ಬೆಂಗಳೂರು:'ಡೇ ಕೇರ್'ನಲ್ಲಿ ಗಲಾಟೆ ಮಾಡುವ ಪುಟ್ಟ ಮಕ್ಕಳನ್ನು 'ಫ್ರಂಟ್ ಲೋಡ್ ವಾಷಿಂಗ್ ಮಷಿನ್'ನಲ್ಲಿ ಹಾಕಿ, ಹಿಂಸೆ ನೀಡಿದ್ದ ಘಟನೆಯ ಸಂಬಂಧ ಪ್ರಮುಖ ಆರೋಪಿಯನ್ನು ಎಚ್.ಎ.ಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎಚ್.ಎ.ಎಲ್ ಆವರಣದ 'ಕ್ಯಾಪ್ ಜೆಮಿನಿ' ಕಂಪನಿ ಆವರಣದಲ್ಲಿ ಇರುವ ಸೊಸೈಟಿ ಜನರಲ್ ಬೇಬಿ ಕೇರ್ ಸೆಂಟರ್‌ನಲ್ಲಿ ವಿಜಯಲಕ್ಷ್ಮಿ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದರು.
ವಿಜಯಲಕ್ಷ್ಮಿ ಅವರನ್ನು ನ್ಯಾಯಾಲಯಕ್ಕೆ ಶುಕ್ರವಾರ ಹಾಜರು ಪಡಿಸಲಾಯಿತು. ನ್ಯಾಯಾಧೀಶರು, ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಎರಡನೇ ಆರೋಪಿ ಮಂಜುಳಾ ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಶೋಧ ನಡೆಸಲಾಗುತ್ತಿದೆ. ವಿಚಾರಣೆಯ ವೇಳೆ ಆರೋಪಿಗಳಾದ ಭವಾನಿ, ಬಿಂದು, ಸಿಂಧು ಅವರ ಪಾತ್ರ ಅಷ್ಟಾಗಿ ಕಂಡುಬಂದಿಲ್ಲ. ಅವರ ಹೇಳಿಕೆ ದಾಖಲಿಸಿಕೊಂಡು ವಾಪಸ್ ಕಳುಹಿಸಲಾಗಿದೆ. ಕರೆದಾಗ ಮತ್ತೆ ವಿಚಾರಣೆಗೆ ಬರುವಂತೆಯೂ ಸೂಚಿಸಲಾಗಿದೆ ಎಂದು ಪೊಲೀಸರು ಹೇಳಿದರು.
ವಿಡಿಯೊ ಮಾಡಿದ್ದ ಮಾಜಿ ಉದ್ಯೋಗಿ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊವನ್ನು ಡೇ ಕೇರ್‌ನ ಮಾಜಿ ಉದ್ಯೋಗಿ ಸುಜಾತಾ ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು ಎಂಬುದು ಗೊತ್ತಾಗಿದೆ. ಅವರನ್ನು ಕೆಲಸದಿಂದ ತೆಗೆದು ಹಾಕಿದ ಬಳಿಕ ಆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು ಎಂದು ಮೂಲಗಳು ಹೇಳಿವೆ.
ಗಲಾಟೆ ಮಾಡುವ ಹಾಗೂ ಅಳುವ ಮಕ್ಕಳನ್ನು ಕೇರ್ ಟೇಕರ್‌ಗಳು ವಾಷಿಂಗ್ ಮಷಿನ್‌ಗೆ ಹಾಕಿ ಬೆದರಿಸುವುದು ಹಾಗೂ ಕಮೋಡ್ ಒಳಗೆ ಮಕ್ಕಳನ್ನು ಕೂರಿಸಿ, ಬಾಯಿಗೆ ನೀರಿನ ಪೈಪ್ ತುರುಕಿ ನೀರು ಬಿಡುವುದು, ಮಕ್ಕಳನ್ನು ಕೂಡಿ ಹಾಕುವುದು, ಅಲ್ಲದೇ ದೈಹಿಕ ಹಿಂಸೆ ನೀಡುವುದನ್ನು ಮಾಡುತ್ತಿದ್ದರು.
'ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದು ಹರಿದಾಡಿತ್ತು. ಆ ವಿಡಿಯೊವನ್ನು ಗಮನಿಸಿದ್ದ ಪೋಷಕರು, ಮಕ್ಕಳ ಸಹಾಯವಾಣಿ ಮೂಲಕ ಎಚ್‌ಎಎಲ್ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಐವರು ಮಹಿಳಾ ಸಿಬ್ಬಂದಿ ವಿರುದ್ಧ ಬಾಲನ್ಯಾಯ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ' ಎಂದು ಪೊಲೀಸರು ಹೇಳಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-4-712595043
