ಬೆಂಗಳೂರು/ ನವದೆಹಲಿ: ಸಕ್ಕರೆ, ಬೆಲ್ಲ, ಅಕ್ಕಿ ಸೇರಿದಂತೆ ಹಲವು ಆಹಾರ ಪದಾರ್ಥಗಳ ಬೆಲೆ ಈಗಾಗಲೇ ಏರಿಕೆಯಾಗಿ ಗ್ರಾಹಕರ ಕಿಸೆಗೆ ಭಾರವಾಗಿರುವ ಹೊತ್ತಿನಲ್ಲಿ, ಈರುಳ್ಳಿ ದರವೂ ಹೆಚ್ಚಳವಾಗಿ ಇನ್ನಷ್ಟು ಹೊರೆ ಉಂಟುಮಾಡಿದೆ. ಬೆಲೆ ನಿಯಂತ್ರಣದ ಉದ್ದೇಶದಿಂದ ಕೇಂದ್ರ ಸರ್ಕಾರವು ದೇಶದ ವಿವಿಧ ಪ್ರದೇಶಗಳಿಗೆ ಈರುಳ್ಳಿ ರವಾನೆ ಆರಂಭಿಸಿದೆ.
ಬೆಂಗಳೂರಿನ ಯಶವಂತಪುರದ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರ ಒಂದು ವಾರದಲ್ಲಿ ಕ್ವಿಂಟಲ್‌ಗೆ ₹1,600ರಷ್ಟು ಹೆಚ್ಚಳವಾಗಿದೆ.
ಈ ತಿಂಗಳ 15ರಂದು 'ಎ' ದರ್ಜೆಯ ಕ್ವಿಂಟಲ್ ಈರುಳ್ಳಿ ದರ ₹3 ಸಾವಿರದವರೆಗೆ ಇತ್ತು. 24ರಂದು ಇದೇ ಗುಣಮಟ್ಟದ ಈರುಳ್ಳಿ ಬೆಲೆ ₹4,500-4,600ಕ್ಕೆ ಏರಿಕೆಯಾಗಿದೆ. ರಿಟೇಲ್ ಮಾರುಕಟ್ಟೆಯಲ್ಲಿ ಕೆ.ಜಿ ಈರುಳ್ಳಿ ₹50-55ರ ಮಟ್ಟದಲ್ಲಿ ಮಾರಾಟವಾಗುತ್ತಿದೆ.
ಗುರುವಾರ ಮತ್ತು ಶುಕ್ರವಾರ ನಡೆದ ವಹಿವಾಟಿನಲ್ಲಿ ಈರುಳ್ಳಿ ಕ್ವಿಂಟಲ್‌ಗೆ ₹5,200ಕ್ಕೆ ತಲುಪಿತ್ತು. ಶನಿವಾರ ಯಶವಂತಪುರ ಮಾರುಕಟ್ಟೆಗೆ 65 ಸಾವಿರ ಚೀಲ (1 ಚೀಲದಲ್ಲಿ 50ರಿಂದ 55 ಕೆ.ಜಿ) ಈರುಳ್ಳಿ ಆವಕ ಆಗಿತ್ತು. ಇದರಿಂದ ಈರುಳ್ಳಿ ದರ ಇಳಿದಿತ್ತು. ಆದರೆ, ಸೋಮವಾರ 43,500 ಚೀಲ ಮಾತ್ರ ಆವಕವಾಗಿದ್ದು, ದರ ಏರಿಕೆಯಾಗಿದೆ.
'ರಾಜ್ಯದ ಈರುಳ್ಳಿ ಬೆಳೆಯಲ್ಲಿ ಶೇ 70ರಷ್ಟು ಮಳೆಯಾಶ್ರಿತ. ಈ ಬಾರಿ ಮಳೆ ಕೊರತೆಯಿಂದ ಬೆಳೆ ಕಡಿಮೆ ಆಗಿದೆ. ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಈರುಳ್ಳಿ ಬೆಲೆ ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ ₹60ರವರೆಗೆ ತಲುಪುವ ನಿರೀಕ್ಷೆ ಇದೆ' ಎಂದು ಯಶವಂತಪುರ ಮಾರುಕಟ್ಟೆಯ ಈರುಳ್ಳಿ ಸಗಟು ವ್ಯಾಪಾರಿ ಲೋಕೇಶ್ ಜಿ. 'ಪ್ರಜಾವಾಣಿ'ಗೆ ತಿಳಿಸಿದರು.
