥೆಗಳಿಂದ ತಮ್ಮ ಪರಿಮಿತಿಯಲ್ಲಿ ಮಕ್ಕಳ ಸಾಂಸ್ಕೃತಿಕ ತಂಡವನ್ನು 'ಮಕ್ಕಡ ನಮ್ಮೆ'ಯಲ್ಲಿ ಭಾಗವಹಿಸಲು ಅನುವು ಮಾಡಿ ಕೊಡುವಂತೆ ತೀರ್ಮಾನಿಸಲಾಯಿತು.
ಮಕ್ಕಳನ್ನು ಒಳಗೊಂಡ ತಂಡದವರಿಂದ ಬಾಳೋಪಾಟ್, ಉಮ್ಮತ್ತಾಟ್, ಬೊಳಕಾಟ್, ಕೋಲಾಟ್, ಕತ್ತಿಯಾಟ್, ಕಪ್ಪೆಯಾಟ್, ತಾಲಿಪಾಟ್, ಪರಿಯಕಳಿ, ಸಮ್ಮಂದ ಅಡ್‍ಕುವ ಹಾಗೂ ವಿಶೇಷವಾಗಿ ಕೊಡವ ಹಾಡಿಗೆ ಭರತನಾಟ್ಯ, ಅಪ್ಪಚ್ಚಕವಿಯ ನಾಲ್ ನಾಟಕದ ಹಾಡುಗಳನ್ನು ಪ್ರದರ್ಶಿಸಲಾಗುತ್ತದೆ.
ಮಕ್ಕಡ ನಮ್ಮೆಯ ಮೊದಲ ದಿನ ಸರ್ವ ಜನಾಂಗಗಳ ಸಮಾಜದ ಅಧ್ಯಕ್ಷರನ್ನು ಅತಿಥಿಗಳಾಗಿ ಆಹ್ವಾನಿಸಲಾಗುವುದು. ಸಮಾರೋಪ ಸಮಾರಂಭಕ್ಕೆ ಜನಪ್ರತಿನಿಧಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಸೇರಿದಂತೆ ಸಾಧಕ ಯುವಕ-ಯುವತಿಯರನ್ನು ಆಹ್ವಾನಿಸುವಂತೆಯೂ ತೀರ್ಮಾನಿಸಲಾಯಿತು.
ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಅಕಾಡೆಮಿ ಸದಸ್ಯರಾದ ಪೊನ್ನಿರ ಗಗನ್, ಚೊಟ್ಟೆಯಂಡ ಸಂಜು ಕಾವೇರಪ್ಪ, ನಾಪೋಕ್ಲು ಕೊಡವ ಸಮಾಜದ ಆಡಳಿತ ಮಂಡಳಿ ಭಾಗವಹಿಸಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-51-864589109