ರಿಟೇಲ್ ಮಾರುಕಟ್ಟೆಯಲ್ಲಿ ₹35ರಂತೆ ಮಾರಾಟ: ಕೇಂದ್ರ
'ರಿಟೇಲ್ ಮಾರುಕಟ್ಟೆಯಲ್ಲಿ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ಮತ್ತು ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದೊಂದಿಗೆ (ನಾಫೆಡ್) ಕೆ.ಜಿ ಈರುಳ್ಳಿಯನ್ನು ₹35ರಂತೆ ಮಾರಾಟ ಮಾಡಲಾಗುವುದು' ಎಂದು ಕೇಂದ್ರ ಗ್ರಾಹಕ ವ್ಯವಹಾರ ಇಲಾಖೆಯ ಕಾರ್ಯದರ್ಶಿ ನಿಧಿ ಖಾರೆ ಹೇಳಿದ್ದಾರೆ.
ಮಹಾರಾಷ್ಟ್ರದ ನಾಸಿಕ್‌ನಿಂದ ಆರಂಭಿಕವಾಗಿ ಅತಿ ಹೆಚ್ಚು ಈರುಳ್ಳಿ ಬಳಸುವ ಚೆನ್ನೈ ಮದುರೆ ದೆಹಲಿ ಎರ್ನಾಕುಲಂ ಮತ್ತು ಗುವಾಹಟಿಗೆ ಕಾಂದಾ ಎಕ್ಸ್‌ಪ್ರೆಸ್ ಮೂಲಕ ಈರುಳ್ಳಿ ಸಾಗಣೆ ಆರಂಭಿಸಲಾಗಿದ್ದು ಬುಧವಾರದ ವೇಳೆಗೆ ಮಾರುಕಟ್ಟೆಗೆ ತಲುಪುವ ನಿರೀಕ್ಷೆ ಇದೆ. ಈ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ಬಳಿಕ ಇತರ ಪ್ರದೇಶಗಳಿಗೆ ಅಗತ್ಯಕ್ಕೆ ತಕ್ಕಂತೆ ರವಾನಿಸಲಾಗುವುದು ಎಂದು ಹೇಳಿದ್ದಾರೆ.
ದೇಶದಲ್ಲಿ ಸರಾಸರಿ ದರ ₹43
ಅಖಿಲ ಭಾರತ ಮಟ್ಟದಲ್ಲಿ ಸೋಮವಾರ ಈರುಳ್ಳಿಯ ಸರಾಸರಿ ರಿಟೇಲ್ ದರವು ಕೆ.ಜಿಗೆ ₹43.53ಕ್ಕೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಈರುಳ್ಳಿ ದರ ₹27.37ರಷ್ಟಿತ್ತು. ಇದಕ್ಕೆ ಹೋಲಿಸಿದರೆ ಈಗ ಬೆಲೆಯು ಶೇ 59ರಷ್ಟು ಹೆಚ್ಚಳವಾಗಿದೆ. ಸಗಟು ಮಾರುಕಟ್ಟೆಯಲ್ಲಿ ದರವು ಹಿಂದಿನ ವರ್ಷದ ಇದೇ ಹೊತ್ತಿನಲ್ಲಿ ₹21.23 ಇದ್ದದ್ದು ಈಗ ₹35.58ಕ್ಕೆ ಏರಿಕೆಯಾಗಿದೆ. ಅಂದರೆ ಬೆಲೆಯು ಶೇ 68ರಷ್ಟು ಜಿಗಿದಿದೆ. ಚೆನ್ನೈನ ರಿಟೇಲ್ ಮಾರುಕಟ್ಟೆಯಲ್ಲಿ ಸೋಮವಾರ ಕೆ.ಜಿ ಈರುಳ್ಳಿ ₹60ರಂತೆ ಮಾರಾಟವಾಗಿದೆ.
ದೆಹಲಿಯಲ್ಲಿ ₹55 ಮತ್ತು ಕೋಲ್ಕತ್ತದಲ್ಲಿ ₹53 ಇದೆ. ಹಬ್ಬದ ಬೇಡಿಕೆ ಹವಾಮಾನ ಸಂಬಂಧಿತ ಅಡಚಣೆಗಳು ಸೇರಿದಂತೆ ವಿವಿಧ ಕಾರಣಗಳಿಂದ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಸಹಜವಾಗಿ ಈರುಳ್ಳಿ ದರ ಏರಿಕೆ ಆಗುತ್ತದೆ. ಈ ವೇಳೆ ಕೇಂದ್ರವು ತನ್ನಲ್ಲಿರುವ ಈರುಳ್ಳಿ ದಾಸ್ತಾನನ್ನು ಬಿಡುಗಡೆ ಮಾಡುವ ಮೂಲಕ ದರ ನಿಯಂತ್ರಿಸುತ್ತದೆ ಎಂದು ಹೇಳಿದ್ದಾರೆ.

